ವಿನೂತನ ಶೀರ್ಷಿಕೆಯ ಧ್ರುವ 369 ಚಿತ್ರದ ಮುಹೂರ್ತ ಸಮಾರಂಭ ಪಂಚ ಮುಖಿ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಹಿರಿಯ ನಟ ರಮೇಶ್ ಭಟ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಟಕ್ಕರ್ ಖ್ಯಾತಿಯ ಮನೋಜ್‌ಕುಮಾರ್ ಕ್ಯಾಮೆರಾ ಆನ್ ಮಾಡಿ ಶುಭಕೋರಿದರು. ಅಚಿಂತ್ಯ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಎಸ್.ಎಸ್.ಶಂಕರ್‌ನಾಗ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಿಜ್ಞಾನ ಮತ್ತು ಪುರಾಣ ಮಿಶ್ರಣಗೊಂಡ ಅಂಶಗಳು ಚಿತ್ರದಲ್ಲಿರಲಿವೆ.
ಧ್ರುವ ನಕ್ಷತ್ರ ಭೂಮಿಯಿಂದ ತುಂಬಾ ಪ್ರಕಾಶಮಾನವಾಗಿ ಕಾಣುತ್ತದೆ. ಅಂತೆಯೇ ಸಾಧಕರು ನಮ್ಮ ನಡುವೆ ಪ್ರಕಾಶಿಸುತ್ತಾರೆ. ಸಾಧನೆ ಮಾಡಬೇಕು ಎಂದು ಧೃಡ ಮನಸಿನಿಂದ ನಿಶ್ವಯಿಸಿದರೆ ಖಂಡಿತಾ ಸಾಧಿಸಬಹುದು ಎಂಬುದನ್ನು ಚಿತ್ರದಲ್ಲಿ ಹೇಳ ಲಾಗಿದೆ. ಜತೆಗೆ ಒಂದಷ್ಟು ಫ್ಯಾಂಟಸಿ ಅಂಶಗಳನ್ನು ಬೆರೆಸಿ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಪುರಾತನ ಕಾಲದ ಕಥೆಗಳೆ ನಿರ್ದೇಶಕ ರಿಗೆ ಕಥೆ ಬರೆಯಲು ಪ್ರೇರಣೆಯಾಗಿದ್ದು, ಸನ್ನಿವೇಶಕ್ಕೆ ಅನುಗುಣವಾಗಿ ಸಂಸ್ಕೃತ ಶ್ಲೋಕಗಳನ್ನು ಸೇರಿಸಿದ್ದಾರೆ.
ರಾಘವೇಂದ್ರ ರಾಜ್‌ಕುಮಾರ್ ಈ ಚಿತ್ರದಲ್ಲಿ ರಾಜ್ಯಪಾಲರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಹಿರಿಯ ನಟ ರಮೇಶ್
ಭಟ್, ಪ್ರತಿಭಾ, ಅತೀಶ್.ಎಸ್.ಶೆಟ್ಟಿ, ಪ್ರೇಮ್‌ರಾಜು, ಅರವಿಂದ್ ಸಾಗರ್, ರೋಹನ್ ಮೂಡಬಿದ್ರೆ, ದೀಪಕ್ ಶೆಟ್ಟಿ, ಕೆ.ಸುಬ್ಬಣ್ಣ ಭಟ್, ಚಂದನಾ, ರಮ್ಯಾ, ಚಂದ್ರಿಕಾ, ಭಾಸ್ಕರ್ ಮಣಿಪಾಲ್ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಮೂರು ಹಾಡುಗಳಿಗೆ ಸತೀಶ್‌ಬಾಬು ಸಂಗೀತ ಸಂಯೋಜಿಸುತ್ತಿದ್ದಾರೆ. ಹರ್ಷ ಪದ್ಯಾಣ ಛಾಯಾಗ್ರಹಣ ಈ ಚಿತ್ರಕ್ಕಿದೆ. ಬೆಂಗಳೂರು, ಮಂಗಳೂರು, ಉಡುಪಿ, ಮುರಡೇಶ್ವರ, ಕೋಲಾರ, ಚಿಕ್ಕಬಳ್ಳಾಪುರ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ.