Monday, 25th November 2024

ಲಾಕ್‌ ಡೌನ್ ಪರಿಹಾರ ಶೀಘ್ರವೇ ರೈತರ ಖಾತೆಗೆ ಜಮೆ: ಸಚಿವ ಡಾ.ನಾರಾಯಣ ಗೌಡ

ಬೆಂಗಳೂರು,

ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಲಾಕ್‌ ಡೌನ್‌ ಪರಿಹಾರ ಹಣ ಜಮಾ ಆಗಲಿದೆ. ಹೂವು, ಹಣ್ಣು, ತರಕಾರಿ ಬೆಳೆಗಾರರ ಮಾಹಿತಿಯನ್ನು ಕಲೆಹಾಕಲಾಗಿದೆ. ಸಂಪೂರ್ಣ ವಿವರ ಸಿದ್ಧಪಡಿಸಿ ರೈತರಿಗೆ ಪರಿಹಾರ ವಿತರಿಸಲಾಗುವುದು ಎಂದು ತೋಟಗಾರಿಕೆ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.

ವಿಕಾಸ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ -19 ಹಿನ್ನೆಲೆಯಲ್ಲಿ ಲಾಕ್ ಡೌನ್‌ ಆದಾಗ ಸಾಕಷ್ಟು ಬೆಳೆ ನಷ್ಟ ಆಗಿತ್ತು. ಹೂವಿನ ಬೆಳೆಗಾರರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಆಗಿದೆ. ಹೂವಿಗೆ ಯಾವುದೇ ರೀತಿಯಲ್ಲಿ ಮಾರುಕಟ್ಟೆ ಒದಗಿಸುವ ಅವಕಾಶ ಇರಲಿಲ್ಲ. ಹೀಗಾಗಿ ಹೂವು ಬೆಳೆಗಾರರಿಗೆ ಮೊದಲು ಸರ್ಕಾರ ಪರಿಹಾರ ಘೋಷಣೆ ಮಾಡಿತ್ತು. ಒಟ್ಟು 12735 ಹೆಕ್ಟೇರ್ ಪ್ರದೇಶದಲ್ಲಿ ಹೂ ಬೆಳೆಯಲಾಗಿದೆ. ಪರಿಹಾರವಾಗಿ ಪ್ರತಿ ಹೆಕ್ಟೇರ್ ಗೆ ತಲಾ 25 ಸಾವಿರ ರೂ. ನೀಡಲು 31.83 ಕೋಟಿ ರೂಪಾಯಿ ಸರ್ಕಾರ ಘೋಷಿಸಿದೆ ಎಂದು ಸಚಿವರು ತಿಳಿಸಿದರು.

ಅಲ್ಲದೆ ಹಣ್ಣು, ತರಕಾರಿ ಬೆಳೆದ ರೈತರಿಗೂ ನಷ್ಟ ಆಗಿದೆ. ಹೊರ ರಾಜ್ಯ ಹಾಗೂ ಹೊರ ದೇಶಕ್ಕೆ ರಫ್ತು ಸ್ಥಗಿತವಾಗಿತ್ತು. ಸಂಸ್ಕರಣಾ ಘಟಕ, ವೈನ್, ಡಿಸ್ಟಿಲರಿಸ್ ಘಟಕ ಎಲ್ಲವೂ ಬಂದ್ ಆಗಿತ್ತು. ಉತ್ತಮ ಮಳೆ ಕೂಡ ಆಗಿದ್ದರಿಂದ ಫಸಲು ಚೆನ್ನಾಗಿಯೆ ಬಂದಿತ್ತು. ಹೀಗಾಗಿ ಉತ್ಪಾದನೆ ಹೆಚ್ಚಾಗಿ ಮಾರಾಟ ತೀರಾ ಕಡಿಮೆ ಆಯಿತು. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಚರ್ಚಿಸಿದ್ದೆ. ತಮ್ಮ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ ಎಂದರು.

