ವೈದ್ಯ ವೈವಿಧ್ಯ
drhsmohan@gmail.com
ಒಂದು ವೈರಸ್ ಕಾಯಿಲೆ ಬಂದು ಅದರ ನೆನಪು ಮಾಸುವ ಮೊದಲೇ ಹೊಸ ಹೊಸ ರೀತಿಯ ವೈರಸ್ ಕಾಯಿಲೆಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ. ಈಗಿನ ಕರೋನಾ ವೈರಸ್ ಕಳೆದ 2-3 ವರ್ಷಗಳಿಂದ ಜಗತ್ತಿನ ಹೆಚ್ಚಿನ ಎಲ್ಲಾ ದೇಶಗಳಲ್ಲಿ ಕಾಣಿಸಿ ಕೊಂಡು ಉಂಟುಮಾಡಿದ ಹಾನಿ ಮತ್ತು ಭೀತಿ ನಮಗೆಲ್ಲಾ ಅರಿವಿದೆ.
ಕೆಲವು ವಾರಗಳ ಮೊದಲು ‘ಮಾರ್ಬರ್ಗ್ ವೈರಸ್’ ಬಗ್ಗೆ ಈ ಅಂಕಣದಲ್ಲಿ ಬರೆದಿದ್ದೆ. ಅದರ ಸಮೀಪ ಸಂಬಂಧಿ ‘ಎಬೋಲಾ ವೈರಸ್’ ಕೂಡ ತುಂಬಾ ಅಪಾಯಕಾರಿ. ಅದರ ಅನ್ವೇಷಣೆಯ ಬಗೆಗಿನ ವಿದ್ಯಮಾನವೇ ತುಂಬಾ ಕುತೂಹಲಕಾರಿ. 2015- 2016ರಲ್ಲಿ ವಿಶ್ವದಾದ್ಯಂತ ಎಬೋಲಾ ಕಾಯಿಲೆ ಹಲವು ಸಾವಿರ ಜನರಲ್ಲಿ (ಹೆಚ್ಚಾಗಿ ಪಶ್ಚಿಮ ಆಫ್ರಿಕಾ ದೇಶಗಳಲ್ಲಿ) ಕಾಣಿಸಿಕೊಂಡು, ಒಂದು ಸಾವಿರಕ್ಕೂ ಹೆಚ್ಚು ಜನರ ಮರಣಕ್ಕೆ ಕಾರಣವಾಗಿ, ಮಾಧ್ಯಮಗಳಲ್ಲಿ ಬಹಳಷ್ಟು ಪ್ರಚಾರ ಪಡೆದು ಎಲ್ಲೆಡೆ ಭೀತಿಯನ್ನು ಹರಡಿತ್ತು.
ಪಶ್ಚಿಮ ಆಫ್ರಿಕಾದ ಜೈರೆ ದೇಶದಲ್ಲಿ ಮೊದಲು ಕಾಣಿಸಿಕೊಂಡ ಈ ಕಾಯಿಲೆಯ ಬಗ್ಗೆ ಜೀವದ ಹಂಗು ತೊರೆದು ಅಲ್ಲಿಗೇ ಹೋಗಿ ವ್ಯವಸ್ಥಿತ ರೀತಿಯಲ್ಲಿ ಅಧ್ಯಯನ ಮಾಡಿ ಅದಕ್ಕೆ ಈಗಿರುವ ಹೆಸರು ಕೊಟ್ಟ ಕೀರ್ತಿ ಬೆಲ್ಜಿಯಂನ ಯುವವಿಜ್ಞಾನಿ ಮತ್ತು ಅವರ ತಂಡಕ್ಕೆ ಸಲ್ಲುತ್ತದೆ.
