Thursday, 28th November 2024

ವೈದ್ಯ ವೃತ್ತಿಯ ಮರೆಯಲಾಗದ ಪ್ರಸಂಗಗಳು

ಸ್ವಾಸ್ಥ್ಯ ಸಂಪದ

yoganna55@gmail.com

ಒಮ್ಮೆ ಜಾಂಡೀಸಿನ ರೋಗಿಯೊಬ್ಬನಿಗೆ ಆಂಟಿ ಹಿಸ್ಟಮಿನಿಕ್ಸ್‌ಗಳನ್ನು ಕೊಟ್ಟರೂ ತುರಿಕೆ ಕಡಿಮೆಯಾಗಲಿಲ್ಲವೆಂದು ಹೇಳಿದ್ದಕ್ಕೆ ಅವರು ಸ್ತ್ರೀ ಪಿಜಿಯೊಬ್ಬಳನ್ನು ಕರೆದು ‘ನೋಡಪ್ಪಾ ನೀನು ಪೂರ್ತಿ ಬಟ್ಟೆ ಬಿಚ್ಚು ಹಾಕಿಬಿಡು, ಇವಳು ನಿನ್ನ ಪಕ್ಕ ಕೂತ್ಕೊಂಡು ಬೆಳಗ್ಗಿನಿಂದ ಸಂಜೆತನಕ ಕೆರಿತಾಳೆ. ಇವಳ ಕೈಯಲ್ಲಿ ಅಂತಹ ಶಕ್ತಿ ಇದೆ’ ಎಂದು ನಗೆ ಚಟಾಕಿ ಹಾರಿಸಿದರು.

ವೈದ್ಯ ವೃತ್ತಿ ಮನುಷ್ಯನನ್ನು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ರೋಗಿ ಮತ್ತು ವೈದ್ಯನನ್ನು ಪರಸ್ಪರ ಬೆಸೆಯುವ ಪವಿತ್ರವಾದ ವೃತ್ತಿ. ಯಾವುದೇ ಬಿಗುಮಾನದ ದೊಡ್ಡ ವ್ಯಕ್ತಿಯಾಗಲಿ ವೈದ್ಯನ ಮುಂದೆ ತಲೆ ಬಾಗಿ ತನ್ನ ದೇಹವನ್ನು ಅವನಿಗೆ ಒಪ್ಪಿಸುವುದಲ್ಲದೇ ಅವನ ಎಲ್ಲ ಭಾವನೆಗಳನ್ನು ನಿಸ್ಸಂಕೋಚ ಹಂಚಿಕೊಳ್ಳುತ್ತಾನೆ.

ರೋಗಿಯ ಪಾಲಿಗೆ ವೈದ್ಯ ಅವನ ದೇಹದ ಯಜಮಾನ. ಅವನ ಆತ್ಮೀಯ ಸ್ನೇಹಿತನಂತೆ, ಹಿತಚಿಂತಕನಂತೆ, ತತ್ತ್ವಜ್ಞಾನಿಯಂತೆ ರೋಗಿಯ ಸಮಗ್ರ ಬದುಕಿಗೆ ಪೂರಕವಾಗುವ ಸಲಹೆ ನೀಡುತ್ತಾನೆ. ಈ ಹಿನ್ನೆಲೆಯಲ್ಲಿಯೇ ರೋಗಿಯೊಬ್ಬ ವೈದ್ಯನ ಮುಂದೆ ತನ್ನ ಎಲ್ಲ ವೈಯಕ್ತಿಕ, ಸಾಮಾಜಿಕ, ಆರ್ಥಿಕ ಮತ್ತಿತರ ಎಲ್ಲವುಗಳಿಗೆ ಸಂಬಂಽಸಿದ ವೈಯಕ್ತಿಕ ವಿಚಾರಗಳನ್ನೂ ನಿಸ್ಸಂಕೋಚದಿಂದ ಹಂಚಿಕೊಳ್ಳುತ್ತಾನೆ.

