ಮಧುಗಿರಿ : ಅತಿವೃಷ್ಟಿಯಿಂದಾಗಿ ಹಾನಿಗೊಳಗಾಗಿರುವ ರೈತರ ಸಂಕಷ್ಟಗಳಿಗೆ ತಾಲ್ಲೂಕು ಆಡಳಿತ ಶೀಘ್ರವಾಗಿ ಸ್ಪಂದಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಕೊಡಿಗೇನಹಳ್ಳಿ ಹಾಗೂ ಮಿಡಿಗೇಶಿ ಹೋಬಳಿಗಳಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಕೆಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾನಿಯಾಗಿದ್ದ ಸ್ಥಳಗಳಿಗೆ ಹಾಗೂ ರೈತರ ಬೆಳೆಗಳು ನಾಶವಾಗಿದ್ದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು. ಈ ಭಾರಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮಳೆ ಸುರಿದ ಪರಿಣಾಮ ಸಾಕಷ್ಟು ರೈತರ ಜಮೀನುಗಳಲ್ಲಿನ ಬೆಳೆ ಹಾನಿಯಾಗಿದೆ.
ಕೆಲ ಗ್ರಾಮಗಳು ರಸ್ತೆ ಸಂಪರ್ಕ ಕಳೆದು ಕೊಂಡಿವೆ ಹಾಗೂ ಕೆಲ ಜನರ ಮನೆಗಳು ಹಾಗೂ ನಿವೇಶನಗಳು ಹಾಳಾಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಅವರ ಜೊತೆ ಇದ್ದು ಅವರ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯವಾಗ ಬೇಕಾಗಿದೆ. ಯಾರೂ ಸಹ ದೃತಿಗೇಡಬಾರದು ಎಂದ ಅವರು, ನಾನು ಸದಾ ನಿಮ್ಮ ಜೊತೆಯಲ್ಲಿರುತ್ತೇನೆ ಎಂದರು.
ಅಧಿಕಾರಿಗಳು ಹಾನಿಗೊಳಗಾದ ಪ್ರದೇಶಗಳ ಸಮೀಕ್ಷೆ ನಡೆಸಲು ಬಂದಾಗ ರೈತರು ಹಾಗೂ ಸಾರ್ವಜನಿಕರು ಅಗತ್ಯ ಮಾಹಿತಿ ನೀಡಿ ಸೂಕ್ತ ದಾಖಲೆಗಳನ್ನು ಒದಗಿಸಿ ಕೊಡಬೇಕು ಹಾಗೂ ಅಧಿಕಾರಿಗಳು ಸಹ ಶೀಘ್ರವಾಗಿ ಸ್ಪಂದಿಸಿ ನೊಂದ ರೈತರ ಪರವಾಗಿ ನಿಲ್ಲಬೇಕು. ಇತ್ತೀಚೆಗೆ ಹನುಮಂತಪುರ ಗ್ರಾಮದಲ್ಲಿ ತಾತ್ಕಲಿಕವಾಗಿ ಹಳ್ಳಕ್ಕೆ ನಿರ್ಮಿಸಿದ್ದ ಸೇತುವೆಯು ಮೂರನೇ ಬಾರಿ ಕೊಚ್ಚಿ ಹೋಗಿ ಮತ್ತೆ ರಸ್ತೆ ಸಂಪರ್ಕ ಕಡಿತ ಗೊಂಡಿದ್ದು, ನೀರಿನ ಅರಿವು ಕಡಿಮೆಯಾದ ನಂತರ ಸೇತುವೆಯನ್ನು ಪೂರ್ಣ ಪ್ರಮಾಣದಲ್ಲಿ ದುರಸ್ಥಿ ಕಾಮಗಾರಿ ಮಾಡಿಸಿ ಜನರ ಓಡಾಟಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಸುರಿದ ಬಾರಿ ಮಳೆಯಿಂದ ತಾಲೂಕಿನ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿದಿದ್ದು, ಕೊಡಿಗೇನಹಳ್ಳಿ ಹೋಬಳಿಯ ದೊಡ್ಡಮಾಲೂರು ಕೆರೆ, ಮೈದನಹಳ್ಳಿ ಕೆರೆ ಹಾಗೂ ಮಿಡಿಗೇಶಿ ಹೋಬಳಿಯ ಹನುಮಂತಪುರ ಕೆರೆಗಳಿಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕೆ ಎಂ.ಎಸ್.ಮಲ್ಲಿಕಾರ್ಜುನಯ್ಯ ಜಿ.ಪಂ ಸದಸ್ಯ ಜಿ.ಜೆ.ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ತಾಪಂ ಮಾಜಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ, ಮುಖಂಡರಾದ ಎಸ್.ಎನ್.ರಾಜು, ವಿ.ಆರ್.ಭಾಸ್ಕರ್, ಈರಣ್ಣ, ವೆಂಕಟರAಗಾರೆಡ್ಡಿ, ವೇಣುಗೋಪಾಲ್ ರೆಡ್ಡಿ, ವೆಂಕಟರಾಮರೆಡ್ಡಿ, ವಿಜಯ್ ಕುಮಾರ್, ರಾಜಗೋಪಾಲ್, ಚಂದ್ರಶೇಖರ್, ರವಿಕಿರಣ್, ನರೇಶ್, ವಿನಿಪ್ ರೆಡ್ಡಿ, ರಘು, ಡಿ.ಸಿ.ಶಿವಲಿಂಗಯ್ಯ, ಹೊನ್ನಪುರ ದೀಪಕ್ ಹಾಗೂ ಮುಂತಾದವರು ಇದ್ದರು.
***
ಮುಂದಿನ ವಿಧಾನ ಮಂಡಲದ ಅಧೀವೇಶನದಲ್ಲಿ ತಾಲೂಕಿನ ಅನೇಕ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ತಾಲೂಕಿಗೆ ಹೆಚ್ಚಿನ ಪರಿಹಾರ ನೀಡಲು ಸರ್ಕಾರವನ್ನು ಒತ್ತಾಯಿಸಲಾಗುವುದು.
ರಾಜೇಂದ್ರ ರಾಜಣ್ಣ, ವಿಧಾನಪರಿಷತ್ ಸದಸ್ಯರು