ಸೆಪ್ಟೆಂಬರ್ 1976ರ ಒಂದು ದಿನ ಬೆಲ್ಜಿಯಂನ ಆಂಟ್ವೆರ್ಪ್ನ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಡಿಸಿನ್ ಸಂಸ್ಥೆಗೆ ನೀಲಿಬಣ್ಣದ ಒಂದು ಥರ್ಮಾಸ್ ಫ್ಲಾಸ್ಕ್ ಬಂದಿಳಿಯಿತು. ಅದು ಸಾಮಾನ್ಯವಾಗಿ ನಾವೆಲ್ಲ ಬಿಸಿಕಾಫಿ ಹಾಕುವ ಫ್ಲಾಸ್ಕ್ನ ರೀತಿಯಲ್ಲಿಯೇ ಇತ್ತು. ಆ ದಿನ, ಮೈಕ್ರೋಬಯಾಲಜಿಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದ 27 ವರ್ಷದ ಡಾ. ಪೀಟರ್ ಪಯಾಟ್ರು ಪ್ರಯೋಗಾಲಯದಲ್ಲಿ ವಿವಿಧ ಪ್ರಯೋಗ ನಡೆಸುತ್ತಿದ್ದರು.
ಮೊದಲು ತಿಳಿಸಿದ ಫ್ಲಾಸ್ಕ್ನಲ್ಲಿ ಕಾಫಿಯಿರಲಿಲ್ಲ, ಬೇರೆಯೇ ಒಂದು ಅಪರೂಪದ ವಸ್ತುವಿತ್ತು. ಕರಗುತ್ತಿರುವ ಐಸ್ಕ್ಯೂಬ್ಗಳ ನಡುವೆ ಗಾಜಿನ ಸಣ್ಣ ಸೀಸೆಯಲ್ಲಿ ರಕ್ತದ ಸ್ಯಾಂಪಲ್ ಇರಸಲಾಗಿತ್ತು. ಜೈರೆ (ಈಗ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶ) ದೇಶದಲ್ಲಿ ಕೆಲಸ ಮಾಡುತ್ತಿದ್ದ ಬೆಲ್ಜಿಯಂನ ವೈದ್ಯರೊಬ್ಬರು ಅದನ್ನು ಕಳುಹಿಸಿದ್ದರು. ಜತೆಗಿರಿಸಿದ್ದ ಟಿಪ್ಪಣಿಯಲ್ಲಿ, ಅದು ಜೈರೆಯಲ್ಲಿ ಕೆಲಸ ಮಾಡುತ್ತಿದ್ದ ಬೆಲ್ಜಿಯಂನ ನನ್ (ಕ್ರೈಸ್ತ ಸನ್ಯಾಸಿನಿ) ಒಬ್ಬಳ ರಕ್ತದ ಮಾದರಿಯೆಂದೂ, ಆಕೆ ವಿಚಿತ್ರವಾದ ಕಾಯಿಲೆಯಿಂದ ಬಳಲುತ್ತಿದ್ದಾಳೆಂದೂ ತಿಳಿಸಲಾಗಿತ್ತು. ಜೈರೆಯ ರಾಜಧಾನಿ ಕಿನ್ಸಾಸದಿಂದ ಪ್ರಯಾಣಿಕರೊಬ್ಬರ ಲಗೇಜ್ ಜತೆಗೆ ಆ ಗಾಜಿನ ಸಣ್ಣಸೀಸೆ ವಿಮಾನದಲ್ಲಿ ಬಂದಿಳಿದಿತ್ತು.
ಡಾ. ಪಯಾಟ್ ಫ್ಲಾಸ್ಕ್ ತೆಗೆದಾಗ, ಗಾಜಿನ ಸೀಸೆ ಒಡೆದು ನೀರು ಮತ್ತು ಐಸ್ ಜತೆ ರಕ್ತವು ಮಿಶ್ರಣಗೊಂಡಿತ್ತು. ಡಾ. ಪಯಾಟ್ ಮತ್ತು ಸಹೋದ್ಯೋಗಿಗಳಿಗೆ ಅದು ಎಷ್ಟು ಅಪಾಯಕಾರಿ ಎಂಬ ಅಂಶ ಆಗ ಗೊತ್ತಿರಲಿಲ್ಲ. ರಕ್ತವು ಐಸ್ನೀರಿನ ಜತೆ ಸೇರಿದ ರೀತಿಯಲ್ಲಿಯೇ ಅಪರಿಚಿತ ವೈರಸ್ ಕೂಡ ಸೇರಿತ್ತು ಎಂಬ ಅಂಶ ಯಾರಿಗೂ ಗೊತ್ತಿರಲಿಲ್ಲ. ರಕ್ತವನ್ನು ಎಲೆಕ್ಟ್ರಾನ್ ಮೈಕ್ರೋಸ್ಕೋಪ್ನಲ್ಲಿ ವೀಕ್ಷಿಸಿದಾಗ, ಅವರಿಗೆ ಸಾಮಾನ್ಯ ವೈರಸ್ಗಿಂತ ತುಂಬ ದೊಡ್ಡದಾದ ಅಥವಾ ದೈತ್ಯವೆಂದೇ ಕರೆಯಬಹುದಾದ ಆಕೃತಿ ಕಂಡಿತು.
