ಚಿಕ್ಕಮಗಳೂರು ಜಿಲ್ಲೆ ಮುಳ್ಳಯ್ಯನಗಿರಿಯಲ್ಲಿ ಈಗ ನೀಲಕುರಿಂಜಿ ಹೂವುಗಳ ಲಾಸ್ಯ. ಬೆಟ್ಟದ ಭಿತ್ತಿಯ ತುಂಬಾ ಈಗ
ಅರಳಿವೆ ನೀಲಿಯ ಹೂವುಗಳು.
ಸೌಮ್ಯ ಕಾರ್ಕಳ
ಕರ್ನಾಟಕದ ಅತ್ಯಂತ ಎತ್ತರದ ಪರ್ವತ ಮುಳ್ಳಯ್ಯನಗಿರಿ ಶ್ರೆಣಿಯ ಹಸಿರು ಹೊದಿಕೆಯು ಈ ವಾರ ನಿಧಾನವಾಗಿ ನೀಲಿಮಯ ವಾಗಿದೆ! ಸಾಮಾನ್ಯವಾಗಿ ೧೨ ವರ್ಷಗಳಿಗೊಮ್ಮೆ ಅರಳುವ ಅತ್ಯಂತ ಅಪರೂಪದ ನೀಲ ಕುರಿಂಜಿ ಹೂವುಗಳು ಹಲವು ವರ್ಷಗಳ ನಂತರ ಈ ಬಾರಿ ಮುಳ್ಳಯ್ಯನಗಿರಿ ಶ್ರೆಣಿಯಲ್ಲಿ ಅರಳುತ್ತಿವೆ.
ಮಂಜು ಮುಸುಕಿದ, ಇಬ್ಬನಿ ತುಂಬಿದ ನುಸುಕಿನ ವಾತಾವರಣ. ಸುತ್ತಲೂ ಅಲ್ಲಲ್ಲಿ ಮೋಡಗಳ ಓಡಾಟ. ಬೆಟ್ಟದ ಇಳಿಜಾರಿನ ತುಂಬಾ, ನೀಲಿ ಹೂವುಗಳ ಹೊದೆಕೆ! ಮುಳ್ಳಯ್ಯನ ಗಿರಿ ಮತ್ತು ಸೀತಾಳಯ್ಯನ ಗಿರಿಯ ನಡುವಿನ ಬೆಟ್ಟದ ತುಂಬಾ ಈಗ ನೀಲ ಕುರಂಜಿ ಹೂವುಗಳ ಹಾಸಿಗೆ, ನೋಡಲು ಮೋಹಕ ದೃಶ್ಯ. ಸೂರ್ಯನ ಕಿರಣಗಳ ನಡುವೆ ಅರಳಿ, ಬೆಟ್ಟ ಸಾಲುಗಳಲ್ಲಿ ನೀಲಿ ಬಣ್ಣದಿಂದ ಮೈದಳೆದು, ತನ್ನತ್ತ ಕೈ ಬೀಸಿ ಕರೆಯುತ್ತಿದೆ ಪ್ರವಾಸಿಗರನ್ನು.
ನೀಲಕುರಿಂಜಿ ಗಿಡಗಳು ಒಮ್ಮೆಗೇ, ಒಟ್ಟಿಗೇ ಹೂವಾಗುವ ಪ್ರಭೇದ. ಎಲ್ಲವೂ ಅರಳಿದಾಗ, ಆ ಸುತ್ತಲಿನ ಜಗತ್ತೇ ನೀಲಿ ನೀಲಿ! ಇದರಲ್ಲೂ ಕೆಲವು ಪ್ರಬೇಧ ಗಳಿವೆ. ಕಳೆದ ವರ್ಷ ಮಡಿಕೇರಿಯ ಮಾಂದಲಪಟ್ಟಿ, ಕೋಟೆ ಬೆಟ್ಟದ ಗುಡ್ಡಗಾಡು ಪ್ರದೇಶ ಹಾಗೂ ಸುಬ್ರಮಣ್ಯದ ಕುಮಾರ ಪರ್ವತ ಬೆಟ್ಟದಲ್ಲಿ ಹೂ ಬಿಟ್ಟಿದ್ದು, ಈ ವರ್ಷ ಮುಳ್ಳಯ್ಯನ ಗಿರಿಯ ಸುತ್ತ ಮುತ್ತ ಹೂ ಅರಳಿದೆ.
