Thursday, 28th November 2024

ಕನ್ನಡ ವೈದ್ಯಕೀಯ ಸಾಹಿತ್ಯದ ದಿಗ್ಗಜರು

ಸ್ವಾಸ್ಥ್ಯ ಸಂಪದ

1940ರ ನಂತರ ಕನ್ನಡ ಆಧುನಿಕ ವೈದ್ಯವಿಜ್ಞಾನ ಸಾಹಿತ್ಯದ ಬೆಳವಣಿಗೆಯನ್ನು ಗುರುತಿಸಬಹುದಾಗಿದ್ದು, ಇಂದು ನಾಡಿನಲ್ಲಿ ನೂರಾರು ಕನ್ನಡ ವೈದ್ಯ ಬರಹಗಾರರಿದ್ದರೂ ಸುಮಾರು 50 ಪ್ರಮುಖ ಕನ್ನಡ ಆಧುನಿಕ ವೈದ್ಯ ಬರಹಗಾರರನ್ನು ಗುರುತಿಸ ಬಹುದಾಗಿದೆ.

ಡಾ.ಎಂ.ಶಿವರಾಂ. ಡಾ.ಅನುಪಮಾ ನಿರಂಜನ, ಡಾ.ಡಿ.ಎಸ್.ಶಿವಪ್ಪ. ಡಾ.ಪಿ.ಎಸ್. ಶಂಕರ್, ಡಾ.ಸ.ಜ.ನಾಗಲೋಟಿ ಮಠ,
ಡಾ.ಸಿ.ಆರ್.ಚಂದ್ರಶೇಖರ್, ಡಾ.ಅಶೋಕ ಪೈ, ಡಾ.ಹೆಚ್.ಡಿ. ಚಂದ್ರಪ್ಪಗೌಡ, ಡಾ.ಗಿರಿಜಮ್ಮ, ಡಾ.ಎಸ್.ಪಿ. ಯೋಗಣ್ಣ, ಡಾ. ಕರವೀರಪ್ರಭು ಕ್ಯಾಲಕೊಂಡ, ಡಾ.ನಾ.ಸೋಮೇಶ್ವರ, ಡಾ.ಹೆಚ್. ಎಸ್.ಮೋಹನ್, ಡಾ.ಪವಿತ್ರ ಇವರುಗಳು ಕನ್ನಡ ಆಧುನಿಕ ವೈದ್ಯ ವಿಜ್ಞಾನ ಸಾಹಿತ್ಯದ ಸೃಷ್ಟಿಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಹಿರಿಯ ಅಗ್ರಗಣ್ಯರು.

