ಇಪ್ಪತ್ತೆರಡನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 22 ಚಿನ್ನದ ಪದಕ, 16 ಬೆಳ್ಳಿ ಪದಕ ಮತ್ತು 23 ಕಂಚಿನ ಪದಕ ಸೇರಿದಂತೆ ಒಟ್ಟು 61 ಪದಕಗಳನ್ನು ಗೆದ್ದು ಉತ್ತಮ ಸಾಧನೆ ಮಾಡಿದೆ.
ಒಟ್ಟಾರೆ ಪದಕಗಳ ಪಟ್ಟಿಯಲ್ಲಿ ಭಾರತ ೪ನೇ ಅಗ್ರಗಣ್ಯ ಸ್ಥಾನದಲ್ಲಿ ಹೊರ ಹೊಮ್ಮಿದೆ. ಇತ್ತೀಚಿನ ವರ್ಷಗಳಲ್ಲಿ ಕ್ರೀಡಾಕ್ಷೇತ್ರಕ್ಕೆ ಉತ್ತಮ ಪ್ರೋತ್ಸಾಹ ದೊರಕುತ್ತಿರುವುದು ಈ ಸಾಧನೆಗಳಲ್ಲಿ ಪ್ರತಿಬಿಂಬಿತವಾಗುತ್ತಿದೆ ಎಂದರೆ ತಪ್ಪಾಗಲಾರದು. ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವಾಗ ಕ್ರೀಡಾಕ್ಷೇತ್ರ ಕೂಡ ಸಂಭ್ರಮವನ್ನು ಹೆಚ್ಚಿಸುವಂತಹ ಸಾಧನೆ ಮಾಡಿದ್ದು ಸ್ತುತ್ಯರ್ಹ.
ಇತ್ತೀಚಿನ ವರ್ಷಗಳಲ್ಲಿ ಎಲ್ಲ ರಂಗಗಳಲ್ಲೂ ಅತ್ಯುತ್ತಮ ಸಾಧನೆಯನ್ನೇ ಮಾಡಬೇಕೆಂಬ ಹಂಬಲದಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಹಲವು ಉಪಕ್ರಮಗಳನ್ನು ಆರಂಭಿಸಿದೆ. ಖೇಲೋ ಇಂಡಿಯಾ ಕಾರ್ಯಕ್ರಮ ಅವುಗಳಲ್ಲಿ ಒಂದು. ದೇಶದ ಕ್ರೀಡಾಪಟುಗಳಲ್ಲಿ ಎಲ್ಲ ಬಗೆಯ ಸೌಲಭ್ಯ, ಪ್ರೋತ್ಸಾಹ, ಉತ್ತೇಜನ ನೀಡುವ ಮೂಲಕ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಹಂಬಲಕ್ಕೆ ಒತ್ತಾಸೆಯಾಗಿ ಈ ಕಾರ್ಯಕ್ರಮ ಜಾರಿಗೆ ಬಂದಿದೆ.
ಅತ್ಯುತ್ತಮ, ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದು, ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವುದು, ಪ್ರತಿಭೆಯಿದ್ದರೂ ಸೌಲಭ್ಯಗಳ ಕೊರತೆಯಿಂದ ಅವಕಾಶ ವಂಚಿತರಾದವರಿಗೆ ಸೌಲಭ್ಯಗಳನ್ನು ಒದಗಿಸುವುದು ಈ ಕಾರ್ಯ ಕ್ರಮದ ಉದ್ದೇಶ. ಈ ಯೋಜನೆಯಡಿ ಆದ್ಯತೆಯ ಕ್ರೀಡಾ ವಿಭಾಗಗಳಲ್ಲಿ ವಿವಿಧ ಹಂತಗಳಲ್ಲಿ ಪ್ರತಿಭಾವಂತ ಆಟಗಾರರಿಗೆ ೮ ವರ್ಷಗಳ ವರೆಗೆ ವಾರ್ಷಿಕ ೫ ಲಕ್ಷ ರುಪಾಯಿಗಳ ಆರ್ಥಿಕ ಸಹಾಯ ಒದಗಿಸಲಾಗುತ್ತಿದೆ.
ಈ ರೀತಿಯ ಪ್ರೋತ್ಸಾಹ ಮತ್ತು ಪೋಷಣೆಯ ಫಲಿತಾಂಶಗಳು ಈಗ ಕಾಣಸಿಗುತ್ತಿವೆ. ಹಿಂದೆಲ್ಲ ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಕೂಪವಾಗಿದ್ದ ಕ್ರೀಡಾ ಪ್ರಾಧಿಕಾರಗಳನ್ನು ಸ್ವಚ್ಛಗೊಳಿಸಿ, ಪ್ರತಿಭೆಗೆ ಮಾತ್ರ ಆದ್ಯತೆ ಮತ್ತು ಪ್ರೋತ್ಸಾಹ ನೀಡುವ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಕ್ರೀಡೆ ಮತ್ತು ಫಿಟ್‌ನೆಸ್ ಅಮೂಲ್ಯವಾಗಿದೆ.
ಕ್ರೀಡೆಗಳನ್ನು ಆಡುವುದು ತಂಡವಾಗಿ ಕೆಲಸ ಮಾಡುವ ಮನೋಭಾವವನ್ನು ಹುಟ್ಟುಹಾಕುತ್ತದೆ. ಕಾರ್ಯತಂತ್ರ ಮತ್ತು ವಿಶ್ಲೇಷಣಾತ್ಮಕ ಚಿಂತನೆ, ನಾಯಕತ್ವ ಕೌಶಲ್ಯಗಳು, ಗುರಿ ನಿಗದಿ, ಅಪಾಯವನ್ನು ಲೆಕ್ಕಿಸದೆ ಮುನ್ನುಗ್ಗುವುದು- ಇಂತಹ ಗುಣಗಳು ಬೆಳೆಯುವುದರ ಜತೆಗೆ ಸದೃಢ ದೇಹ ಮತ್ತು ಆರೋಗ್ಯವಂತ ವ್ಯಕ್ತಿ ರೂಪುಗೊಂಡು ಆರೋಗ್ಯವಂತ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕಾರಣವಾಗುತ್ತದೆ.