Monday, 25th November 2024

ದೇವ ಸಮುಚ್ಚಯದಲ್ಲೀಗ ಮಾನ್ಸೂನ್‌ ಹಬ್ಬ

ಅಲೆಮಾರಿಯ ಡೈರಿ

mehandale100@gmail.com

ಈತುತ್ತಾನು ತುದಿಯ ಕಣಿವೆ ಮೇಲ್ಗಡೆ ಈ ರೇಂಜಿನಲ್ಲಿ ಕಲ್ಲಿನ ಕಣಿವೆ ಇದೆ ಎಂದು ಅದ್ಯಾವ ಶಿಲ್ಪಿ (ಆಗ ಸ್ಥಪತಿ ಎನ್ನುತ್ತಿದ್ದರು)
ಹುಡುಕಿದನೋ, ಅನಾಮತ್ತು ಶತಮಾನಗಳ ಕಾಲ ಅತೀವ ಚಳಿ, ಹಿಮ ಮತ್ತು ಮಳೆಯ ಮಧ್ಯೆಯೂ ಎಡಬಿಡದೆ ಕುಟುಕುಟು ಎಂದು ಕಲ್ಲು ಬಡಿಯುತ್ತಾ ಕೂತರಲ್ಲ 14ನೆಯ ಶತಮಾನದ ಹೊತ್ತಿಗೆ ಅಗಾಧವಾದ ದೇವಸ್ಥಾನಗಳ ಸಂಕೀರ್ಣವೇ ಎದ್ದು ನಿಂತಿತ್ತು.

ಈಗಾದರೆ ಅದನ್ನು ‘ಟೆಂಪಲ್ ಕಾಂಪ್ಲೆಕ್ಸ್’ ಎನ್ನುತ್ತಿದ್ದರೇನೋ. ಆದರೆ ಒಂದು ಕೈಯ ಳತೆಗೆ ದಕ್ಕುವ ಸಣ್ಣ ನಿರ್ಮಾಣಕ್ಕಾಗಿ ಹಗಲೆಲ್ಲ ತಲೆ ಕೆಡಿಸಿಕೊಂಡು ಆಚೀಚೆ ಅಳೆದು ಆಮೇಲೂ ಅತ್ತ ಒಂದಡಿ ಹೆಚ್ಚಾದರೆ ಇತ್ತ ಎರಡಡಿ ಇನ್ನೇನೋ ಆದ ಅಚಾ ತುರ್ಯದ ಆಧುನಿಕ ವಿನ್ಯಾಸದ ಎದುರಿಗೆ ಒಮ್ಮೆ  ಈ ದೇವಸ್ಥಾನ ಸಮೂಹ ಮರೆಯದೇ ನೋಡಬೇಕಿದೆ. ಕಾರಣ ಅಳತೆ, ವಿನ್ಯಾಸ, ಏರಿಳಿತ, ಶೈಲಿ ಮತ್ತು ಆಯಾ ಕಾಲಮಾನ ಬಿಡಿ ಯಾವಾಗಲೂ ತೀರಾ ಪ್ರಸ್ತುತ ಎನ್ನುವ ರೀತಿಯಲ್ಲಿ ನಿರ್ಮಾಣ ವಾಗಿರುವ ಈ ಶಿಲ್ಪ ಕಲಾಕೃತಿಯಂತಹ ಸಾಲು ಸಾಲು ನಿರ್ಮಾಣದ ಸಂದರ್ಶನಕ್ಕೆ ಒಂದಿಡೀ ದಿನವಾದರೂ ಬೇಕು. ಅದರಲ್ಲೂ ಶಿಲ್ಪಿಗಳಾದರೆ ಅಲ್ಲೇ ಇದ್ದುಬಿಡುವುದರಲ್ಲಿ ಸಂಶಯವಿಲ್ಲ. ಕಾರಣ ಬರೀ ಒಂದೆರಡಲ್ಲ ಅನಾಮತ್ತು 120ಕ್ಕೂ ಹೆಚ್ಚು ಇಂಥ ಸಣ್ಣ ಪುಟ್ಟ ದೇವಸ್ಥಾನ ಗಳಿರುವ ಈ ಸಂಕೀರ್ಣದಲ್ಲಿ ಎಲ್ಲವೂ ಭಿನ್ನ, ಅದ್ಭುತ ಮತ್ತು ಐತಿಹಾಸಿಕ ಶಿಲ್ಪಕಲೆ ವಿನ್ಯಾಸಕ್ಕೆ ಜೀವಂತ ಉದಾಹರಣೆ.

ಜಾಗೇಶ್ವರ: ಭಾರತದ ಕಣಿವೆಗಳ ನಾಡಾದ ಉತ್ತರಾಖಂಡ ಮತ್ತು ಅಲ್ಮೋರಾದ ಮಧ್ಯೆ ಹುದುಗಿರುವ ದೇವಾಲಯಗಳ ವಿಭಿನ್ನ ವಿನ್ಯಾಸ ನೆಲದಿಂದ ಕೆಳಮಟ್ಟದ ಎತ್ತರದಲ್ಲಿರುವುದೇ ಸೋಜಿಗ. ನಾಗರಶೈಲಿಯ ಈ ನಿರ್ಮಾಣದಲ್ಲಿ ಏನಿಲ್ಲವೆಂದರೂ 125 ದೊಡ್ಡ ದೇವಸ್ಥಾನಗಳಿದ್ದರೆ, ಒಟ್ಟೂ ಸಣ್ಣಪುಟ್ಟ ನಿರ್ಮಾಣಗಳನ್ನೂ ದೇವಸ್ಥಾನದ ಸಂಕೀರ್ಣದಲ್ಲಿ ಎಣಿಸಿದರೆ 200ರ ಗಡಿ ದಾಟುತ್ತದೆ. ಭಾರತೀಯ ಪುರಾತನ ಐತಿಹ್ಯದಲ್ಲಿ ಬರುವ ಎಲ್ಲ ದೇವ-ದೇವತೆ ಯಕ್ಷ-ಯಕ್ಷಿಣಿ ಸೇರಿದಂತೆ ಪ್ರತಿಯೊಬ್ಬರಿಗೂ ಇಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಆಯಾ ಭಾವ-ಭಕ್ತಿಗೆ ತಕ್ಕಂತೆ ಅವರವರ ಪ್ರಭಾವಶಾಲಿ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುವಂತೆ ದೇವಸ್ಥಾನಗಳ ನಿರ್ಮಾಣ ಮತ್ತು ಪ್ರಾಮುಖ್ಯದ ಪರಿಕಲ್ಪನೆ ಗಮನ ಸೆಳೆಯುತ್ತದೆ. ಇದೀಗ ಇಲ್ಲಿ ಮಾನ್ಸೂನ್ ಮೇಳ ಅಥವಾ ಹಬ್ಬ ಆರಂಭವಾಗಿದ್ದು, ಆಗಸ್ಟ್‌ ನಿಂದ ಸೆಪ್ಟಂಬರ್ ಮಧ್ಯಭಾಗದವರೆಗೂ ನಡೆಯುತ್ತದೆ. ಪ್ರಮುಖವಾಗಿ ಇಲ್ಲಿ ಆದಿಕೈಲಾಸ, ಕೈಲಾಸ ಮಾನಸ ಸರೋವರ ಮತ್ತು ಓಂ ಪರ್ವತ ಯಾತ್ರಾ ಟ್ರೆಕ್ಕಿಂಗ್ ಮಾಡುವವರಿಗೆ ಒಂದು ಲೆಕ್ಕದಲ್ಲಿ ಕೊನೆಯ ವಾಹನ ಸಂಪರ್ಕದ ಪ್ರಮುಖ ಬೇಸ್ ಆಗಿಯೂ ಗಣಿಸುವುದರಿಂದ ಚಾರಣ ಅಥವಾ ಯಾತ್ರೆಗೆ ಹೊರಡುವವರು ಈ ಜಾಗೇಶ್ವರದಲ್ಲೊಂದು ಬ್ರೇಕ್ ತೆಗೆದುಕೊಳ್ಳುವುದು ಸಹಜ.