ಡಾ.ಎಂ.ಶಿವರಾಂ(ರಾಶಿ)-1905-1984 ಲಭ್ಯವಿರುವ ಮಾಹಿತಿಗಳ ಪ್ರಕಾರ ಕನ್ನಡ ಆಧುನಿಕ ವೈದ್ಯ ವಿಜ್ಞಾನ ಸಾಹಿತ್ಯದ
ಬೆಳವಣಿಗೆಯ ಪ್ರಾರಂಭವನ್ನು ಡಾ.ಎಂ.ಶಿವರಾಂ(ರಾಶಿ)ರವರ ಕನ್ನಡ ವೈದ್ಯಕೀಯ ಬರವಣಿಗೆಯೊಂದಿಗೆ ಗುರುತಿಸ ಬಹುದಾಗಿದೆ. ಡಾ.ಎಂ.ಶಿವರಾಂ ಅವರು ಬಿ.ಎ.ಪದವಿ ಮುಗಿಸಿದ ನಂತರ, ಬೆಂಗಳೂರಿನಲ್ಲಿನ ಅಂದಿನ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ನಂತರ(1930), ಬೆಂಗಳೂರಿನಲ್ಲಿ ತಮ್ಮ ಖಾಸಗಿ ವೃತ್ತಿಯನ್ನು ಪ್ರಾರಂಭ ಮಾಡಿ ಅಲರ್ಜಿ, ಅಸ್ತಮ, ಲೈಂಗಿಕ ವಿಜ್ಞಾನ, ಮಾನಸಿಕ ಕಾಯಿಲೆಗಳು, ಪತಂಜಲಿಯ ಯೋಗ ಸೂತ್ರಗಳು ಇತ್ಯಾದಿ ಹಲವಾರು ವಿಷಯಗಳ ಬಗ್ಗೆ ಸುಮಾರು 30 ರಿಂದ 40 ಕೃತಿಗಳನ್ನು ಬರೆದು ‘ಆಧುನಿಕ ಕನ್ನಡ ವೈದ್ಯ ವಿಜ್ಞಾನ ಸಾಹಿತ್ಯದ ಪಿತಾಮಹ’ ರೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇವರ ‘ಮನಮಂಥನ’ ಮತ್ತು‘ಮನೋ ನಂದನ’ ಕೃತಿಗಳು ಮನೋವಿಜ್ಞಾನ ಶಾಸ್ತ್ರಕ್ಕೆ ಸಂಬಂಧಿಸಿದ ಅದ್ಭುತ ಕೃತಿ ಗಳಾಗಿವೆ. ‘ಮನಮಂಥನ’ಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯಅಕಾಡೆಮಿ ಪ್ರಶಸ್ತಿಗಳೆರಡೂ ಲಭಿಸಿದ್ದು, ಆಧುನಿಕ ವೈದ್ಯ ವಿಜ್ಞಾನ ಸಾಹಿತ್ಯಕ್ಕೆ ಅವರು ತಂದುಕೊಟ್ಟ ಪ್ರಪ್ರಥಮ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರತಿಷ್ಠಿತ ಗೌರವ ಗಳಾಗಿವೆ. ಆರೋಗ್ಯ ಸಾಹಿತ್ಯದ ಕೃತಿಯೊಂದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮತ್ತಾವ ಭಾಷೆಗಳಲ್ಲೂ ಲಭಿಸದಿರುವುದು ಕನ್ನಡ ಭಾಷೆಗೆ ಆರೊಗ್ಯ ಸಾಹಿತ್ಯವನ್ನು ಅರಗಿಸಿಕೊಳ್ಳುವ ಸಾಮರ್ಥ್ಯವಿದೆಯೆಂಬುದಕ್ಕೆ ಸಾಕ್ಷಿ.

1984ರಲ್ಲಿ ಸ್ವರ್ಗಸ್ಥರಾದ ಇವರು 1940ರಿಂದ 1984ವರೆಗೆ ಸುಮಾರು 44 ವರ್ಷಗಳ ಕಾಲ ಕನ್ನಡ ವೈದ್ಯ
ವಿಜ್ಞಾನ ಸಾಹಿತ್ಯ ಬೆಳವಣಿಗೆಗೆ ನಾಂದಿಹಾಡಿದ್ದಾರೆ. ಇವರು ‘ಕೊರವಂಜಿ’ ಎಂಬ ಹಾಸ್ಯ ಮಾಸ ಪತ್ರಿಕೆಯ ಸಂಪಾದಕರಾಗಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಹಾಸ್ಯ ಪ್ರಸಂಗಗಳ ಮೂಲಕ ವೈದ್ಯಕೀಯ ಸಾಹಿತ್ಯವನ್ನು ಜನರಿಗೆ
ತಲುಪಿಸುವಲ್ಲಿ ಮೊದಲಿಗರಾಗಿದ್ದಾರೆ. ಇವರು ಭಾರತೀಯ ವ್ಯದ್ಯಕೀಯ ಸಂಘದ ರಾಜ್ಯ ಶಾಖೆಯ ಅಧ್ಯಕ್ಷರಾಗಿಯೂ ಕಾರ್ಯ
ನಿರ್ವಹಿಸಿದ್ದಾರೆ (1959).

