ಬೆಂಗಳೂರು:
ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಗೆ ಆರಿಸಿ ಕಳುಹಿಸಬೇಕು ಎಂದು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೂ ಕಾಂಗ್ರೆಸ್ ನಾಯಕರ ಮಾತ್ರವಲ್ಲ ಬೇರೆ ಪಕ್ಷದ ನಾಯಕರೂ ನಮಗೆ ಒತ್ತಡ ಹೇರಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಸೋಮವಾರ ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆ ನಂತರ ಹಾಗೂ ನಾಮಪತ್ರ ಸಲ್ಲಿಸುವ ಮುನ್ನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದಿಷ್ಟು…
‘ಮಲ್ಲಿಕಾರ್ಜುನ ಖರ್ಗೆ ಅವರು ಕೇವಲ ರಾಜ್ಯಕ್ಕೆ ಸೀಮಿತವಾದ ನಾಯಕರಲ್ಲ. ರಾಷ್ಟ್ರಕ್ಕೆ ಸೀಮಿತವಾದ ನಾಯಕ. ಅರಲ್ಲಿ ರಾಷ್ಟ್ರ ನಾಯಕನ ಗುಣಗಳಿವೆ. ಹೀಗಾಗಿ ಅವರು ರಾಷ್ಟ್ರದ ಆಸ್ತಿ. ಕಳೆದ ಐದು ವರ್ಷಗಳ ಕಾಲ ಅವರು ವಿರೋಧ ಪಕ್ಷದಲ್ಲಿದ್ದು ಮಾಡಿದ ಕಾರ್ಯ ಹಾಗೂ ಅವರ ಅನುಭವ ಅತ್ಯುತ್ತಮವಾದುದು. ಅದಕ್ಕೆ ಪರ್ಯಾಯವಿಲ್ಲ. ಅವರ ಕಾರ್ಯ ನೋಡಿ ದೇಶದ ಮೂಲೆ ಮೂಲೆಯಿಂದ ಬೇರೆ ಪಕ್ಷಗಳ ನಾಯಕರೂ ಕೂಡ ಖರ್ಗೆ ಅವರನ್ನು ರಾಜ್ಯಸಭೆಯಿಂದ ಆರಿಸಿ ಸಂಸತ್ತಿಗೆ ಕಳುಹಿಸಬೇಕು ಎಂದು ಒತ್ತಡ ಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರೆಲ್ಲರೂ ಕೂತು ಚರ್ಚೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬಂದೆವು. ನಮ್ಮ ಒಮ್ಮತದ ನಿರ್ಧಾರ ಕಂಡು ನಮ್ಮ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಖುಷಿಪಟ್ಟು ಎರಡನೇ ಮಾತಿಗೆ ಅವಕಾಶ ನೀಡದೇ ಖರ್ಗೆ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತು. ಇದರಿಂದ ದೇಶದ ಎಲ್ಲ ಕಾರ್ಯಕರ್ತರಿಗೆ ಸಂತೋಷ ತಂದಿದೆ.
ಮುಂದಿನ ದಿನಗಳಲ್ಲಿ ರಾಜ್ಯದಿಂದ ಆಯ್ಕೆಯಾಗುವ ಖರ್ಗೆ ಅವರು ರಾಷ್ಟ್ರದ ಎಲ್ಲ ವರ್ಗದ ಜನರ ಸಮಸ್ಯೆಗೆ ಧ್ವನಿಯಾಗಿ ಹೋರಾಟ ಮಾಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ನಮ್ಮ ಪಕ್ಷಕ್ಕೆ ಶಕ್ತಿಯಾಗಿರುವ ಖರ್ಗೆ ಅವರನ್ನು ರಾಜ್ಯಸಭೆಗೆ ಕಳುಹಿಸಲು ಅವಕಾಶ ಮಾಡಿಕೊಟ್ಟ ನಮ್ಮ ನಾಯಕಿ ಸೋನಿಯಾ ಗಾಂಧಿ ಅವರಿಗೆ ನಮ್ಮ ಶಾಸಕಾಂಗ ಪಕ್ಷದ ನಾಯಕರ ನೇತೃತ್ವದಲ್ಲಿ ಎಲ್ಲ ಶಾಸಕರು ಅಭಿನಂದನೆ ಸಲ್ಲಿಸಲು ತಿರ್ಮಾನಿಸಿದ್ದು, ಇದನ್ನು ಅವರಿಗೆ ಕಳುಹಿಸಿಕೊಡುತ್ತೇವೆ.’
