ಪಿಎಸ್‌ಐ ನೇಮಕಾತಿ ಅಕ್ರಮ ರಾಜ್ಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಆ ಪ್ರಕರಣದ ಕುರಿತು ತನಿಖೆ ನಡೆಯುತ್ತಿರುವಾಗಲೇ
ಪದವಿ ಕಾಲೇಜಿನ ಪ್ರಾಧ್ಯಾಪಕರ ನೇಮಕದಲ್ಲೂ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.
ಇದೀಗ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿವೆ. ಈ ಸಂಬಂಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲವರು ಬಂಧನಕ್ಕೆ ಒಳಗಾಗಿರುವ ಸುದ್ದಿಯೂ ಹೊರಬಿದ್ದಿದೆ. ಸರಕಾರಿ ಹುದ್ದೆಗಳಿಗೆ ನಡೆಯುವ ನೇಮಕಾತಿ ಪರೀಕ್ಷೆಗಳಲ್ಲಿ ಆಗಿರುವ ಅಕ್ರಮಗಳು ಒಂದರ ಹಿಂದೆ ಒಂದು ಬಯಲಾಗು ತ್ತಿರುವುದು ಯುವಕರನ್ನು ಆತಂಕಕ್ಕೀಡು ಮಾಡಿದೆ.
ತಂತ್ರಜ್ಞಾನದಲ್ಲಿ ನಾವು ಇಷ್ಟೆಲ್ಲಾ ಮುಂದುವರಿದಿದ್ದರೂ ಒಂದು ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಸಾಧ್ಯವಾಗದೇ ಇರುವುದು ನಾಚಿಕೆಗೇಡು. ಪ್ರತಿ ನೇಮಕಾತಿ ಯಲ್ಲೂ ಭ್ರಷ್ಟಾಚಾರದ ದುರ್ವಾಸನೆ ಹೊಡೆಯುತ್ತಿರುವುದು ಆಡಳಿತ ಯಂತ್ರದ ವೈಫಲ್ಯ. ಗುಮಾಸ್ತನ ಹುದ್ದೆಗೂ ಲಕ್ಷ ಲಕ್ಷ ಹಣ ಕೊಟ್ಟು ಬಂದವನು ಬಳಿಕ ಲಂಚಕ್ಕಾಗಿ ಜನರನ್ನು ಕಾಡದೇ ಇರುವುದಿಲ್ಲ. ಸರಕಾರಿ ಹುದ್ದೆಗಳನ್ನು ಪಡೆಯಬೇಕು ಎಂಬ ಆಸೆಯಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗಲು ತಮ್ಮ ಹಳ್ಳಿಗಳನ್ನು ಬಿಟ್ಟು ನಗರ ಪ್ರದೇಶಗಳಿಗೆ ಬಂದು ವರ್ಷಾನುಗಟ್ಟಲೇ ನೆಲೆಸಿ, ಕೋಚಿಂಗ್ ಪಡೆಯುತ್ತಿರುವ ಯುವಕರು ಯಾವ ಭರವಸೆಯ ಮೇಲೆ ತಮ್ಮ ಅಧ್ಯಯನ ಮುಂದುವರಿಸಬೇಕು? ಮೊದಲೆಲ್ಲ ಕೆಪಿಎಸ್‌ಸಿ ಎಂದರೆ ಭ್ರಷ್ಟಾಚಾರದ ಕೂಪ ಎನ್ನಲಾಗುತ್ತಿತ್ತು.
ಇದೀಗ ಕೆಇಎ ನಡೆಸುವ ಪ್ರತಿ ಪರೀಕ್ಷೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಾಗಾದರೆ ಪಾರದರ್ಶಕ ಪರೀಕ್ಷೆಗಳನ್ನು ನಡೆಸಲು ರಾಜ್ಯದಲ್ಲಿ ಇನ್ಯಾವ ಸಂಸ್ಥೆಗಳನ್ನು ನೆಚ್ಚಬೇಕು? ದುಡ್ಡಿನ ಆಸೆಗೆ ಸರಕಾರ ಹುದ್ದೆಗಳನ್ನು ಮಾರಿಕೊಳ್ಳುವವರ ವಿರುದ್ಧ ಈವರೆಗೂ ಕಠಿಣ ಕ್ರಮ ಕೈಗೊಳ್ಳದೇ ಇರುವುದೇ ಇಂತಹ ಪ್ರಕರಣಗಳು ಪದೇ ಪದೆ ಘಟಿಸಲು ಕಾರಣವಾಗುತ್ತಿದೆ. ಪ್ರಕರಣಗಳು ಬಯಲಿಗೆ ಬಂದಾಗಲೆಲ್ಲ ಆ ಕ್ಷಣಕ್ಕೆ ಬಂಧನ, ತನಿಖೆ, ವಿಚಾರಣೆ ನಡೆಯುತ್ತದೆ.
ನಂತರ ಎಲ್ಲವೂ ಸಾರ್ವಜನಿಕರ ನೆನಪಿನಿಂದ ಮರೆಯಾಗುತ್ತವೆ. ಇದು ಹೀಗೆಯೇ ಮುಂದುವರಿದರೆ ಸರಕಾರ ಮತ್ತು ಸರಕಾರಿ ಅಧಿಕಾರಿಗಳೆಂದರೆ ಜನರ ದೃಷ್ಟಿಯಲ್ಲಿ ಕಳನಾಯಕನಂತೆ ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನಾದರೂ ಇದಕ್ಕೆಲ್ಲ ಕಡಿವಾಣ ಹಾಕಲು ಇಚ್ಛಾಶಕ್ತಿ ತೋರುವುದೇ?