ಡಾ. ಅನುಪಮಾ ನಿರಂಜನ(1934-1991): ರಾಶಿ ಅವರ ನಂತರ ಆಧುನಿಕ ಕನ್ನಡ ವಿಜ್ಞಾನ ಸಾಹಿತ್ಯವನ್ನು ಜನರ ಬಳಿಗೆ ತಲುಪಿಸುವಲ್ಲಿ ವ್ಯಾಪಕವಾಗಿ ಕೃಷಿ ಮಾಡಿದವರು ಡಾ. ಅನುಪಮಾ ನಿರಂಜನರವರು. ‘ದಾಂಪತ್ಯ ದೀಪಿಕೆ’, ‘ತಾಯಿ-ಮಗು’, ‘ಒತ್ತಡದ ಬೇನೆಗಳು’, ‘ಕ್ಯಾನ್ಸರ್’ ಇತ್ಯಾದಿ 12 ವೈದ್ಯಕೀಯ ಕೃತಿಗಳು ಹಾಗೂ ದೈನಂದಿನ ಹಾಗೂ ವಾರಪತ್ರಿಕೆಗಳಲ್ಲಿ ಆರೋಗ್ಯ ವಿಷಯಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುವ ಮೂಲಕ 1971- 1991ರ ಅವಧಿಯಲ್ಲಿ ಆರೋಗ್ಯ ಸಾಹಿತ್ಯವನ್ನು ಜನಸಾಮಾನ್ಯರ ಮನಕ್ಕೆ ಮಟ್ಟಿಸಿದ ಪ್ರಥಮ ಮಹಿಳಾ ವೈದ್ಯ ಸಾಹಿತಿ ಇವರು. ಇವರ ಪುಸ್ತಕಗಳು ಇಂದಿಗೂ ಪುನರ್‌ಮುದ್ರಣ ಕಾಣುತ್ತಿರುವುದು ಅವರ ಸರಳ ಜನಪ್ರಿಯ ಬರಹಕ್ಕೆ ಹಿಡಿದ ಕೈಗನ್ನಡಿಯಾಗಿದೆ.

1991ರಲ್ಲಿ ನಿಧನರಾದ ಅನುಪಮಾ ನಿರಂಜನ ಅವರು ವೈದ್ಯ ಸಾಹಿತ್ಯವಲ್ಲದೆ ವೈದ್ಯಕಿಯೇತರ ಸಾಹಿತ್ಯ ಪ್ರಕಾರ ದಲ್ಲಿಯೂ ಕಥೆ, ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅದ್ವಿತೀಯ ಕೊಡುಗೆಗಳನ್ನು ನೀಡಿದ್ದಾರೆ.

ಡಾ.ಡಿ.ಎಸ್.ಶಿವಪ್ಪ: ಡಾ.ಡಿ.ಎಸ್.ಶಿವಪ್ಪನವರು ವೈದ್ಯಕೀಯ ಕಾಲೇಜುಗಳಲ್ಲಿ ಔಷಧಿಶಾಸ್ತ್ರ ಪ್ರಾಧ್ಯಾಪಕರಾಗಿದ್ದು, 1970 ರಿಂದ 2000ರ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಶಾಸ್ತ್ರೀಯ ಬರವಣಿಗೆಯ ಕೊಡುಗೆಯನ್ನು ನೀಡಿರುವ ಮೊದಲಿಗರಾಗಿದ್ದಾರೆ. ಆಂಗ್ಲ ಭಾಷೆಯ ವೈದ್ಯ ತಾಂತ್ರಿಕ ಪದಗಳಿಗೆ ಕನ್ನಡ ವೈದ್ಯ ತಾಂತ್ರಿಕ ಪದಗಳನ್ನು ಸೃಷ್ಟಿಮಾಡಿ ‘ಇಂಗ್ಲಿಷ್ ಕನ್ನಡ ವೈದ್ಯ ಪದಕೋಶ’ ಎಂಬ ಪುಸ್ತಕವನ್ನು ಬರೆದು, ಆಂಗ್ಲಭಾಷೆಯಲ್ಲಿ ವೈದ್ಯ ತಾಂತ್ರಿಕ ಪದಗಳನ್ನು ಹೇಗೆ ಹುಟ್ಟುಹಾಕಲಾಗಿದೆ ಎಂಬ ಮಾಹಿತಿ ನೀಡುವ ‘ವೈದ್ಯ ಪದಗಳ ಹುಟ್ಟು ಮತ್ತು ರಚನೆ’ ಕೃತಿಗಳು ಈ ಕ್ಷೇತ್ರದಲ್ಲಿ ಕೃಷಿ ಮಾಡುವವರಿಗೆ ಅತಿ ಉಪಯುಕ್ತ ವಾದ ಮಾಹಿತಿಯನ್ನು ನೀಡುತ್ತವೆ.