ಸೋನಿಯಾ ಗಾಂಧಿ ಅವರ ತೀರ್ಮಾನವೇ ಅಂತಿಮ:
ರಾಜ್ಯಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಬೆಂಬಲಿಸುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಈ ವಿಚಾರದಲ್ಲಿ ನಮ್ಮ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ತೆಗೆದುಕೊಳ್ಳುವ ವಿಚಾರದಲ್ಲಿ ನಾವು ಸ್ಥಳೀಯ ನಾಯಕರು ಆಕ್ಷೇಪ ಮಾಡುವುದಿಲ್ಲ. ಅವರು ನಮ್ಮ ಜತೆ ಚರ್ಚೆ ಮಾಡಿದ್ದಾರೆ. ಆದರೆ ಯಾವ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂದು ಅವರೇ ತೀರ್ಮಾನಿಸುತ್ತಾರೆ. ಮಾಜಿ ಪ್ರಧಾನಿಯಾದವರನ್ನು ಆಯ್ಕೆ ಮಾಡುವ ಬಗ್ಗೆ ನಾನು ಮಾತನಾಡುವುದಲ್ಲ.
ಮಾಜಿ ಮುಖ್ಯಮಂತ್ರಿಗಳು ಅವರ ಅಭಿಪ್ರಾಯ ತಿಳಿಸಿದ್ದಾರೆ ಎಂದರೆ ನೀವೆ ತಿಳಿದುಕೊಳ್ಳಿ. ನಾವು ದೇಶದ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆಯೇ ಹೊರತು ವೈಯಕ್ತಿಕ ವಿಚಾರ ಬರುವುದಿಲ್ಲ. ರಾಷ್ಟ್ರಕ್ಕೆ ಸಂಬಂಧಿಸಿದಂತೆ ರಾಷ್ಟ್ರದ ನಾಯಕರು ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಅದಕ್ಕೆ ನಾವು ಬದ್ಧರಾಗಿದ್ದೇವೆ. ಅವರು ತಮ್ಮ ಟ್ವೀಟ್ ನಲ್ಲಿ ಸೋನಿಯಾ ಗಾಂಧಿ ಅವರ ಹೆಸರು ಪ್ರಸ್ತಾಪಿಸಿರುವುದು ಅವರ ದೊಡ್ಡಗುಣ. ನಾನು ಹಾಗೂ ನಮ್ಮ ಶಾಸಕಾಂಗ ಪಕ್ಷದ ನಾಯಕರು ಈಗಾಗಲೇ ಹೇಳಿದ್ದೇವೆ, ನಮ್ಮ ರಾಷ್ಟ್ರದ ನಾಯಕರು ಏನು ಹೇಳ್ತಾರೋ ಅದನ್ನು ನಾವು ಪಾಲಿಸುತ್ತೇವೆ. ಇನ್ನು ಅದರ ಬಗ್ಗೆ ಚರ್ಚೆ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದ ತತ್ವ ಹಾಗೂ ಸಿದ್ಧಾಂತ ಉಳಿದುಕೊಳ್ಳುವುದು ಮುಖ್ಯ.
