Monday, 25th November 2024

ಮುಂದುವರಿದ ಬಿಜೆಪಿ ಬಂಡಾಯ: ನಿರಾಣಿ ವಿರುದ್ಧ ತಿರುಗಿಬಿದ್ದ ಕತ್ತಿ, ಯತ್ನಾಳ್

ಬೆಂಗಳೂರು:

ಬಂಡಾಯ ಸಭೆ ಹುಟ್ಟು ಹಾಕಿದ್ದೇ  ಮುರುಗೇಶ ನಿರಾಣಿ. ಇದೀಗ ಭಿನ್ನಮತೀಯರ ಜೊತೆ ನಾನಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಮುರುಗೇಶ ನಿರಾಣಿ ಮೇಲೆ ಉಮೇಶ್ ಕತ್ತಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ತಿರುಗಿಬಿದ್ದಿದ್ದಾರೆ.

ಅವರು ಕರೆದ ಸಭೆಯಲ್ಲಿ ನಾನಿರಲಿಲ್ಲ ಎಂದು ನಿರಾಣಿ ಹೇಳುತ್ತಿರುವುದಕ್ಕೆ ಈ ಇಬ್ಬರು ನಾಯಕರು ಗರಂ ಆಗಿದ್ದಾರೆ.

ನಾನು ಬಂಡಾಯ ಎದ್ದಿಲ್ಲ ಎಂದು ಹೇಳುತ್ತಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹತ್ತಿರ ಆಗಲು ನಿರಾಣಿ ಯತ್ನಿಸುತ್ತಿದ್ದಾರೆ. ಸಚಿವ ಜಗದೀಶ ಶೆಟ್ಟರ್ ನಿವಾಸದಲ್ಲಿ ನಡೆದ ಸಭೆಗೂ ನಿರಾಣಿಯೇ ಕಾರಣ. ಮೊನ್ನೆ‌ ಉಮೇಶ ಕತ್ತಿ ನಿವಾಸದಲ್ಲಿನ‌ ಸಭೆಗೂ ಮುಗುರೇಶ್ ನಿರಾಣಿಯೇ ಕಾರಣ. ಅಂದಿನ‌ ಸಭೆಗೆ ಬರುತ್ತೇನೆ ಎಂದು ಹೇಳಿ ಕೊನೆ ಕ್ಷಣದಲ್ಲಿ ನಿರಾಣಿ ಕೈಕೊಟ್ಟಿದ್ದರು.

ಮುಖ್ಯಮಂತ್ರಿ ವಿರುದ್ಧ ನಮ್ಮನ್ನೆಲ್ಲ ಎತ್ತಿ ಕಟ್ಟುವ ಸಂಚು ನಿರಾಣಿ ಮಾಡುತ್ತಿದ್ದಾರೆ ಎಂದು ಯತ್ನಾಳ, ಉಮೇಶ ಕತ್ತಿ ಸೇರಿ ಇತರೆ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.

ಭಿನ್ನಮತದ ಬಗ್ಗೆ ಸ್ಪಷ್ಟನೆ ನೀಡಿರುವ ಮುರುಗೇಶ್ ನಿರಾಣಿ ಅವರು, ಉಮೇಶ್ ಕತ್ತಿ, ರಾಮದಾಸ್ ಎರಡೂವರೆ ತಿಂಗಳ ಹಿಂದೆ ನಮ್ಮ ಮನೆಯಲ್ಲಿ   ಇದ್ದದ್ದು ನಿಜ. ಅದು ಈಗ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಆಗಿದೆ. ನಾವು ಸಭೆ ಸೇರಿ,  ಭಿನ್ನಮತೀಯ ಚಟುವಟಿಕೆ ನಡೆಸಿದೆವು, ಅಸಮಾಧಾನ ಇದೆ ಎಂದು ಸುದ್ದಿ ಆಗಿದೆ. ಆದರೆ ಉಮೇಶ್  ಕತ್ತಿ, ರಾಮದಾಸ್ ನಮ್ಮ ಸ್ನೇಹಿತರು. ಉತ್ತರ ಕರ್ನಾಟಕ ಶಾಸಕರು ಈ ಕಡೆ ಬಂದಾಗ ಈ ಭಾಗದ  ಶಾಸಕರ ಮನೆಗೆ, ಅವರು ಉತ್ತರ ಕರ್ನಾಟಕದ ಕಡೆ ಬಂದಾಗ ನಮ್ಮ ಮನೆಗೆ ಬರುವುದು  ಸಾಮಾನ್ಯ. ಅದನ್ನು ‌ಅಸಮಾಧಾನಿತರ ಸಭೆ ಎಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಉಮೇಶ್  ಕತ್ತಿ ಹಿರಿಯರು , ಅವರನ್ನು ಹಿಂದೆ ಸಚಿವ ಸಂಪುಟ ವಿಸ್ತರಣೆ ಮಾಡುವ ಸಂದರ್ಭದಲ್ಲಿಯೇ   ಸಚಿವರನ್ನಾಗಿ ಪರಿಗಣಿಸಬೇಕಿತ್ತು. ಆದರೆ ಕಾರಣಾಂತರದಿಂದ ಪರಿಗಣಿಸಿಲ್ಲ. ದಯವಿಟ್ಟು  ಮುಂದಿನ ಬಾರಿ ಸಚಿವ ಸಂಪುಟ ವಿಸ್ತರಣೆ ‌ಅಥವಾ ಪುನಾರಚನೆ ವೇಳೆ ಪರಿಗಣಿಸಿ ಉಮೇಶ್  ಕತ್ತಿಯವರಿಗೆ ಒಳ್ಳೆಯ ಖಾತೆ ನೀಡಿ, ಪ್ರತಿ ಶಾಸಕನಿಗೂ ಸಚಿವನಾಗುವ ಆಸೆ ಇದ್ದೇ  ಇರುತ್ತದೆ. ಹಾಗೇ ತಮಗೂ ಮಂತ್ರಿಯಾಗುವ ಆಸೆ ಇದೆ. ನನ್ನ ಮಂತ್ರಿ ಮಾಡಿದರೆ ಸರ್ಕಾರ ಹಾಗೂ  ಪಕ್ಷಕ್ಕೆ ಒಳ್ಳೆ ಹೆಸರು ತರುವ ಹಾಗೆ ಕೆಲಸ ಮಾಡುತ್ತೇನೆ. ನನಗೆ ಅಸಮಾಧಾನ ಹಿಂದೆಯೂ  ಇಲ್ಲ, ಈಗಲೂ ಇಲ್ಲ, ಮುಂದೆಯೂ ಇಲ್ಲ ಎಂದು ಮಾಜಿ ಸಚಿವ ಮುರುರೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.

