Sunday, 5th January 2025

ಸುಬ್ಬಣ್ಣನ ದನಿ ಮಾಧುರ್ಯದ ಗುಂಗಲ್ಲಿ…

ಸ್ಮರಣೆ

ಎಸ್‌.ಜಿ.ಹೆಗಡೆ

shiheggmail.com

ಕನ್ನಡ ನಾಡಿನ ಮೂಲೆ ಮೂಲೆಗೊ ಸುಬ್ಬಣ್ಣ ಹಾಡಿನ ಕಂಪು ಪಸರಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ‘ಬನ್ನಿ ಭಾವಗಳೆ ಬನ್ನಿ ನಮ್ಮೆಡೆಗೆ’ ಎಂದಂತೆ ಎಲ್ಲರ ಭಾವನೆಯನ್ನು ಸರಾಗವಾಗಿ ಸೆಳೆದಿದೆ. ಬದಲಾದ ಸಮಾಜದಲ್ಲಿಯೂ ಸುಬ್ಬಣ್ಣಹಾಡಿನ ಮಾಧುರ್ಯ, ಕಂಪು ಅಷ್ಟೇ ಪ್ರಭಾವಶಾಲಿಯಾಗಿದೆ.

‘ಗೆಳೆಯ ಬರತೀ ನಿ ಮನದಾಗಿಡೋ ನೆನಪಾ.. ಹಾ.. ಗೆಳೆಯ ಬರತೀ ನಿ’ ಶಿವಮೊಗ್ಗ ಸುಬ್ಬಣ್ಣ ಹಾಡಿರುವ ಹಾಡು ಮನಸ್ಸನು ಆವರಿಸಿದೆ.

ಅದೆಂಥ ತನ್ಮಯತೆ ! ಅದೆಷ್ಟು ಭಾವ ಪರವಶತೆ! ಎಂಬತ್ಮೂರು ವಸಂತಗಳನ್ನು ಕಂಡ ಸುಬ್ಬಣ್ಣಇಹ ಜಗತ್ತಿನಿಂದ ಇತ್ತೀಚೆದೂರವಾದರು. ಶಿವಮೊಗ್ಗ ಸುಬ್ಬಣ್ಣ ಅವರ ನಿಧನದಿಂದ ಸುಗಮ ಸಂಗೀತ ಕ್ಷೇತ್ರವು ಬಹು ದೊಡ್ಡ ಆಸ್ತಿಯನ್ನು ಕಳೆದುಕೊಂಡಿದೆ. ಕನ್ನಡ ಸಂಗೀತ ಸುಧೆಯನ್ನು ಸುಗಮ ಸಂಗೀತದ ಮೂಲಕ ಇನ್ನಷ್ಟು ವಿಸ್ತರಿಸಿದವರು, ಇನ್ನಷ್ಟು  ಧೀಮಂತ ವಾಗಿಸಿದವರು ಸುಬ್ಬಣ್ಣ. ಅರ್ಥ ಗರ್ಭಿತ ಕಾವ್ಯಗಳನ್ನು ಸುಂದರ ರೂಪಿನಲ್ಲಿ ಸುಗಮವಾಗಿ ಕನ್ನಡಿಗರ ಮನೆ ಮನೆ ತಲುಪಿಸಿದವರು ಶಿವಮೊಗ್ಗ ಸುಬ್ಬಣ್ಣ. ಅವರು ಬಿಟ್ಟು ಹೋದ ಹಾಡುಗಳು, ಹಾಡಿನ ಪರಂಪರೆಯು ಸಮಗ್ರ ಕನ್ನಡಿಗರ ಆಸ್ತಿಯಾಗಿವೆ. ಸಂಗೀತಾಸಕ್ತರ ನೆನಪಿನಲ್ಲಿ ಸದಾ ಉಳಿಯಲಿವೆ.