ನೋವನ್ನು ನೀಗಿಸುವ ವೈದ್ಯನ ಮಾತಿಗೆ ಎಲ್ಲಿಲ್ಲದ ಮನ್ನಣೆ. ‘ವೈದ್ಯೋ ನಾರಾಯಣೋ ಹರಿಃ’. ವೈದ್ಯ ದೇವರಿಗೆ ಸಮಾನ ಎಂಬ ಭಾವನೆ ಪ್ರಪಂಚದೆಲ್ಲೆಡೆ ಇದೆ. ವೈದ್ಯ ಜನ ಸಾಮಾನ್ಯರ ನಡುವೆ ನೇರ ನಿಕಟ ಸಂಪರ್ಕ ಹೊಂದಿರುವುದರಿಂದ ಅವನಿಗೆ ಸಮಾಜದ ಹಲವಾರು ಸಮಸ್ಯೆಗಳು ದಿನನಿತ್ಯ ಅರಿವಾಗುತ್ತಿರುತ್ತವೆ. ನೋವು ಮತ್ತು ನಲಿವುಗಳ ದರ್ಶನವಾಗುತ್ತಿರುತ್ತವೆ. ವೈದ್ಯನೊಬ್ಬ ಲೇಖಕ ನಾದರೆ ಬರೆಯಲಾಗದಷ್ಟು ನೈಜ ಸಾಹಿತ್ಯ ಅವನಿಗೆ ಲಭಿಸುತ್ತದೆ. ನನ್ನ ಮನ ಕಲುಕಿದ ಕೆಲವು ಪ್ರಸಂಗಗಳನ್ನು ಮಾತ್ರ ಇಲ್ಲಿ ದಾಖಲಿಸಿದ್ದೇನೆ.

ಅಂದು (೧೯೭೦) ಒಂದು ವರ್ಷದ ಪಿಯುಸಿ ಇದ್ದ ಕಾಲ. ಭೌತಶಾಸ, ರಾಸಾಯನಿಕ ಶಾಸ್ತ್ರ, ಗಣಿತ (ಪಿಸಿಎಂ) ಮತ್ತು ಭೌತಶಾಸ್ತ್ರ, ರಾಸಾಯನಿಕ ಶಾಸ್ತ್ರ ಮತ್ತು ಜೀವಶಾಸ್ತ್ರ( ಪಿಸಿಬಿ) ಗಳನ್ನು ಪ್ರತ್ಯೇಕವಾಗಿ ಪಿಯುಸಿಯಲ್ಲಿ ಆಯ್ಕೆ ಮಾಡಿಕೊಳ್ಳ ಬೇಕಾದ ಕಾಲವದು. ನನಗೆ ಗಣಿತಶಾಸವೆಂದರೆ ಎಲ್ಲಿಲ್ಲದ ಆಸಕ್ತಿ. ಹಾಗಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ೩ನೇ ರ‍್ಯಾಂಕ್‌ನೊಂದಿಗೆ ಗಣಿತದಲ್ಲಿ ೯೮ ಅಂಕಗಳನ್ನು ಗಳಿಸಿದ್ದೆ. ಹಾಗಾಗಿ ಪಿಸಿಎಂ ತೆಗೆದುಕೊಳ್ಳಬೇಕೆಂದು ಆಸಕ್ತಿ ಇದ್ದ ನನ್ನನ್ನು ವೈದ್ಯನಾಗಬೇಕೆಂಬ ಹಠ ಹಿಡಿದು ನಮ್ಮ ಮನೆಯವರು ನನ್ನ ಮನಸ್ಸಿಗೆ ವಿರುದ್ಧವಾಗಿ ಪಿಸಿಬಿ ಕೊಡಿಸಿದರು.

ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡೆ. ಇಂದು ಅದು ವರದಾನವೇ ಆಯಿತು. ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪರಿಣಾಮ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟನ್ನು ಗಿಟ್ಟಿಸಿಕೊಂಡೆ. ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಸೀಟು ತೆಗೆದುಕೊಳ್ಳುವುದೆಂದರೆ ಪ್ರತಿಷ್ಠಿತ ವಿಷಯ. ಇಂದಿಗೂ ಅದೇ ಮನ್ನಣೆ. ನಮ್ಮ ಕುಟುಂಬದಲ್ಲಿ ನಾನೇ ಮೊದಲ
ವೈದ್ಯ ನಾಗುತ್ತೇನೆಂಬ ಭರವಸೆ ನಮ್ಮ ಕುಟುಂಬ ದವರೆಲ್ಲರಿಗೂ ಮೂಡಿ ಎಲ್ಲರೂ ಅತ್ಯಂತ ಸಂತೋಷ ಪಟ್ಟ ಆ ದಿನಗಳು ಇಂದಿಗೂ ನನ್ನ ಕಣ್ಮುಂದೆ ಹಸಿರಾಗಿವೆ.

