ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಬುಧವಾರ ರಾಜ್ಯದಲ್ಲಿ 67 ಹೊಸ ಕರೋನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ.
ಸೋಮವಾರ 99, ಮಂಗಳವಾರ 149 ಪ್ರಕರಣಗಳು ವರದಿಯಾಗಿದ್ದವು. ಇದರೊಂದಿಗೆ ಕೇವಲ 3 ದಿನದಲ್ಲಿ 315 ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,462ಕ್ಕೆ ಏರಿಕೆಯಾಗಿದೆ. ಮಂಗಳವಾರ ಮಂಡ್ಯದಲ್ಲಿ ಅಬ್ಬರಿಸಿದ್ದ ಕೋವಿಡ್-19 ಸೋಂಕು ಬುಧವಾರ ಹಾಸನಕ್ಕೆ ಶಿಫ್ಟ್ ಆಗಿದೆ. ಜಿಲ್ಲೆಯಲ್ಲಿ ಒಂದೇ ದಿನ 21 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನು ಬೀದರ್ 10, ಮಂಡ್ಯ 8, ಕಲಬುರಗಿ 7, ಉಡುಪಿ 6, ಬೆಂಗಳೂರು, ತುಮಕೂರು ಮತ್ತು ರಾಯಚೂರಿನ 4 ಜನರ ಕೊರೊನಾ ವರದಿ ಪಾಸಿಟಿವ್ ಬಂದಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಯಾದಗಿರಿ ಜಿಲ್ಲೆಯ ತಲಾ ಒಬ್ಬರಲ್ಲೂ ಸೋಂಕು ಕಾಣಿಸಿಕೊಂಡಿದೆ.
ಹಾಸನದ ಎಲ್ಲಾ 21 ಸೋಂಕಿತರಲ್ಲಿ 20 ಜನರಿಗೆ ಮುಂಬಯಿಗೆ ಪ್ರಯಾಣ ಮಾಡಿದ ಹಿನ್ನೆಲೆ ಇದೆ. ಒಬ್ಬರಿಗೆ ಮಾತ್ರ ಆಂಧ್ರ ಪ್ರದೇಶದ ವಿಶಾಖಪಟ್ಟಣದ ಟ್ರಾವೆಲ್ ಹಿಸ್ಟರಿ ಇದೆ. ಮುಂಬಯಿನಿಂದ ಬಂದು ಸೋಂಕು ತಗುಲಿಸಿಕೊಂಡವರಲ್ಲಿ 7 ವರ್ಷದ ಬಾಲಕಿ ಹಾಗೂ 13 ವರ್ಷದ ಇಬ್ಬರು ಬಾಲಕರೂ ಸೇರಿದ್ದಾರೆ. ಎಂದಿನಂತೆ ಮಂಡ್ಯದ ಎಲ್ಲಾ ಸೋಂಕಿತರೂ ಮುಂಬಯಿನಿಂದ ವಾಪಸಾದವರಾಗಿದ್ದಾರೆ. ಇವರಲ್ಲಿ 6, 10 ಮತ್ತು 14 ವರ್ಷದ ಮೂವರು ಬಾಲಕಿಯರೂ ಸೇರಿದ್ದಾರೆ.
ಕಲಬುರಗಿಯ ಎಲ್ಲಾ 7 ಸೋಂಕಿತರಿಗೂ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ ಇದೆ. ಕೆಲವರು ಮಹಾರಾಷ್ಟ್ರದ ಮುಂಬಯಿ, ಇನ್ನು ಕೆಲವರು ರತ್ನಗಿರಿ, ಜಲಗಿರಿ, ನಂದೂರ್ಬಾರ್ನಿಂದ ವಾಪಸ್ ಬಂದವರಾಗಿದ್ದಾರೆ. ಬೀದರ್ನ ಎಲ್ಲಾ 10 ಸೋಂಕಿತರೂ ಈ ಹಿಂದಿನ ರೋಗಿಗಳ ಸಂಪರ್ಕಿತರಾಗಿದ್ದಾರೆ. ಇವರಲ್ಲಿ 9 ಮತ್ತು 12 ವರ್ಷದ ಇಬ್ಬರು ಬಾಲಕಿಯರು ಮತ್ತು 15 ವರ್ಷದ ಓರ್ವ ಬಾಲಕನೂ ಸೇರಿದ್ದಾನೆ.
