ತುಮಕೂರು: ಎಣ್ಣೆ ಹೊಡೆದುಕೊಂಡು ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಮೂಲಕ ಶಿಕ್ಷಕಿಯೊಬ್ಬರು ಅನುಚಿತ ವರ್ತನೆ ತೋರಿದ್ದಾರೆ.
ತಾಲೂಕಿನ ಚಿಕ್ಕಸಾರಂಗಿ ಸರಕಾರಿ ಶಾಲೆಯ ಶಿಕ್ಷಕಿ ಗಂಗಲಕ್ಷ್ಮಮ್ಮ ಕಳೆದ 25 ವರ್ಷಗಳಿಂದ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಳೆ. ಕಳೆದ ಐದಾರುರ ವರ್ಷದಿಂದ ಮದ್ಯ ವ್ಯಸನಕ್ಕೆ ದಾಸಳಾಗಿದ್ದರು.
ಮದ್ಯ ಸೇವಿಸಿ ಮಕ್ಕಳಿಗೆ ಪಾಠ ಮಾಡುವುದು, ಸಹದ್ಯೋಗಿಗಳು, ಪೋಷಕರೊಂದಿಗೆ ಕಿರಿಕ್ ಮಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಸಾಕಷ್ಟು ಬಾರಿ ಸಹೋದ್ಯೋಗಿಗಳು, ಪೋಷಕರು ಮನವರಿಕೆ ಮಾಡಿಕೊಟ್ಟು ತಪ್ಪನ್ನು ತಿದ್ದಿಕೊಳ್ಳುವಂತೆ ಸಲಹೆ ನೀಡಿದ್ದರು.
ಯಾವುದಕ್ಕೂ ಲೆಕ್ಕಿಸದೆ ಶಾಲೆಯಲ್ಲಿಯೇ ಮದ್ಯ ಇಟ್ಟುಕೊಂಡು ರಾಜಾರೋಷವಾಗಿ ಎಣ್ಣೆ ಕುಡಿದು ಪಾಠ ಮಾಡುತ್ತಿದ್ದರು. ಈ ಬಗ್ಗೆ ಪೋಷಕರು ಬಿಇಒ ಹನುಮಾನಾಯ್ಕ್ ಅವರಿಗೆ ದೂರು ನೀಡಿದ್ದರು.
ಬಿಇಒ ಶಾಲೆಗೆ ಆಗಮಿಸಿ ಪರಿಶೀಲಿಸಿದಾಗ ಶಿಕ್ಷಕಿ ಗಂಗಲಕ್ಷ್ಮಮ್ಮ ಕುಳಿತುಕೊಳ್ಳುವ ಟೇಬಲ್ ನಲ್ಲಿ ಮದ್ಯದ ಬಾಟಲ್ ಪತ್ತೆ ಯಾಗಿವೆ. ಇದರಿಂದ ಗಾಬರಿಗೊಂಡ ಶಿಕ್ಷಕಿ ಆತ್ಮಹತ್ಯೆ ನಾಟಕವಾಡಿದ್ದಾರೆ. ಮದ್ಯ ಸೇವಿಸಿ ಪಾಠ ಮಾಡುವ ಶಿಕ್ಷಕಿಯಿಂದ ಮಕ್ಕಳು ಹಾಳಾಗಿಹೋಗುತ್ತಾರೆ, ಕೂಡಲೇ ಕ್ರಮಕೈಗೊಳ್ಳಿ ಎಂದು ಪೋಷಕರು ಬಿಇಒಗೆ ಒತ್ತಾಯಿಸಿದ್ದಾರೆ. ಶಿಕ್ಷಕಿಯನ್ನು ವಿಚಾರಣೆಗೆ ಒಳಪಡಿಸಿದ್ದು ಬಿಇಒ ಮುಂದಿನ ಕ್ರಮಕೈಗೊಂಡಿದ್ದಾರೆ.