ಇತ್ತೀಚೆಗೆ ಹೆಚ್ಚಾಗುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದ ಪೋಕ್ಸೊ ಕಾಯ್ದೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಕಾಯ್ದೆ ಜಾರಿಗೆ ಬಂದು ಹತ್ತು ವರ್ಷಗಳಾದರೂ ಅದರ ಬಗ್ಗೆ ಬಹುತೇಕ ಪೋಷಕರಿಗೆ, ಮಕ್ಕಳಿಗೆ ಮಾಹಿತಿಯ ಕೊರತೆ ಇದೆ ಎಂಬ ಚರ್ಚೆಗಳು ನಡೆಯುತ್ತಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾಯ್ದೆಗಳನ್ನು ಜಾರಿಗೆ ತಂದು ಸುಮ್ಮನಾಗುವ ಬದಲು ಆ ಕಾಯ್ದೆಗಳ ಬಗ್ಗೆ ಜನಸಾಮಾನ್ಯರಲ್ಲಿ ಕಡ್ಡಾಯವಾಗಿ ಜಾಗೃತಿ ಮೂಡಿಸಬೇಕಿದೆ.
ಪೋಕ್ಸೊ ಕಾಯ್ದೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಸರಕಾರಗಳು ನಿರ್ಲಕ್ಷ್ಯ ವಹಿಸಿದ್ದು ನಿಜಕ್ಕೂ ಸಂತ್ರಸ್ತರಿಗೆ ಅನ್ಯಾಯ ಮಾಡಿದಂತಾಗಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ, ಬಹುಪಾಲು ಪ್ರಕರಣಗಳಲ್ಲಿ ಪೋಷಕರು ಮೌನಕ್ಕೆ ಶರಣಾಗುವುದೇ ಹೆಚ್ಚು. ಇಂಥದ್ದೊಂದು ಕಾನೂನು ಜಾರಿಯಲ್ಲಿದೆ ಎಂಬ ಅರಿವೇ ಇಲ್ಲದಿರುವುದೇ ಇಂತಹ ಮೌನಕ್ಕೆ ಕಾರಣವಾಗಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತವಾಗಿ ನ್ಯಾಯ ದೊರೆಯಬೇಕು ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಆದರೆ ಅದು ಆಗದೇ ಇರುವುದರಿಂದಲೂ ಪೋಷಕರು ಮೌನಕ್ಕೆ ಶರಣಾಗುತ್ತಿದ್ದಾರೆ. ಆದ್ದರಿಂದ ಸರಕಾರವು ಪೋಕ್ಸೊ ಕಾಯ್ದೆಯ ಬಗ್ಗೆ ಜಾಗೃತಿಯನ್ನು ಕಡ್ಡಾಯವಾಗಿ ಜನಸಾಮಾನ್ಯರು ಮತ್ತು ಮಕ್ಕಳಲ್ಲಿ ಮೂಡಿಸಲೇ ಬೇಕಿದೆ. ಅಲ್ಲದೆ, ಎಳೆಯ ವಯಸ್ಸಿನಲ್ಲಿ ಮೃಗೀಯ ಅಪರಾಧಕ್ಕೆ ಒಳಗಾಗಿ ಹೊಸಕಿಹೋದ ಮನಸ್ಸುಗಳಿಗೆ ಸಾಂತ್ವನ ನೀಡಿ ಬದುಕಿನಲ್ಲಿ ಭರವಸೆ ಮೂಡಿಸುವ ಕೆಲಸಗಳೂ ಆಗಬೇಕು. ಆ ಆಘಾತಕಾರಿ ಅನುಭವದಿಂದ ಮಕ್ಕಳು ಹೊರಬರಲು ಅವರಿಗೆ ಸುಮಾರು ವರ್ಷಗಳೇ ಬೇಕಾಗುತ್ತವೆ.
ಅಲ್ಲಿಯವರೆಗೆ ಅವರಿಗೆ ಆಪ್ತ ಸಮಾಲೋಚನೆ ಒದಗಿಸುವ ವ್ಯವಸ್ಥೆಯಾಗಬೇಕು. ಕಾನೂನು ಎಷ್ಟೇ ಸಮಗ್ರವಾಗಿ ರೂಪು ಗೊಂಡರೂ ಅದರ ಆಶಯ ಈಡೇರುವುದು ವಿಚಾರಣೆ ನಿಷ್ಪಕ್ಷಪಾತವಾಗಿ ನಡೆದಾಗ ಮಾತ್ರ. ಪೋಕ್ಸೊ ಪ್ರಕರಣಗಳು ದಾಖಲಾದ ನಂತರ ಅಧಿಕಾರಿಗಳು ಕೂಡ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆ ಮೂಲಕ ಸದುದ್ದೇಶದಿಂದ ರೂಪುಗೊಂಡ ಕಾಯ್ದೆಯೊಂದು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು.