Monday, 25th November 2024

ರಾಜ್ಯಕ್ಕೆ ಮಿಡತೆ ಕಾಟದ ಭೀತಿ!

ವಿಶ್ವವಾಣಿ‌ ಸುದ್ದಿಮನೆ
ಬೆಂಗಳೂರು:
ಎಷ್ಟೋ ಸಲ ಕೈಗೆ ಬಂದ ಬೆಳೆ ಕೊಯ್ಲು ಮಾಡುವುದೊಳಗೆ ಸಂಪೂರ್ಣ ಭೂಮಿ ಪಾಲಾಗಿರುತ್ತದೆ. ಇನ್ನು ಕೆಲವು ಸಲ ಬೆಲೆ ಇಲ್ಲದೆ ರೈತರೇ ಬೆಳೆಯನ್ನ ನಾಶ ಮಾಡುತ್ತಾರೆ. ಆದರೀಗ ಕರೋನಾ ಎಳೆದ ಬರೆ ವಾಸಿಯಾಗುವ ಮೊದಲೇ ರಾಜ್ಯದ ರೈತರಿಗೆ ಮಿಡತೆ ಹಾವಳಿಯ ಭೀತಿ ಶುರುವಾಗಿದೆ.
ಕರೋನಾ ಭಯ ಹೆಜ್ಜೆ ಹೆಜ್ಜೆಗೂ ಕಾಡುತ್ತಿದೆ. ಪ್ರತಿಯೊಬ್ಬರಿಗೂ ಆತಂಕವನ್ನ ಹೆಚ್ಚಿಸಿದೆ. ಮಹಾಮಾರಿಯ ಸಾವಿನ ಸುಳಿಯಿಂದ ತಪ್ಪಿಸಿಕೊಳ್ಳುವುದೇ ಸಾಹಸದ ವಿಷಯವಾಗಿದೆ. ಇದರ ನಡುವೆಯ ರಾಜ್ಯದ ಜನರಿಗೆ ಹೊಸದೊಂದು ಆತಂಕ ಶುರುವಾಗಿದೆ.
ಕರೋನಾ ಕಾಟದ ನಡುವೆ ಉತ್ತರಭಾರತದಲ್ಲಿ ಮಿಡತೆ ಹಾವಳಿ ಹೆಚ್ಚಾಗಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೀಗ ಮಹಾರಾಷ್ಟ್ರದ ಮೂಲಕ ರಾಜ್ಯಕ್ಕೆ ಮಿಡತೆ ಹಾವಳಿ ಕಾಲಿಡುವ ಆತಂಕ ಶುರುವಾಗಿದೆ. ಉತ್ತರ ಭಾರತದಲ್ಲಿ ಬೆಳೆಗಳನ್ನ ನಾಶ ಮಾಡಿ ಮಹಾರಾಷ್ಟ್ರದೆಡೆಗೆ ಧಾವಿಸಿರುವ ಮಿಡತೆಗಳು ರಾಜ್ಯಕ್ಕೂ ಬರುವ ಸಾಧ್ಯತೆಗಳಿವೆ. ಹೀಗಾಗಿ ಮಹಾರಾಷ್ಟ್ರದ ಗಡಿ ಜಿಲ್ಲೆಗಳಾದ ಬೀದರ್, ಕಲಬುರಗಿ, ಬೆಳಗಾವಿಯಲ್ಲೂ ಮಿಡತೆ ಹಾವಳಿಯ ಭಯ ಆವರಿಸಿದೆ.
