Thursday, 28th November 2024

ತಾಯಮ್ಮನ ಹುಟ್ಟು, ಕನ್ನಡದಲ್ಲಿ ಆರೋಗ್ಯ ಯೋಗ

ಸ್ವಾಸ್ಥ್ಯ ಸಂಪದ

yoganna55@gmail.com

ವೈದ್ಯ ರೋಗಿಯ ಸಂಬಂಧ ಕಾಯಿಲೆಗೆ ಸೀಮಿತವಾದುದಲ್ಲ. ಅದು ರೋಗಿಯ ಭಾವನಾತ್ಮಕ, ಸಾಮಾಜಿಕ, ಆರ್ಥಿಕ ವಿಚಾರ ಗಳು ರೋಗಿಯ ಅನಾರೋಗ್ಯವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಅವೆಲ್ಲವುಗಳ ಕಡೆಗೂ ವೈದ್ಯ ಗಮನ ಹರಿಸಿದಲ್ಲಿ ರೋಗ ನಿವಾರಣೆಗೆ ವಿಟಮಿನ್ ನೀಡಿದಂತಾಗುತ್ತದೆ. ರೋಗ ನಿವಾರಣೆಯಲ್ಲಿ ವೈದ್ಯ ರೋಗಿ ನಡುವೆ ಬಹುಮುಖ್ಯವಾದ ಪಾತ್ರ ವಹಿಸುವುದರಿಂದ ಈ ಕೊಂಡಿ ಎಂದಿಗೂ ಸಡಿಲವಾಗಬಾರದು.

ಕಳೆದ ವಾರ ನನ್ನ ವೈದ್ಯಕೀಯ ಓದಿನ ಹಾದಿಯಲ್ಲಿ ಆದ ಅಪೂರ್ವ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ಆದರೆ ಅಂಥ ಅನುಭವಗಳು ಮೊಗೆದಷ್ಟೂ ಬರಿದಾಗದ ನಿರಂತರ ಜಲಧಾರೆಯಿದ್ದಂತೆ. ಬಹುಶಃ ವೃತ್ತಿ ಬದುಕನ್ನು ಗಟ್ಟಿಗೊಳಿಸಿ, ಇಂದು ತಕ್ಕ ಮಟ್ಟಿಗಿನ ಯಶಸ್ಸು, ಖ್ಯಾತಿಯನ್ನು ಗಳಿಸಿಕೊಟ್ಟಿದ್ದೇ ನನಗೆ ಸಿಕ್ಕ ಈ ಗಟ್ಟಿ ಪಂಚಾಂಗದ ಫಲವೆನ್ನಬಹುದು.

ನಾನು ಎದುರಿಸಿದ ಎಂಡಿ ಕ್ಲಿನಿಕಲ್ ಪರೀಕ್ಷೆಯ ಪ್ರಸಂಗವನ್ನಂತೂ ಮರೆಯುವಂತಿಲ್ಲ. ಕ್ಲಿನಿಕಲ್ ಪರೀಕ್ಷೆಯಲ್ಲಿ ನನಗೆ ಪರೀಕ್ಷೆಗೆ ನೀಡಿದ್ದ ನರರೋಗಿಯ ಬಗ್ಗೆ ಪರೀಕ್ಷಕರು ಅಂದುಕೊಂಡಿದ್ದ ಡಯಾಗ್ನೋಸಿಸ್‌ಗೆ ವಿರುದ್ಧವಾದ ಡಯಾಗ್ನೋಸಿಸ್ ಅನ್ನು ನಾನು ಮಾಡಿ ಅದನ್ನು ಸಮರ್ಥವಾಗಿ ವಾದಮಾಡಿ ಪುಷ್ಟೀಕರಿಸಿದ ರೀತಿಗೆ ಪರೀಕ್ಷಕರೇ ಬೆರಗಾಗಿದ್ದರು. ಪ್ರಥಮ ಪ್ರಯತ್ನದಲ್ಲಿಯೇ ನನ್ನನ್ನು ಪಾಸುಮಾಡಿದರು. ಎಂ.ಡಿ. ಸ್ನಾತಕೋತ್ತರ ಪದವಿಯನ್ನು ಮೊದಲನೆಯ ಪ್ರಯತ್ನದಲ್ಲಿಯೇ ಪಡೆಯುವುದು ಅಂದು ಸುಲಭದ ಮಾತಾಗಿರಲಿಲ್ಲ. ನಾನು ಪ್ರಥಮ ಪ್ರಯತ್ನದಲ್ಲಿ ಪಡೆದ ಹಿಂದಿನ ೪ವರ್ಷಗಳಲ್ಲಿ ಯಾರೂ ಪ್ರಥಮ ಪ್ರಯತ್ನದಲ್ಲಿ ಎಂ.ಡಿ.ಪಡೆದಿರಲಿಲ್ಲ.

