Tuesday, 26th November 2024

ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ಅನೇಕರು ಸಂಪರ್ಕದಲ್ಲಿದ್ದಾರೆ: ಈಶ್ವರ್ ಖಂಡ್ರೆ

ತುಮಕೂರು: ಅನೇಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಅವರ ಅರ್ಜಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಪರೀಶೀಲನೆ ಮಾಡುತ್ತಿದೆ. ನಮ್ಮ ಭಾಗದಲ್ಲಿ ಕಾಂಗ್ರೆಸ್ ಸೇರುವ ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ ಮುಂದೆ ಏನಾಗುತ್ತೆ ಕಾದು ನೋಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಬಗ್ಗೆ ಬಿಜೆಪಿಗೆ ಹೆದರಿಕೆ ಇದೆ. ಅದಕ್ಕಾಗಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ದೊಡ್ಡ ಸ್ಥಾನ ದಲ್ಲಿ ಇರುವವರು ‘ತಾಕತ್ತು, ಧಮ್’ ಎಂಬ ಮಾತುಗಳನ್ನು ಆಡುವುದು ಪ್ರಜಾ ಪ್ರಭುತ್ವ ದಲ್ಲಿ ಎಷ್ಟು ಸರಿ ಎಂಬುದನ್ನು ಯೋಚನೆ ಮಾಡಬೇಕು ಎಂದು ಹೇಳಿದರು.
ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ನಿರುದ್ಯೋಗ ಹೆಚ್ಚಾಗಿದೆ. ಯುವಕರು ದಾರಿ ತಪ್ಪುತ್ತಿದ್ದಾರೆ. ಅತಿವೃಷ್ಟಿಯಿಂದ ಲಕ್ಷಾಂತರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇಂತಹ ಸಮಯದಲ್ಲಿ ಯಾವ ಪುರುಷಾ ರ್ಥಕ್ಕೆ ‘ಜನಸ್ಪಂದನ’ ಮಾಡಿದ್ದಾರೆ. ಮಳೆ ಹಾನಿಯ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡುತ್ತಿಲ್ಲ. ಮನೆಗಳ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ. ರೈತರ ಆತ್ಮಹತ್ಯೆಗಳು ನಿಲ್ಲುತ್ತಿಲ್ಲ.
ಜನ ಸಾಯುತ್ತಿದ್ದರೆ, ಸಚಿವರು ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ೮ ವರ್ಷ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ೪ ವರ್ಷ ಆಗಿದೆ. ಆದರೂ ಉದ್ಯೋಗ ಸೃಷ್ಠಿ ಮಾಡಲು ಸಾಧ್ಯವಾಗಿಲ್ಲ.
ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ೧ ಲಕ್ಷದವರೆಗೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ ಈವರೆಗೆ ಯಾವುದೇ ರೀತಿಯ ರೈತರ ಸಾಲ ಮನ್ನಾ ಮಾಡಲಾಗಿಲ್ಲ. ನೀರಾವರಿ ಯೋಜನೆಗೆ ಒಂದೂವರೆ ಲಕ್ಷ ಕೋಟಿ ಕೊಡುವುದಾಗಿ ಹೇಳಿದ್ದರು. ಈಗ ನೀರಾವರಿ ಯೋಜನೆಗೆ ಎಷ್ಟು ಕೋಟಿ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದ ಅವರು, ಆಪರೇಷನ್ ಕಮಲದಿಂದ ದುರಾಡಳಿತ ಮಾಡಿ ದೇಶ ಮತ್ತು ರಾಜ್ಯದ ಆರ್ಥಿಕತೆ ಸಂಪೂರ್ಣ ಕುಸಿದು ಹೋಗಿದೆ ಎಂದರು.
ಜಿಎಸ್ ಟಿ ವಿತರಣೆ, ಕೋವಿಡ್ ಸಮಯದಲ್ಲಿ ಆಕ್ಸಿಜನ್ ಕೊಡುವುದರಲ್ಲಿ ಅನ್ಯಾಯವಾಯಿತು. ಯಾವುದಕ್ಕೂ ಬಿಜೆಪಿ ಮುಖಂಡರು ತುಟಿ ಬಿಚ್ಚಲಿಲ್ಲ. ಬಿಜೆಪಿಯರು ಜನರಿಗೆ ಸ್ಪಂದನೆ ಮಾಡುವುದನ್ನು ಕಲಿಯಲಿ. ಕಾರ್ಯಕ್ರಮದಲ್ಲಿ ಮೃತಪಟ್ಟ ತುಮಕೂರು ತಾಲೂಕಿನ ಬಿಜೆಪಿ ಕಾರ್ಯಕರ್ತರ ಕುಟುಂಬಕ್ಕೆ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು. ಭಾರತ್ ಜೊಡೊ ಯಾತ್ರೆಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕ್ರೈಸ್ತ ಪಾದ್ರಿ ಜಾರ್ಜ್ ಪೊನ್ನಯ್ಯ ಅವರನ್ನು ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸ್ವ ಧರ್ಮದಲ್ಲಿ ನಿಷ್ಠೆ ಇಟ್ಟುಕೊಂಡು, ಅನ್ಯ ಧರ್ಮದ ಬಗ್ಗೆ ಗೌರವ ತೋರಬೇಕು.
ಜಾತ್ಯತೀತ ನಿಲುವುನೊಂದಿಗೆ ಮುಂದೆ ಸಾಗಬೇಕು ಎಂಬುವುದು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ. ಯಾರೇ ಪ್ರತ್ಯೇಕತಾವಾದಿಗಳು ಇದ್ದರೂ ಅವರಿಗೆ ನಮ್ಮ ಸಮರ್ಥನೆಯಿಲ್ಲ. ಪಾದಯಾತ್ರೆ ಮಾಡುವ ಸಮಯದಲ್ಲಿ ವಿವಿಧ ವಿಚಾರಗಳು ಉಳ್ಳವರು ಭೇಟಿ ಯಾಗುತ್ತಾರೆ. ಅವರ ಜೊತೆ ಮಾತನಾಡಿದರೆ ಅವರಿಗೆ ಬೆಂಬಲ ನೀಡಿದ ಹಾಗೆ ಆಗುತ್ತಾ? ಎಂದು ಪ್ರಶ್ನಿಸಿದರು.