ಇವೆರಡೂ ಕೃತಿಗಳು ವೈದ್ಯಕೀಯ ಶಾಸ್ತ್ರೀಯ ಕೃತಿಗಳಾಗಿವೆ. ಅವರು ಬದುಕಿರುವವರೆಗೂ ನಿಯತಕಾಲಿಕೆಗಳಲ್ಲಿ
ವೈದ್ಯಕೀಯ ಸಾಹಿತ್ಯದ ಲೇಖನಗಳನ್ನು ನಿರಂತರವಾಗಿ ಬರೆಯುತ್ತಿದ್ದರು. ಇವೆರಡೂ ಶಾಸ್ತ್ರೀಯ ಕೃತಿಗಳು ಅತ್ಯುತ್ತಮ
ಕಾಣಿಕೆಯಾದರೂ ಅವುಗಳಲ್ಲಿ ಬಳಸಿರುವ ಕ್ಲಿಷ್ಟಕರ ಭಾಷೆ ಮತ್ತು ಸಂಸ್ಕೃತ ಹಿನ್ನೆಲೆಯ ವೈದ್ಯ ತಾಂತ್ರಿಕ ಪದಗಳನ್ನು ಸೃಷ್ಟಿಮಾಡಿದ್ದರಿಂದ ಈ ನಿಘಂಟು ಅನುಕರಣೀಯವಾಗಿಲ್ಲ.

ಡಾ.ಪಿ.ಎಸ್. ಶಂಕರ್: ಡಾ.ಪಿ.ಎಸ್. ಶಂಕರ್‌ರವರು ವೈದ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದು 1931ರಿಂದ 2019 ರ
ಅವಧಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಾಗೂ ವಚನ ಸಾಹಿತ್ಯದಲ್ಲಿ ವೈದ್ಯಕೀಯ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳು ಹಾಗೂ ಲೇಖನಗಳನ್ನು ಬರೆದಿದ್ದು, ಪುಸ್ತುತ ಕನ್ನಡ ವೈದ್ಯ ಸಾಹಿತ್ಯದ ಗಿಗ್ಗಜರುಗಳನ್ನು ಒಬ್ಬ ರಾಗಿದ್ದಾರೆ. ಇವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಪ್ರಕಟಗೊಂಡಿರುವ ಕಿರು ವೈದ್ಯ ವಿಶ್ವಕೋಶದ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದು, ಇದು ವಿಶ್ವಕೋಶದ ಗುಣಮಟ್ಟದಲ್ಲಿ ಇಲ್ಲದಿದ್ದರೂ ಕನ್ನಡದಲ್ಲಿ ವೈದ್ಯ  ವಿಶ್ವಕೋಶದ ಕಲ್ಪನೆ ಮೂಡಿಸಿದವರಲ್ಲಿ ಮೊದಲಿಗರಾಗಿದ್ದಾರೆ.

ಇವರು ಇವರು ತಮ್ಮ ಹೆಸರಿನಲ್ಲಿ ಡಾ.ಪಿ.ಎಸ್. ಶಂಕರ ಪ್ರತಿಷ್ಠಾನ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿ ಪ್ರತಿ ವರ್ಷ
ಪ್ರಕಟವಾಗುವ ಅತ್ಯುತ್ತಮ ವೈದ್ಯಕೀಯ ಕೃತಿಗೆ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದಾರೆ.