ಅಂದಿನ ಪರೀಕ್ಷಕ ಬೋಧಕರುಗಳು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದ ಮಾತು ಇನ್ನೂ ನನ್ನಲ್ಲಿ ಹಸಿರಾಗಿದೆ. ಪರೀಕ್ಷಕರು ಎಂಬಿ ಬಿಎಸ್ ಪದವಿಯನ್ನು ಸುಲಭವಾಗಿ ನೀಡುತ್ತಾರೆ. ಏಕೆಂದರೆ ಅದು ಬ್ರಡ್ ಇದ್ದಂತೆ ಬದುಕಲು ಅವಶ್ಯಕ. ಆದರೆ ಎಂಡಿ. ಸ್ನಾತಕೋತ್ತರ ಪದವಿ ಜಾಮ್ ಆಗಿದ್ದು, ಅದನ್ನು ಶ್ರಮಪಟ್ಟು ವಿದ್ಯಾರ್ಥಿಗಳು ಪರೀಕ್ಷಕರಿಂದ ಕಿತ್ತುಕೊಳ್ಳಬೇಕು. ಅಷ್ಟರ ಮಟ್ಟಿಗೆ ಪರೀಕ್ಷಾರ್ಥಿಗೆ ಜ್ಞಾನವಿರಬೇಕು. ಇಂದಿನ ಪರಿಸ್ಥಿತಿ ವಿಭಿನ್ನ. ಸ್ನಾತಕೋತ್ತರ ಪರೀಕ್ಷೆಗಳಲ್ಲಿ 100ಕ್ಕೆ 100ರಷ್ಟು ಫಲಿತಾಂಶಗಳನ್ನು ಇಂದು ನೋಡುತ್ತೇವೆ. ಅಂದಿನ ದಿನಗಳಲ್ಲಿ ಇದು ಕನಸಿನ ಮಾತಾಗಿತ್ತು.

ನಾನು ಡಾ.ಜಿ.ರಾಮೇಗೌಡ ಅವರ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು ನನಗೆ ಅವರು ಥಿಸೀಸ್ ಮಾರ್ಗದರ್ಶಕರಾಗಿ
ದ್ದರು. ಅವರಿಗೆ ನನ್ನ ಬಗ್ಗೆ ಎಲ್ಲಿಲ್ಲದ ಅಭಿಮಾನ. ಅವರ ಥಿಯರಿ ತರಗತಿಗಳನ್ನು ನನಗೆ ತೆಗೆದುಕೊಳ್ಳುವ ಅವಕಾಶ ನೀಡಿ ನಾನು ಒಬ್ಬ ಉತ್ತಮ ಬೋಧಕನಾಗಲು ಅವಕಾಶಮಾಡಿಕೊಟ್ಟಿದ್ದನ್ನು ನಾನು ಮರೆಯುವಂತಿಲ್ಲ. ಮೈಸೂರು ವೈದ್ಯಕೀಯ ಕಾಲೇಜಿ ನಲ್ಲಿ ವೈದ್ಯಶಾಸ್ತ್ರ ಉಪನ್ಯಾಸಕನಾಗಿ ನೇಮಕಗೊಂಡೆ. ಪುನಃ ಡಾ.ಎನ್ ಎ ಜಾದವ್ ಅವರು ನನ್ನನ್ನು ಅವರ ಘಟಕದಲ್ಲಿಯೇ ಸಹಾಯಕನಾಗಿ ಇರಿಸಿಕೊಂಡು ನನ್ನ ಜ್ಞಾನದ ವಿಸ್ತಾರಕ್ಕೆ ಪೂರಕವಾದರು.