*ನಾವು ಬಿಜೆಪಿ ಬೆಂಬಲಿಸುವ ಪ್ರಶ್ನೆ ಇಲ್ಲ:*
ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು ಜಾತ್ಯಾತೀತ ಸಿದ್ದಾಂತವನ್ನು ಅನುಸರಿಸಿಕೊಂಡು ಬಂದಿದ್ದೇವೆ. ಬಿಜೆಪಿ ಆಂತರಿಕ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡಬಾರದು ಎಂದು ನಮ್ಮ ಪಕ್ಷ ಈಗಾಗಲೇ ತೀರ್ಮಾನಕ್ಕೆ ಬಂದಿದೆ. ಜಾತ್ಯಾತೀತ ಪಕ್ಷಕ್ಕೆ ಪ್ರಯೋಜನವಾಗಬೇಕು, ನಾವು ಕೇವಲ ಒಬ್ಬ ಅಭ್ಯರ್ಥಿಯನ್ನು ಮಾತ್ರ ಆಯ್ಕೆ ಮಾಡಿದ್ದು, ನಾವು ಬಿಜೆಪಿ ಬೆಂಬಲಿಸುವುದಿಲ್ಲ.
ನಮ್ಮ ರಾಷ್ಟ್ರೀಯ ನಾಯಕರು ನನಗೆ ಅಗತ್ಯ ವಿಚಾರಗಳನ್ನು ತಿಳಿಸಿದ್ದಾರೆ. ಅದನ್ನು ನಾನು ಬಹಿರಂಗವಾಗಿ ಚರ್ಚಿಸುವುದಿಲ್ಲ. ನಾನು ನಮ್ಮ ಎಲ್ಲ ಶಾಸಕರಿಗೂ ನಿರ್ದೇಶನ ನೀಡಿದ್ದು, ಯಾವುದೇ ಶಾಸಕರು ಬಿಜೆಪಿ ನಾಯಕರು, ಮಂತ್ರಿಗಳ ಜತೆ ಸಂಪರ್ಕ ಇಟ್ಟುಕೊಳ್ಳಬಾರದು. ಅವರು ಅಭಿವೃದ್ಧಿ ಕಾರ್ಯದ ಹೆಸರಲ್ಲಿ ಕರೆದು ನಿಮ್ಮನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಾರೆ. ನಿಮ್ಮ ಹೆಸರು ದುರುಪಯೋಗ ಮಾಡಿಕೊಳ್ಳುತ್ತಾರೆ. ಹೀಗಾಗಿ ಯಾರೂ ಕೂಡ ಅವರ ಜತೆ ಹೋಗಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದ್ದೇನೆ. ನಮ್ಮ ರಾಷ್ಟ್ರೀಯ ನಾಯಕರು ರಾಷ್ಟ್ರೀಯ ನಾಯಕರ ಜತೆ ಮಾತನಾಡುತ್ತಾರೆ, ಅವರ ಆದೇಶ ನಾವು ಪಾಲಿಸುತ್ತೇವೆ.
*ಧನ್ಯವಾದ ಅರ್ಪಿಸಿದ ಖರ್ಗೆ:*
ರಾಜ್ಯಸಭೆಗೆ ನಮ್ಮನ್ನು ಆಯ್ಕೆ ಮಾಡಲು ನಿರ್ಧರಿಸಿರುವ ಎಐಸಿಸಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತುಂಬು ಹೃದಯದ ಧನ್ಯವಾದಗಳು ಹಾಗೂ ಕೃತಜ್ಞತೆ ಸಲ್ಲಿಸುತ್ತೇನೆ.
ಚುನಾವಣೆ ನಡೆದರೆ ಕರ್ನಾಟಕ ವಿಧಾನಸಭೆ ಎಲ್ಲ ಶಾಸಕರು ನನಗೆ ಮತ ಹಾಕಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ನಾಯಕರು ನನ್ನ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಅಪೇಕ್ಷೆ ಉಲಿಸಿಕೊಳ್ಳುವಂತೆ ಮುಂದಿನ ದಿನಗಳಲ್ಲಿ ನಡೆದುಕೊಳ್ಳುತ್ತೇನೆ.