ರಾಜಧಾನಿ ಬೆಂಗಳೂರಿನ ಇಬ್ಬರಿಗೆ ಪಿ-701 ರಿಂದ ಸೋಂಕು ತಗುಲಿದ್ದರೆ. ಇನ್ನಿಬ್ಬರಿಗೆ ಸೋಂಕು ತಗುಲಿದ್ದು ಹೇಗೆ ಎಂಬುದು ತಿಳಿದು ಬಂದಿಲ್ಲ. ಉಡುಪಿಯ ಎಲ್ಲಾ 6 ಜನರಿಗೂ ಮುಂಬಯಿನಿಂದ ಬಂದವರಾಗಿದ್ದಾರೆ. 4 ಮತ್ತು 15 ವರ್ಷದ ಇಬ್ಬರು ಹೆಣ್ಣುಮಕ್ಕಳು ಇವರಲ್ಲಿ ಸೇರಿದ್ದಾರೆ. ಇನ್ನು 12 ವರ್ಷದ ಬಾಲಕಿ ಸೇರಿ ರಾಯಚೂರಿನ ನಾಲ್ವರಿಗೂ ಮುಂಬಯಿ ಪ್ರಯಾಣದ ಹಿನ್ನೆಲೆ ಇದೆ. ಯಾದಗಿರಿಯ ಏಕೈಕ ಸೋಂಕಿತೆಯೂ ಕಥೆಯೂ ಇದೆ ಆಗಿದೆ.
ತುಮಕೂರಿನ ನಾಲ್ವರು ಸೋಂಕಿತರೂ ಮುಂಬಯಿನಿಂದ ರಾಜ್ಯಕ್ಕೆ ಬಂದವರು. ಇವರಲ್ಲಿ 12 ವರ್ಷದ ಓರ್ವ ಬಾಲಕಿ ಮತ್ತು 10 ವರ್ಷದ ಓರ್ವ ಬಾಲಕನೂ ಸೇರಿದ್ದಾನೆ. ಉತ್ತರ ಕನ್ನಡದ ಏಕೈಕ ಸೋಂಕಿತರು ಮಹಾರಾಷ್ಟ್ರದ ಸೋಲಾಪುರದಿಂದ ಜಿಲ್ಲೆಗೆ ಬಂದಿದ್ದರೆ, ದಕ್ಷಿಣ ಕನ್ನಡದ ಏಕೈಕ ಸೋಂಕಿತೆ ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಯಿಂದ ಬಳಲುತ್ತಿದ್ದಾರೆ.
ಬುಧವಾರ 13 ಜನರು ಕರೋನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದಾವಣಗೆರೆಯ 7, ಮಂಡ್ಯದ 3, ಧಾರವಾಡದ ಇಬ್ಬರು ಮತ್ತು ಬೆಂಗಳೂರಿನ ಒಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ ರಾಜ್ಯದಲ್ಲಿ ಸೋಂಕಿನಿಂದ ಚೇತರಿಸಿಕೊಂಡವ ಸಂಖ್ಯೆ 556ಕ್ಕೆ ಏರಿದೆ. ಸದ್ಯ ರಾಜ್ಯದಲ್ಲಿ 864 ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ 849 ಜನರ ಆರೋಗ್ಯ ಸ್ಥಿರವಾಗಿದ್ದು ಪತ್ಯೇಕ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 15 ಜನರಿಗೆ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿ ಕರೋನಾಗೆ ಓರ್ವ ಬಲಿ
ತಮಿಳುನಾಡಿನ ವೆಲ್ಲೂರಿಗೆ ಪ್ರಯಾಣ ಬೆಳೆಸಿದ್ದ ಬೆಂಗಳೂರಿನ 43 ವರ್ಷದ ಪುರುಷರೊಬ್ಬರು ಬುಧವಾರ ನಿಧನರಾಗಿದ್ದಾರೆ. ಇವರಿಗೆ ಹೈಪರ್ಟೆನ್ಶನ್, ಹೃದಯದ ಖಾಯಿಲೆಯೂ ಇತ್ತು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಕರೋನಾದಿಂದ ಸಾವಿಗೀಡಾದವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಇನ್ನೋರ್ವ ರೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.