ಸುಬ್ಬಣ್ಣ ಸಂಗೀತವು ಪಸರಿಸಿರುವುದು ಶುದ್ಧಜೇನು ತುಪ್ಪದ ಸವಿ. ಹುಟ್ಟಿದ್ದು ಮಲೆ ನಾಡಿನ ಶಿವಮೊಗ್ಗೆಯಲ್ಲಿ. ಅವರು ಬೆಳೆದ ದಿನಗಳು ಮಲೆನಾಡಿನ ನಿಸರ್ಗದ ಸಿರಿವಂತಿಕೆ ತುಂಬಿ ತುಳುಕಿದ ಕಾಲದಲ್ಲಿ. ಅದು ನಲ್ವತ್ತರ ದಶಕ. ದಟ್ಟವಾದ ಬೆಟ್ಟ. ಏರು ಮತ್ತು ಇಳಿ ಪ್ರದೇ ಶದಲ್ಲಿ ಚಂದದಿಂದ ಬೆಳೆದ ತೋಟದ ಭೂವಿನ್ಯಾಸ. ಧೋ ಎಂದು ಒಂದೇ ಸಮನೆ ಮಳೆ ತೊಯ್ದನೆಲ. ಅಲ್ಲಲ್ಲಿ ಎದ್ದ ಒರತೆಯು ಝರಿ ಯಾಗಿ ಹರಿದು ಹೋಗಿ ಧುಮುಕುವ ಜಲಪಾತವ ದ್ರಶ್ಯ.

ನಿರ್ಭೀತಿಯಿಂದ ಮೋಜಿನಲ್ಲಿ ತೊಡಗಿದ್ದ ಕಾಡು ಪ್ರಾಣಿಗಳು. ಕೊ ಟ್ಟಿಗೆಯ ತುಂಬಾ ಹಸು, ಕುರಿಗಳ ಮಂದೆ. ದಟ್ಟವಾದ ಬೆಟ್ಟದಲ್ಲಿ ಹೆಮ್ಮರಗಳಿಗೆ ಕಟ್ಟಿ ತೂಗಾಡುವ ಹೆಜ್ಜೇನು. ರೆಕ್ಕೆ ಬಿಚ್ಚಿ ಕುಣಿಯುವ ನವಿಲು. ಸುತ್ತಮುತ್ತಅರಳಿರುವ ನೂರೆಂಟು ಬಗೆಯ ಹೂಗಳಿಂದ ಜೇನು ಹುಳುಗಳು ಸುಗಂಧ ದ್ರವ್ಯ ಹೀರಿ ತಂದು ಶೇಖರಿಸಿದ ಮಧು. ಅಂತಹ ಜೇನು ತುಪ್ಪದ ವಿಶೇಷ ಸವಿ. ಸುಗಂಧ ಲೇಪ.

ಶಿವಮೊಗ್ಗೆಯಲ್ಲಿ ಹರಿದಿದೆ ತುಂಗಾ ನದಿ. ಭಗವಾನ್ ಶಿವನು ಸಿಹಿಯಾದ ತುಂಗೆಯ ನೀರನ್ನು ಮೊಗ್ಗೆಯಿಂದ ಕುಡಿದಿರುವ ಕಥೆ ಯಿದೆ. ಅದಕ್ಕೇ ಅಲ್ಲಿನ ಪ್ರದೇಶಕ್ಕೆ ಶಿವಮೊಗ್ಗ ಎಂದು ಹೆಸರು ಬಂದಿರುವುದಾಗಿ ತಿಳಿದಿದೆ. ಸುಬ್ಬಣ್ಣ ಹಾಡುಗಳಲ್ಲಿ ಶಿವಮೊಗ್ಗ ಮೂಲದ ಜೇನು ತುಪ್ಪದ ಸವಿ, ಸುಗಂಧ ಕಂಪು ಜೊತೆ ತುಂಗಾ ನೀರಿನ ಶುದ್ಧತೆ ಮತ್ತು ಮಾಧುರ್ಯ ಸಮ್ಮಿಳಿತವಾದ ಸುಗಮ ಧಾರೆ ಹರಿದಿದೆ.

ಶಿವಮೊಗ್ಗ ಸುಬ್ಬಣ್ಣ ಹುಟ್ಟಿದ್ದು ಶಿವಮೊಗ್ಗದ ನಗರದಲ್ಲಿ. ನಿಜ ಹೆಸರು ಜಿ. ಸುಬ್ರಹ್ಮಣ್ಯ. ಮನೆತನದಲ್ಲಿ ಸಂಗೀತದ ವರವಿತ್ತು. ತಾತ ಶ್ಯಾಮರಾಯರು ಸಂಗೀತದದ ದೊಡ್ಡ ಜ್ಞಾನಿಯಾಗಿದ್ದರು. ಸಂಗೀತ ಪಾಠದ ಶುರು ತಾತನಿಂದಲೇ. ಬಾಲ್ಯದಲ್ಲಿ ಅಂದಿನ ಪ್ರಸಿದ್ಧ ಹಾಡುಗಾರರಾದ ರಫಿ, ಕಿಶೋರ್, ಮನ್ನಾಡೇ ಮುಂತಾದವರ ಪ್ರಭಾವಕ್ಕೊಳಗಾಗಿ ಅಂಥವರ ಹಾಡುಗಳನ್ನು ಹಾಡಿ ದ್ದರು. ಸಾಕಷ್ಟು ಬಹುಮಾನಗಳಿಗೆ ಪಾತ್ರರಾಗಿದ್ದರು. ಶಾಲೆಗೆ ಹೋಗುವ ದಿನಗಳಲ್ಲಿಯೇ ಹಾಡಿನ ಸುಬ್ಬಣ್ಣ ಎಂದು ಅಲ್ಲಿನ ಭಾಗದ ಜನರಿಂದ ಕರೆಸಿಕೊಂಡಿದ್ದರು.

ಸುಬ್ಬಣ್ಣ ಹಾಡಿನ ಪ್ರಖರತೆಯನ್ನರಿತ ಅಂದಿನ ಜನತೆಯು ಸುಬ್ಬಣ್ಣಧ್ವನಿ ಶಕ್ತಿಯು ಅಷ್ಟಕ್ಕೇ ಸಿಮೀತವಾಗಿ ಹೋಗಬಾರದೆಂದು ಬಯಸಿದ್ದರು. ಹಾಗೆ ಬಯಸಿದವರಲ್ಲಿ ಮಿತ್ರ ಲಕ್ಷ್ಮಿ ನಾರಾಯಣ ಭಟ್ಟರೂ ಇದ್ದರು. ಜನತೆಯ ಬಯಕೆಯಂತೆಯೇ ಆಯಿತು. ಸುಬ್ಬಣ್ಣ ಸಂಗೀತದ ಒರತೆ ಅಷ್ಟಕ್ಕೇ ನಿಲ್ಲದೇ ಬಹು ದೊಡ್ಡ ಝರಿಯಾಗಿ, ಹೊಳೆಯಾಗಿ ನಾಡಿನುದ್ದಕ್ಕೂ ಹರಿದು ಜನಮನ ದಲ್ಲಿ ಧುಮುಕಿತು.

ತಾತನಿಂದ ಸಂಗೀತದ ಅಡಿಪಾಯ ಹಾಕಿಕೊಂಡಿದ್ದ ಜಿ. ಸುಬ್ರಹ್ಮಣ್ಯ ನಂತರ ಪ್ರಭಾಕರನ್ ಅವರ ಬಳಿ ಶಾಸ್ತ್ರೀ ಕರ್ನಾಟಕ ಸಂಗೀ ತ ಅಭ್ಯಾಸ ಮಾಡಿದ್ದರು. ಪ್ರಸಿದ್ಧಗಾಯಕಿ ಬಿ. ಕೆ. ಸುಮಿತ್ರಾ ಕೂಡ ಅದೇ ಸಮಯದಲ್ಲಿ ಅಲ್ಲಿ ಸಂಗೀತದ ಅಧ್ಯಯನ ನಡೆಸಿದ್ದರು. ಪದವಿ ಪಡೆದ ನಂತರ ಬೆಂಗಳೂರು ಸೇರಿ ವಕೀಲಿ ವೃತ್ತಿ ಆರಂಭಿಸಿದ ಮೇಲೂ ಅವರಲ್ಲಿದ್ದ ಅಪ್ರತಿಮ ಸಂಗೀತ ಶಕ್ತಿಯು ಹಾಡಿನ ಹಾದಿಯಲ್ಲಿ ನಿರಂತರವಾಗಿ ಸಾಗುವಂತೆ ಪ್ರೇರೇಪಣೆ ನೀಡಿತು.