ಅದರ ಆಕಾರವೂ ವಿಚಿತ್ರವಾಗಿತ್ತು. ಆಗ ಪ್ರಚಲಿತವಿದ್ದ ‘ಮಾರ್ ಬರ್ಗ್’ (Marburg) ಎಂಬ ವೈರಸ್ ರೀತಿಯಲ್ಲಿಯೇ ವೈದ್ಯವಿಜ್ಞಾನಿಗಳಿಗೆ ತೋರಿತು. 1967ರಲ್ಲಿ, ಜರ್ಮನಿಯ ಫ್ರಾಂಕ್ ಫರ್ಟ್ ಮತ್ತು ಯುಗೋಸ್ಲಾವಿಯಾದ ಬೆಲ್ಗ್ರೇಡ್ನ 31 ಜನರಲ್ಲಿ ತೀವ್ರ ರಕ್ತಸ್ರಾವ ಮತ್ತು ವಿಪರೀತ ಜ್ವರ ಕಾಣಿಸಿಕೊಂಡಿತ್ತು. ಉಗಾಂಡದಿಂದ ಆಮದಾದ ಸೋಂಕುಪೀಡಿತ ಮಂಗಗಳಿಂದ ಈ ಮಾರ್ಬರ್ಗ್ ಸೋಂಕು ಬಂದಿತ್ತು. 31ರಲ್ಲಿ 7 ಜನ ಆಸುನೀಗಿದ್ದರು.
ಮಾರ್ಬರ್ಗ್ ಸೋಂಕು ಎಷ್ಟು ಅಪಾಯಕಾರಿ ಎಂದು ಡಾ. ಪಯಾಟ್ರಿಗೆ ಗೊತ್ತಿತ್ತು. ಅವರು ಜಗತ್ತಿನ ವಿವಿಧ ತಜ್ಞರನ್ನು
ಸಂಪರ್ಕಿಸಿ ಅಭಿಪ್ರಾಯ ಪಡೆದಾಗ ತಾವು ಸೂಕ್ಷ್ಮ ದರ್ಶಕದಲ್ಲಿ ನೋಡುತ್ತಿರುವ ವೈರಸ್ ಮಾರ್ ಬರ್ಗ್ ವೈರಸ್ ಅಲ್ಲ, ಇದುವರೆಗೆ ಯಾರಿಗೂ ಗೊತ್ತಿಲ್ಲದ ವೈರಸ್ ಎಂದು ಅವರಿಗೆ ಖಾತ್ರಿಯಾಯಿತು. ಬಹುಶಃ ಯಾವುದೋ ಹೊಸ ಕಾಯಿಲೆ
ಇದ್ದಿರಬಹುದು ಎಂಬ ಅನುಮಾನ ಅವರನ್ನು ಕಾಡತೊಡಗಿತು. ಈ ಮಧ್ಯೆ, ಯಾರ ರಕ್ತದ ಸ್ಯಾಂಪಲ್ ಅನ್ನು ಬೆಲ್ಜಿಯಂ ಲ್ಯಾಬ್ನಲ್ಲಿ ನೋಡುತ್ತಿದ್ದರೋ ಆ ಕ್ರೈಸ್ತ ಸನ್ಯಾಸಿನಿ ಮರಣ ಹೊಂದಿದಳು ಎನ್ನುವ ಸುದ್ದಿ ಬಂದಿತು.