ಮಾತ್ರವಲ್ಲ ಆನಂದಾಶ್ರಮಕ್ಕೆ ಭೇಟಿನೀಡುವ ಯಾತ್ರಾರ್ಥಿಗಳಿಗೂ ಇದು ಬಹುಮುಖ್ಯಕೇಂದ್ರಸ್ಥಾನವಾಗಿದ್ದು, ಕುಮಾಂವ್ ಮಂಡಲ್ ಮತ್ತು ಮಾನಸ ಸರೋವರ್ ಯಾತ್ರಾ ಆಯೋಜಕರು ಇದನ್ನು ಕೊನೆಯ ದಿನದ ಮತ್ತು ಯಾತ್ರೆಯ ಆರಂಭದ
ಹಿಂದಿನ ದಿನದ ಬೇಸ್‌ಕ್ಯಾಂಪ್ ಆಗಿ ಬಳಸಿಕೊಳ್ಳುತ್ತಾರೆ. ಪಕ್ಕದಲ್ಲೆ ಅಲ್ಲಲ್ಲಿ ವ್ಯವಸ್ಥಿತ ಗೆಸ್ಟ್‌ಹೌಸ್‌ಗಳನ್ನು ನಿರ್ಮಿಸಲಾಗಿದ್ದು,
ಹೆಚ್ಚಿನ ಉತ್ತರಾಖಂಡ ಗೆಸ್ಟ್‌ಹೌಸುಗಳೂ ಇಲ್ಲಿ ಪ್ರಯಾಣಿಕರಿಗೆ ತಂಗುದಾಣ ನಿರ್ಮಿಸಿವೆ.

ಶೈವಧಾರ್ಮಿಕ ಚಿತ್ರಣ ಕೊಡುವ ಈ ದೇವಾಲಯ ಸಮೂಹದ ದೇಖರೇಖಿ ಅರ್ಕಿಯಾಲಜಿ ವಿಭಾಗದ್ದು; ಮೊದಲೆಲ್ಲ ನಾನು ಹೋದಾಗ ನೇರವಾಗಿ ದೇವಸ್ಥಾನದ ಒಳಗೂ ಪ್ರವೇಶವಿತ್ತು. ಈ ನಿರ್ಮಾಣಗಳನ್ನು ಮೈದಡವಿ ನೋಡಬಹುದಿತ್ತು, ಅಕ್ಕಪಕ್ಕ ಸೆಲಿ ಪೋಸಿಗೆ ಈಡುಮಾಡಿಕೊಳ್ಳಬಹುದಿತ್ತು (ಆದರೆ ಆಗ ಸೆಲಿ ಜಮಾನ ಆರಂಭವಾಗಿರಲೇ ಇಲ್ಲ).

ಆದರೀಗ ಸಮುಚ್ಚಯದ ಎಲ್ಲ ಪುರಾತನ ನಿರ್ಮಾಣಗಳನ್ನು ಕೆಲವು ಅಡಿಗಳ ದೂರಕ್ಕೆ ನಿಂತೇ ವೀಕ್ಷಿಸುವಂತೆ ಬದಲಾಯಿಸ ಲಾಗಿದ್ದು, ಒಳಾಂಗಣ ವಿನ್ಯಾಸಗಳು ಅಲಭ್ಯವಾಗುತ್ತಿವೆ ಎನ್ನುವ ದೂರು ಕೇಳಿಸುತ್ತಿದೆ. ದಂಡೇಶ್ವರ, ಚಂಡಿಕಾ ದೇವಾಲಯ, ಜಾಗೇಶ್ವರ, ಕುಬೇರ, ಮೃತ್ಯುಂಜಯ, ನಂದಾದೇವಿ, ನವಗ್ರಹ (ಬಹುಶಃ ಇಲ್ಲಿ ಮಾತ್ರ ನವಗ್ರಹಗಳ ಹೆಸರಲ್ಲಿರುವ ಎಲ್ಲ ದೇವರ ಮೂರ್ತಿಯನ್ನು ನಿರ್ಮಿಸಿದ ಉದಾಹರಣೆ ಲಭ್ಯ), ಪಿರಮಿಡ್ ಶೈಲಿಯ ದೇವಾಲಯ, ಸೂರ್ಯ ದೇವರಿಗೊಂದು ಆಶ್ರಯ ಹೀಗೆ ಭಾರತದ ಎಲ್ಲ ದೇವಾನುದೇವತೆಗಳಿಗೂ ಇಲ್ಲಿ ನೀರು-ನೆರಳು ಕಲ್ಪಿಸಲಾಗಿದೆ.