ಆ ಫೋಟೋದಲ್ಲಿರುವುದು ನಾವು ಮತ್ತು ಆ ಮನೆ ನನ್ನದು. ಎರಡು‌ ತಿಂಗಳ ಹಿಂದೆ ತೆಗೆದಿರುವ ಪೋಟೋ ಅದು. ಅಲ್ಲಿ ಯಾವುದೇ ರಾಜಕೀಯ ಚರ್ಚೆ ಅಥವಾ ಮುಖ್ಯಮಂತ್ರಿ ವಿರುದ್ದ ಮಾತುಕತೆಯಾಗಿಲ್ಲ. ನಾವೆಲ್ಲ ಒಂದೇ ಪಕ್ಷದವರು ಹೀಗಾಗಿ ಅಲ್ಲಿ ಕುಶಲೋಪಚಾರಿ ನಡೆದಿದೆಯೇ ಹೊರತು ಯಾವುದೇ ಚರ್ಚೆ ಆಗಿಲ್ಲ ಎಂದು ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದರು.

ದೆಹಲಿಗೆ ಬಾರದಂತೆ ಕಟ್ಟಪ್ಪಣೆ:

ಈ  ಮಧ್ಯೆ ಭಿನ್ನಮತ ಶಮನಕ್ಕೆ ಮತ್ತು ದೂರು ನೀಡಲು ದೆಹಲಿಗೆ ಬಿಜೆಪಿಯ ಒಂದು ತಂಡ ಹೋಗಲು  ಮುಂದಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ದೆಹಲಿಗೆ ಯಾರೂ ಬರಬೇಡಿ ಎಂದು ರಾಜ್ಯ  ನಾಯಕರಿಗೆ ಹೈಕಮಾಂಡ್  ಕಟ್ಟುನಿಟ್ಟಿನ‌ ಸೂಚನೆ ನೀಡಿದೆ.

ಹೈಕಮಾಂಡ್  ಎಲ್ಲವನ್ನು ಗಮನಿಸುತ್ತಿದೆ, ಸುಮ್ಮನೆ ಕುಳಿತಿಲ್ಲ. ಪರ-ವಿರುದ್ಧ  ಶಾಸಕರು ಯಾರೂ  ದೆಹಲಿಗೆ ಬರುವುದು ಬೇಡ. ನಾಯಕತ್ವ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಶೀಘ್ರ  ಇದಕ್ಕೆಲ್ಲ ಇತಿಶ್ರೀ ಹಾಡುತ್ತೇವೆ ಎಂದು ಹೈಕಮಾಂಡ್‌ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.
ಈ  ಮಧ್ಯೆ ಭಿನ್ನಮತದ ವಿಷಯ ತಿಳಿಯುತ್ತಿದ್ದಂತೆ ಪಕ್ಷದ ಹೈಕಮಾಂಡ್ ಯಡಿಯೂರಪ್ಪ ಅವರ  ಬೆನ್ನಿಗೆ ನಿಂತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಗೃಹ ಸಚಿವ  ಅಮಿತ್ ಷಾ ಅವರು ಯಡಿಯೂರಪ್ಪ ಅವರಿಗೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ.