ಅಲ್ಲದೆ ಜೈರೆಯ ಉತ್ತರ ಭಾಗದಲ್ಲಿ ನಿಗೂಢವಾದ ಕಾಯಿಲೆ ಕಾಣಿಸಿಕೊಂಡು ಹಲವರು ಅದರ ಕಾರಣದಿಂದ ಮರಣ ಹೊಂದಿದ್ದಾರೆ ಎಂಬುದು ಗೊತ್ತಾಯಿತು. ಜ್ವರ, ವಾಂತಿ, ಭೇದಿ ಕಾಣಿಸಿಕೊಂಡು ನಂತರ ವಿಪರೀತ ರಕ್ತಸ್ರಾವವಾಗಿ ಆ ರೋಗಿಗಳು ಮರಣ ಹೊಂದುತ್ತಿದ್ದರು. ಕಾಯಿಲೆಯ ನಿಗೂಢತೆಯನ್ನು ಭೇದಿಸಬೇಕೆಂಬ ಛಲದಿಂದ ಆಫ್ರಿಕಾವನ್ನೇ ನೋಡಿರದ ಡಾ. ಪೀಟರ್ ಪಯಾಟ್ ಮತ್ತು ಅವರ ತಂಡ ಎರಡು ವಾರದ ನಂತರ ಜೈರೆಯ ರಾಜಧಾನಿ ಕಿನ್ಸಾಸಗೆ ವಿಮಾನದಲ್ಲಿ ಬಂದಿಳಿಯಿತು.
ಅಲ್ಲಿಂದ 1000 ಕಿ.ಮೀ. ಉತ್ತರಕ್ಕಿದ್ದ, ಅಧಿಕ ಮಳೆಯಾಗುವ ಕಾಡಿನ ಮಧ್ಯಕ್ಕೆ ಅವರು ಪಯಣಿಸಿದರು. ಕಾಂಗೋ
ನಂದಿಯ ಉತ್ತರದ ತುದಿಯ ಪ್ರದೇಶದ ‘ಬುಂಬಾ’ ಎಂಬ ಪಟ್ಟಣ ತಲುಪಿದರು. ಅಲ್ಲಿ ಅವರಿಗೆ ‘ನಿಗೂಢ ಕಾಯಿಲೆ’ಯ ಬಗೆಗೆ ಜನರಿಗಿದ್ದ ಹೆದರಿಕೆ ಅರಿವಾಗತೊಡಗಿತು. ವಿಮಾನದ ಪೈಲಟ್ ಈ ತಂಡವನ್ನು ಅಲ್ಲಿ ಇಳಿಸಿ, ಕಾಯಿಲೆಯ ಭೀತಿಯಿಂದ ಬೇಗನೆ ಹಿಂತಿರುಗಿಬಿಟ್ಟರು. ಅಲ್ಲಿಂದ 120 ಕಿ.ಮೀ. ಉತ್ತರಕ್ಕಿದ್ದ ‘ಯಂಬೂಕು’ ಎಂಬ ಹಳ್ಳಿಗೆ ತಲುಪಿದರು. ಬೆಲ್ಜಿಯಂನ ಪಾದ್ರಿ ಹಾಗೂ ನನ್ಗಳು ಒಂದು ಆಸ್ಪತ್ರೆ ಮತ್ತು ಶಾಲೆಯನ್ನು ಅಲ್ಲಿ ನಡೆಸುತ್ತಿದ್ದರು.