ಡಾ. ಸ.ಜ.ನಾಗಲೋಟಿ ಮಠ(1940-2006) ಡಾ. ಸದಾಶಿವಯ್ಯ ಜಂಬಯ್ಯ ನಾಗಟಿ ಮಠ ಅವರು ರೋಗಶಾಸ್ತ್ರಸದ ಪ್ರಾಧ್ಯಾಪಕರಾಗಿ ಮತ್ತು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾಗಿದ್ದು, ಕರ್ನಾಟಕ ಕಂಡ ಮೌಲ್ಯಯುತ ವ್ಯಕ್ತಿತ್ವದ ಮುಂಚೂಣಿ ವೈದ್ಯರಲ್ಲೊಬ್ಬರು.

ಮೈಸುರಿನಲ್ಲಿ 1993ರಲ್ಲಿ ನಡೆದ ಅಖಿಲ ಭಾರತ ಪ್ರಥಮ ಕನ್ನಡ ವೈದ್ಯಕೀಯ ವಿಜ್ಞಾನ ಸಾಹಿತ್ಯ ಸಮ್ಮೇಳನದ ಪ್ರಥಮ ಅಧ್ಯಕ್ಷರಾಗಿದ್ದ ಅವರು ಸುಮಾರು 50ಕ್ಕೂ ಹೆಚ್ಚು ವೈದ್ಯಕೀಯ ಕೃತಿಗಳನ್ನು ಬರೆದಿದ್ದಾರೆ. ಇವರಿಗೆ ಕರ್ನಾಟಕ ಸಾಹಿತ್ಯ
ಅಕಾಡೆಮಿ ಪ್ರಶಸ್ತಿ ಹಾಗೂ ಇನ್ನಿತರ ಪ್ರಶಸ್ತಿಗಳು ಲಭಿಸಿವೆ.

ಡಾ.ಸಿ.ಆರ್. ಚಂದ್ರಶೇಖರ್: ಡಾ.ಸಿ.ಆರ್. ಚಂದ್ರಶೇಖರ್ ಅವರು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಮನೋರೋಗ ತಜ್ಞರಾಗಿ ಸೇವೆ ಸಲ್ಲಿಸಿದ್ದು ಕನ್ನಡ ವ್ಯದ್ಯ ವಿಜ್ಞಾನ ಸಾಹಿತ್ಯ ಕ್ಷೇತ್ರದಲ್ಲಿ ಸುಮಾರು 100ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಅತಿ ಹೆಚ್ಚು ವೈದ್ಯಕೀಯ ಕೃತಿಗಳನ್ನು ಬರೆದು ಹಿರಿಯ ಲೇಖಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡಾ. ಅನುಪಮಾ ನಿರಂಜನರವರ ನಂತರ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಮನೋವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆದ ಅತಿ ಹೆಚ್ಚು ಜನಪ್ರಿಯ ವೈದ್ಯ ಬರಹಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇವರ ಕೃತಿಗಳು ಮತ್ತು
ಲೇಖನಗಳು ಮನೋವಿಜ್ಞಾನಕ್ಕೆ ಮಾತ್ರ ಸೀಮಿತವಾಗಿದ್ದು, ಅತಿ ಹೆಚ್ಚು ಮರುಮುದ್ರಣಗೊಳ್ಳುತ್ತಿದ್ದರೂ ಅವುಗಳಲ್ಲಿನ ವಿಚಾರಗಳು ಪುನಾರಾವರ್ತನೆಗೊಂಡಿದ್ದು, ಮನೋವೈದ್ಯ ವಿಜ್ಞಾನವನ್ನು ಸಂಶೋಧನಾತ್ಮಕವಾಗಿ ಮತ್ತು ಶಾಸ್ತ್ರೀಯವಾಗಿ ವಿಶದಪಡಿಸುವ ಕೃತಿ ಇವರಿಂದ ಹೊರಬರದೆ ಇರುವುದು ದುರ್ದೈವ. ಇವರ ಕೃತಿಗಳು ತೆಲುಗು ಮತ್ತು ಉರ್ದು ಭಾಷೆಗಳಿಗೆ ಅನುವಾದವಾಗಿವೆ.  ಇದವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅತಿ ಹೆಚ್ಚು ಪ್ರಶಸ್ತಿಗಳಿಸಿದ ವೈದ್ಯ ಲೇಖಕರಾಗಿದ್ದಾರೆ.