ನೀಲಕುರಿಂಜಿ ಸಸ್ಯದಲ್ಲಿ ಸುಮಾರು 250 ಪ್ರಭೇದಗಳಿವೆ. ಅವುಗಳಲ್ಲಿ 46 ಪ್ರಭೇದದ ಗಿಡಗಳು ನಮ್ಮ ದೇಶದಲ್ಲಿ ಕಂಡುಬರು ತ್ತವೆ. ಸಾಮಾನ್ಯವಾಗಿ 12 ವರ್ಷಗಳಿಗೊಮ್ಮೆ ಹೂಬಿಡುವ ನೀಲಕುರಿಂಜಿಯು 1300 ರಿಂದ 2400ಮೀ. ಅಡಿ ಎತ್ತರದ ಬೆಟ್ಟಪ್ರದೇಶದಲ್ಲಿ ಬೆಳೆಯುತ್ತದೆ. 30 ರಿಂದ 60 ಸೆ.ಮೀ.ರಷ್ಟು ಎತ್ತರದ ಪೊದೆ. ಕೆಲವು ಪ್ರಭೇದಗಳ ನೀಲ ಕುರಂಜಿಯು ಏಳು ವರ್ಷಗಳಿಗೊಮ್ಮೆ ಹೂವು ಬಿಡುವುದುಂಟು, ವಿವಿಧ ಸಮಯದ ಅವಧಿಯಲ್ಲೂ ಹೂ ಬಿಡುವು ದುಂಟು.
ಕಳೆದ ವರ್ಷ, ಮೂಡಿಗೆರೆ ತಾಲೂಕಿನ ದೇವರಮನೆ ಬೆಟ್ಟ ಶ್ರೇಣಿಯಲ್ಲಿ ಅಲ್ಲಲ್ಲಿ ನೀಲಿ ಹೂವುಗಳು ಅರಳಿದ್ದವು. ಬಾಬಾಬುಡನ್ ಗಿರಿ ಶ್ರೆಣಿಯಲ್ಲಿ ೧೨ ವರ್ಷ ಗಳಿಗೊಮ್ಮೆ ಅರಳುತ್ತಿದ್ದ ನೀಲಿ ಹೂವುಗಳು ಅರಳುವುದು ಏಕೆ ವಿಳಂಬವಾಗಿದೆ ಎಂದು ಸಸ್ಯ ಪ್ರೇಮಿಗಳು, ನಿಸರ್ಗ ಪ್ರೇಮಿಗಳು ಆತಂಕಕ್ಕೆ ಒಳಗಾಗಿದ್ದರು. ಕೊನೆಗೂ ಈಗ ಸೀತಾಳಯ್ಯನಗಿರಿಯಿಂದ ಮುಳ್ಳಯ್ಯನಗಿರಿವರೆಗೂ ಹೆಚ್ಚಿನ ಪ್ರಮಾಣದಲ್ಲಿ ಹೂವುಗಳು ಅರಳಿ ನಿಂತಿವೆ, ನಿಸರ್ಗ ಪ್ರೇಮಿಗಳ ಆತಂಕವನ್ನು ದೂರ ಮಾಡಿವೆ.