ದಟ್ಟವಾದ ಮಳೆಕಾಡಿನಿಂದ ಆವೃತವಾಗಿದ್ದ ಆ ಪ್ರದೇಶ ಸುಂದರವಾದ ಪ್ರಕೃತಿಯನ್ನು ಹೊಂದಿತ್ತು. ತೀರಾ ಬಡಜನರು
ಅಲ್ಲಿ ವಾಸಿಸುತ್ತಿದ್ದರು. ಅಲ್ಲಿದ್ದ ಪಾದ್ರಿ ಮತ್ತು ನನ್ಗಳು ಒಂದು ನಿರ್ದಿಷ್ಟ ಜಾಗ ಗುರುತಿಸಿ ‘ಲಕ್ಷ್ಮಣರೇಖೆ’ಯ ರೀತಿ
ರೇಖೆ ಎಳೆದು ಅದರಿಂದ ಆಚೆ ಹೋಗುವವರು ನಿಗೂಢ ಕಾಯಿಲೆಗೆ ತುತ್ತಾಗಿ ಅಸುನೀಗುತ್ತಾರೆ ಎಂದು ಹೇಳುತ್ತಿದ್ದರು. ಅದಾಗಲೇ ಅವರಲ್ಲಿನ ನಾಲ್ಕು ಜನರು ಮರಣ ಹೊಂದಿದ್ದರು. ಡಾ.ಪೀಟರ್ ಪಯಾಟ್ ಧೈರ್ಯ ಮಾಡಿ ಆ ಲಕ್ಷ್ಮಣ
ರೇಖೆ ಭೇದಿಸಿ ಆಚೆಗೆ ತೆರಳಿ ‘ನಿಗೂಢ ಕಾಯಿಲೆ’ ಯನ್ನು ಭೇದಿಸಿ, ಸಾಂಕ್ರಾಮಿಕದ ರೀತಿ ಹಬ್ಬುತ್ತಿದ್ದ ಆ ರೋಗವನ್ನು ತಾವು ನಿಲ್ಲಿಸುವುದಾಗಿ ಭರವಸೆ ನೀಡಿದರು.
ಒಬ್ಬರಿಂದ ಮತ್ತೊಬ್ಬರಿಗೆ ಗಾಳಿ, ಆಹಾರ, ನೇರವಾದ ಸಂಪರ್ಕ ಅಥವಾ ಕೀಟಗಳಿಂದ ರೋಗ ಹಬ್ಬುತ್ತಿದೆಯೇ ಎಂದು ಅವರು
ಶೋಧಿಸಬೇಕಿತ್ತು. ಡಾ. ಪಯಾಟ್ ಪತ್ತೇದಾರರಂತೆ ಅಲ್ಲಿನವರನ್ನು ವಿವಿಧ ರೀತಿ ಪ್ರಶ್ನೆ ಮಾಡಿ ವಸ್ತುಸ್ಥಿತಿ ಅರಿಯಲು ಪ್ರಯತ್ನಿಸಿದರು. ಆಸುಪಾಸಿನ ಎಲ್ಲ ಹಳ್ಳಿಗಳ ನಕ್ಷೆ ತಯಾರಿಸಿ, ಅಲ್ಲಿಗೆ ಭೇಟಿ ನೀಡಿ ಮುಖ್ಯವಾದ ಈ ಮೂರು ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸಿದರು- ಈ ಸಾಂಕ್ರಾಮಿಕ ಜ್ವರ ಹೇಗೆ ಆರಂಭವಾಯಿತು? ಸೋಂಕುಪೀಡಿತ ಜನರು ಯಾವ ಭಾಗದಲ್ಲಿ ಹೆಚ್ಚಿದ್ದಾರೆ? ಯಾರಲ್ಲಿ ಜಾಸ್ತಿ ಸೋಂಕು ಕಂಡುಬರುತ್ತದೆ? ಡಾ. ಪಯಾಟ್ ಮತ್ತು ಅವರ ತಂಡ ಹಳ್ಳಿ ಹಳ್ಳಿಗೆ
ಭೇಟಿ ನೀಡಿ ಸೋಂಕುಪೀಡಿತ ವ್ಯಕ್ತಿಗಳ ಸಮೀಕ್ಷೆ ನಡೆಸಿದಾಗ ಆಶ್ಚರ್ಯಕರ ಮಾಹಿತಿ ದೊರಕಿತು.
ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದವರಲ್ಲೇ ಸೋಂಕು ಜಾಸ್ತಿಯಿತ್ತು. 18-30 ವರ್ಷದ ಮಹಿಳೆಯರಲ್ಲಿ ಸೋಂಕಿನ ಪ್ರಮಾಣ ಜಾಸ್ತಿ ಇದ್ದು, ಅವರಲ್ಲಿ ಹೆಚ್ಚಿನವರು ಗರ್ಭಿಣಿಯರಾದಾಗ ಆಸ್ಪತ್ರೆಗೆ ಪರೀಕ್ಷೆಗಾಗಿ ಬಂದಿದ್ದರು. ಇನ್ನೂ ವಿವರ ಕೆದಕಿ
ದಾಗ, ಗರ್ಭಿಣಿಯರು ಆಸ್ಪತ್ರೆಯಲ್ಲಿ ಇಂಜೆಕ್ಷನ್ ಮಾಡಿಸಿಕೊಳ್ಳುತ್ತಿದ್ದರು, ಆ ಸಂದರ್ಭದಲ್ಲಿ ಒಬ್ಬರಲ್ಲಿ ಉಪಯೋಗವಾದ ಸೂಜಿಯನ್ನೇ ಹಲವರಲ್ಲಿ ಬಳಸುತ್ತಿದ್ದರು ಎಂಬುದು ತಂಡಕ್ಕೆ ಮನವರಿಕೆಯಾಗಿ, ಆ ಮೂಲಕವೇ ವೈರಸ್ ಹರಡುತ್ತಿದೆ
ಎಂದು ಕಂಡುಕೊಂಡರು. ಈ ಕಾಯಿಲೆಯಲ್ಲಿ ಮರಣ ಹೊಂದಿದ ವ್ಯಕ್ತಿಗಳ ಅಂತಿಮ ಕ್ರಿಯೆಯಲ್ಲಿ ಭಾಗವಸಿದ ಹೆಚ್ಚು ಜನ ರೋಗಪೀಡಿತರಾಗುತ್ತಿದ್ದರು.
ಮರಣಿಸಿದ ವ್ಯಕ್ತಿಗಳ ದೇಹದಲ್ಲಿ ವಿಪರೀತ ಪ್ರಮಾಣದ ವೈರಸ್ಗಳಿದ್ದು, ದೇಹವನ್ನು ಬರಿಗೈಯಲ್ಲಿ ಮುಟ್ಟಿದವರಿಗೆ ಸೋಂಕು
ಹರಡುವುದು ನಿಶ್ಚಿತವಾಗಿತ್ತು. ಮುಂದಿನದು ವೈರಸ್ ಹರಡುವುದನ್ನು ನಿಲ್ಲಿಸುವ ಕ್ರಮವಾಗಿತ್ತು. ಅದಕ್ಕಾಗಿ ಅಲ್ಲಿನ ಆಸ್ಪತ್ರೆ
ಮುಚ್ಚಿಸಿ, ಸೋಂಕುಪೀಡಿತ ವ್ಯಕ್ತಿಗಳನ್ನು ಬೇರೆ ಬೇರೆಯಾಗಿರಿಸುವ ವ್ಯವಸ್ಥೆ ಮಾಡಿದರು. ಆಗಲೇ ಈ ರೋಗದಿಂದ ೩೦೦ ಜನರು ಮರಣ ಹೊಂದಿದ್ದರು. ಆಗ ಈ ಕಾಯಿಲೆಗೆ ಏನು ಹೆಸರಿಡಬೇಕೆಂದು ಚಿಂತನೆ ಮಾಡಿದಾಗ, ‘ಯಂಬೂಕು’ ಹಳ್ಳಿಯ
ಆಸುಪಾಸಿನಲ್ಲಿ ಆರಂಭವಾದ್ದರಿಂದ ಆ ಹೆಸರೇ ಇಡಬೇಕೆಂಬ ಸಲಹೆ ಬಂದಿತು.