ರಾಷ್ಟ್ರೀಯ  ನಾಯಕರೊಬ್ಬರ ಮೂಲಕ ಹೈಕಮಾಂಡ್ ಅನ್ನು ಸಂಪರ್ಕಿಸಲು ರಾಜ್ಯದ ಕೆಲವು ಶಾಸಕರು  ಯತ್ನಿಸಿದ್ದರು. ಆಗ ಹೈಕಮಾಂಡ್, ಸದ್ಯ ಕೊರೋನಾ ನಿಯಂತ್ರಣದ ಕಡೆ ಗಮನಹರಿಸಿ, ಕೊರೋನಾ  ವಿಚಾರ ಹೊರತುಪಡಿಸಿ ಉಳಿದ ಯಾವುದೇ ರಾಜಕೀಯ ಚಟುವಟಿಕೆಗೆ ಅವಕಾಶ ಇಲ್ಲವೆಂದು  ಸ್ಪಷ್ಟಪಡಿಸಿದೆ ಎಂದು ತಿಳಿದುಬಂದಿದೆ.

ಇದಾದ ಬೆನ್ನಲ್ಲೇ ನಿನ್ನೆ ಅಮಿತ್ ಶಾ ಅವರು ಮುಖ್ಯಮಂತ್ರಿಯವರಿಗೆ ದೂರವಾಣಿ ಕರೆ ಮಾಡಿ, ದೆಹಲಿಗೆ ಯಾರೂ ಬಾರದಂತೆ ಖಡಕ್‌ ಸಂದೇಶ ನೀಡಿದ್ದರು. ಮುಖ್ಯಮಂತ್ರಿ ಪರ ಮತ್ತು ವಿರೋಧ ಇರುವ ಯಾರು ಕೂಡ ದೆಹಲಿಗೆ ಬರುವುದು ಬೇಡ ಎಂದು  ಸೂಚಿಸಿದ್ದಾರೆ.

ಈ ಮಧ್ಯೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಶಂಕರ್ ಪಾಟೀಲ್ ಪ್ರತಿಕ್ರಿಯಿಸಿ, ಕೋವಿಡ್ ಸಂದರ್ಭದಲ್ಲಿ ಊಟಕ್ಕೆ ಸೇರುವುದು ಸಹಜ. ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ  ಸೇರಿ ಉತ್ತಮ ಕೆಲಸ ಮಾಡುತ್ತಿದ್ದಾರೆ. 18-20 ತಾಸುಗಳ ಕಾಲ ಯಡಿಯೂರಪ್ಪ ಅವರು ಕೆಲಸ  ಮಾಡುತ್ತಿದ್ದಾರೆ. ದೇಶದಲ್ಲೇ ನಂಬರ್ ಒನ್ ಮುಖ್ಯಮಂತ್ರಿ ಹೆಸರು ಪಡೆಯುತ್ತಿದ್ದಾರೆ.  ಅವರ ನೇತೃತ್ವದ ಸರ್ಕಾರ ಸುಭದ್ರವಾಗಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಉತ್ತಮವಾಗಿ ಆಡಳಿತ  ಮಾಡಲಾಗುತ್ತಿದೆ. ಸರ್ಕಾರ ಮೂರು ವರ್ಷ ಅಧಿಕಾರ ಪೂರೈಸಲಿದೆ. ಸುಭಾಷ್ ಗುತ್ತೇದಾರ್,  ಬಸವರಾಜ್ ಮೊತ್ತಿಮೂಡ್ ಸೇರಿದಂತೆ ಎಲ್ಲರ ಜೊತೆ ನಾನೇ ಮಾತನಾಡಿದ್ದೇವೆ. ಪಕ್ಷದಲ್ಲಿ   ಯಾವುದೇ ಗೊಂದಲ ಇಲ್ಲ. ನಿನ್ನೆ ಮುರುಗೇಶ್ ನಿರಾಣಿ ಕೂಡ ಮುಖ್ಯಮಂತ್ರಿಯವರನ್ನು ಭೇಟಿ  ಮಾಡಿದ್ದರು. ಸಭೆ ಸೇರಿದ್ದವರೂ ಯಾರು ಕೂಡ ಸೇರಿಲ್ಲ ಎಂದು ಹೇಳಿಲ್ಲ. ಉತ್ತರ ಕರ್ನಾಟಕದ  ಊಟ ಮಾಡಲು ಒಟ್ಟಿಗೆ ಸೇರುವುದು ಸಹಜ, ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.

ಈ ಮಧ್ಯೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎಸ್. ಅಶ್ವತ್ಥನಾರಾಯಣ, ಪಕ್ಷದಲ್ಲಿ ಯಾರಿಗಾದರೂ ಅಸಮಾಧಾನವಿದ್ದರೆ ಅದನ್ನು ಅವರು ಮುಖ್ಯಮಂತ್ರಿ ಜೊತೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ಸಭೆ ನಡೆಸುವುದು ಸರಿಯಲ್ಲ. ಕೆಲವರಿಗೆ ಕೆಲವೊಂದು ಅಪೇಕ್ಷೆಗಳಿರುತ್ತವೆ. ಅವುಗಳನ್ನು ಕೇಳಲು ಬೇರೆ ಮಾರ್ಗಗಳಿವೆ ಎಂದು ಪಕ್ಷದ ಬಂಡಾಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.