ಬಾಲ್ಯದಲ್ಲಿ ಹಾಡಿದ್ದ, ಉನ್ನತ ಕವಿ ಗೋಪಾಲಕೃಷ್ಣ ಅಡಿಗರ ‘ಯಾವ ಮೋಹನ ಮುರಳಿ ಕರೆಯಿತೋ’ ಹಾಡಿನಿಂದ ಬಹುಮಾನ ಮತ್ತು ಸ್ಫೂರ್ತಿ ಸಿಕ್ಕಿತ್ತು. ಶ್ರೇಷ್ಠ ಬರಹಗಾರರ ಹಾಡುಗಳನ್ನು ಸುಲಲಿತವಾಗಿ, ವೈವಿಧ್ಯಮಯವಾಗಿ ಸುಗಮವಾದ ರೂಪಿನಲ್ಲಿ ಹಾಡಲು ತೊಡಗಿಕೊಂಡಿದ್ದು ಕನ್ನಡ ಸಂಗೀತ ಲೋಕಕ್ಕೆ ವರ ಪ್ರದಾನವಾಯಿತು. ಮಹಾ ಸಿದ್ಧಿಯ  ಬರಹಗಾರ ರಾಗಿದ್ದ ರಾಷ್ಟ್ರಕವಿ ಕುವೆಂಪು, ವರಕವಿ ಬೇಂದ್ರೆ, ಅಡಿಗರಲ್ಲದೇ ಶ್ರೇಷ್ಠ ಕವಿಗಳಾದ ಎನ್. ಎಸ್. ಲಕ್ಷಮೀನಾರಾಣ ಭಟ್ಟ, ಜಿ.ಎಸ್.ಶಿವರುದ್ರಪ್ಪ, ನಿಸಾರ್ ಅಹ್ಮದ್ ಮುಂತಾದವರ ಎತ್ತರದ ಕವಿತೆಗಳನ್ನು ಅಷ್ಟೇ ತನ್ಮಯತೆಯಿಂದ, ಸಿದ್ಧಿಯಿಂದ ಪ್ರಸ್ತುತ ಪಡಿಸಿದ ಖ್ಯಾತಿಗೊಳಗಾದರು.

ಶಿವಮೊಗ್ಗ ಸುಬ್ಬಣ್ಣರ ಧ್ವನಿಯಲ್ಲಿ ಮೂಡಿದ್ದ ಹಾಡುಗಳು ಮನೆಗಳಲ್ಲಿ ಮತ್ತು ಶಾಲೆಯಲ್ಲಿ ವಿಶೇಷ ಕಾರ್ಯ ಕ್ರಮವಿದ್ದಾಗ ಲೆಲ್ಲ ಜನಜನಿತವಾದವು. ಯಾರು ಬರೆದಿದ್ದು ಅಥವಾ ಹಾಡಿದ್ದು ಅನ್ನುವ ವಿಚಾರ ಅಂದು ಬಹುತೇಕ ಜನರಿಗೆ ತಿಳಿದಿರಲಿಲ್ಲ. ಆದರೆ ಹಾಡಿನ ಒಳ ಸತ್ವ ಮತ್ತು ಹಾಡಿದ ರೀತಿಯಲ್ಲಿನ ಸೆಳೆತದಿಂದ ಹಾಡುಗಳು ಸಾಮಾನ್ಯ ಜನಜೀವನದ ಭಾಗವಾಗಿ ಹೋಗಿದ್ದವು.