ನಂತರ ಭವಿಷ್ಯದಲ್ಲಿ ಆ ಹಳ್ಳಿಗೆ ಕೆಟ್ಟ ಹೆಸರು ಬರುತ್ತದೆಂದು ಯೋಚಿಸಿ ಸಮೀಪದ ‘ಎಬೋಲಾ’ ನದಿಯ ಹೆಸರಿಡಬೇಕೆಂದು ವಿಚಾರ ಮಾಡಿ ‘ಎಬೋಲಾ ಕಾಯಿಲೆ’ ಎಂದು ನಾಮಕರಣ ಮಾಡಿದರು. ಕಾರಣೀಕೃತವಾದ ವೈರಸ್ ‘ಎಬೋಲಾ ವೈರಸ್’ ಎಂದಾಯಿತು. ಹೀಗೆ ಜೀವದ ಹಂಗು ತೊರೆದು ಕಾಯಿಲೆಯ ಉಗಮ ಶೋಧಿಸಿ ಮಹತ್ತರ ಮಾಹಿತಿ ದೊರಕಿಸಿದ ಡಾ. ಪೀಟರ್ ಪಯಾಟ್ ನಂತರ ಹಲವು ವೈದ್ಯಕೀಯ ಸಂಶೋಧನೆ ನಡೆಸಿ ಪ್ರಸಿದ್ಧರಾದರು.
71 ವರ್ಷದ ಡಾ. ಪಯಾಟ್ ಲಂಡನ್ನಿನ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರಾಪಿಕಲ್ ಮೆಡಿಸಿನ್ ಸಂಸ್ಥೆಯ ನಿರ್ದೇಶಕರಾಗಿ ನಿವೃತ್ತರಾದರು. ಮತ್ತೆ ಮತ್ತೆ ವೈರಸ್ ಕಾಯಿಲೆಗಳು ಕಳೆದ ೨೫-೩೦ ವರ್ಷಗಳಲ್ಲಿ ಜಗತ್ತಿನಾದ್ಯಂತ ವಿವಿಧ ವೈರಸ್ ಕಾಯಿಲೆಗಳು ಸಾರ್ಸ್, ಹಕ್ಕಿಜ್ವರ, ಹಂದಿಜ್ವರ, ಮೆರ್ಸ್ಗಳು ಆಗಾಗ ನಿಯುತವಾಗಿ ಕಾಣಿಸಿಕೊಳ್ಳುವುದನ್ನು ನೋಡಿದ್ದೇವೆ. ಇವು ಜಗತ್ತಿನ ಯಾವ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ ಅಲ್ಲಿ ಮಾತ್ರವಲ್ಲದೆ, ಬೇರೆಯ ಭಾಗಗಳಲ್ಲಿ ಕೂಡ ವಿಪರೀತ ಚಿಂತೆ, ತೀವ್ರ ಭಯ ಹುಟ್ಟಿಸಿವೆ.
ಒಂದು ವೈರಸ್ ಕಾಯಿಲೆ ಬಂದು ಅದರ ನೆನಪು ಮಾಸುವ ಮೊದಲೇ ಹೊಸ ಹೊಸ ರೀತಿಯ ವೈರಸ್ ಕಾಯಿಲೆಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ. ಈಗಿನ ಕರೋನಾ ವೈರಸ್ ಕಳೆದ 2-3 ವರ್ಷಗಳಿಂದ ಜಗತ್ತಿನ ಹೆಚ್ಚಿನ ಎಲ್ಲಾ ದೇಶಗಳಲ್ಲಿ ಕಾಣಿಸಿ ಕೊಂಡು ಉಂಟುಮಾಡಿದ ಹಾನಿ ಮತ್ತು ಭೀತಿ ನಮಗೆಲ್ಲಾ ಅರಿವಿದೆ. 2015-16ರಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಅಸಾಮಾನ್ಯ ರೀತಿಯಲ್ಲಿ ಕಂಡುಬಂದ ಎಬೋಲಾ ಕಾಯಿಲೆ ತೀವ್ರಭಯ ಹುಟ್ಟಿಸಿತು.