ಡಾ.ಎಚ್.ಡಿ. ಚಂದ್ರಪ್ಪ ಗೌಡ: ಡಾ.ಹೆಚ್.ಡಿ ಚಂದ್ರಪ್ಪ ಗೌಡ ಅವರು ಸಾಮಾನ್ಯ ಶಸ್ತ್ರಕ್ರಿಯಾತಜ್ಞರಾಗಿ ಹಲವಾರು ವೈದ್ಯಕೀಯ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರು ಬರೆದಿರುವ ಆತ್ಮಕಥನ ವೈದ್ಯನೊಬ್ಬನ ಬದುಕಿನ ವಿವಿಧ ಮಜಲು ಗಳನ್ನು ಪರಿಚಯಿಸಿದೆ. ಇವರ ಹೆಸರಿನಲ್ಲಿ ಶಿವಮೊಗ್ಗದ ಕರ್ನಾಟಕ ಸಂಘ ಡಾ.ಹೆಚ್.ಡಿ ಚಂದ್ರಪ್ಪಗೌಡ ವೈದ್ಯ ಸಾಹಿತ್ಯ
ಪ್ರಶಸ್ತಿಯನ್ನು ವೈದ್ಯಕೀಯ ಸಾಹಿತ್ಯದ ಪುಸ್ತಕಗಳಿಗೆ ಪ್ರತಿ ವರ್ಷ ನೀಡುತ್ತಿದೆ.

ಅವರು ಬದುಕಿರುವವರೆವಿಗೂ ಜನಪ್ರಿಯ ಕನ್ನಡ ವೈದ್ಯ ವಿಜ್ಞಾನ ಸಾಹಿತ್ಯವನ್ನು ವ್ಯಾಪಕವಾಗಿ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಹಿರಿಯ ವೈದ್ಯ ಸಾಹಿತಿ. ಡಾ. ಎಸ್.ಪಿ.ಯೋಗಣ್ಣ(1955..) ಡಾ.ಎಸ್.ಪಿ.ಯೋಗಣ್ಣನವರು ವೈದ್ಯಶಾಸ್ತ್ರದ
ಪ್ರಾಧ್ಯಾಪಕರಾಗಿದ್ದು, 1984ರಿಂದಲೂ ಈ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಆಂಗ್ಲ ಭಾಷೆಯಲ್ಲಿರುವ ಎಲ್ಲ ವೈದ್ಯಕೀಯ ಶಾಸ್ತ್ರೀಯ ಜ್ಞಾನ ಕನ್ನಡ ಭಾಷೆಯಲ್ಲಿ ದೊರೆಯುವಂತಾಗಬೇಕೆಂಬ ಆಶಯವನ್ನು ಇಟ್ಟುಕೊಂಡು ಈ ದಿಕ್ಕಿನಲ್ಲಿ ವೈದ್ಯಕೀಯ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಶಾಸ್ತ್ರೀಯವಾಗಿ ಸೃಷ್ಟಿ ಮಾಡುತ್ತಿರುವ ಮೊದಲಿಗರಾಗಿದ್ದಾರೆ.

‘ಆರೋಗ್ಯ ಯೋಗ’ ಎಂಬ ಕನ್ನಡ ಆರೋಗ್ಯ ಮಾಸಪತ್ರಿಕೆಯನ್ನು (1984 ರಿಂದ 2006) ಪ್ರಕಟಿಸಿ ತನ್ಮೂಲಕ ಹಲವಾರು ಯುವ ವೈದ್ಯ ಬರಹಗಾರರ ಸೃಷ್ಟಿಗೆ ಕಾರಣರಾಗಿದ್ದಾರೆ.