ಆ ಸಂತೋಷದಲ್ಲಿ ನಮ್ಮ ಮನೆಯನ್ನು ದುರಸ್ತಿಗೊಳಿಸಿ ಆಕರ್ಷಣೀಯಗೊಳಿಸಲಾಯಿತು. ಮೊದಲನೇ ವರ್ಷದ ಎಂಬಿಬಿಎಸ್‌ ನಲ್ಲಿ ಅಂಗರಚನೆ ಶಾಸ್ತ್ರ (ಅನಾಟಮಿ), ಶರೀರಕ್ರಿಯಾ ಶಾಸ್ತ್ರ (ಫಿಸಿಯಾಲಜಿ) ಮತ್ತು ಜೀವರಾಸಾಯನಿಕ ಶಾಸ್ತ್ರ ಓದಬೇಕು. ಅಂದು ಅಂಗರಚನಾ ಶಾಸ್ತ್ರದಲ್ಲಿ ಹಲವಾರು ಒಳ್ಳೆಯ ಅಧ್ಯಾಪಕರುಗಳಿದ್ದರೂ ಡಾ.ಕಾಂತಾ ಜಾದವ್ ಮತ್ತು ಡಾ.ವೆಂಕಟ ರಮಣ ಅವರ ವ್ಯಕ್ತಿತ್ವ ಮತ್ತು ಪಾಠಗಳು ವಿದ್ಯಾರ್ಥಿಗಳ ಮೇಲೆ ಬಹಳ ಪ್ರಭಾವ ಬೀರುತ್ತಿದ್ದವು.

ಡಾ.ಕಾಂತಾ ಜಾದವ್ ಅವರು ಸಿಟ್ಟಿನ ಸ್ವಭಾವದವರಾಗಿದ್ದು, ಬಹು ಶಿಸ್ತಿನಿಂದ ಕೂಡಿದ್ದರು. ಅವರು ದೇಹಚ್ಛೇದನ ಸಭಾಂಗಣಕ್ಕೆ ಬಂದರೆಂದರೆ ಎಲ್ಲರಿಗೂ ಎಲ್ಲಿಲ್ಲದ ಭಯ. ಅವರಿಗೆ ವಿದ್ಯಾರ್ಥಿಗಳು ವಿಷಯ ವಿವರಿಸಬೇಕಾದಲ್ಲಿ ಹಿಂಜರಿಯು
ತ್ತಿದ್ದರು. ನನಗಂತೂ ಭಯವೆಂಬುದೇ ಗೊತ್ತಿಲ್ಲ. ಗೊತ್ತಿರುವುದನ್ನು ಧೈರ್ಯವಾಗಿ ಹೇಳಿ, ಗೊತ್ತಿರದವುಗಳನ್ನು ಗೊತ್ತಿಲ್ಲ ಎಂದು ಹೇಳಿಬಿಡುತ್ತಿದ್ದೆ.

ಹೀಗಾಗಿ ಅವರ ಅಚ್ಚುಮೆಚ್ಚಿನ ಶಿಷ್ಯನಾಗಿ ಇಂದಿನವರೆವಿಗೂ ಅವರ ಪ್ರೀತಿಗೆ ಪಾತ್ರನಾಗಿದ್ದೇನೆ. ಅನಾಟಮಿ ಎಂದರೆ ಕಬ್ಬಿಣದ ಕಡಲೆಯಿದ್ದಂತೆ. ಈಗಿನ ಹಾಗೆ ಅಂದು ಚಿಕ್ಕಪುಟ್ಟ ಪಠ್ಯಪುಸ್ತಕಗಳು, ನೋಟ್ಸ್ ಗಳು ಇರಲಿಲ್ಲ. ಎಲ್ಲರೂ ಬೃಹತ್ ಗ್ರೇಸ್ ಅನಾ ಟಮಿಯನ್ನೇ ಓದುತ್ತಿದ್ದೆವು. ಆ ಕಾರಣಕ್ಕಾಗಿಯೇ ಇಂದಿಗೂ ನನ್ನ ಅನಾಟಮಿ ಜ್ಞಾನ ಹಸಿರಾಗಿದೆ. ಡಾ.ಕಾಂತಾಗೆ ತದ್ವಿರುದ್ಧ ವಾಗಿ ಡಾ.ಜಿ.ಆರ್. ವೆಂಕಟರಮಣ ಅವರು ಹಾಸ್ಯಪ್ರವೃತ್ತಿಯುಳ್ಳ, ವಿದ್ಯಾರ್ಥಿಗಳೊಡನೆ ಸಲುಗೆಯಿದ್ದ ಒಳ್ಳೆಯ ಅಧ್ಯಾಪಕರು.

