ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡುವ
ಮೂಲಕ ಕೋಮು ಸಂಘರ್ಷದ ನೆರಳಿನಲ್ಲಿ ಈವರೆಗೂ ರಾಜ್ಯದಲ್ಲಿ 23 ಹಿಂದೂ ಕಾರ್ಯಕರ್ತರ ಕೊಲೆಗಳಾಗಿವೆ.
ಮಡಿಕೇರಿಯ ಡಿ.ಎಸ್.ಕುಟ್ಟಪ್ಪ, ಮೂಡಬಿದಿರೆಯ ವಾಮನ್ ಪೂಜಾರಿ, ಪ್ರಶಾಂತ್ ಪೂಜಾರಿ, ಮೈಸೂರಿನ ರಾಜು, ಉಳ್ಳಾಲದ ರಾಜು ಕೋಟ್ಯಾನ್, ಅತ್ತಿಬೆಲೆಯ ಅಶ್ವಥ್, ಧಾರವಾಡದ ಯೋಗೇಶ್ ಗೌಡ, ಮಡಿಕೇರಿಯ ಪ್ರವೀಣ್ ಪೂಜಾರಿ, ಉಡುಪಿಯ ಪ್ರವೀಣ ಪೂಜಾರಿ, ಕಾರ್ತಿಕ್ ಕೊಣಾಜೆ, ಪಿರಿಯಾಪಟ್ಟಣದ ಮಾಗಳಿ ರವಿ, ಬೆಂಗಳೂರಿನ ರುದ್ರೇಶ್, ಚಿಕ್ಕತಿಮ್ಮೇಗೌಡ, ಶರತ್ ಮಡಿವಾಳ, ಔರಾದ್‌ನ ಸುನಿಲ್ ಡೋಂಗ್ರೆ, ಹೊನ್ನಾವರದ ಪರೇಶ್ ಮೇಸ್ತಾ, ಬೊಮ್ಮನಹಳ್ಳಿಯ ಶ್ರೀನಿವಾಸ್ ಪ್ರಸಾದ್, ಚಂದಾ ಪುರದ ಹರೀಶ್, ಅಫ್ಜಲಪುರದ ಮಹಾದೇವ್ ಕಾಳೆ, ತಿಪಟೂರಿನ ತಿಪ್ಪೇಶ್, ಬಳ್ಳಾರಿಯ ರಮೇಶ್ ಬಂಡಿ, ಶಿವಮೊಗ್ಗದ ಹರ್ಷ ಇದೀಗ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯಾಕಾಂಡ ವಾಗಿದೆ.
ಕಳೆದ ಏಳೆಂಟು ವರ್ಷಗಳಲ್ಲಿ ದ್ವೇಷ ರಾಜಕೀಯ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗೆ ನಡೆದ ಹತ್ಯೆಗಳ ಪ್ರಕರಣಗಳ ಸರಣಿ ನಿಲ್ಲುತ್ತಿಲ್ಲ. ಈ ಕೊಲೆಗಳಿಗೆ ಕೊನೆ ಇಲ್ಲವೇ? ಸೈದ್ಧಾಂತಿಕ, ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಕೊಲೆಯೇ ಉತ್ತರವೇ? ಇದು ಭಿನ್ನ ವಿಚಾರಗಳಿಗೆ ಸಿಗುವ ಗೌರವವೇ?ಪ್ರತಿ ಕೊಲೆ ಅದ ಮೇಲೆಯೂ ಮೈ ಕೊಡವಿಕೊಂಡು ಎದ್ದೇಳುವ ಸರಕಾರ ಅಬ್ಬರದ
ಹೇಳಿಕೆ ಕೊಡುತ್ತದೆಯೇ ಹೊರತು ಕೊಲೆಯೇ ಆಗದಂತೆ ತಡೆಯುವ ಪ್ರಯತ್ನ ಮಾಡುತ್ತಿಲ್ಲವೇಕೆ? ಈ ಹಿಂದೆ ನಡೆದ ಕೊಲೆಗಳಿಗೆ ಯಾವ ರೀತಿ ನ್ಯಾಯ ಸಿಕ್ಕಿದೆ ಎನ್ನುವುದೂ ರಾಜ್ಯದ ಜನರಿಗೆ ಗೊತ್ತಿದೆ.
ಕಠಿಣ ಕ್ರಮ ಎನ್ನುವುದು ಭರವಸೆಯಾಗೇ ಉಳಿದಿದೆ. ಸರ್ವಜನಾಂಗದ ಶಾಂತಿಯ ತೋಟ ಎನಿಸಿಕೊಂಡಿರುವ ಕರ್ನಾಟಕವು ಕೊಲೆ, ಧರ್ಮಾಂಧತೆಯ ಕಾರಣಕ್ಕಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿರುವುದು ದುರ್ದೈವ. ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಿರುವ ಆರೋಪಿಗಳನ್ನು ಪೊಲೀಸರು ಆದಷ್ಟು ಬೇಗ ಪತ್ತೆ ಹಚ್ಚಿ, ಹೆಡೆಮುರಿ ಕಟ್ಟಿ, ಅವರಿಗೆ ಕಠಿಣ ಶಿಕ್ಷೆ ಕೊಡಿಸುವ ಮೂಲಕ ಇದೇ ಕೊನೆಯ ಸಾವು ಆಗುವಂತೆ ನೋಡಿಕೊಳ್ಳಬೇಕು.