ರೈತರಿಗೆ ಪರಿಹಾರ ನೀಡಲು ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿ, ತಕ್ಷಣವೆ ಘೋಷಣೆ ಕೂಡ ಮಾಡಿದ್ದಾರೆ. 50083 ಹೆಕ್ಟೇರ್ ನಲ್ಲಿ ತರಕಾರಿ, 41054 ಹೆಕ್ಟೇರ್ ನಲ್ಲಿ ಹಣ್ಣು ಬೆಳೆಯಲಾಗಿದೆ. ಪ್ರತಿ ಹೆಕ್ಟೇರ್ ಗೆ 15 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಸರ್ಕಾರ 137 ಕೋಟಿ ರೂ. ಘೋಷಿಸಿದೆ. ಈಗಾಗಲೆ ಬೆಳೆ ಸಮೀಕ್ಷೆ ವರದಿ ಇಲಾಖೆಯಲ್ಲಿ ಲಭ್ಯವಿದೆ. ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಬೆಳೆ ನಷ್ಟ ಆಗಿರುವ ಯಾವುದೇ ರೈತನ ಹೆಸರು ಪಟ್ಟಿಯಿಂದ ಕೈ ತಪ್ಪಿದ್ದಲ್ಲಿ, ಪಟ್ಟಿಗೆ ಸೇರಿಸಲು ಅವಕಾಶ ಇದೆ. ಸಂಪೂರ್ಣ ಮಾಹಿತಿ ಕಲೆ ಹಾಕಿ, ಅತಿ ಶೀಘ್ರದಲ್ಲಿ ಹಣವನ್ನು ನೇರವಾಗಿ ರೈತರ ಖಾತೆಗೆ ಹಾಕುತ್ತೇವೆ. ಇನ್ನೂ ಪರಿಹಾರದ ಹಣ ಬಂದಿಲ್ಲ ಎಂದು ರೈತರು ಆತಂಕಗೊಳ್ಳುವುದು ಬೇಡ. ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಹಣ ಬರಲಿದೆ ಎಂದು ತೋಟಗಾರಿಕೆ ಸಚಿವರು ಭರವಸೆ ನೀಡಿದರು.

ಇದಕ್ಕೂ ಮುನ್ನ ಸಚಿವರು ಮಿಡತೆ ಹಾವಳಿ ಸಂಬಂಧ, ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಜೊತೆಗೂಡಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ರಾಜಸ್ಥಾನದ ಗಡಿಯಲ್ಲಿ ಹುಟ್ಟಿ ದೇಶಾದ್ಯಂತ ಪಸರಿಸುತ್ತಿರುವ ಮಿಡತೆಯಿಂದ ರಾಜ್ಯದ ರೈತರಿಗೆ ಹಾನಿಯಿಲ್ಲ. ಗಾಳಿಯ ದಿಕ್ಕು ನಮ್ಮ ರಾಜ್ಯದ ಕಡೆ ಇಲ್ಲ, ಹೀಗಾಗಿ ಕರ್ನಾಟಕದೊಳಗೆ ಈ ಮಿಡತೆ ಗುಂಪು ಬರುವ ಸಾಧ್ಯತೆ ಕಡಿಮೆ ಇದೆ. ಕೋಲಾರದಲ್ಲಿ ಎಕ್ಕೆ ಗಿಡದ ಮೇಲೆ ಕಂಡುಬಂದಿರುವ ಮಿಡಿತೆ ಬೇರೆ ಪ್ರಭೇದದ್ದು. ರಾಜಸ್ಥಾನದಲ್ಲಿ ಹುಟ್ಟಿರುವ ಮಿಡತೆಗು ಇದಕ್ಕು ಸಂಬಂಧವಿಲ್ಲ. ಆದಾಗ್ಯೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಅಧಿಕಾರಿಗಳ ಜೊತೆ ಸಚಿವದ್ವಯರು ಚರ್ಚೆ ನಡೆಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಬೀದರ್, ಗುಲ್ಬರ್ಗ, ಯಾದಗಿರಿ, ಕೊಪ್ಪಳ ಜಿಲ್ಲೆಗೆ ಅಧಿಕಾರಿಗಳ ತಂಡ ಕಳುಹಿಸಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸಚಿವರು ಸೂಚನೆ ನೀಡಿದ್ದಾರೆ.