ಇಲ್ಲಿ ವಾಹನ ಸೌಕರ್ಯವಿದ್ದರೂ ತೀರಾ ಕಡಿದಾದ ಪರ್ವತದ ಸೆರಗಿನಲ್ಲಿಯೇ ಚಲಿಸುವ ಈ ರಸ್ತೆಗಳಲ್ಲಿ ಗಂಟೆಗೆ ಇಪ್ಪತ್ತೂ ದಾಟದ ಅನಿವಾರ್ಯತೆಯಿದೆ. 6000 ಅಡಿಗೂ ಮಿಗಿಲು ಎತ್ತರದ ಈ ಪ್ರದೇಶದಲ್ಲಿ ಚಳಿ ಮತ್ತು ಕೂಲ್‌ಕೂಲ್ ವಾತಾವರಣ ನಿರಂತರ. ಪ್ರಸಿದ್ಧ ಗಿರಿಧಾಮ ಆಲ್ಮೋರಾದಿಂದ ಕೇವಲ 36 ಕಿ.ಮೀ. ದೂರ ಇರುವ ಜಾಗೇಶ್ವರ ಊರ ಹೊರಗಿನ ಆಳ ಕಣಿವೆ ಯಲ್ಲಿ ಹುದುಗಿರುವ, ದೇವದಾರು ಅರಣ್ಯದಿಂದ ಅವರಿಸಿರುವ ಪ್ರದೇಶ. ಅದಕ್ಕೂ ಕೆಳಗಿಳಿದರೆ ಜಟಾಗಂಗಾ, ಕಾಲಿಗೆ ಚುರ್ರೆನ್ನಿಸುವಷ್ಟು ತಣ್ಣಗೆ ಹರಿಯುತ್ತಿದ್ದರೆ, ಅಕ್ಕಪಕ್ಕದಿಂದ ನುಗ್ಗುವ ನಂದಿನಿ ಮತ್ತು ಇನ್ನೊಂದೆಡೆಯಿಂದ ಅಪ್ಪಟ ತರುಣಿಯ ಸೊಂಟ ನೆನಪಿಸುವಷ್ಟು ಲಾವಣ್ಯವತಿ ನದಿ ಸುರಭಿ ಧುಮ್ಮಿಕುತ್ತದೆ.

ಅಲ್ಮೋರಾದಿಂದ ನೇರವಾಗಿ ಅಥವಾ ಪಿಥೋರಗಢ ರಸ್ತೆಯ ಮೂಲಕವೂ ತಲುಪಬಹುದಾದ ಜಾಗೇಶ್ವರ, ಅತೋರ್ಲಾ ಗ್ರಾಮದಲ್ಲಿ ಲಭ್ಯವಾಗುವ ಚಹ ಮತ್ತು ಸ್ಥಳೀಯ ಸೊಪ್ಪು ಬೆರೆಸಿದ ರೊಟ್ಟಿ ನೆನಪಿನಿಂದ ಚಪ್ಪರಿಸಬೇಕಾದದ್ದು. ಅತೋರ್ಲಾ, ಅಲೆಮಾರಿಯಾಗಿ ಹೊರಡುವವರಿಗೆ ಮಾತ್ರ ದಕ್ಕುವ ಹಳ್ಳಿ. ಅಲ್ಲಿ ಕೊಡುವ ಬಿಸಿಬಿಸಿಯಾದ ಅಂಗೈಯಗಲದ ಚಿಕ್ಕ ರೊಟ್ಟಿಗಳು ಮತ್ತು ದಾಲ್ಚಿನ್ನಿ ಚಹ ಇರಿಸಿಕೊಂಡು ಕೂತರೆ ಅದರ ಮಜಾ ಅಹ್….!

