Sunday, 15th December 2024

ವೈಚಾರಿತೆ ಬೆಳೆಸಿಕೊಳ್ಳುವುದು ಇಂದಿನ ತುರ್ತು ಅಗತ್ಯ

ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳಿಂದ ಮೇಲಾಟ ಹೆಚ್ಚಾಗಿದೆ. ಎಲ್ಲರೂ ಗೌರವಿಸಬೇಕಾದ
ಸಾವರ್ಕರ್, ಟಿಪ್ಪು ಸುಲ್ತಾನ್, ನೆಹರೂ ಅವರ ಹೋರಾಟ, ಆಡಳಿತವನ್ನು ಹೊಗಳುವ, ತೆಗಳುವ ಕಾರ್ಯದಲ್ಲಿ ರಾಜಕಾರಣಿ ಗಳು ಬ್ಯೂಸಿಯಾಗಿದ್ದಾರೆ.

ಆ ಮೂಲಕ ನಿಜವಾಗಿಯೂ ಚರ್ಚೆಯಾಗಬೇಕಾದ ಅಭಿವೃದ್ಧಿ, ಜನರಿಗೆ ಒದಗಿಸಬೇಕಾದ ಮೂಲ ಸೌಕರ್ಯ, ಜೀವನಮಟ್ಟ ಸುಧಾರಣೆ, ಭ್ರಷ್ಟಾಚಾರ ನಿರ್ಮೂಲನೆ ಕುರಿತ ವಿಷಯ ಗಳನ್ನು ಮರೆಮಾಚುತ್ತಿದ್ದಾರೆ. ವೀರ ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಕಾಲಾಪಾನಿಯಂತಹ ಕಠಿಣ ಶಿಕ್ಷೆಗೆ ಒಳಗಾಗಿ ಚಿತ್ರಹಿಂಸೆಯನ್ನು ಅನುಭವಿಸುತ್ತಿರುವಾಗ, ಯಾರೂ ಅವರ ಸಹಾಯಕ್ಕೆ ಬಾರದೆ ಬ್ರಿಟಿಷರ ಹೀನಕೃತ್ಯದ ಕೂಟಕ್ಕೆ ಶರಣಾಗಿರಬಹುದು.

ಅಂದಮಾತ್ರಕ್ಕೆ ಅವರನ್ನು ಸದಾ ಹೀಯಾಳಿಸುವುದು ಸರಿಯೇ? ಟಿಪ್ಪು ಸುಲ್ತಾನ್ ಕೂಡ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ್ದಾರೆ, ಆಡಳಿತದಲ್ಲಿ ಕೆಲವೊಂದು ತಪ್ಪು ಗಳು ನಡೆದಿರಬಹುದು, ಅಂದಮಾತ್ರಕ್ಕೆ ಸದಾ ಹೀಯಾಳಿಸುವುದು ಎಷ್ಟು ಸರಿ? ಜವಾಹರ ಲಾಲ್ ನೆಹರೂ ಕೂಡ ವೈeನಿಕ ವಿಚಾರಗಳುಳ್ಳ, ದೂರದೃಷ್ಟಿಯ ನಾಯಕರಾಗಿದ್ದರು. ನಮ್ಮ ದೇಶ ಎಲ್ಲಾ ರೀತಿಯಿಂದ ಬಡ ರಾಷ್ಟ್ರವಾಗಿದ್ದ ಸಂದರ್ಭದಲ್ಲಿ ಅಭಿವೃದ್ಧಿಪಥದತ್ತ ಮುನ್ನಡೆಸಿದ್ದಾರೆ. ಈಗ ನಾವು ಬರೀ ರಾಜಕೀಯ ದೃಷ್ಟಿಯಿಂದ ಇವರೆಲ್ಲರ ತ್ಯಾಗ, ಹೋರಾಟವನ್ನು ಮರೆತು ಮಾತನಾಡುವುದು ಸರಿಯಲ್ಲ. ಇದರಿಂದ ಕೆಲವು ರಾಜಕೀಯ ನಾಯಕರಿಗೆ ಅಷ್ಟೋ ಇಷ್ಟು ಲಾಭವಾಗಬಹುದೇ ಹೊರತು, ಜನರಿಗೆ ಈ ವಾದ ವಿವಾದ ಗಳಿಂದ ಯಾವುದೇ ಲಾಭವಿಲ್ಲ.

ಈ ನಿಟ್ಟಿನಲ್ಲಿ ಪ್ರಜೆಗಳು ಜಾಗೃತರಾಗಬೇಕು. ಇನ್ನು, ಆಹಾರದ ವಿಚಾರವಾಗಿಯೂ ರಾಜ್ಯದಲ್ಲಿ ಪರ-ವಿರೋಧದ ನಿಲುವುಗಳು ವ್ಯಕ್ತವಾಗುತ್ತಿವೆ. ಭಾರತದಲ್ಲಿ ಮತ-ಧರ್ಮ, ಊಟದ ಪದ್ಧತಿ, ಆಚಾರ ವಿಚಾರಗಳು ಎಲ್ಲವೂ ಭಿನ್ನವಾಗಿವೆ. ಇವು ನಿಂತಿರುವುದು
ಅವರವರ ನಂಬಿಕೆಗಳ ಮೇಲಷ್ಟೇ. ಅದು ಸರಿ, ಇದು ತಪ್ಪು ಎಂದು ಪ್ರತಿಪಾದಿಸುವ ಯಾವುದೇ ಸಾಕ್ಷ್ಯಗಳು ಇಲ್ಲ. ವೈಜ್ಞಾನಿಕ ಕಾರಣವೂ ಸಿಗುವುದಿಲ್ಲ.

ಹೀಗಿರುವಾಗ ಇಂತಹ ಧಾರ್ಮಿಕ, ಭಾವನಾತ್ಮಕ ವಿಷಯಗಳ ಕಾಲವ್ಯಯ ಮಾಡದೆ ವೈಚಾರಿಕ ಚಿಂತನೆಗಳನ್ನು ಬೆಳೆಸಿಕೊಳ್ಳು ವತ್ತ ಗಮನಹರಿಸುವುದು ಇಂದಿನ ತುರ್ತು ಅಗತ್ಯವಿದೆ.