Sunday, 24th November 2024

ಬೆಳ್ಳಿತೆರೆಯಲ್ಲಿ ಹಾರಿದ ಗಣಿ – ಭಟ್ಟರ ಗಾಳಿಪಟ

ಭಟ್ರು ಇಂದಿನ ಟ್ರೆಂಡ್‌ಗೆ ಹೊಂದಿಕೊಳ್ಳುವಂತೆ ಕಥೆ ಬರೆಯುತ್ತಾರೆ. ಅದಕ್ಕೆ ತಕ್ಕಂತೆ ಹಾಡಗಳನ್ನು ರಚಿಸುತ್ತಾರೆ. ಅದು ಎಮೋಷನ್ ಇರಬಹುದು, ಲವ್ ಇರಬಹುದು, ಹಾಡಿನಲ್ಲೇ ನಗಿಸುವ ಹಾಸ್ಯಮಯ ಗೀತೆಯೂ ಆಗಿರಬಹುದು.
ಹಾಗಾಗಿಯೇ ನನಗೆ ಅವರ ಚಿತ್ರಗಳಲ್ಲಿ ನಟಿಸುವುದು ಎಂದರೆ ಬಲು ಅಚ್ಚುಮೆಚ್ಚು.

ದಶಕಗಳ ಬಳಿಕ ಗಣೇಶ್ ಮತ್ತು ಯೋಗರಾಜ್ ಭಟ್ಟರು ಒಂದಾಗಿದ್ದು, ಗಾಳಿಪಟ ಹಾರಿಸಲು ಸಜ್ಜಾಗುತ್ತಿದ್ದಾರೆ. ಗಣಿ, ದಿಗಂತ್ ಜತೆಗೆ ಪವನ್ ಕೂಡ ಗಾಳಿಪಟ ಹಾರಿಸಲು ಸಿದ್ಧವಾಗಿದ್ದಾರೆ. ವೈಭವಿ, ಶರ್ಮಿಳಾ, ಸಂಯುಕ್ತಾ ಮೆನನ್ ಇವರ ಜತೆಗೂಡಿದ್ದಾರೆ. ಈ ಬಾರಿ ಕಲರ್ ಫುಲ್ ಗಾಳಿಪಟ ಬೆಳ್ಳಿತೆರೆ ಯಲ್ಲಿ ಹಾರಾಡಲಿದೆ.

ದಶಕಗಳ ಹಿಂದೆ ತೆರೆಗೆ ಬಂದ ಗಾಳಿಪಟ ಚಿತ್ರದ ಸೀಕ್ವೆಲ್ ಇದಾಗಿದ್ದು, ಅದೇ ಎಮೋಷನ್ಸ್ , ಲವ್ ಸ್ಟೋರಿ ಇಲ್ಲಿಯೂ
ಮುಂದುವರಿಯಲಿದೆ. ಅದಕ್ಕೊಂದಷ್ಟು ಹೊಸ ಸ್ಪರ್ಶವನ್ನು ನೀಡಲಾಗಿದ್ದು, ಕಲರ್ ಫುಲ್ ಆಗಿ ಕಟ್ಟಿಕೊಡಲಾಗಿದೆ. ಗಾಳಿಪಟ ೨ ಚಿತ್ರದ ಬಗ್ಗೆ ನಟ ಗಣೇಶ್, ವಿ.ಸಿನಿಮಾಸ್ ನೊಂದಿಗೆ ಮಾತನಾಡಿದ್ದಾರೆ.

ವಿ.ಸಿನಿಮಾಸ್: ಹಿಂದೆ ತೆರೆಗೆ ಬಂದ ಗಾಳಿಪಟದ ಕಥೆಯೇ ಇಲ್ಲಿ ಮುಂದುವರಿಯುತ್ತದೆಯೇ?
ಗಣೇಶ್: ಹೌದು, ಗಾಳಿಪಟದ ಮುಂದುವರಿದ ಭಾಗವೇ ಗಾಳಿಪಟ ೨. ಮೊದಲ ಭಾಗದಂತೆಯೇ ಇಲ್ಲಿಯೂ ಎಮೋಷನ್
ಗೆ ಹೆಚ್ಚಿನ ಒತ್ತು ನೀಡಲಾಗಿದೆ. ನವಿರಾದ ಪ್ರೇಮ ಕಥೆಯ ಜತೆಗೆ, ತುಂಟಾಟವಿದೆ. ಆದರೆ ಇಲ್ಲಿ ಹಂದಿ ಬಾಲದ ಕಥೆಯಿಲ್ಲ ಬದಲಾಗಿ ಬೇರೆ ಒಂದಷ್ಟು ಹೊಸ ವಿಚಾರಗಳನ್ನೂ ಸೇರಿಸಿ ಎಲ್ಲರಿಗೂ ಇಷ್ಟವಾಗುವಂತೆ ತೆರೆಗೆ ತರಲಾಗಿದೆ.