ಡಾ.ಎಂ.ರಾಮಶೆಟ್ಟಿಯವರೂ ಅದೇ ಯೂನಿಟ್‌ನಲ್ಲಿ ಇದ್ದುದರಿಂದ ಇವರಿಬ್ಬರ ಜೋಡಿ ನನ್ನ ಥಿಯರಿ ಮತ್ತು ಕ್ಲಿನಿಕಲ್
ಜ್ಞಾನಗಳ ಮತ್ತಷ್ಟು ವಿಸ್ತಾರಕ್ಕೆ ನಾಂದಿಯಾಯಿತು. ಅಧ್ಯಾತ್ಮಿಕ ಆರೋಗ್ಯ ಆರೋಗ್ಯದ ಪ್ರಕಾರಗಳಲ್ಲಿ ಒಂದಾದರೂ ಅದರ ಬಗ್ಗೆ ನಿಖರವಾದ ಮತ್ತು ವೈಜ್ಞಾನಿಕವಾದ ಮಾಹಿತಿ ಇಲ್ಲದಿರುವುದನ್ನು ನನ್ನ ವಿದ್ಯಾರ್ಥಿ ದೆಸೆಯಿಂದಲೂ ಮನಗಂಡಿದ್ದೆ. ಇದರ ಬಗ್ಗೆ ಅಧ್ಯಯನ ಮಾಡಬೇಕೆಂದು ಮಾಹಿತಿ ಸಂಗ್ರಹಿಸುವ ಹಾದಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಒಡನಾಟ
ಬೆಳೆಯಿತು.

ಕನ್ನಡದ ಬಗ್ಗೆ ಅಭಿಮಾನವೂ ಹೆಚ್ಚಾಯಿತು. ಕನ್ನಡದಲ್ಲಿ ವೈದ್ಯಕೀಯ ವಿಚಾರಗಳನ್ನು ಬರೆಯಲಾರಂಭಿಸಿದೆ. ಇದಕ್ಕಾಗಿಯೇ ‘ತಾಯಮ್ಮ ಪ್ರಕಾಶನ’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಅದರ ಮೂಲಕ ‘ಆರೋಗ್ಯ ಯೋಗ’ ಎಂಬ ಕನ್ನಡ ವೈದ್ಯಕೀಯ
ಮಾಸಪತ್ರಿಕೆಯನ್ನು ಪ್ರಕಟಿಸಿ ವಿದ್ಯಾರ್ಥಿಗಳು ಮತ್ತು ವೈದ್ಯರನ್ನು ಕನ್ನಡದಲ್ಲಿ ಬರೆಯಲು ಪ್ರೇರೇಪಿಸಿದೆ. ಥಿಯರಿ ಮತ್ತು ಕ್ಲಿನಿಕಲ್ ತರಗತಿಗಳನ್ನು ಕನ್ನಡದಲ್ಲಿಯೇ ಬೋಧಿಸುತ್ತಿದ್ದೆ. ಇದು ಎಷ್ಟು ಜನಪ್ರಿಯವಾಗಿತ್ತು ಎಂದರೆ ನನ್ನ ತರಗತಿಗಳೆಲ್ಲ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದವು. ಮೊದಲು ಕನ್ನಡದಲ್ಲಿ ಹೇಳಿ ನಂತರ ಇಂಗ್ಲಿಷ್‌ನಲ್ಲಿ ಪಾಠ ಮಾಡುತ್ತಿದ್ದೆ.

ವಿದ್ಯಾರ್ಥಿಗಳಿಗೆ ಬಹಳ ಚೆನ್ನಾಗಿ ಅರ್ಥವಾಗುತ್ತಿತ್ತು. ವೈದ್ಯಕೀಯ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಬೋಧಿಸುವುದರಿಂದ
ಕನ್ನಡ ಮಾತೃಭಾಷೆ ವಿದ್ಯಾರ್ಥಿಗಳಿಗೆ ವಿಷಯಗಳು ಚೆನ್ನಾಗಿ ಅರ್ಥವಾಗುತ್ತವೆ ಎಂಬುದನ್ನು ನಾನು ಮನಗಂಡಿದ್ದೇನೆ. ಸರಕಾರ ವೈದ್ಯಕೀಯ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಬೋಧಿಸುವ ದಿಕ್ಕಿನಲ್ಲಿ ದಿಟ್ಟ ಕ್ರಮವನ್ನು ಹಮ್ಮಿಕೊಂಡಲ್ಲಿ ಕ್ಲಿಷ್ಟ ವೈದ್ಯಕೀಯ ವಿಚಾರಗಳನ್ನು ಸುಲಭವಾಗಿ ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಲು ಸಹಕಾರಿಯಾಗಲಿದೆ.