ಮನುಷ್ಯನಿಗೆ ಸತತವಾಗಿ ಇಂಥ ಕಾಯಿಲೆಗಳಿಂದ ತೀವ್ರ ರೀತಿಯ ಜೀವಭಯವಿದೆ ಮತ್ತು ಅನಿರೀಕ್ಷಿತವಾದ ಈ ರೀತಿಯ ಕಾಯಿಲೆಗಳು ಯಾವಾಗ ಬೇಕಾದರೂ ಕಂಡುಬರಬಹುದು ಎಂಬ ಬಹಳ ಮುಖ್ಯ ಸಂದೇಶವನ್ನು ಇವು ನಮಗೆ
ತಲುಪಿಸುತ್ತಿವೆ. ಈ ರೀತಿಯ ಕಾಯಿಲೆಗಳು ಆಗಾಗ ಕಾಣಿಸಿಕೊಂಡು ಮನುಷ್ಯನಿಗೆ ಭಯ, ತಲ್ಲಣ ಉಂಟುಮಾಡಲು
ಮುಖ್ಯ ಕಾರಣ ಎಂದರೆ- ಅನಿಯಮಿತವಾಗಿ ಹೆಚ್ಚುತ್ತಿರುವ ಮಾನವಸಂತತಿ, ಮನುಷ್ಯ ಮತ್ತು ಪರಿಸರದ ನಡುವಿನ ಸಂಬಂಧಗಳಲ್ಲಿ ಆಗುತ್ತಿರುವ ತೀವ್ರವಾದ ಬದಲಾವಣೆ.
ಎಬೋಲಾ ವೈರಸ್ ಮಾನವನಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಮಾರಣಾಂತಿಕವಾಗುವುದು ಹೇಗೆ ಎಂದು ಬಹಳ ದಿನಗಳವರೆಗೆ ಸ್ಪಷ್ಟವಾಗಿ ಗೊತ್ತಿರಲಿಲ್ಲ. ವೈರಸ್ ಸೋಂಕಿಗೆ ಪ್ರತಿಕ್ರಿಯೆಯಾಗಿ, ಅದು ಮನುಷ್ಯನ ದೇಹದ ಪ್ರತಿರೋಧ ಶಕ್ತಿಯನ್ನೇ
ನಾಶ ಮಾಡುತ್ತದೆ ಅಥವಾ ಹಾಳುಗೆಡವುತ್ತದೆ. ಸಾಮಾನ್ಯವಾಗಿ ದೇಹವು ಈ ರೀತಿಯ ಸೋಂಕಿಗೆ ಒಳಗಾದಾಗ ‘ಇಂಟರ್-ರಾನ್’ ಎಂಬ ವಸ್ತುವು ಉತ್ಪನ್ನಗೊಳ್ಳುತ್ತದೆ. ಇದು ನಮ್ಮ ರಕ್ತದಲ್ಲಿರುವ ಬಿಳಿ ರಕ್ತಕಣಗಳಿಗೆ ವಂಶವಾಹಿಗಳನ್ನು ಮತ್ತು
ಪ್ರೋಟೀನ್ಗಳನ್ನು ಒಟ್ಟುಗೂಡಿಸುವಂತೆ ಸಂದೇಶ ರವಾನಿಸುತ್ತದೆ. ಎಬೋಲಾ ವೈರಸ್ ‘ಪಿ24’ ಎಂಬ ವಸ್ತುವನ್ನು ಉತ್ಪಾದಿಸುತ್ತದೆ.
ಈ ವಸ್ತುವು ಇಂಟರ್ ಫೆರಾನ್ ಸಾಗಾಟದ ಹಾದಿಗೆ ತಡೆಯೊಡ್ಡುತ್ತದೆ. ಪರಿಣಾಮ, ನಮ್ಮ ದೇಹದ ಪ್ರತಿರೋಧ ವ್ಯವಸ್ಥೆ
ತೀವ್ರ ರೀತಿಯಲ್ಲಿ ಶಿಥಿಲಗೊಳ್ಳುತ್ತದೆ. ಸಾಮಾನ್ಯ ಜೀವಕೋಶದ ಹೊರಗಿನ ರಕ್ಷಣಾ ಕವಚ ಹಾಳಾದಾಗ ಅದು ವೈರಸ್ ವಿರುದ್ಧ ಅಸಹಾಯಕವಾಗುತ್ತದೆ.