ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ರಾಜ್ಯದಲ್ಲಿ ಹಲವಾರು ಮಂದಿಗೆ ಕರೋನಾ ಸೋಂಕು ಪಾಸಿಟಿವ್ ಬಂದಿದ್ದರೂ ಅವರಿಗೆ ರೋಗ ಲಕ್ಷಣಗಳೇ ಇಲ್ಲದೆ ಇರುವುದರಿಂದ ಅಂತಹವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಯಲ್ಲಿ ಕ್ವಾರಂಟೈನ್ ಮಾಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ.
ರಾಜ್ಯದ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕರೋನಾ ಸೋಂಕಿತರಲ್ಲಿ ಶೇ.84ರಷ್ಟು ಮಂದಿಗೆ ರೋಗ ಲಕ್ಷಣಗಳೇ ಇಲ್ಲ ಎಂಬ ಮಾಹಿತಿ ಇದೆ. ಇವರೆಲ್ಲರೂ ಆರೋಗ್ಯವಾಗಿಯೇ ಇದ್ದಾರೆ. ವೈದ್ಯರ ಪ್ರಕಾರ ಇವರಗೆ ಆಸ್ಪತ್ರೆಯಲ್ಲಿಟ್ಟುಕೊಂಡು ಚಿಕಿತ್ಸೆ ಕೊಡುವ ತುರ್ತು ಅಗತ್ಯ ಇಲ್ಲ. ಈ ಹಿನ್ನೆಲೆಯಲ್ಲಿ ಸರಕಾರವು ರೋಗಲಕ್ಷಣಗಳಿಲ್ಲದ ಇಂಥ ವ್ಯಕ್ತಿಗಳನ್ನು ಆಸ್ಪತ್ರೆಯಿಂದ ಬೇಗನೇ ಬಿಡುಗಡೆ ಮಾಡುವ ಕುರಿತಂತೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.
ಕರೋನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾದ ರೋಗಿ 10 ದಿನವಾದರೂ ರೋಗ ಲಕ್ಷಣ ಕಾಣಿಸದಿದ್ದರೆ ಮಾತ್ರ ಈ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ರೋಗಿಗೆ ಮನೆಯಲ್ಲಿ ಕ್ವಾರಂಟೈನ್ ಆಗಲು ಸೂಕ್ತ ಸೌಲಭ್ಯ ಇಲ್ಲದಿದ್ದರೆ ಅಂಥವರಿಗೆ ಸರಕಾರವೇ ಬದಲಿ ವ್ಯವಸ್ಥೆ ಮಾಡಲು ಸಿದ್ದವಿದೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಇದರ ಸಾಧಕ ಬಾಧಕಗಳ ಕುರಿತಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಅವಲೋಕಿಸುತ್ತಿದ್ದಾರೆ.
14 ದಿನದ ಬದಲು 7 ದಿನ ಕ್ವಾರಂಟೈನ್
ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರುವವರಿಗೆ 14 ದಿನಗಳ ಬದಲು 7 ದಿನಗಳ ಕಾಲ ಮಾತ್ರ ಕ್ವಾರಂಟೈನ್ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಮಹಾರಾಷ್ಟ್ರ, ಗುಜರಾತ್,ತಮಿಳುನಾಡು, ದೆಹಲಿ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳನ್ನು ಹೈರಿಸ್ಕ್ ರಾಜ್ಯಗಳೆಂದು ಕೇಂದ್ರ ಸರಕಾರವೇ ಪಟ್ಟಿ ಮಾಡಿ ಬಿಡುಗಡೆ ಮಾಡಿದೆ. ಈ ಆರು ರಾಜ್ಯಗಳಿಂದ ಬಂದವರನ್ನು 7 ದಿನ ಸರಕಾರ ನಿಗದಿಪಡಿಸಿದ ಸ್ಥಳದಲ್ಲಿ ಕ್ವಾರಂಟೈನ್ ಮತ್ತು 7 ದಿನ ಹೋಮ್ ಕ್ವಾರಂಟೈನ್ನಲ್ಲಿಡಲು ನಿರ್ಧರಿಸಲಾಗಿದೆ.
ಉಳಿದ ರಾಜ್ಯಗಳಿಂದ ಬಂದವರನ್ನು ನೇರವಾಗಿ ತಮ್ಮ ಮನೆಗೆ ಹೋಗಿ ಅಲ್ಲಿಯೇ ಕಡ್ಡಾಯವಾಗಿ ಕ್ವಾರಂಟೈನ್ಗೆ ಒಳಪಡಬೇಕಾಗುತ್ತದೆ. ಹೋಟೆಲ್ಗಳಲ್ಲಿ ಕ್ವಾರಂಟೈನ್ನಲ್ಲಿ ಇರುವವರಿಗೆ 5ನೇ ದಿನ ಪರೀಕ್ಷೆ ಮಾಡಲಾಗುತ್ತದೆ. ಈ ವೇಳೆ ಪಾಸಿಟಿವ್ ಬಂದಲ್ಲಿ ಮಾತ್ರ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಇಲ್ಲವಾದಲ್ಲಿ ಮನೆಗೆ ಕಳುಹಿಸಿ ಅಲ್ಲಿ 7 ದಿನ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ಗೆ ಒಳಪಡಬೇಕಾಗುತ್ತದೆ.
ಹೊರ ರಾಜ್ಯಗಳಿಂದ ಬಂದ 60 ವರ್ಷ ಮೇಲ್ಪಟ್ಟ ವಯೋವೃದ್ದರು, 10 ವರ್ಷಕ್ಕಿಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ವಿನಾಯಿತಿ ನೀಡಲಾಗಿದೆ.
ಇವರು ಹೋಟೆಲ್ ಬದಲು ತಮ್ಮ ಮನೆಗೆ ನೇರವಾಗಿ ಹೋಗಿ ಕ್ವಾರಂಟೈನ್ಗೆ ಒಳಪಡಲು ಅವಕಾಶ ನೀಡಲಾಗಿದೆ. ಇನ್ನು ಏಳು ದಿನ ಹೋಟೆಲ್ ಕ್ವಾರಂಟೈನ್ನಲ್ಲಿದ್ದವರಿಗೆ 5ನೇ ದಿನದಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆಯ ರಿಸಲ್ಟ್ ಆಧರಿಸಿ ಅವರ ಬಿಡುಗಡೆ ಮಾಡಲಾಗುತ್ತದೆ. ಒಂದು ವೇಳೆ ಪಾಸಿಟಿವ್ ಬಂದರೆ ಅವರನ್ನು ನೇರವಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.