Tuesday, 26th November 2024

ಮಹಾ ಮಳೆಗೆ ಎಲ್ಲಾ ಕೆರೆಗಳು ಭರ್ತಿ: ಅಧಿಕಾರಿಗಳಿಂದ ಪರಿಶೀಲನೆ

ಮಧುಗಿರಿ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಹಾ ಮಳೆಗೆ ತಾಲೂಕಿನಾದ್ಯಂತ ಎಲ್ಲಾ ಕೆರೆಗಳು ಭರ್ತಿ ಯಾಗಿದ್ದು, ಶಾಸಕ ಎಂ.ವಿ.ವೀರಭದ್ರಯ್ಯ ಹಾಗೂ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸೇರಿದಂತೆ ಅಧಿಕಾರಿಗಳ ತಂಡ ಮಂಗಳವಾರ ಪರಿಶೀಲನೆ ನಡೆಸಿದರು.

ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಜೊತೆಗೆ ಚೋಳೆನಹಳ್ಳಿ ಕೋಡಿ ವೀಕ್ಷಿಸಲು ಆರಂಭಿಸಿದ ಶಾಸಕ ಎಂ.ವಿ.ವೀರಭದ್ರಯ್ಯ ಹಾಗೂ ಅಧಿಕಾರಿಗಳ ತಂಡ ಬಿಜವರ ಕೆರೆ, ಬಿಲ್ಲದಮಡುಗು ಕೆರೆ, ಬಿಟ್ಟನಕುರಿಕೆ ಕೆರೆ, ಹಾಗೂ ಬಿರುಕು ಬಿಟ್ಟ ರಸ್ತೆ, ಸೇತುವೆ ಗಳನ್ನು ವೀಕ್ಷಿಸಿದರು.

ನಂತರ ರೈತರ ಜಮೀನು ಹಾಗೂ ಬೆಳೆ ನಾಶವಾದ ಬಗ್ಗೆ ಸ್ಥಳ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಗಳು, ಮಳೆ ಹಾನಿ ಯಿಂದಾದ ನಷ್ಟದ ಸಂಪೂರ್ಣ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದು, ಈ ಕಾರ್ಯವು ಬೇಗ ಪೂರ್ಣಗೊಳಿಸಿದರೆ ಶೀಘ್ರ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಬೆಲ್ಲದಮಡುಗು ಕೆರೆ ಒಡೆದಾಗಿನಿಂದ ಅಪಾಯದ ನಿರ್ವಹಣೆಯಲ್ಲಿ ತೊಡಗಿದ್ದ ಗ್ರಾ.ಪಂ. ಮಾಜಿ ಅಧ್ಯಕ್ಷ ರಂಗನಾಥ್‌ಗೌಡ, ಶ್ರೀಧರ್, ಚಂದ್ರಣ್ಣ, ಮಾಜಿ ಉಪಾಧ್ಯಕ್ಷ ವೆಂಕಟೇಶ್ ಹಾಗೂ ಪಿಡಿಓ ಜುಂಜೇಗೌಡರ ತಂಡದ ಕಾರ್ಯಕ್ಕೆ ಡಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ತಹಶೀಲ್ದಾರ್ ಸುರೇಶ ಆಚಾರ್, ತಾ.ಪಂ. ಇಓ ಲಕ್ಷ÷್ಮಣ್, ಎಡಿ ಗುರುಮೂರ್ತಿ, ಮಧುಸೂಧನ್, ಪುರಸಭೆ ಅಧ್ಯಕ್ಷ ತಿಮ್ಮರಾಜು, ಸದಸ್ಯರಾದ ಎಂ.ಆರ್.ಜಗನ್ನಾಥ್, ಗ್ರಾ.ಪಂ. ಮಾಜಿ ಅಧ್ಯಕ್ಷ ರಂಗನಾಥಗೌಡ, ಪಿಡಿಓ ಜುಂಜೇಗೌಡ, ಇಇ ಗಳಾದ ರವಿ ಸೂರನ್, ನಿರಂಜನಮೂರ್ತಿ, ರಾಜಗೋಪಾಲ್, ಎಇಇಗಳಾದ ರಂಗನಾಥ್, ಮಂಜುನಾಥ್, ಎಇಗಳಾದ ಮಂಜುಕಿರಣ್, ಕೃಷ್ಣಪ್ಪ, ಮುಖಂಡರಾದ ಎಂ.ಜಿ.ಶ್ರೀನಿವಾಸಮೂರ್ತಿ, ವೆಂಕಟೇಶ್, ಪ್ರಮೋದ, ಸಿದ್ದೇಶ್, ಗೋವಿಂದ ರಾಜು, ಹಾಗೂ ಇತರರು ಇದ್ದರು.

***
ತಾಲೂಕಿನಲ್ಲಿ ಜಿ.ಪಂ.ವ್ಯಾಪ್ತಿಯ ೧೬೬ ಕೆರೆಗಳು ಸಂಪೂರ್ಣ ಭರ್ತಿ ಯಾಗಿದೆ. ಸಣ್ಣ ನೀರಾವರಿ ಇಲಾಖೆಯ ೫೬ ಕೆರೆಗಳಲ್ಲಿ ೪೦ ಕೆರೆಗಳು ಕೋಡಿ ಹರಿದಿದ್ದು, ೧೬ ಕೆರೆಗಳು ಭಾಗಶಃ ಭರ್ತಿಯಾಗಿದೆ. ಬೆಲ್ಲದಮಡುಗು ಕೆರೆ ಒಡೆದು ೬ ಸೇತುವೆ ಹಾಗೂ ರಸ್ತೆಗೆ ಹಾನಿಯಾಗಿದ್ದು, ಸುಮಾರು ೧೫ ಗ್ರಾಮಕ್ಕೆ ತೆರಳುವ ಸಂಪರ್ಕ ಕಡಿತಗೊಂಡಿದೆ. ಹಲವಾರು ರೈತರ ಬೆಳೆ ನಾಶವಾಗಿದೆ. ಬೆಲ್ಲದಮಡುಗು ಕೆರೆ ನೀರು ಬಿಟ್ಟನಕುರಿಕೆ ಕೆರೆಗೆ ಹರಿದ ಪರಿಣಾಮ ಬಿಟ್ಟನಕುರಿಕೆ ಕೆರೆ ಅಪಾಯದ ಮಟ್ಟದಲ್ಲಿದ್ದು, ದುರಸ್ಥಿಕಾರ್ಯ ನಡೆದಿದೆ. ಸುವರ್ಣಮುಖಿ ಹಾಗೂ ಜಯಮಂಗಲಿ ನದಿ ನೀರಿನ ಹರಿವು ಮತ್ತೆ ಹೆಚ್ಚಾಗಿರುವ ಪರಿಣಾಮ ಸೂರನಾಗೇನಹಳ್ಳಿ ಹಾಗೂ ಚೆನ್ನಸಾಗರ ಗ್ರಾಮಗಳು ಮತ್ತೊಮ್ಮೆ ಮುಳುಗಡೆಯ ಭೀತಿ ಎದುರಿಸುತ್ತಿದ್ದು, ಇಮ್ಮಡಗೊಂಡನಹಳ್ಳಿ ಸಂಪೂರ್ಣ ಜಲಾವೃತವಾಗಿದೆ. ಬಿಜವರ, ಸಿದ್ದಾಪುರ ಹಾಗೂ ಚಂದ್ರಗಿರಿ ಕೆರೆಗಳು ಅಪಾಯದ ಮಟ್ಟದಲ್ಲಿದ್ದು, ಜನ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.