ತುಮಕೂರು: ತುಮಕೂರು ವಿಶ್ವವಿದ್ಯಾಲಯದ 15 ನೇ ಘಟಿಕೋತ್ಸವ ಮುಗಿದು ಸುಮಾರು ಒಂದೂವರೆ ತಿಂಗಳುಗಳಾ ದರೂ, ಘಟಿಕೋತ್ಸವಕ್ಕೆ ಆಗಿರುವ ಖರ್ಚು-ವೆಚ್ಚದ ವಿವರದ ಪಟ್ಟಿ ಇನ್ನೂ ಸಹಾ ವಿ.ವಿ.ಯಲ್ಲಿ ಲಭ್ಯವಿಲ್ಲವೆಂಬ ಕುತೂಹಲದ ಸಂಗತಿ ಬೆಳಕಿಗೆ ಬಂದಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ತುಮಕೂರು ವಿ.ವಿ.ಯ ಹಣಕಾಸು ಅಧಿಕಾರಿ ನೀಡಿರುವ ಪ್ರತ್ಯುತ್ತರದಲ್ಲಿ ಈ ಅಂಶ ಬಹಿರಂಗ ವಾಗಿದ್ದು, ಪ್ರಸ್ತುತ ಈ ವಿಷಯವು ಚರ್ಚೆಗೆ ಎಡೆಮಾಡಿಕೊಡುವಂತಿದೆ.
2022 ರ ಜುಲೈ 5 ರಂದು ತುಮಕೂರು ವಿಶ್ವವಿದ್ಯಾನಿಲಯದ 15 ನೇ ಘಟಿಕೋತ್ಸವ ಪ್ರಭಾರ ಕುಲಪತಿ ಪ್ರೊ. ಕೇಶವ ಅವರ ನೇತೃತ್ವದಲ್ಲಿ ನಡೆದಿತ್ತು.ಈ ಸಂಬಂಧ ಆರ್.ವಿಶ್ವನಾಥನ್ , ಆಗಸ್ಟ್ 1 ರಂದು ವಿ.ವಿ. ಗೆ ಅರ್ಜಿ ಸಲ್ಲಿಸಿ ಘಟಿಕೋತ್ಸವಕ್ಕೆ ಆದ ಒಟ್ಟು ವೆಚ್ಚ ಮತ್ತು ಒಟ್ಟು ವೆಚ್ಚದಲ್ಲಿ ವಿವಿಧ ಬಾಬ್ತುಗಳಿಗೆ ಆಗಿರುವ ವೆಚ್ಚದ ಪಟ್ಟಿ ನೀಡುವಂತೆ ಕೋರಿದ್ದರು.
ಇದಕ್ಕೆ ವಿಶ್ವವಿದ್ಯಾನಿಲಯವು ಘಟಿಕೋತ್ಸವ ಮುಗಿದ ಒಂದೂವರೆ ತಿಂಗಳ ಬಳಿಕ ಅಂದರೆ, ಆಗಸ್ಟ್ 24 ರಂದು ಪ್ರತ್ಯುತ್ತರ ನೀಡುತ್ತ, ಹುಂಡಿಗಳ ಸ್ವೀಕಾರ ಮತ್ತು ಪಾವತಿ ಪ್ರಕ್ರಿಯೆಗಳು ಪ್ರಗತಿಯಲ್ಲಿರುತ್ತವೆ ಎಂದು ಹೇಳಿ ಕೈತೊಳೆದುಕೊಂಡಿದೆ.
ಒಂದೂವರೆ ತಿಂಗಳಾದರೂ ಇನ್ನೂ ಸಹಾ ಹಣ ಪಾವತಿ ಪ್ರಕ್ರಿಯೆ ನಡೆಯುತ್ತಿದೆಯೆಂದರೆ, ಹಲವು ಅನುಮಾನಗಳನ್ನು ಮೂಡಿಸುತ್ತಿದೆ.