Monday, 25th November 2024

ಮುಂಗಾರಿಗೆ ರಸಗೊಬ್ಬರ ಕೊರತೆಯಾಗದು: ಸದಾನಂದಗೌಡ

ಬೆಂಗಳೂರು

ರಾಜ್ಯದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ರೈತ ಸಮೂಹಕ್ಕೆ ರಸಗೊಬ್ಬರದ ಕೊರತೆ ಆಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲೂ ರಸಗೊಬ್ಬರ ಕಾರ್ಖಾನೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ. ದೇಶದ ಯಾವುದೇ ಭಾಗದಲ್ಲೂ ರಸಗೊಬ್ಬರಕ್ಕೆ ಕೊರತೆಯಾಗುವುದಿಲ್ಲ ಎಂದಿದ್ದಾರೆ.

ನಗರದಲ್ಲಿಂದು ರಾಜ್ಯದ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸಗೊಬ್ಬರಕ್ಕೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದ್ದು, ರಾಜ್ಯಕ್ಕೆ ಅಗತ್ಯವಾಗಿರುವ ಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೋವಿಡ್-೧೯ ಸೋಂಕು ಪ್ರಕರಣಗಳನ್ನು ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ಅತ್ಯುತ್ತಮ ಕ್ರಮಗಳನ್ನು ಅಳವಡಿಸಿಕೊಂಡಿದೆ. ಆದರೆ ಬೇರೆ ರಾಜ್ಯಗಳಿಂದ ಬಂದವರಿಂದ ಸೋಂಕಿನ ಪ್ರಕರಣಗಳು ಹೆಚ್ಚಳಗೊಂಡಿವೆ. ಆದರೂ ಬೆಂಗಳೂರು ನಗರ ಎಲ್ಲಾ ಮಹಾನಗರಗಳಿಗೆ ಹೋಲಿಸಿದರೆ, ಸೋಂಕು ನಿಯಂತ್ರಣದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೋಂಕು ಪತ್ತೆಗೆ ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗಿದ್ದು, ಅಗತ್ಯವಿರುವ ಪಿಪಿಇ ಕಿಟ್‌ಗಳನ್ನು ಒದಗಿಸಲು ಕೇಂದ್ರ ಸರ್ಕಾರದ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಸದಾನಂದಗೌಡ ತಿಳಿಸಿದರು.