ತುಮಕೂರು: ರಾಜಕೀಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾದಿಗ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದೆ ಎಂದು ಮಾಜಿ ಶಾಸಕರ ಗಂಗಹನುಮಯ್ಯ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಸುಮಾರು 5.5 ಲಕ್ಷ ಜನಸಂಖ್ಯೆಯುಳ್ಳ ಮಾದಿಗ ಸಮುದಾಯದವರು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 30 ರಿಂದ 50 ಸಾವಿರದವರೆಗೆ ಮತದಾರರನ್ನು ಹೊಂದಿದ್ದು, ಈ ಜನಾಂಗಕ್ಕೆ ಸಿಗಬೇಕಾದ ನ್ಯಾಯಯುತ ಸ್ಥಾನ, ಮಾನ ನೀಡದೆ ಸಾಮಾಜಿಕ ನ್ಯಾಯದ ಕಡಗಣನೆಯಾಗುತ್ತಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ಮೀಸಲು ಕ್ಷೇತ್ರಗಳಾದ ಕೊರಟಗೆರೆ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರ ಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗುರುತಿಸಿ, ಪಕ್ಷ ಸಂಘಟನೆ ಮಾಡಲು ಸಹಕಾರ ನೀಡದೆ ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಮಾಡಿ, ನಾಯಕತ್ವ ಗಟ್ಟಿಗೊಳ್ಳದಂತೆ ಹಾಗೂ ಕ್ಷೇತ್ರದಲ್ಲಿ ನಾಯಕತ್ವ ಬೇರು ಬಿಡುದಂತೆ ನೋಡಿಕೊಳ್ಳುವಲ್ಲಿ ರಾಜಕೀಯ ಪಕ್ಷಗಳು ಸಫಲವಾಗಿವೆ ಎಂದರು.
ಒಳಮೀಸಲಾತಿ ವರ್ಗೀಕರಣಕ್ಕಾಗಿ 1997 ರಿಂದಲೂ ಈ ಸಮುದಾಯದ ರಾಜಕೀಯ ನಾಯಕರು, ಸಂಘಟನೆಗಳ ಮುಖಂಡರು, ಮಠಾಧೀಶರು, ಅಧಿಕಾರಿಗಳು ಮತ್ತು ನೌಕರರು ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ಜಾರಿಗಾಗಿ ನಡೆಸಿದ ಹೋರಾಟಗಳು ರಾಜಕಾರಣಿಗಳ ಷಡ್ಯಂತ್ರದಿಂದ ವಿಫಲವಾಗಿದ್ದು, 2012 ರಿಂದಲೂ ಈ ವರದಿ ಯನ್ನು ವಿಧಾನಸಭೆಯಲ್ಲಿ ಮಂಡಿಸದೆ ನಿಷ್ಪç ಯೋಜಕವಾಗಿ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಪಕ್ಷದಲ್ಲಿರುವ ಮಾದಿಗ ಸಮುದಾಯದ ನಾಯಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದು, ಕೊರಟಗೆರೆ ಮತ್ತು ಪಾವಗಡ ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪಕ್ಷ ಸಂಘಟನೆ ಮಾಡುತ್ತ ಬಂದಿರುವ ಹಿರಿಯ ಮುಖಂಡರನ್ನು ಪರಿಗಣಿಸಿ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸುವಂತೆ ಮನವಿ ಮಾಡಿದರು.
ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಮಂಡಿಸಿ, ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಣಯ ಮಾಡುವಂತೆ ಕೋರಿದರು.
ಕೊರಟಗೆರೆ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು 3-4 ಜನ ಆಕಾಂಕ್ಷಿಗಳು ಟಿಕೇಟ್ಗಾಗಿ ಪೈಪೋಟಿ ನಡೆಸುತ್ತಿದ್ದು, ಪಕ್ಷದ ಹಿರಿಯ ನಾಯಕರು ಮತ್ತು ವಿರೋಧ ಪಕ್ಷಗಳ ಷಡ್ಯಂತ್ರ ಇದಕ್ಕೆ ಕಾರಣವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷರಾದ ಕಮಲ ಗಂಗಹನುಮಯ್ಯ ಇದ್ದರು.