ಪೆರಿನಿಯಂ ಬಗ್ಗೆ ಪಾಠ ಮಾಡುವ ದಿನ ಅದಕ್ಕೆ ಅವರು ನೀಡಿದ ಪೀಠಿಕೆ ಹೀಗಿತ್ತು. ‘ಡೂ ಯೋ ನೋ ವಾಟ್ ಐ ಯಾಮ್ ಟೀಚಿಂಗ್ ಟುಡೇ- ಕಿಂಗ್ ಡಂಸ್ ಹ್ಯಾವ್‌ಬೀನ್ ಲಾಸ್ಟ್, ಮೆನಿ ಮೆನ್ಸ್ ಹ್ಯಾವ್‌ಸಬೀನ್ ಲಾಸ್ಟ್ ಫಾರ್ ದಿಸ್ ವೆರಿ ಸ್ಮಾಲ್ ಏರಿಯಾ ಇನ್ ದಿ ಬಾಡಿ’ ಎಂದು ಕುತೂಹಲ ಕೆರಳಿಸಿ ನಂತರ ‘ದಟೀಸ್ ಪೆರಿನಿಯಂ’ ಎಂದು ಹೇಳಿದಾಗ ಇಡೀ ಕ್ಲಾಸ್ ನಗೆಗಡಲಿನಲ್ಲಿ
ಮುಳುಗಿತು.

ಗ್ಯಾಸ್ಟ್ರೋನೀಮಿಯಸ್ ಡಿಸೆಕ್ಷನ್ ಮಾಡುತ್ತಿದ್ದಾಗ, ಇದರ ಚೂರನ್ನು ತಿಂದರೆ ಸಾವಾಗುತ್ತದೆ ಎಂದು ಸ್ನೇಹಿತನೊಬ್ಬ ಹೇಳಿದ. ನಾನು ಇಲ್ಲ ಎಂದೆ. ವಾದ ವಿವಾದವಾಗಿ ೫ರು.ಗಳ ಬೆಟ್ ಹಠವಾಯಿತು. ನಾನು ತಿಂದೇಬಿಟ್ಟೆ. ಏನೂ ಆಗಲಿಲ್ಲವಾದರೂ ಇನ್ನಿತರರು ನನ್ನ ಮಾನವನ್ನು ಹರಾಜು ಹಾಕಿದರು. ನನ್ನನ್ನು ಕ್ಯಾನಿಬಾಲ್ ಎಂದು ಪ್ರಚಾರಿಸಿದರು. ನಾನು ತಿಂದರೆ ಏನು ಆಗುವುದಿಲ್ಲ ಎಂಬುದನ್ನು ಸಾಬೀತುಪಡಿಸಲು ತಿಂದಿದ್ದೆ. ಅದನ್ನು ಅರಿಯದ ಸ್ನೇಹಿತರು ನನ್ನನ್ನು ರೇಗಿಸಲು ಅದನ್ನು
ಉಪಯೋಗಿಸಿಕೊಂಡಿದ್ದರು.!

ಅಂತಿಮ ಎಂಬಿಬಿಎಸ್‌ಗೆ ಬಂದಾಗ ಪ್ರಸೂತಿ ಮತ್ತು ಸ್ತ್ರೀ ಸಂತಾನಾಂಗ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಎಸ್.ಎನ್. ಕೌಲ್‌ಗುಡ್ ಅವರ ಸರಳ ವ್ಯಕ್ತಿತ್ವ, ರೋಗಿಗಳ ಬಗೆಗಿದ್ದ ಅತೀವ ಕಳಕಳಿ, ಶುದ್ಧ ಹಸ್ತ, ಬೋಧನಾ ಕೌಶಲ, ನನ್ನ ಮೇಲೆ ಮರೆಯಲಾಗದ ಮುದ್ರೆಯನ್ನೊತ್ತಿದವು. ನಾನು ಹೀಗೆ ಆಗಬೇಕೆಂಬ ಉತ್ಕಟ ಆಕಾಂಕ್ಷೆ ಮೊಳಕೆಯೊಡೆಯಿತು. ರಕ್ತವಿಲ್ಲದಿದ್ದಾಗ ರೋಗಿಗಳಿಗೆ ಅವರೇ ರಕ್ತದಾನಮಾಡಿ ಆಪರೇಷನ್ ಮಾಡುತ್ತಿದ್ದರು.