೧೯೯೩ರಲ್ಲಿ ಮೈಸೂರಿನಲ್ಲಿ ಅಖಿಲ ಭಾರತ ಪ್ರಥಮ ಕನ್ನಡ ವೈದ್ಯ ವಿಜ್ಞಾನ ಸಾಹಿತ್ಯ ಸಮ್ಮೇಳನವನ್ನು ಎರಡು ದಿನಗಳ ಕಾಲ ಸಂಘಟಿಸಿ ಆಂಗ್ಲಭಾಷೆಯಲ್ಲಿ ನಡೆಯುವ ವೈದ್ಯ ವಿಚಾರ ಸಂಕಿರಣಗಳಂತೆಯೇ ಕನ್ನಡದಲ್ಲಿ ವೈದ್ಯಕೀಯ ಗೋಪ್ಠಿ ಗಳನ್ನು ನಡೆಸಿ ಕನ್ನಡ ಭಾಷೆಯಲ್ಲಿ ವೈದ್ಯ ತಾಂತ್ರಿಕ ಸಾಹಿತ್ಯವನ್ನು ಸೃಷ್ಟಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಇವರು ಪ್ರಕಟಿಸಲಿರುವ ಸಮಗ್ರವಾದ ‘ಇಂಗ್ಲಿಷ್-ಕನ್ನಡ ವೈದ್ಯಕೀಯ ನಿಘಂಟು’ ಮತ್ತು ಎಂಟು ಸಂಪುಟಗಳ ಸಮಗ್ರ ವೈದ್ಯಶಾಸ ವೈದ್ಯ ವಿಜ್ಞಾನದ ಪ್ರಪ್ರಥಮ ಶಾಸ್ತ್ರೀಯ ಗ್ರಂಥಗಳಾಗಲಿದ್ದು ಕನ್ನಡದಲ್ಲಿ ವೈದ್ಯ ವಿಜ್ಞಾನ ಶಾಸ್ತ್ರೀಯವಾಗಿ ಬೆಳೆಯಲು ಈ ಕೃತಿಗಳು ನಾಂದಿಯಾಗಲಿವೆ.

ಅಧ್ಯಾತ್ಮಿಕ ಆರೋಗ್ಯವನ್ನು ವೈಜ್ಞಾನಿಕ ತಳಹದಿಯ ಮೇಲೆ ವಿಶ್ಲೇಷಿಸಿ ರಚಿಸಿರುವ ‘ಸಮಗ್ರ ಆರೊಗ್ಯ ದರ್ಶನ’ ಮತ್ತು
‘ನಾನ್ಯಾರು-?’ ಕೃತಿಗಳು ಈ ಕ್ಷೇತ್ರದಲ್ಲಿ ಅದ್ವಿತೀಯ ಕೃತಿಗಳಾಗಿವೆ. ಇದುವರೆವಿಗೂ ೧೨ಕ್ಕೂ ಹೆಚ್ಚು ಮೌಲ್ಯಯುತವಾದ ಕೃತಿಗಳನ್ನು ಪ್ರಕಟಿಸಿದ್ದು ಇನ್ನೂ ಎಂಟು ಕೃತಿಗಳು ಮುದ್ರಣದ ಹಂತದಲ್ಲಿವೆ. ಅಧ್ಯಾಪಕರಾಗಿದ್ದಾಗ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೇ ವೈದ್ಯ ವಿಜ್ಞಾನವನ್ನು ಬೋಧಿಸುತ್ತಿದ್ದ ಹೆಗ್ಗಳಿಕೆ ಇವರದು.

ದಿನಪತ್ರಿಕೆಗಳಲ್ಲಿ ಅದರಲ್ಲೂ ಮೈಸೂರಿನಿಂದ ಪ್ರಕಟಗೊಳ್ಳುವ ಜನಪ್ರಿಯ ಮೈಸೂರುಮಿತ್ರ ದಿನಪತ್ರಿಕೆಯಲ್ಲಿ ಪ್ರತಿವಾರ
ವೈದ್ಯಕೀಯ ಅಂಕಣವನ್ನು ಬರೆಯುತ್ತಿದ್ದು, ನಾಡಿನ ಪ್ರಮುಖ ವೈದ್ಯ ಅಂಕಣಕಾರರಲ್ಲಿ ಒಬ್ಬರಾಗಿದ್ದಾರೆ.

