Thursday, 2nd January 2025

ನದಾಫ ಪಿಂಜಾರ ಪ್ರತ್ಯೇಕ ನಿಗಮಕ್ಕೆ: ಮನವಿ

ಕೊಲ್ಹಾರ: ಮುಸ್ಲಿಂ ಜನಾಂಗದಲ್ಲಿಯೇ ಅತ್ಯಂತ ಹಿಂದುಳಿದ ನದಾಫ ಪಿಂಜಾರ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆಗೆ ಸದನದಲ್ಲಿ ಧ್ವನಿ ಎತ್ತಬೇಕು ಎಂದು ಕೊಲ್ಹಾರ ತಾಲ್ಲೂಕ ನದಾಫ ಪಿಂಜಾರ ಸಮಾಜದ ಪದಾಧಿಕಾರಿಗಳು ಶಾಸಕ ಶಿವಾನಂದ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಶಾಸಕರು ಕೊಲ್ಹಾರ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ನದಾಫ ಪಿಂಜಾರ ಸಮಾಜದ ದಾಧಿಕಾರಿಗಳ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನದಾಫ/ಪಿಂಜಾರ ಸಂಘದ ತಾಲ್ಲೂಕ ಪ್ರಧಾನ ಕಾರ್ಯದರ್ಶಿ ಮಶಾಕ ಬಳಗಾರ ಮಾತನಾಡುತ್ತಾ ಅಲ್ಪ ಸಂಖ್ಯಾತರಲ್ಲಿ ಅತ್ಯಧಿಕ ಜನಸಂಖ್ಯೆಯಿದ್ದರೂ ಕೂಡ ನದಾಫ್‌ ಪಿಂಜಾರ ಸಮುದಾಯದ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ ನದಾಫ ಸಮುದಾಯ ಮೇಲೆತ್ತುವ ನಿಟ್ಟಿನಲ್ಲಿ ಹಾಗೂ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆಕಿಸಿಕೊಡುವ ನಿಟ್ಟಿನಲ್ಲಿ ಸರಕಾರ ನದಾಫ ಪಿಂಜಾರ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನದಾಫ ಪಿಂಜಾರ ಸಂಘದ ತಾಲ್ಲೂಕ ಅಧ್ಯಕ್ಷ ಇಸ್ಮಾಯಿಲ್ ನದಾಫ, ಮೈಬೂಬಸಾಬ ನದಾಫ, ಇಕ್ಬಾಲ್ ನದಾಫ, ಗೈಬುಸಾಬ ಉಪ್ಪಲದಿನ್ನಿ, ಅಲ್ಲಿಸಾಬ ನದಾಫ, ರಾಜೇಸಾಬ ನದಾಫ, ಮಲೀಕಸಾಬ ನದಾಫ ಇತರರು ಇದ್ದರು.