ಕನ್ನಡ ವೈದ್ಯ ಪಠ್ಯಪುಸ್ತಕಗಳು ಮತ್ತು ನಿಘಂಟುಗಳನ್ನು ನಾನು ಬರೆದಿದ್ದು, ಅವು ಶೀಘ್ರದಲ್ಲಿ ಪ್ರಕಟಗೊಳ್ಳಲಿವೆ. ವೈದ್ಯ ರೋಗಿಯ ಸಂಬಂಧ ಕೇವಲ ಕಾಯಿಲೆಗೆ ಸೀಮಿತವಾದುದಲ್ಲ. ಅದರಿಂದಾಚೆಗೆ ರೋಗಿಯ ಭಾವನಾತ್ಮಕ, ಸಾಮಾಜಿಕ,
ಆರ್ಥಿಕ ಮತ್ತಿತರ ವಿಚಾರಗಳು ರೋಗಿಯ ಅನಾರೋಗ್ಯವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಅವೆಲ್ಲವುಗಳ ಕಡೆಗೂ ವೈದ್ಯ ಗಮನ ಹರಿಸಿದಲ್ಲಿ ರೋಗ ನಿವಾರಣೆಗೆ ವಿಟಮಿನ್ ನೀಡಿದಂತಾಗುತ್ತದೆ.

ರೋಗ ನಿವಾರಣೆಯಲ್ಲಿ ವೈದ್ಯ ರೋಗಿ ನಡುವಿನ ಆತ್ಮವಿಶ್ವಾಸ ಬಹುಮುಖ್ಯವಾದ ಪಾತ್ರ ವಹಿಸುವುದರಿಂದ ಈ ಕೊಂಡಿ ಎಂದಿಗೂ ಸಡಿಲವಾಗಬಾರದು. ರೋಗದಿಂದಾಚೆಗೆ ರೋಗಿಯನ್ನು ಅರ್ಥಮಾಡಿಕೊಂಡು ಪರಿಹಾರಗಳನ್ನು ಸೂಚಿಸಿದಲ್ಲಿ ಮಾತ್ರ ರೋಗಿಯ ಸಮಗ್ರ ಆರೈಕೆಯಾಗುತ್ತದೆ. ಇದನ್ನು ನನ್ನ ವೃತ್ತಿಯ ಬದುಕಿನಲ್ಲಿ ಹಲವಾರು ಪ್ರಸಂಗಗಳಲ್ಲಿ  ಮನಗಂಡಿದ್ದೇನೆ.

ಸ್ವಾಮೀಜಿಯೊಬ್ಬರ ಏರುರಕ್ತದೊತ್ತಡ ಎಷ್ಟು ಮಾತ್ರೆಗಳನ್ನು ನೀಡಿದರೂ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಎಲ್ಲ ವೈದ್ಯಕೀಯ ಪರೀಕ್ಷೆಗಳು ಸಹಜವಾಗಿದ್ದವು. ಮತ್ತೆ ಯಾವುದೇ ಸಮಸ್ಯೆಗಳನ್ನು ಮೊದಲು ನನ್ನ ಬಳಿ ಹೇಳಿರಲಿಲ್ಲ. ನಾನು ಅವರನ್ನು ವೈಯಕ್ತಿಕವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಶ್ನಿಸಲಾಗಿ ದೊಡ್ಡ ಸ್ವಾಮೀಜಿ ಮತ್ತು ಇವರಿಗೂ ಮಠದಲ್ಲಿ ದಿನಾ ಘರ್ಷಣೆ ಯಾಗುತ್ತಿರುವುದಾಗಿ ನನ್ನನ್ನು ಹೊರಹಾಕುತ್ತೇನೆ ಎಂದು ಹೇಳಿದ್ದಾರೆ ಎಂದು ಹೇಳಿದ ತಕ್ಷಣ ನನಗೆ ರಕ್ತ ಒತ್ತಡ ಏಕೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಅರ್ಥವಾಯಿತು.