ಅದು ಟೆಲಿವಿಷನ್ ಮತ್ತು ಸೆಲ್ ಫೋನ್, ಅಂತರ್ಜಾಲದ ಕಾಲವಾಗಿರಲಿಲ್ಲ. ರೇಡಿಯೋ ಮೂಲಕವೇ ಮಾಹಿತಿ ಸಿಗಬೇಕಿತ್ತು. ಬೆಳಗ್ಗೆ ಸಮಯ ಏಳೂ ಹತ್ತರಿಂದ ಏಳು ಇಪ್ಪತ್ತರ ತನಕ ಪ್ರದೇಶ ಸಮಾಚಾರ ಮುಗಿದ ಮೇಲೆ ಏಳು ಮೂವತ್ತೈದಕ್ಕೆ ವಾರ್ತೆ ಬರುವ ನಡುವಿನ ಸಮಯದಲ್ಲಿ ಆಕಾಶವಾಣಿ ಸಂಗೀ ತ ಕಾರ್ಯಕ್ರಮ ಬಿತ್ತರಿಕೆಯಾಗಿದ್ದ ನೆನಪಿದೆ. ಮೊದಲು ಶಿವಮೊಗ್ಗ ಸುಬ್ಬಣ್ಣ ಹೆಸರು ಕೇಳಿದ್ದು ಅ. ಅವರ ಸುಗಮ ಸಂಗೀತವು ಆಗಾಗ ಪ್ರಸಾರವಾಗಿತ್ತು.

ರೇಡಿಯೋ ಕೂಡ ಹೆಚ್ಚು ಮನೆಗಳಲ್ಲಿ ಇರಲಿಲ್ಲ. ಆದಾಗ್ಯೂ ಹಾಡಿನ ಸೆಳೆತ ಇಷ್ಟು ಪ್ರಭಾವಿಯಾಗಿತ್ತೆಂದರೆ ಬಾಯಿಂದ
ಬಾಯಿಗೆ ಹೋಗಿ ಇಡೀ ಸಮಾಜವನ್ನು ಆವರಿಸಿತ್ತು. ಸುಬ್ಬಣ್ಣ ಹಾಡುವುದನ್ನು ಎದುರಲ್ಲಿ ಕುಳಿತು ಮೊದಲನೆಯ ಸಾರಿ ನಾನು ಕೇಳಿದ್ದು ಸ್ನಾತಕೋತ್ತರ ಪದವಿ ಓದಲು ಧಾರವಾಡದಲ್ಲಿದ್ದಾಗ. ವಿದ್ಯಾ ವರ್ಧಕ ಸಂಘದ ಕಾರ್ಯಕ್ರಮದಲ್ಲಿ ಎಂದು ನೆನಪು. ಅಲ್ಲಿ ಕೇಳಿದ ನಂತರ ಅವರ ಹಾಡು ಸದಾ ಜೊ ತೆಯಲ್ಲಿವೆ. ಅಂದಿನ ಶ್ರೇಷ್ಠಕವಿಗಳಾದ ಕುವೆಂಪು, ಬೇಂದ್ರೆ ಅಡಿಗ ಮುಂತಾ ದವರ ಹಾಡುಗಳನ್ನು ಆಯ್ದುಕೊಂಡು ಅವುಗಳ ಸಾರವನ್ನು ಅದೇ ನವಿರಿಂದ, ಅದೇ ಭಾವದಿಂದ, ಅರ್ಥ ಹಿಡಿದು ಸತ್ವಪೂರ್ವ ಕವಾಗಿ ಹಾಡಿನ ಮೂಲಕ ಪ್ರಸ್ತುತಪಡಿಸುವುದು ಸಾಮಾನ್ಯದ ಸಂಗತಿ ಯಾಗಿರಲಿಲ್ಲ.