ವಿ.ಸಿ: ಈ ಚಿತ್ರಕ್ಕಾಗಿ ನಿಮ್ಮ ತಯಾರಿ ಹೇಗಿತ್ತು ?
ಗಣೇಶ್: ಮೊದಲ ಭಾಗದಲ್ಲಿ ನಾನು ತಿಂಡಿಪೋತನಾಗಿದ್ದೆ. ಹಾಗಾಗಿ ಮುಂದೆ ಒಂದಷ್ಟು ದಪ್ಪ ಆಗಿರುವುದಂತೂ ದಿಟ. ನನ್ನ ಪಾತ್ರಕ್ಕಾಗಿ ಆರು ಕೆ.ಜಿ.ಯಷ್ಟು ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಅದಕ್ಕಾಗಿ ಸುಮಾರು ಒಂದೂವರೆ ತಿಂಗಳುಗಳ ಕಾಲ ಮನೆಯಲ್ಲಿ ಇದ್ದು, ಪಿಜ್ಜಾ, ಚೀಸ್.. ಹೀಗೆ ಹಲವು ತಿಂಡಿಗಳನ್ನು ತಿಂದೆ. ಬೇಕಿದ್ದು ಆರು ಕೆಜಿ, ಆದರೆ ಹೆಚ್ಚಾಗಿದ್ದು ಎಂಟು ಕೆಜಿ. ಮೊದಲ ದಿನ ಶೂಟಿಂಗ್‌ಗೆ ಹೋದಾಗ ಭಟ್ರು, ಗಣಿ ಇಷ್ಟು ದಪ್ಪ ಆಗಿದ್ದಿಯಾ, ಎರಡು ಕೆಜಿ ಸಣ್ಣ ಆಗಬೇಕು ಎಂದರು. ಹಾಗಾಗಿ ಮತ್ತೆ ಸೈಕಲಿಂಗ್ ಶುರು ಮಾಡಿದೆ. ಕುದುರೆಮುಖದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ನಾವು ತಂಗಿದ್ದ ಜಾಗದಿಂದ, ಶೂಟಿಂಗ್ ಸ್ಪಾಟ್‌ಗೆ ಸೈಕಲ್‌ನಲ್ಲಿಯೇ ತೆರಳುತ್ತಿದ್ದೆ. ಇದರಿಂದ ಮತ್ತೆ ತೂಕ ಇಳಿಸಿಕೊಳ್ಳಲು ಸಾಧ್ಯವಾಯಿತು.

ವಿ.ಸಿ: ಗಾಳಿಪಟ ೨ನಲ್ಲಿ ನೀರು ಕೋಟೆ ಸೃಷ್ಟಿಯಾಗಿದೆಯಲ್ಲ?
ಗಣೇಶ್ : ನೀರು ಕೋಟೆ ಅನ್ನುವುದು ಕಾಲ್ಪನಿಕ ಹೆಸರು, ಕುದುರೆಮುಖದ ದಟ್ಟ ಅರಣ್ಯ ಪ್ರದೇಶವದು. ಚಿತ್ರದ ಬಹುತೇಕ ಶೂಟಿಂಗ್ ಅಲ್ಲಿಯೇ ನಡೆಯಿತು. ದಟ್ಟ ಅರಣ್ಯವಾದ್ದರಿಂದ ಜನಸಂಚಾರ ಅಲ್ಲಿ ತೀರಾ ವಿರಳ. ಅಂತಹ ಸುಂದರ ಪ್ರದೇಶದಲ್ಲಿ ನಾವು ಯಶಸ್ವಿಯಾಗಿ ಚಿತ್ರೀಕರಣ ನಡೆಸಿದ್ದೇವೆ. ಗಾಳಿಪಟ ೨ ಬಿಡುಗಡೆಯಾದ ಮೇಲೆ ನೀರು ಕೋಟೆ ಪ್ರಸಿದ್ಧಿಯಾಗಲಿದೆ.