ಚಿಕ್ಕಮಗಳೂರು ಸನಿಹದ ಮುಳ್ಳಯ್ಯನಗಿರಿ ಶ್ರೆಣಿಯಲ್ಲಿ ಈಗ ನಿತ್ಯವೂ ದೃಶ್ಯವೈಭವ. ಗಿರಿಶ್ರೆಣಿಯನ್ನು ಕೆಲವು ಭಾಗಗಳಲ್ಲಿ ಹಸಿರು ಆವರಿಸಿದ್ದರೆ, ಮತ್ತೊಂದೆಡೆ ಬೆಳ್ಳಿಮೋಡಗಳು ಬೆಟ್ಟಗುಡ್ಡಗಳನ್ನು ಮುತ್ತಿಕ್ಕುತ್ತಿವೆ. ಇದೇ ಹೊತ್ತಿನಲ್ಲಿ ಅಲ್ಲಲ್ಲಿ ವಿಶಾಲ ಪ್ರದೇಶದಲ್ಲಿ ಅರಳಿ ನಿಂತಿರುವ ನೀಲಕುರಂಜಿ ಹೂವುಗಳು ದೇವಲೋಕವನ್ನೇ ಭೂಮಿಗೆ ತಂದಿವೆ. ನೀಲಕುಂಜಿ ಹೂವುಗಳಿಗೆ ಜೇನ್ನೊಣ, ಬಗೆ ಬಗೆಯ ದುಂಬಿಗಳು ಲಗ್ಗೆ ಇಟ್ಟಿವೆ. ಇನ್ನೇಕೆ ತಡ, ಈಗಲೇ ಹೊರಡಿ, ನೀಲಿಯ ದೃಶ್ಯವೈಭವವನ್ನು ಕಣ್ತುಂಬಿಕೊಳ್ಳಿ!
ಸಂಡೂರಿನಲ್ಲೂ ನೀಲ ಕುರಿಂಜಿ
ನೀಲ ಕುರಿಂಜಿಗೂ ಕರ್ನಾಟಕ ಆತ್ಮೀಯ ನಂಟು. 2017 ರಲ್ಲಿ ಬಳ್ಳಾರಿ ಜಿಯ ಸಂಡೂರಿನ ಕುಮಾರಸ್ವಾಮಿ ದೇವಾಲಯದ ಹಿಂಭಾಗದಲ್ಲಿರುವ ಬೆಟ್ಟಗಳಲ್ಲಿ ನೀಲ ಕುರಿಂಜಿ ಹೂ ಬಿಟ್ಟಿತ್ತು. ಆ ಮೂಲಕ ನೀಲಕುರಿಂಜಿ ಒಂದು ಸಂದೇಶ ಸಾರಿತು. ಪಶ್ಚಿಮ ಘಟ್ಟಗಳಲ್ಲಿ ಮಾತ್ರ ವಲ್ಲ, ಬೇರೆ ಪ್ರಶಸ್ತ ಸ್ಥಳಗಳಲ್ಲೂ ತಾನು ಅರಳಬಲ್ಲೆ ಎಂದು ಹೇಳಿತು. ದಕ್ಷಿಣ ಕನ್ನಡದ ಸುಬ್ರಹ್ಮಣ್ಯ ಸಮೀಪದ ಕುಮಾರ ಪರ್ವತದಲ್ಲಿ ೧೨ ವರ್ಷಗಳಿಗೊಮ್ಮೆ ಹೂ ಆಗುತ್ತದೆ.
ಕಳೆದ ವರ್ಷ ಮಡಿಕೇರಿಯ ಮಾಂದಲ್‌ಪಟ್ಟಿಯಲ್ಲಿ ನೀಲ ಕುರಿಂಜಿ ಹೂ ಬಿಟ್ಟಿತ್ತು. ನಮ್ಮ ರಾಜ್ಯದ ಪಶ್ಚಿಮ ಘಟ್ಟಗಳ ವಿವಿಧ ಪ್ರದೇಶಗಳಲ್ಲಿ ಅಲ್ಲಲ್ಲಿ ಆಗಾಗ ಈ ಹೂ ಅರಳುತ್ತದೆ. ಈ ಸಸ್ಯದ ಇತರ ಕೆಲವು ಪ್ರಭೇದಗಳು ಅಲ್ಲಲ್ಲಿ ತಮ್ಮ ಪಾಡಿಗೆ ಹೂ ಬಿಡುವುದುಂಟು.