ಅಂತಹ ಕ್ಲಿಷ್ಟ ಸವಾಲುಗಳನ್ನು ಸರಳವಾಗಿ ಸುಗಮವಾಗಿ, ಸಮರ್ಪಕವಾಗಿ ನಿರೂಪಿಸಿ ಹಾಡಿನ ಮೂಲಕ ಜನತೆಯನ್ನು ತಲುಪಿದ ಖ್ಯಾತಿ ಸುಬ್ಬಣ್ಣಪಾಲಿಗೆ ಸಿಗುತ್ತದೆ. ಶಿವಮೊಗ್ಗ ಸುಬ್ಬಣ್ಣ ಅವರ ಸಾಧನೆ ಮತ್ತು ಪುರಸ್ಕಾರಗಳ ಕುರಿತು ವಿಸ್ತರಿಸುವ ಅವಶ್ಯಕತೆಯಿಲ್ಲ. ಅದು ಎಲ್ಲರಿಗೆ ತಿಳಿದ ವಿಷಯ. ಆದರೆ ಅವುಗಳ ಕುರಿತು ಆದಷ್ಟು ಸಂಕ್ಷಿಪ್ತವಾಗಿ ಇಲ್ಲಿ ಹೇಳದಿದ್ದರೆ ಸರಿಯಲ್ಲ.

ಸುಬ್ಬಣ್ಣ ಹಾಡಿದ್ದ ಎಲ್ಲ ಹಾಡುಗಳೂ ತನ್ನದೇ ರೀತಿಯಲ್ಲಿ ವಿಶೇಷವಾಗಿವೆ. ಅವುಗಳಲ್ಲಿ ಯಾವ ಹಾಡುಗಳು ಉತ್ತಮ ವಾದುವೆಂದು ಹೆಸರಿಸುವುದು ಸಾಧ್ಯವಿಲ್ಲ. eನಪೀಠ ಪ್ರಶಸ್ತಿ ವಿಜೇತ ಕಂಬಾರ ರಚಿತ ‘ಕಾಡು ಕುದುರೆ ಓಡಿ ಬಂದಿತ್ತಾ…’ ಎಂಬ ಸುಬ್ಬಣ್ಣಹಾಡು ಕನ್ನಡಕ್ಕೆ ಹಿನ್ನೆಲೆ ಗಾಯನಕ್ಕೆ ತಂದುಕೊಟ್ಟ ಪ್ರಥಮ ರಾಷ್ಟ್ರ ಪ್ರಶಸ್ತಿ. ಪ್ರಶಸ್ತಿ ಪ್ರದಾನ ಮಾಡಿದ ಅಂದಿನ ರಾಷ್ಟ್ರಪತಿ ನೀಲಮ್ ಸಂಜೀವರೆಡ್ಡಿ ಕೂಡ ಹಾಡನ್ನು ತುಂಬಾ ಮೆಚ್ಚಿದ್ದರಂತೆ.

ಕುದುರೆಯ ಲಯವನ್ನು ಹಾಡಿನಲ್ಲಿ ಹಿಡಿದಿದ್ದ ರೀತಿ ಅನುಪಮ. ಅಂದಿನ ಸಮಾರಂಭಕ್ಕೆ ಬಂದಿದ್ದ ಖ್ಯಾತ ಪತ್ರಕರ್ತ, ಚಿತ್ರಕಥೆಗಾರ ಅಬ್ಬಾಸ್ ಹಾಡನ್ನು ಕೇಳಿಯೇ ಅದು ಕುದುರೆಯ ಓಟದ ಕುರಿತಾಗಿದೆಯೇ ಎಂದು ಕೇಳಿದ್ದರಂತೆ ! ‘ಆನಂದ ಮಯ…’, ‘ಕೋಡಗನ ಕೋಳಿ ನುಂಗಿತ್ತಾ’,‘ಬಿದ್ದೀಯಬ್ಬೇ’, ‘ನಿನ್ನೆಡೆಗೆ ಬರುವಾಗ’, ‘ಚಿಂತೆ ಯಾತಕೆ ಗೆಳತಿ’, ‘ದೂರಕೆ ದೂರಕೆ’ ,‘ಬಾರಿಸು ಕನ್ನಡ ಡಿಂಡಿಮವ’, ‘ತೇ ನವಿನಾ’, ‘ಯಾರಿಗೂ ಹೇಳೋಣು ಬ್ಯಾಡ’, ‘ಏನಾದರೂ ಆಗು…’ ಹೀಗೆ ಅವರು ಹಾಡಿರುವ, ನಮ್ಮನ್ನು ತಟ್ಟಿರುವ ಹಾಡುಗಳನ್ನು ಹೆಸರಿಸುತ್ತಲೇ ಹೋಗಬಹುದು.