ವಿ.ಸಿ: ನಿಮ್ಮ ಭಟ್ಟರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರದೆ ತುಂಬಾ ಸಮಯವಾಯಿತಲ್ಲ?
ಗಣೇಶ್: ಹದಿನಾರು ವರ್ಷಗಳಲ್ಲಿ ನಮ್ಮಿಬ್ಬರ ಕಾಂಬಿನೇಷನ್ ನಲ್ಲಿ ನಾಲ್ಕೇ ನಾಲ್ಕು ಸಿನಿಮಾಗಳು ಮೂಡಿಬಂದಿವೆ. ಮುಂಗಾರು
ಮಳೆ, ಗಾಳಿಪಟದ ಬಳಿಕ ಒಂದು ಗ್ಯಾಪ್ ಆಯಿತು. ಆ ನಂತರ ಮುಗುಳು ನಗೆ ಬಂತು. ಈ ಮತ್ತೆ ಗಾಳಿಪಟ ಹಾರಿಸುತ್ತಿದ್ದೇವೆ.
ನಾನು ಕೆಲವು ಸಿನಿಮಾದಲ್ಲಿ ನಟಿಸುತ್ತಿದ್ದೆ. ಅವರು ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದರು. ಈಗ ಮತ್ತೆ ಕಾಲ ಕೂಡಿಬಂತು,
ಗಾಳಿಪಟ ೨ ಮೂಡಿಬಂತು.

ವಿ.ಸಿ: ಚಿತ್ರದ ತಾರಾಬಳಗದ ಬಗ್ಗೆ ಹೇಳುವುದಾದರೆ?
ಗಣೇಶ್: ಇಲ್ಲಿ ನನ್ನ ಹಾಗೂ ದಿಗಂತ್ ಪಾತ್ರಗಳು ಮುಂದುವರಿಯುತ್ತವೆ. ರಾಜೇಶ್ ಅವರ ಬದಲು ಪವನ್ ಕಾಣಿಸಿ ಕೊಂಡಿದ್ದಾರೆ. ವೈಭವಿ ಶಾಂಡಿಲ್ಯಾ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್ ನಾಯಕಿಯರಾಗಿ ನಟಿಸಿದ್ದಾರೆ. ಹಿರಿಯ
ನಟ ಅನಂತ್‌ನಾಗ್ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

ವಿ.ಸಿ: ಈ ಭಾಗದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳುವುದಾದರೆ?
ಗಣೇಶ್: ಇದು ಗಾಳಿಪಟದ ಮುಂದುವರಿದ ಸೀಕ್ವೆಲ್, ಇಲ್ಲಿಯೂ ನಾನು ಗಣಿಯಾಗಿಯೇ ಕಾಣಿಸಿಕೊಂಡಿದ್ದೇನೆ. ಆದರೆ ಈ ಭಾಗದಲ್ಲಿ ತಿಂಡಿಪೋತನಾಗಿಲ್ಲ. ಬದಲಾಗಿ ವ್ಯಾಸಂಗ ಮುಗಿಸಿ ಕಾಮಿಡಿಯನ್ ಆಗಿರುತ್ತೇನೆ. ದೇಶ, ವಿದೇಶಗಳಲ್ಲಿ ಪ್ರದರ್ಶನ ಕೊಡುತ್ತಾ, ತನ್ನೂರಿಗೆ ಬರುವುದನ್ನೇ ಮರೆತು ಬಿಡುತ್ತಾನೆ. ಆಗ ನೆನಪಾಗುವ ಸ್ನೇಹಿತರು ಕಳೆದ ಆ ದಿನಗಳು, ತೆರೆಯಲ್ಲಿ ಮಧುರ ವಾಗಿ ಸಾಗುತ್ತವೆ. ಇಲ್ಲಿಯೂ ಅದೇ ಅಪ್ಪ ಅಮ್ಮ ಇದ್ದಾರೆ. ಭೈರೇಗೌಡರ ಅಬ್ಬರ ಕಾಮಿಡಿಯಾಗಿ ಮುಂದುವರಿದಿದೆ.