ತುಮಕೂರು : ಮನುಷ್ಯ ಆರೋಗ್ಯವಂತನಾಗಿರಲು ಕೇವಲ ಪೌಷ್ಟಿಕ ಆಹಾರ ಇದ್ದರೆ ಸಾಲದು, ದೈಹಿಕವಾಗಿ ಮತ್ತು ಮಾನಸಿಕ ವಾಗಿಯೂ ಸಹ ಸದೃಢನಾಗಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಅವರು ತಿಳಿಸಿದರು.
ಜಿಲ್ಲಾ ಬಲಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಹಭಾಗಿತ್ವದಲ್ಲಿ ‘ಪೌಷ್ಟಿಕ ಆಹಾರ ಕುರಿತು ವಿದ್ಯಾರ್ಥಿಗಳಿಗೆ ಅರಿವು ಕಾರ್ಯಾಗಾರ’ ಹಾಗೂ ‘ಪೋಷಣ್ ಮಾಸಾಚಾರಣೆ ಮಾತೃ ವಂದನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ಮತ್ತು ಗರ್ಭಿಣಿ ಬಾಣಂತಿಯರು ಮಾನಸಿಕ ಮತ್ತು ದೈಹಿಕ ವಾಗಿ ಆರೋಗ್ಯ ವಾಗಿರಲು, ಮಾನಸಿಕ ಸ್ಥಿತಿ ಹಾಗೂ ಆಹಾರಗಳು ಉತ್ತಮವಾಗಿರಬೇಕು. ಮನೆಯಲ್ಲಿ ಮಾಡುವ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯ ಕಾಪಾಡಿಕೊಂಡು, ಮಾನಸಿಕ ಮತ್ತು ದೈಹಿಕ ಆರೋಗ್ಯಕರ ಸಮಾಜವನ್ನು ಸೃಷ್ಟಿಸಬೇಕಾಗಿದೆ ಎಂದರಲ್ಲದೆ, ಮಕ್ಕಳು ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು, ತಾಳ್ಮೆ, ಮಾನವೀಯ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ತಜ್ಞರು ಹಾಗೂ ಪ್ರಾಂಶುಪಾಲರಾದ ಡಾ. ರಜನಿ ಮಾತನಾಡಿ, ಇಂದಿನ ಮಕ್ಕಳ ದೈಹಿಕ ಮತ್ತು ಮಾನಸಿಕ ಸ್ಥಿತಿ ಸರಿಯಾಗಿರಬೇಕಾದರೆ ತಿನ್ನುವ ಆಹಾರ ಪಾದಾರ್ಥಗಳು ಸಾತ್ವಿಕವಾಗಿರಬೇಕು. ಅನಾರೋಗ್ಯಕರ ಆಹಾರ ಪದಾರ್ಥಗಳ ಬಳಕೆ ಕಡಿಮೆ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಹಾಗೂ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳು ನಾರಿನಾಂಶ ಮತ್ತು ನೀರಿನಾಂಶ ಇರುವ ಆಹಾರಗಳನ್ನು ಹೆಚ್ಚು ತಿನ್ನಿ ಎಂದರು.
.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ್ ಮಾತನಾಡಿ, ಅಂಗನವಾಡಿ ಹಾಗೂ ಮನೆಗಳಲ್ಲಿ ಕೈತೋಟಗಳನ್ನು ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ. ದೇಶದಲ್ಲಿ ಹೆಚ್ಚಾಗಿ ಮಹಿಳೆಯರು ಅನಿಮಿಯದಿಂದ ಬಳಲು ತ್ತಿದ್ದು, ಅನಿಮಿಯ ಮುಕ್ತ ಭಾರತವನ್ನು ಮಾಡಬೇಕಾಗಿದೆ. ಉಚಿತವಾಗಿ ಶಾಲೆಗಳಲ್ಲಿ ಐರನ್ ಮಾತ್ರೆಗಳನ್ನು ನೀಡುತ್ತಿದ್ದು ಸದುಪಯೋಗ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಕಲ್ಯಾಣಾಧಿಕಾರಿ ಪವಿತ್ರ, ಜಿಲ್ಲಾ ನಿರೂಪಣಾಧಿಕಾರಿ ಶಿವಕುಮಾರಯ್ಯ, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ತಜ್ಞರಾದ ರಾಧಾ, ಕಾರ್ಯಕ್ರಮ ಸಂಯೋಜಕರಾದ ಮಮತಾ, ಬಾಲ ಭವನ ಸಮಿತಿ ಸದಸ್ಯರಾದ ಬಸವಯ್ಯ ಸೇರಿದಂತೆ ಮತ್ತಿತರ ಅಧಿಕಾರಿಗಳು, ಜಿಲ್ಲೆಯ ಅಂಗನವಾಡಿ ಮತ್ತು ಶಾಲಾ ಶಿಕ್ಷಕರು ಹಾಗೂ ಮಕ್ಕಳು ಹಾಜರಿದ್ದರು.