Wednesday, 11th December 2024

ಲಾರ್ಡ್ಸ್‌ನಲ್ಲಿನ ವೈಫಲ್ಯಕ್ಕೆ ಪಾಂಟಿಂಗ್‌ ಕಾಲೆಳೆದಿದ್ದ  ಅಗರ್ಕರ್‌

ದೆಹಲಿ:
ಟೀಮ್‌ ಇಂಡಿಯಾ ಕಂಡ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಮುಂಬೈನ‌ ಅಜಿತ್‌ ಅಗರ್ಕರ್‌ ಸಹ ಒಬ್ಬರು. ಈಗಲೂ ಕೂಡ ಏಕದಿನ ಕ್ರಿಕೆಟ್‌ನಲ್ಲಿ ಅಗರ್ಕರ್ ಭಾರತ ತಂಡದ ಪರ 3ನೇ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್ ಆಗಿದ್ದಾರೆ. ಭಾರತ ತಂಡದಲ್ಲಿ ವೇಗದ ಬೌಲರ್‌ಗಳ ಗಮ್ಮತ್ತೇ ಇಲ್ಲದ ದಿನಗಳಲ್ಲಿ ಅದ್ಭುತ ಪ್ರದರ್ಶನಗಳನ್ನು ನೀಡಿದ್ದ ಕೀರ್ತಿ ಅಗರ್ಕರ್‌ ಅವರದ್ದು.

2002ರಲ್ಲಿ ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ನ ಬಲಿಷ್ಠ ಬೌಲಿಂಗ್‌ ವಿಭಾಗದ ಎದುರು ಅಗರ್ಕರ್‌ ತಮ್ಮ ವೃತ್ತಿ ಬದುಕಿನ ಏಕೈಕ ಶತಕ ಬಾರಿಸಿದ್ದರು. ಅಂದಹಾಗೆ ವಿಶ್ವ ಕ್ರಿಕೆಟ್‌ನ ಬ್ಯಾಟಿಂಗ್‌ ದಂತಕತೆಗಳಾದ ಬ್ರಿಯಾನ್‌ ಲಾರಾ, ರಿಕಿ ಪಾಂಟಿಂಗ್, ಸಚಿನ್‌ ತೆಂಡೂಲ್ಕರ್‌, ಸುನಿಲ್‌ ಗವಾಸ್ಕರ್‌ ಹಾಗೂ ಜಾಕ್‌ ಕಾಲಿಸ್‌ ಯಾರಿಂದಲೂ ಲಾರ್ಡ್ಸ್‌ನಲ್ಲಿ ಶತಕ ಗಳಿಸಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.

ಇತ್ತೀಚಿನ ಯೂಟ್ಯೂಬ್‌ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅಗರ್ಕರ್‌, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಅವರ ಲಾರ್ಡ್ಸ್‌ನಲ್ಲಿ ಶತಕ ಗಳಿಸದೇ ಇರುವ ಗಾಯಕ್ಕೆ ತಾವು ಉಪ್ಪು ಸುರಿದ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಪಾಂಟಿಂಗ್‌ ತಮ್ಮ ವೃತ್ತಿ ಬದುಕಿನಲ್ಲಿ 41 ಟೆಸ್ಟ್‌ ಶತಕಗಳನ್ನು ಬಾರಿಸಿದ್ದಾರೆ. ಆದರೆ, ಲಾರ್ಡ್ಸ್‌ ಅಂಗಣದಲ್ಲಿ ಅವರಿಗೆ ಅದೃಷ್ಟ ಕೈಹಿಡಿದಿಲ್ಲ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಪರ ಜತೆಯಾಗಿ ಆಡುವಾಗ ರಿಕಿ ಪಾಂಟಿಂಗ್‌ ಅವರ ಕಾಲೆಳೆದ ಘಟನೆಯನ್ನು ಅಗರ್ಕರ್‌ ಇದೀಗ ವಿವರಿಸಿದ್ದಾರೆ. “ರಿಕಿ ಪಾಂಟಿಂಗ್‌ ಅವರ ಕಾಲನ್ನು ತಮಾಷೆಯಿಂದಲೇ ಎಳೆದಿದ್ದೆ. ಕೆಕೆಆರ್‌ ತಂಡದಲ್ಲಿ ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲಿ ಇಬ್ಬರು ಜತೆಯಾಗಿ ಆಡುತ್ತಿದ್ದ ದಿನಗಳದು. ಆಗ ಲಾರ್ಡ್ಸ್‌ನಲ್ಲಿ ಎಷ್ಟು ಶತಕ ಭಾರಿಸಿದ್ದೀರಿ? ಎಂದು ನಗುತ್ತಲೇ ಕಾಲೆಳೆದಿದ್ದೆ,” ಎಂದಿದ್ದಾರೆ.