ಹೆರಿಗೆ ಶಾಸ್ತ್ರದ ಬಗ್ಗೆ ವಿಶೇಷ ಆಸಕ್ತಿ ಬೆಳೆಯಿತು. ಹೆರಿಗೆ ವಾರ್ಡ್‌ಗಳಿಗೆ ಹೋಗುವುದೆಂದರೆ ವಿಶೇಷ ಆಸಕ್ತಿ. ನನಗೆ ಪೋಸ್ಟಿಂಗ್ ಇಲ್ಲದಿದ್ದರೂ ರಾತ್ರಿವೇಳೆಯೂ ಹೆರಿಗೆ ವಾರ್ಡ್‌ಗೆ ಭೇಟಿ ನೀಡುತ್ತಿದ್ದೆ. ಈ ಬಗ್ಗೆ ನನಗೆ ನನ್ನ ಸ್ನೇಹಿತರು ನನ್ನನ್ನು ಗೇಲಿ ಮಾಡು ತ್ತಿದ್ದುದೂ ಉಂಟು. ಅಂತಿಮ ಎಂಬಿಬಿಎಸ್‌ನಲ್ಲಿ ಓಬಿಜಿಯಲ್ಲಿ ಶೇ.80 ರಷ್ಟು ಅಂಕ ಪಡೆದಿದ್ದೆ. ನಾನು ಹತ್ತಿರದ ಗ್ರಾಮೀಣ ಪ್ರದೇಶದಿಂದ ಬಂದವನಾದ್ದರಿಂದ ನಮ್ಮೂರಿನ ಮತ್ತು ಅಕ್ಕಪಕ್ಕದ ರೋಗಿಗಳು ಕೆ.ಆರ್.ಆಸ್ಪತ್ರೆಯಲ್ಲಿ ನನ್ನ ಮೂಲಕ ವೈದ್ಯರುಗಳಿಗೆ ತೋರಿಸಿಕೊಳ್ಳುವುದಕ್ಕಾಗಿ ದುಂಬಾಲು ಬೀಳುತ್ತಿದ್ದರು.

ನಾನು ಎಲ್ಲ ನಮ್ಮ ಉಪಾಧ್ಯಾಯರ ಬಳಿ ರೋಗಿಗಳನ್ನು ಕರೆದುಕೊಂಡು ಹೋಗುತ್ತಿದ್ದೆ. ನಾನು ವೈದ್ಯ ವಿದ್ಯಾರ್ಥಿ ಯಾದು ದರಿಂದ ಎಷ್ಟೇ ರಷ್ ಇದ್ದರೂ ಬಹುಬೇಗ ಆಸಕ್ತಿಯಿಂದ ನೋಡಿ ಕಳುಹಿಸುತ್ತಿದ್ದರು. ಹೀಗಾಗಿ ವಿದ್ಯಾರ್ಥಿ ದೆಸೆಯಿಂದಲೂ ಎಲ್ಲ ವೈದ್ಯರೊಡನೆ ನನ್ನದು ಅವಿನಾಭಾವ ಸಂಬಂಧ. ಇದು ರೋಗಿಗಳ ಮನಃಸ್ಥಿತಿಯನ್ನು ಅರಿತು ನಡೆದುಕೊಳ್ಳುವ ಬಗ್ಗೆ ಪ್ರಾರಂಭ ದಲ್ಲಿಯೇ ಭದ್ರವಾದ ಬುನಾದಿಯನ್ನು ಹಾಕಿತು.

ಮೂರನೇ ರ‍್ಯಾಂಕ್‌ನಲ್ಲಿ ಎಂಬಿಬಿಎಸ್ ಪಾಸ್ ಮಾಡಿ ಹೌಸ್ ಸರ್ಜನ್ಸಿಯನ್ನು ಕೆ.ಆರ್.ಆಸ್ಪತ್ರೆಯಲ್ಲಿ ೧೯೭೭ರಲ್ಲಿ ಪ್ರಾರಂಭಿಸಿದ ಅಂದಿನ ದಿನಗಳ ಅನುಭವವಂತೂ ಅವಿಸ್ಮರಣೀಯ. ಅಂದಿನ ಕಾಲಕ್ಕೆ ನಡೆದಾಡುವ ವೈದ್ಯ ವಿಶ್ವಕೋಶ ಎಂದು ಖ್ಯಾತರಾಗಿದ್ದ ವೈದ್ಯಶಾಸ ಪ್ರಾಧ್ಯಾಪಕರಾಗಿದ್ದ ಡಾ.ಎನ್.ಎ.ಜಾದವ್ ಮತ್ತು ಅವರ ಸಹಪಾಠಿಯಾಗಿದ್ದ ಕ್ಲಿನಿಕಲ್ ಮೆಡಿಸನ್‌ನಲ್ಲಿ ಅತ್ಯಂತ
ಪರಿಣತಿ ಹೊಂದಿದ್ದ ವೈದ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಡಾ.ಎಂ.ರಾಮಶೆಟ್ಟಿ ಅವರೊಡನೆ ಕೆಲಸ ಮಾಡುವ ಭಾಗ್ಯ ನನಗೆ ಲಭಿಸಿದ್ದು, ವೈದ್ಯಶಾಸ್ತ್ರದ ಆಳ ಮತ್ತು ಅಗಲಗಳನ್ನು ಕಲಿಯಲು ಸಹಕಾರಿಯಾಯಿತು.

ಡಾ.ಎನ್.ಎ.ಜಾದವ್ ಅವರ ಒಡನಾಟ ವೈದ್ಯಕೀಯ ವೃತ್ತಿಯಲ್ಲಿ ಹಾಸ್ಯಪ್ರವೃತ್ತಿ ಗಳಿಕೆಗೆ ನಾಂದಿಯಾಯಿತು. ಡಾ.ಜಾದವ್ ಅವರು ಬಹು ಬಿಗುಮಾನದ, ಸಿಟ್ಟಿನ ಮನುಷ್ಯನಾದರೂ ವಾಡ್ ಗಳ ರೌಂಡ್ಸ್‌ನಲ್ಲಿ ಹಲವಾರು ಹಾಸ್ಯಗಳನ್ನು ರೋಗಿಗಳೊಂದಿಗೆ ಮತ್ತು ವೈದ್ಯರೊಂದಿಗೆ ಹಂಚಿಕೊಳ್ಳುತ್ತಿದ್ದರು.

ಒಮ್ಮೆ ಜಾಂಡೀಸಿನ ರೋಗಿಯೊಬ್ಬನಿಗೆ ಆಂಟಿ ಹಿಸ್ಟಮಿನಿಕ್ಸ್‌ಗಳನ್ನು ಕೊಟ್ಟರೂ ತುರಿಕೆ ಕಡಿಮೆಯಾಗಲಿಲ್ಲವೆಂದು ಪದೇ ಪದೇ ಹೇಳಿದ್ದಕ್ಕೆ ಅವರು ಸ್ತ್ರೀ ಪಿಜಿಯೊಬ್ಬಳನ್ನು ಕರೆದು ‘ನೋಡಪ್ಪಾ ನೀನು ಪೂರ್ತಿ ಬಟ್ಟೆ ಬಿಚ್ಚು ಹಾಕಿಬಿಡು, ಇವಳು ನಿನ್ನ ಪಕ್ಕ
ಕೂತ್ಕೊಂಡು ಬೆಳಗ್ಗಿನಿಂದ ಸಂಜೆತನಕ ಕೆರಿತಾಳೆ. ಇವಳ ಕೈಯಲ್ಲಿ ಅಂತಹ ಶಕ್ತಿ ಇದೆ’ ಎಂದು ನಗೆ ಚಟಾಕಿ ಹಾರಿಸಿದರು. ಟೈ-ಯ್ಡ್‌ನಿಂದ ಗುಣಮುಖನಾಗಿದ್ದ ಮತ್ತೊಬ್ಬ ರೋಗಿ ರೌಂಡ್ಸ್‌ನಲ್ಲಿ ಏನು ಆಹಾರ ತಿನ್ನಬೇಕು ಎಂದು ಕೇಳಿದ್ದಕ್ಕೆ ಒಮ್ಮೆ
ಹೇಳಿದರು. ಪದೇ ಪದೇ ಅದನ್ನೇ ಕೇಳುತ್ತಿದ್ದ ರೋಗಿಗೆ ‘ನೋಡೋ ಕಕ್ಕಸೊಂದು ಬಿಟ್ಟು ಏನಾದ್ರೂ ತಿನ್ನು’ ಎಂದರು.

