ಎತ್ತಿನಹೊಳೆ ಪೈಪ್ಲೈನ್ ಕೆಲಸದ ಹಣ.. ಸಿನಿಮೀಯ ರೀತಿಯಲ್ಲಿ ನಕಲಿ ಕೀಯಿಂದ ಕಳ್ಳತನ
ಕೊರಟಗೆರೆ: ಎತ್ತಿನಹೊಳೆ ಪೈಪ್ಲೈನ್ ಕಾಮಗಾರಿಯ ಖರ್ಚುವೆಚ್ಚಕ್ಕಾಗಿ ಶಿವಗಂಗಾ ಚಿತ್ರಮಂದಿರದ ಮುಂಭಾಗದ ಬಾಡಿಗೆ ಮನೆಯಲ್ಲಿ ಶೇಖರಣೆ ಮಾಡಲಾಗಿದ್ದ ೩೫ಲಕ್ಷ ೨೦ ಸಾವಿರ ನಗದು ಹಣವನ್ನು ಕಳ್ಳರ ತಂಡವೊ0ದು ನಕಲಿ ಕೀ ಬಳಸಿ ಹಗಲು ದರೋಡೆ ಮಾಡಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಕೊರಟಗೆರೆ ಪಟ್ಟಣದ ಶಿವಗಂಗಾ ಚಿತ್ರಮಂದಿರದ ಮುಖ್ಯರಸ್ತೆಯ ಸಮೀಪವೇ ಇರು ವಂತಹ ಬಾಡಿಗೆ ಮನೆಯಲ್ಲಿ ಪಿಎಲ್ಆರ್ ಕಂಪನಿಯ ಲೆಕ್ಕಾಧಿಕಾರಿ ಕಳೆದ ಎರಡು ತಿಂಗಳಿ0ದ ವಾಸವಿದ್ದಾರೆ. ಎತ್ತಿನಹೊಳೆ ಯೋಜನೆಯ ಕಾಮಗಾರಿಯ ಕಾರ್ಮಿಕರು ಮತ್ತು ಡಿಸೇಲ್ ಖರ್ಚಿಗಾಗಿ ಶೇಖರಣೆ ಮಾಡಲಾಗಿದ್ದ ಹಣವು ಕಳ್ಳತನ ಆಗಿದೆ.
ಸುವರ್ಣಮುಖಿ ನದಿಯ ದಡಕ್ಕೆ ಹೊಂದಿಕೊ0ಡ ಬಾಡಿಗೆ ಮನೆಯ ಬೀಗ ಮತ್ತು ಡೋರ್ಲಾಕನ್ನು ನಕಲಿ ಕೀಯಿಂದ ತೆಗೆದು ಕಳ್ಳರತಂಡ ಹೊಂಚುಹಾಕಿ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಪಿಎಲ್ಆರ್ ಕಂಪನಿಯ ಲೆಕ್ಕಾಧಿಕಾರಿ ಅವಿನಾಶ್ ಬ್ಯಾಗಿನಲ್ಲಿ ಶೇಖರಣೆ ಮಾಡಿದ್ದ ೩೫ಲಕ್ಷ ೨೦ಸಾವಿರ ನಗದು ಹಣವನ್ನು ಕಳ್ಳರತಂಡ ಸಿನಿಮೀಯ ರೀತಿಯಲ್ಲಿ ದೋಚಿಕೊಂಡು ಪರಾರಿ ಆಗಿದ್ದಾರೆ.
ಕೊರಟಗೆರೆ ಪಟ್ಟಣದ ಹೃದಯ ಭಾಗದಲ್ಲಿ ಶನಿವಾರ ನಡೆದಿರುವ ದೊಡ್ಡಮಟ್ಟದ ಕಳ್ಳತನದಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸಿಸಿಟಿವಿ ಮತ್ತು ಮನೆಯ ಭದ್ರತೆಯ ಬಗ್ಗೆ ನಿರ್ಲಕ್ಷ ವಹಿಸಿರುವ ಅವಿನಾಶ್ ಮೇಲೆಯು ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಪೊಲೀಸರ ತಂಡ ಮನೆಯ ಭದ್ರತೆ ಮತ್ತು ಹೊರಗಡೆಯ ಸಿಸಿಟಿವಿಯ ದೃಶ್ಯವಳಿಯನ್ನು ಸಂಗ್ರಹಿಸಿ ತನಿಖೆ ಪ್ರಾರಂಭಿಸಿದ್ದಾರೆ.
ಕೊರಟಗೆರೆ ಪಟ್ಟಣದಲ್ಲಿ ಕಳ್ಳತನ ನಡೆದಿರುವ ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ವೆಂಕಟೇಶನಾಯ್ಡು, ಕೊರಟಗೆರೆ ಸಿಪಿಐ ಸುರೇಶ್, ತುಮಕೂರಿನ ಬೆರಳಚ್ಚು ತಜ್ಞರ ತಂಡ ಮತ್ತು ಶ್ವಾನದಳದ ಸಿಬ್ಬಂದಿವರ್ಗ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣ ದಾಖಲಾಗಿದೆ.