ಫಿತೋರ್‌ಗಡ್ ರಸ್ತೆಗೆ ಈ ಮಸಾಲೆ ರೊಟ್ಟಿ ಮಾರಲಿಕ್ಕೆ ಬರುವವರಿಂದ ಕೇಳಿಕೊಂಡು ಅಲ್ಲಿಗೆ ಹೋಗಿ ಸವಿದಿದ್ದೇ ಅದರೆ ಆಲ್ಮೋರಾ ಹೋದರೂ ಮರೆಯದೇ ಅತೋರ್ಲಾ ಹೋಗಿಬರುತ್ತೀರಿ, ಇದು ನನ್ನ ಮಾತು. ಸುತ್ತಮುತ್ತಲೆಲ್ಲ ದೇವದಾರ್ ಕಾಡಿನಲ್ಲಿ ಇರುವ ಅತೋರ್ಲಾ ಜನರಿಗೆ ಜಾಗೇಶ್ವರ ಮತ್ತು ದಂಡೇಶ್ವರದಲ್ಲಿ ರೊಟ್ಟಿ ಮಾಡಿಕೊಡುವುದು ಮತ್ತು ಮಣ್ಣಿನ ಕುಪ್ಪೆಯಲ್ಲಿ ಚಹ ಪೂರೈಸುವುದೇ ಉಪಕಸುಬು ಕೂಡಾ.

ಅದೆಷ್ಟೇ ಕಾಫಿಪ್ರಿಯರಾದರೂ ನೀವು ಚಹದ ವಿನಾ ದೇವ್ರಾಣೆ ಕಾಫಿಯನ್ನು ಬಯಸಲಾರಿರಿ. ಅಲ್ಮೋರಾ, ಇತ್ತ ಹಲ್ದಾನಿ, ಅತ್ತ ಪಿಥೋರಗಡಗಳಿಂದ ನೇರಸಂಪರ್ಕ ಹೊಂದಿದ್ದು, ಸ್ಥಳೀಯ ಜೀಪು ಕಾರುಗಳ ಸೌಲಭ್ಯವಿದೆ. ಕಾರ್ಬನ್ ಡೇಟಿಂಗ್‌ನಲ್ಲಿ ಈ ನಿರ್ಮಾಣಗಳ ಕಾಲಾವಧಿಯು 7ನೆಯ ಶತಮಾನಗಳಿಗೂ ಹಿಂದಕ್ಕೆ ಸರಿದ ಮೇಲೆ ಜಾಗೇಶ್ವರದ ಐತಿಹ್ಯವೇ ಬದಲಾಯಿತು. ಚಂದ್ರವಂಶಸ್ಥರು ಮತ್ತು ಗುಪ್ತರ ಕಾಲಾವಧಿಯ ಕಲಾವಿಶಿಷ್ಠತೆಗೆ ಇವು ಸೇರಿರಬೇಕು ಎನ್ನುವ ಊಹೆಗೆ, ಆದಿಶಂಕರ ಪ್ರತಿಷ್ಠಾಪಿತ ಪೀಠ ಇದು ಎಂಬುದೂ ಅಲ್ಲಲ್ಲಿ ಕೇಳಿ ಬರುವ ಕೂಗು.