ಹೀಗೆ ಹಲವಾರು ಹಾಸ್ಯಗಳ ಮೂಲಕ ವೈದ್ಯ ಸಿಬ್ಬಂದಿ ಮತ್ತು ರೋಗಿಗಳನ್ನು ನಗುವಿಗೀಡು ಮಾಡುತ್ತಿದ್ದರು. ಹಾಸ್ಯ ಮನೋ ವೃತ್ತಿ ವೈದ್ಯರಿಗೆ ಎಷ್ಟು ಪ್ರಮುಖವೆಂಬ ಪಾಠವನ್ನು ಸಹಪಾಠಿಗಳು ಅದರಲ್ಲೂ ನಾನು ಅವರಿಂದ ಕಲಿತೆ. ಡಾ.ಎಂ.ರಾಮಶೆಟ್ಟಿ ಅವರು ಕ್ಲಿನಿಕಲ್ ಮೆಡಿಸನ್ ಅನ್ನು ಬಹು ಪರಿಣಿತಿಯಿಂದ ಮತ್ತು ಕಲಾತ್ಮಕವಾಗಿ ಬೋಧಿಸುತ್ತಿದ್ದ ಪ್ರತಿಭಾವಂತ ಅಧ್ಯಾಪಕರು.

ರೋಗಿಯ ಹೇಳಿಕೆಯ ಮಾಹಿತಿಯ ಹಂತದಲ್ಲಿಯೇ ನಿರ್ದಿಷ್ಟ ರೋಗವನ್ನು ದೃಢೀಕರಣ ಮಾಡುವ ಕ್ಲಿನಿಕಲ್ ಕೌಶಲವನ್ನು ಅವರು ಚರ್ಚಿಸಿ ವಿದ್ಯಾರ್ಥಿಗಳಿಗೆ ಮನಮುಟ್ಟಿಸುತ್ತಿದ್ದ ರೀತಿ ಮನನೀಯವಾಗಿರುತ್ತಿತ್ತು. ಸ್ನಾತಕೋತ್ತರ ವಿದ್ಯಾರ್ಥಿಗಳಿಗಂತೂ ಅವರ ಪಾಠವೆಂದರೆ ಹೋಳಿಗೆಯ ಊಟವಿದ್ದಂತೆ. ಯಾರೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ನನಗಂತೂ ಇವರ ಹಾಗೆಯೇ ನಾನೂ ಶ್ರೇಷ್ಠ ಅಧ್ಯಾಪಕನಾಗಬೇಕೆಂಬ ಆಸೆ ಅಂದೇ ಮೊಳಕೆಯೊಡೆದಿತ್ತು.

ನನ್ನ ಅವರ ಸಂಬಂಧ ಗುರು-ಶಿಷ್ಯರ ಸಂಬಂಧವಾಗಿ ಅವಿನಾಭಾವವಾಗಿತ್ತು. ಇವರಿಂದ ಪ್ರೇರೇಪಿತನಾದ ನಾನು ಹೌಸ್ ಸರ್ಜನ್ ಆಗಿದ್ದಾಗಲೇ ವಿದ್ಯಾರ್ಥಿಗಳಿಗೆ ಕ್ಲಿನಿಕ್ಸ್ ತೆಗೆದುಕೊಳ್ಳಲು ಪ್ರಾರಂಭಿಸಿದೆ. ತದನಂತರ ವೈದ್ಯಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿಯಾದ ಮೇಲಂತೂ ನನ್ನ ಬೋಧನಾ ಚಟುವಟಿಕೆಗಳನ್ನು ವಿಸ್ತಾರವಾಗಿ ಜೂನಿಯರ್ ರಾಮಶೆಟ್ಟಿ ಎಂದು ಸಹಪಾಠಿಗಳು ಕರೆಯುವ ಮಟ್ಟಿಗೆ ರಾಮಶೆಟ್ಟಿಯವರ ಬೋಧನಾ ಕ್ರಮ ನನ್ನಲ್ಲಿ ಅನುಕರಣೀಯವಾಗಿತ್ತು.