ಡಾ.ನಾ.ಸೋಮೇಶ್ವರ್: ಡಾ.ನಾ. ಸೋಮೇಶ್ವರ್ ಅವರು ಕೌಟುಂಬಿಕ ವೈದ್ಯರಾಗಿದ್ದು ಆರೋಗ್ಯ ಸಾಹಿತ್ಯವನ್ನು
ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಸರಳ ಕನ್ನಡದಲ್ಲಿ ಸುಮಾರು ೨೫ ವರ್ಷಗಳಿಂದ ತಿಳಿಸುತ್ತಿರುವ ಇವರು ಸುಮಾರು ೫೦ ಕೃತಿಗಳನ್ನು ಪ್ರಕಟಿಸಿದ್ದಾರೆ. ಥಟ್ ಅಂತಾ ಹೇಳಿ ಎಂಬ ಜನಪ್ರಿಯ ಕ್ವಿಜ್ ಕಾರ್ಯಕ್ರಮದ
ಮೂಲಕ ಚಂದನ ವಾಹಿನಿಯಲ್ಲಿ ಆರೋಗ್ಯದ ಜೊತೆಗೆ ಸಾಮಾನ್ಯ ಜ್ಞಾನದ ಅರಿವನ್ನೂ ನೀಡುತ್ತಿದ್ದಾರೆ. ಶ್ರೇಷ್ಠ ಬರಹಗಾರರು ಮತ್ತು ಶ್ರೇಷ್ಠ ವಾಗ್ಮಿ ಎಂಬ ಖ್ಯಾತಿಗೆ ಪಾತ್ರರಾಗಿರುವ

ಇವರು ವೈದ್ಯಕೀಯ ಸಾಹಿತ್ಯವನ್ನು ಸರಳ ಸುಲಭ ಕನ್ನಡದಲ್ಲಿ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ವಿಶದ ಪಡಿಸುವಲ್ಲಿ ನಿಷ್ಣಾತರು.

ಡಾ. ಕರವೀರಪ್ರಭು ಕ್ಯಾಲಕೊಂಡ (೧೯೫೬..): ಡಾ.ಕರವೀರಪ್ರಭು ಕ್ಯಾಲಕೊಂಡ ಅವರು ವೃತ್ತಿಯಲ್ಲಿ ಸಾಮಾನ್ಯ ಶಸಕ್ರಿಯಾ ತಜ್ಞರು ಮತ್ತು ಮಕ್ಕಳತಜ್ಞರಾಗಿದ್ದು, ೧೯೭೭ರಿಂದ ಇಂದಿನವರೆಗೂ ನಿರಂತರ ವೈದ್ಯ ಬರಹಗಾರರಾಗಿದ್ದು, ಸುಮಾರು ೫೦ ಮೌಲಿಕ ಕೃತಿಗಳನ್ನು ಪ್ರಕಟಿಸಿ ಹಲವಾರು ಪ್ರಶಸಿಗಳಿಗೆ ಭಾಜನರಾಗಿದ್ದಾರೆ. ದಿನಪತ್ರಿಕೆಗಳಲ್ಲಿ ಅದರಲ್ಲೂ ಹೊಸದಿಗಂತ ಮತ್ತು ಸಂಯುಕ್ತ ಕರ್ನಾಟಕ ದಿನಪತ್ರಿಕೆಗಳಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ ಪ್ರತಿವಾರ ವೈದ್ಯಕೀಯ ಲೇಖನಗಳನ್ನು ಅಂಕಣ ಬರಹಗಾರರಾಗಿ ಬರೆಯುತ್ತಿದ್ದು ಪ್ರಖ್ಯಾತ ವೈದ್ಯ ಅಂಕಣರರಾಗಿದ್ದಾರೆ.

(ಮುಂದುವರಿಯುತ್ತದೆ)