ಕಾರಣ ಬರಹದ ರೂಪದಲ್ಲಿ ಯಾವುದೇ ದಾಖಲೆ ಇಲ್ಲದ ಜಾಗೇಶ್ವರ ಸಮುಚ್ಚಯವು 18ನೆಯ ಶತಮಾನದ ಆರಂಭದಲ್ಲಿ ನಿರೀಕ್ಷಿತವಾಗಿ ಕಣಿವೆಯ ಆಳದಲ್ಲಿ ಹುದುಗಿ ಹೋಗಿದ್ದು ಪತ್ತೆಯಾಗುತ್ತಿದ್ದಂತೆ, ಅಲ್ಮೋರಾ ಪ್ರವೇಶಿಸಿದ್ದ ಬ್ರಿಟಿಷ್ ಅಧಿಕಾರಿ ಇದನ್ನು ಹೊರತೆಗೆದು ಧೂಳು ಕೊಡವಿದ ಎನ್ನಲಾಗುತ್ತದೆ. ಆಮೇಲೆ ಅದರ ಶಿಲಾಲಿಪಿಗಳು ದಕ್ಕಿದ್ದು. ಸಹಜ ಎತ್ತರದ ಮೇಲಿರುವ ಬದಲಿಗೆ ಆಳದ ಕಣಿವೆಯ ಮಣ್ಣೊಳಗೆ ಇದ್ದ ದೇವಸ್ಥಾನಗಳನ್ನು ಶಿಲಾ ಪದರುಗಳ ಲಭ್ಯತೆಯ ಅನುಸಾರ ಆಳದಲ್ಲಿರುವಂತೆಯೇ ಅಲ್ಲಲ್ಲೆ ನಿರ್ಮಿಸಿರುವ ಅಂದಾಜು ಮಾಡಲಾಗುತ್ತದೆಯಾದರೂ ನಿಖರ ಅಳತೆ ಮತ್ತು ಅಂತರ ಹಾಗೂ ಏರಿಳಿವ ಎತ್ತರದಲ್ಲಿ ಕಡೆದಿರುವ ನೈಪುಣ್ಯತೆಗೆ ಒಂದು ಕಾಲದಲ್ಲಿ ಇವೆಲ್ಲ ಭೂಮಿಯ ಮೇಲ್ಮೈ ಮೇಲೆ ಇದ್ದಿರಬೇಕು.

ಕಾಲಾಂತರದಲ್ಲಿ ಅಲ್ಲಲ್ಲಿ ಹೂಳಿ ಹೋಗಿರಬಹುದಾದ ಸಾಧ್ಯತೆಯಲ್ಲಿ ಜಾಗೇಶ್ವರ ಸಮುಚ್ಚಯ ಹುದುಗಿರಬಹುದೇನೋ; ಆದರೆ ಮತ್ತೆ ಮರಳಿ ಬೆಳಕಿಗೆ ತರಲು ಉತ್ಖನನ ನಡೆಯುತ್ತಿದ್ದರೆ ಅನಾಮತ್ತು 200ರ ಹತ್ತಿರ ಈ ದೇವಸಮುಚ್ಚಯ ಕೈಗೆಟುಕಿದ್ದು, ಈಗ ಉತ್ತರಾಖಂಡದ ಆ ತುದಿಗೆ ನೀವು ಹೋದರೆ ಒಂದಿನ ಇದಕ್ಕಾಗಿ ಇರಿಸಿಕೊಂಡು ಇಣುಕಿ ಬರಬೇಕಾದ ಸ್ಥಳವಿದು.

ಬಹುಶಃ ಮೊಘಲ್ ದಾಳಿಗೆ ತುತ್ತಾಗದೆ ಉಳಿದ ಕೆಲವೇ ಸ್ಮಾರಕಗಳ ಪೈಕಿ ಇದೂ ಒಂದು. ಕಾರಣ ಇದು ಮುಖ್ಯ ಜನಸಾಮಾನ್ಯರ ಬದುಕಿನ ಆವಾಸದಿಂದ ತುಂಬ ದೂರಕ್ಕಿದ್ದುದು ಒಂದೆಡೆಯಾದರೆ, ಆಳಕಣಿವೆ ಹಾಗೂ ಮುಚ್ಚಿ ಹೋದ ಸ್ಥಿತಿಯಲ್ಲೇ ನೆಲದಲ್ಲಿ ಸೇ-ಗಿ ಉಳಿದುಬಿಟ್ಟಿದ್ದೂ ಇನ್ನೊಂದು ಕಾರಣವಿರಬೇಕು. ಇಲ್ಲದಿದ್ದರೆ 6-7ನೆಯ ಶತಮಾನದ ನಂತರದ ಅದರಲ್ಲೂ 10ನೆಯ ಶತಮಾನದ ನಂತರದಲ್ಲಿ ಇಣುಕಿದ ಮೊಘಲ್ ಪ್ರವೇಶಕ್ಕೆ ಹೆಚ್ಚಿನಂಶ ಎಲ್ಲ ಇಮಾರತುಗಳು ಬಲಿಯಾಗಿವೆಯಲ್ಲ.

ಇಲ್ಲಿ ಅಂತಹ ಅನಾಹುತಕಾರಿ ಅರೆಭಂಗಿಯ ತುಂಡುಗಳು ಆಗಿಲ್ಲ. ಕಲ್ಲಿನ ಪದರುಗಳನ್ನು ಶಿಲಾಬಂಧ ತಂತ್ರಜ್ಞಾನದಲ್ಲಿ ಬಿಗಿಯಲಾಗಿದ್ದು ಒಂದೇ ಕಲ್ಲನ್ನೂ ಇಲ್ಲಿಂದ ಜರುಗಿಸಲು ಸಾಧ್ಯವಿಲ್ಲ. ಇಂಥ ನಿರ್ಮಾಣದಲ್ಲಿ ಲಾಕಿಂಗ್ ವ್ಯವಸ್ಥೆಯ ಒಂದು ಕೊಂಡಿ ಎಲ್ಲೋ ಅಡಗಿಸಿದ್ದು ಅದು ಆಯಾ ಸ್ಥಪತಿಗೆ ಮಾತ್ರ ಗೊತ್ತಿರುತ್ತದೆ. ಉಳಿದಂತೆ ನೋಡುಗರಿಗೆ ಒಂದೇ ಒಂದು  ಜಾಯಿಂಟ್ ಎಲ್ಲಿಂದ ಬಿಗಿಯಲಾಗಿದೆ ಎಂದು ಲೆಕ್ಕಕ್ಕೆ ಸಿಗುವುದೇ ಇಲ್ಲ.

ಹಲವು ಶಿಲಾರಚನೆಯ ಹಲಿಗೆಗಳು ಕಂಭವೂ ಇದ್ದರೂ ಎಲ್ಲಿ ಹೇಗೆ ಅವನ್ನೆಲ್ಲ ಜೋಡಿಸಲಾಗಿದೆ ಎನ್ನುವ ಪುರಾತನ ಶೈಲಿಯ
ಬಗೆಗಿನ ಆಸಕ್ತಿ ಇಲ್ಲೂ ಮುಂದುವರಿಯುತ್ತದೆ. ಡಿ.ಸಿ. ಸರ್ಕಾರ್ ಇವುಗಳನ್ನು ಅಧ್ಯಯನ ಮಾಡಿ ‘ಎಫಿಗ್ರಾಫಿಯಾ ಇಂಡಿಕಾ’ದಲ್ಲಿ ನಮೂದಿಸಿರುವ ಪ್ರಕಾರ ೭ನೆಯ ಶತಮಾನದ ಪ್ರಾಕ್ತನ ಮತ್ತು ಸಂಸ್ಕೃತ ಬರಹಗಳು ಅಲ್ಲಲ್ಲಿ ಗೋಡೆಯ ರಹಸ್ಯ ಎನ್ನಬಹು ದಾದ ಅಂಚಿನಲ್ಲಿ ಲಭ್ಯವಿದ್ದೂ ಈಗಲೂ ಹುಡುಕಾಟ ಜಾರಿಯಲ್ಲಿದೆ.

ತೀವ್ರ ಪರಿಶ್ರಮದ ಮೂಲಕ ಈ 20 ಸಾಲುಗಳನ್ನು ಕಂಡುಹಿಡಿಯಲಾಗಿದ್ದು ಇನ್ನೂ ಅಧ್ಯಯನ ಜಾರಿಯಲ್ಲಿದೆ. ಪ್ರಸಕ್ತ ಬರೀ ಗಿರಿಧಾಮ ಮಾತ್ರ ಪ್ರವೇಶಿಸದೆ ಹತ್ತಿರದಲ್ಲೇ ಇರುವ ಇಂಥವದನ್ನೊಮ್ಮೆ ತಡವಿ ಬನ್ನಿ ಎನ್ನುವುದು ನನ್ನ ಆಗ್ರಹ.