ಎಂಬಿಬಿಎಸ್ ಪಾಸಾದ ನಂತರ ಸ್ನಾತಕೋತ್ತರ ಶಿಕ್ಷಣದ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದಾಗ ಸರಕಾರ ನಾನು ೩ನೇ ರ‍್ಯಾಂಕ್
ಪಡೆದಿದ್ದರೂ ನನ್ನ ಪ್ರಥಮ ಆಯ್ಕೆ ಎಂಎಸ್ ಸರ್ಜರಿಯನ್ನು ಬಿಟ್ಟು ಎಂ.ಡಿ. ಚೆಸ್ಟ್ , ಟಿಬಿ ಕೋರ್ಸ್‌ಗೆ ಪ್ರವೇಶ ನೀಡಲಾಗಿತ್ತು. ನಾನು ಇದನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ ಅಂದು ಖಾಲಿ ಇದ್ದ ಎಂ.ಡಿ.ಮೆಡಿಸಿನ್‌ಗೆ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ದೊರಕಿತು.

ಸ್ನಾತಕೋತ್ತರ ವಿದ್ಯಾರ್ಥಿ ಜೀವನ ನನ್ನ ಬದುಕಿನಲ್ಲಿ ಮರೆಯಲಾಗದ ದಿನಗಳು. ಬೋಧನೆ ಮತ್ತು ವೃತ್ತಿಯ ಬಗ್ಗೆ ವಿಶೇಷ ಆಸಕ್ತಿ ಮೂಡಿಸಿದ ದಿನಗಳವು. ಘಟಾನುಘಟಿ ವೈದ್ಯರುಗಳಾದ ಡಾ.ಎನ್.ಎ.ಜಾದವ್, ಡಾ.ಪಿ.ಆರ್.ಸಿಂಧೆ, ಡಾ.ಎಂ.ವಿ.ಗೋವಿಂದಪ್ಪ, ಡಾ. ಎಂ.ರಾಮಶೆಟ್ಟಿ, ಡಾ.ಜಿ.ರಾಮೇಗೌಡ, ಅವರುಗಳ ಜ್ಞಾನ ಮತ್ತು ಬೋಧನಾಶೈಲಿಗಳು ನನ್ನ ಮೇಲೆ ಮುದ್ರೆಯೊತ್ತಿದ
ದಿನಗಳವು. ಅಂದಿನ ಕ್ಲಿನಿಕಲ್ ಸೆಮಿನಾರ್‌ಗಳಲ್ಲಿ ಈ ಘಟಾನುಘಟಿ ವೈದ್ಯ ಅಧ್ಯಾಪಕರುಗಳು ಚರ್ಚೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಮೇಲೆ ಪ್ರಭಾವಬೀರುತ್ತಿದ್ದ ಶೈಲಿ ಅವರ್ಣನೀಯ.

ಇಂದು ಇಂತಹ ಘಟಾನುಘಟಿ ಬೋಧಕರ ಪರಂಪರೆ ಕ್ಷೀಣಿಸುತ್ತಿರುವುದು ದುರ್ದೈವ. ಇವರುಗಳ ಮುಂದೆ ವಿದ್ಯಾರ್ಥಿಗಳು ಮಾತನಾಡುವುದೆಂದರೆ ಎಲ್ಲಿಲ್ಲದ ಭಯ. ನನ್ನ ಸರದಿಯಲ್ಲಂತೂ ಧೈರ್ಯವಾಗಿ ಕ್ಲಿನಿಕಲ್ ಸೆಮಿನಾರ್‌ಗಳನ್ನು ಇವರುಗಳ
ಮುಂದೆ ಮಂಡಿಸಿ ಅವರುಗಳ ವಿಶ್ವಾಸಕ್ಕೆ ಪಾತ್ರನಾಗಿದ್ದೆ. ಪರೀಕ್ಷೆಗೂ ಮುನ್ನವೇ ಅಧ್ಯಾಪಕರುಗಳು ನೀನು ಖಂಡಿತ ಮೊದಲನೆಯ ಪ್ರಯತ್ನದಲ್ಲಿಯೇ ಎಂಡಿ ಪದವಿಯನ್ನು ಗಳಿಸುತ್ತಿಯಾ ಎಂದು ನುಡಿದ ಭವಿಷ್ಯ ಹುಸಿಯಾಗಲಿಲ್ಲ.