ಶಿಶುನಾಳ ಷರೀಫರ ರಚನೆಗಳನ್ನು ಹಾಡಿನ ಮೂಲಕ ಜನರ ಹತ್ತಿರ ತಂದವರು ಸುಬ್ಬಣ್ಣ. ಅಷ್ಟೆಲ್ಲ ಪ್ರಶಸ್ತಿ, ಪುರಸ್ಕಾರಗಳು, ಸ್ಥಾನಮಾನಗಳಿಗೆ ಭಾದ್ಯರಾದ ಸುಬ್ಬಣ್ಣ ಸರಳ ಬದುಕು, ನೇರ ನಡೆ ನುಡಿಗಳಿಗೆ ಹೆಸರಾದವರು. ಎಳ್ಳಷ್ಟೂ ಹಮ್ಮು
ಬಿಮ್ಮುಗಳನ್ನು ತೋರಿಸುತ್ತಿರಲಿಲ್ಲ ಎಂದು ಅವರನ್ನು ಹತ್ತಿರದಿಂದ ತಿಳಿದವರು ಹೇಳುವ ಮಾತು. ದೊಡ್ಡವರು, ಸಣ್ಣವರು ಎಂದು ನೋಡದೆ ಎಲ್ಲರಲ್ಲಿಯೂ ಆತ್ಮೀಯತೆಯಿಂದ ನಡೆದುಕೊಳ್ಳುತ್ತಿದ್ದರು. ಯಾರೇ ಕೇಳಿದರೂ, ಯಾವುದೇ ಸಂದರ್ಭ ದಲ್ಲಿಯೂ ಬಿಗುಮಾನ ತೋರದೆ ಹೃದಯ ತುಂಬಿ ಹಾಡಿದ್ದರು. ಏನಾದರೂ ಸರಿಯೇ ಮೊದಲು ಮಾನವನಾಗು.. ಎನ್ನುವ ನುಡಿಯನ್ನು ರಾಗದ ಮೂಲಕವೂ ತಿಳಿಸಿದರು ಸುಬ್ಬಣ್ಣ.

ಸುಬ್ಬಣ್ಣ ಸಂಗೀತವು ಕರ್ನಾಟಕದ ಎಲ್ಲ ಪ್ರದೇಶದ ವಿವಿಧ ರೀತಿಯ ಭಾವನೆಗಳಿಗೆ ಹದವಾಗಿ ಸ್ಪಂದಿಸಿದೆ ಎಂಬುದು ಮಹತ್ವದ ಅಂಶ. ಮಲೆನಾಡು, ಕರಾವಳಿ, ಮೈಸೂರು ಮತ್ತು ಉತ್ತರ ಕರ್ನಾಟಕದ ಭಾಗಗಳ ಪ್ರಸಿದ್ಧ ಕವಿಗಳ ಹಾಡುಗಳನ್ನು ಆಯಾ ಪ್ರದೇಶದ ಭಾವಕ್ಕೆ ಮತ್ತು ಎಲ್ಲ ಕನ್ನಡಿಗರಿಗೆ ಬೆಸೆದು ಬೆರಗಾಗುವ ರೀತಿಯಲ್ಲಿ ರಾಗ ಮತ್ತು ಭಾವ ನಿರೂಪಣೆ ಮಾಡಿದ್ದಾರೆ.

ಸುಬ್ಬಣ್ಣ ಬದುಕು ಸಂಗೀತಕ್ಕೆ ಮುಡುಪಾಗಿತ್ತು. ಸುಗಮ ಸಂಗೀತವೇ ಆರಾಧನೆಯಾಗಿತ್ತು. ಸುಬ್ಬಣ್ಣ ನೀಡಿರುವ ಸುಗಮ ಸಂಗೀತವು ಅಮರಗೀತೆಗಳ ಸಾಲಿನಲ್ಲಿ ನಿಂತಿವೆ.