 ಕೋಲಾರ ಜಿಲ್ಲೆಗೆ ಮಿಡತೆಗಳು ಕಾಲಿಟ್ಟಿದ್ದು, ರೈತರ ಆತಂಕ ಹೆಚ್ಚಾಗಿದೆ. ಕೋಲಾರ ತಾಲೂಕಿನ ದಿಂಬ ಹಾಗೂ ದೊಡ್ಡಹಸಾಳ ಬಳಿ ಮಿಡತೆಗಳು ಗುಂಪು ಗುಂಪಾಗಿ ಕಾಣಿಸಿಕೊಂಡಿವೆ. ಯಕ್ಕದ ಗಿಡಗಳನ್ನ ತಿಂದು ಹಾಕಿರುವ ಮಿಡತೆಗಳ ಬಗ್ಗೆ ಗ್ರಾಮಸ್ಥರು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಕೃಷಿ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದಾರೆ. ಬಳಿಕ ಇವೆಲ್ಲಾ ಸಾಮಾನ್ಯ ಮಿಡತೆಗಳು ಕೇವಲ ಯಕ್ಕದ ಗಿಡಗಳನ್ನ ತಿನ್ನುತ್ತವೆ. ರೈತರು ಆತಂಕಪಡೋ ಅಗತ್ಯವಿಲ್ಲ ಎಂದರು. ನಂತ್ರ ಮಿಡತೆಗಳನ್ನ ಸ್ಥಳೀಯರು ಬೆಂಕಿ ಹಚ್ಚಿ ಸುಟ್ಟು ಹಾಕಿದರು.
ಇನ್ನು ಕಲಬುರಗಿ, ಬೀದರ್ ಹಾಗೂ ಬೆಳಗಾವಿಗೂ ಮಿಡತೆ ಹಾವಳಿ ಭೀತಿ ಶುರುವಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಸಭೆ ನಡೆಸಿ, ರೈತರಿಗೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಮಾಹಿತಿ ನೀಡುತ್ತಿದ್ದಾರೆ. ಅಷ್ಟೇ ಅಲ್ಲ ಮಿಡತೆ ಬಂದರೆ ಏನು ಮಾಡಬೇಕು. ಯಾವೆಲ್ಲಾ ಔಷಧಿ ಸಿಂಪಡಣೆ ಮಾಡ್ಬೇಕು ಅಂತ ವಿವರಿಸಿದ್ದಾರೆ.
ಉತ್ತರ ಭಾರತದ ರಾಜ್ಯಗಳಲ್ಲಿ ಮಿಡತೆ ಹಾವಳಿ ಹೆಚ್ಚಾಗಿರುವ ಕಾರಣ ರಾಜ್ಯ ಸರಕಾರ‌ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ಇಂದು ಬೆಂಗಳೂರಿನಲ್ಲಿ ಮಿಡತೆ ಹಾವಳಿ ತಡೆ ಸಂಬಂಧ ಸಭೆ ನಡೆಸಲಿದ್ದಾರೆ.
……..
ಕೋಟ್‌….
ಒಟ್ಟಿನಲ್ಲಿ ಕರೋನಾ ಸಂಕಷ್ಟದ ಕಾಲದಲ್ಲಿ ರೈತರ ಬದುಕು ಈಗಾಗಲೇ ಮೂರಾಬಟ್ಟೆಯಾಗಿದೆ. ಇದರ ನಡುವೆ ಮಿಡತೆ ಹಾವಳಿ ಭೀತಿ ಕಾಡುತ್ತಿರುವುದು ಎಲ್ಲರನ್ನ ಚಿಂತೆಗೀಡು ಮಾಡಿದೆ. ಉತ್ತರ ಭಾರತವನ್ನು ಬಾಧಿಸುತ್ತಿರುವ ರಕ್ಕಸ ಮಿಡತೆಗಳು ಮಹಾರಾಷ್ಟ್ರ ಪ್ರವೇಶಿಸಿದ್ದು ಕರ್ನಾಟಕಕ್ಕೂ ಪ್ರವೇಶಿಸುವ ಆತಂಕವಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕ್ಷಣಾರ್ಧದಲ್ಲಿ ಬೆಳೆ ತಿಂದು ಹೋಗುವ ಈ ಮಿಡತೆಗಳು ಭವಿಷ್ಯದಲ್ಲಿ ಆಹಾರ ಕೊರತೆಗೆ ಕಾರಣವಾಗುತ್ತವೆ. ಹೀಗಾಗಿ ರಾಜ್ಯ ಸರಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