ನಾನು ಅವರಿಗೆ ಸಮಾಧಾನ  ಮಾಡಿ ದೊಡ್ಡ ಸ್ವಾಮೀಜಿ ಹತ್ತಿರವೂ ಮಾತನಾಡಿ ಸಮಸ್ಯೆ ಬಗೆಹರಿಸಿದ ನಂತರ ಯಾವ ಔಷಧಗಳೂ ಇಲ್ಲದೆ ಏರು ರಕ್ತದೊತ್ತಡ ನಿಯಂತ್ರಣಕ್ಕೆ ಬಂದಿತ್ತು. ವೈದ್ಯರುಗಳು ಅತ್ಯಾಧುನಿಕ ಯಂತ್ರಗಳಿಂದ ಕಾಯಿಲೆಗಳನ್ನು ವಾಸಿಮಾಡುತ್ತೇವೆ ಎಂಬ ಭ್ರಮೆಯಿಂದ ಹೊರಬಂದು ರೋಗಿಯನ್ನು ಮಾನವೀಯ ಅಂತಃಕರಣದಿಂದ ಮಾತನಾಡಿಸಿ
ಅವನ ಸುತ್ತಮುತ್ತಲಿನ ಸಮಸ್ಯೆಗಳೆಲ್ಲವನ್ನೂ ಅರಿತು ಸಲಹೆ ನೀಡುವ ಮನೋವೃತ್ತಿ ವೈದ್ಯರಿಗೆ ಅತ್ಯವಶ್ಯಕ. ಕ್ಯಾನ್ಸರ್ ಮತ್ತಿತರ ಯಾವುದೇ ಕಾಯಿಲೆಯಾಗಲಿ ನಿರ್ದಿಷ್ಟ ವೈದ್ಯಕೀಯ ಕಾರಣಕ್ಕಿಂತ ಅದರಿಂದಾಚೆಗಿನ ಅಂಶಗಳೂ ಸಹ ಕಾಯಿಲೆ ಮೇಲೆ ಪರಿಣಾಮಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಂಡು ಸಮಗ್ರ ಸಲಹೆ ನೀಡಬೇಕು. ಒಬ್ಬರಲ್ಲಿ ಒಂದೊಂದು ಅಂಶ
ಅನಾರೋಗ್ಯಕ್ಕೆ ಕಾರಣವಾಗುತ್ತದೆ. ದೀರ್ಘವಾಗಿ ರೋಗಿಯೊಡನೆ ಮಾತನಾಡಿದರೆ ಮಾತ್ರ ಇವುಗಳನ್ನು ಅರಿಯಲು ಸಾಧ್ಯ.

ರೋಗದಿಂದಾಚೆಗೆ ರೋಗಿಯ ಭಾವನಾತ್ಮಕ, ಸಾಮಾಜಿಕ, ಆರ್ಥಿಕ ವಿಚಾರಗಳ ಬಗ್ಗೆ ಗಮನಕೊಡುತ್ತಿದ್ದ ನನ್ನ ಮನೋವೃತ್ತಿ ನನ್ನನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕಡೆಗೆ ಆಕರ್ಷಿಸಿತು. ನನ್ನ 40 ವರ್ಷಗಳ ವೃತ್ತಿ ಬದುಕಿನಲ್ಲಿ ವೈದ್ಯಕೀಯ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಅವಿನಾಭಾವವಾಗಿ ಬೆರೆತುಕೊಂಡು ಬಂದಿವೆ. ಈ ಮನೋವೃತ್ತಿ ನನ್ನನ್ನು ರಾಜಕೀಯಕ್ಕೂ ಕೆಲಕಾಲ ಎಳೆದಿತ್ತು. ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಗಳಿಗಾಗುತ್ತಿದ್ದ ತೊಂದರೆಗಳು ಮತ್ತು ಲಭಿಸದ ಗುಣಮಟ್ಟದ ಚಿಕಿತ್ಸೆಗಳು ನಾನೇ ಒಂದು ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕೆಂಬ ಕನಸು ಅಂದೇ ಮೊಳಕೆ ಯೊಡೆಯಲು ಕಾರಣವಾಗಿ ಇಂದು ಅದು ಮೈಸೂರಿನಲ್ಲಿ 400 ಹಾಸಿಗೆಯ ಸೂಪರ್ ಮಲ್ಟಿ ಸ್ಪೆಷಾಲಿಟಿ “ಸುಯೋಗ್ ಆಸ್ಪತ್ರೆ”ಯನ್ನು ನಿರ್ಮಾಣ ಮಾಡುವ ಮುಖಾಂತರ ಸಾಕಾರಗೊಂಡಿದೆ.

ವೈದ್ಯನ ಬದುಕು 24/7 ಸೇವೆಯಿಂದ ಕೂಡಿದ್ದು, ಅವನು ಸಾಂಸಾರಿಕ ಸುಖದಿಂದ ವಂಚಿತನಾಗುವ ಪ್ರಸಂಗಗಳೇ ಹೆಚ್ಚು. ಹೆಂಡತಿ ಮತ್ತು ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಸಮಯ ಕೊಡಲಾಗದ ಸಂದರ್ಭಗಳೇ ಹೆಚ್ಚು. ಇಬ್ಬರೂ ವೈದ್ಯರಾದರಂತೂ ಭಗವಂತನೇ ಕಾಪಾಡಬೇಕು. ಆದರೂ ನನ್ನ ಬದುಕಿನಲ್ಲಿ ಇವಾವುವೂ ಸಮಸ್ಯೆಗಳಾಗದೆ ನನ್ನ ಮಕ್ಕಳಿಬ್ಬರೂ (ಡಾ.ಸೀಮಾ, ಡಾ.ಸುಯೋಗ್) ಒಳ್ಳೆಯ ವಿಶೇಷ ತಜ್ಞ ವೈದ್ಯರುಗಳಾಗಿದ್ದು, ನನ್ನ ಪತ್ನಿ ಶ್ರೀಮತಿ ಸುಧಾ ಯೋಗಣ್ಣ ಅವರ ತ್ಯಾಗದಿಂದ ಮಾತ್ರ ಎಂದು ಸ್ಮರಿಸುತ್ತೇನೆ. ಇಂದಿನ ವೈದ್ಯರುಗಳ ಬದುಕು ಹಲವಾರು ಸವಾಲುಗಳಿಂದ ಕೂಡಿದ್ದು, ವಾಣಿಜ್ಯಮಯವಾಗಿರುವ ವೈದ್ಯವೃತ್ತಿ, ಕಾನೂನಿನಡಿಯಲ್ಲಿ ವೈದ್ಯಸೇವೆಯನ್ನು ಪರಾಮರ್ಶಿಸುವಿಕೆ, ವೃತ್ತಿ ಸ್ಪರ್ಧೆ, ಆಧುನಿಕ ತಂತ್ರಜ್ಞಾನದ ಸಲಕರಣೆ ಗಳ ಬಳಕೆ, ಹೆಚ್ಚುತ್ತಿರುವ ರೋಗಗಳು, ಮಿತಿ ಮೀರಿದ ರೋಗಿಗಳ ಅಪೇಕ್ಷೆ, ವೈದ್ಯರ ಮೇಲಿನ ಹಲ್ಲೆಗಳು ಇವೆಲ್ಲವುಗಳನ್ನು ಸರಿದೂಗಿಸಿಕೊಂಡು ಸಮಚಿತ್ತದಿಂದ ವೈದ್ಯವೃತ್ತಿಯನ್ನು ನಿರ್ವಹಿಸುವುದೂ ಸಹ ವೈದ್ಯರಿಗೆ ಇಂದು ಕಷ್ಟವಾಗುತ್ತಿದೆ.

ಹೀಗಾಗಿ ವೈದ್ಯರ ಮಾನಸಿಕ ಒತ್ತಡವೂ ಹೆಚ್ಚಾಗಿ ಹೃದಯಾಘಾತಕ್ಕೀಡಾಗಿ ಸಾಯುವ ವೈದ್ಯರ ಸಂಖ್ಯೆಯೂ ದಿನೇ ದಿನೇ
ಹೆಚ್ಚಾಗುತ್ತಿದೆ. ಇವೆಲ್ಲವುಗಳ ಹಿನ್ನೆಲೆಯಲ್ಲಿ ವೈದ್ಯವೃತ್ತಿಯ ಮೌಲ್ಯಗಳ ಮಾನದಂಡಗಳನ್ನು ಸಮಾಜ ಪುನರ್ ಪರಿಶೀಲಿಸ ಬೇಕಾದ ಅವಶ್ಯಕತೆ ಇದೆ.