Friday, 20th September 2024

ಚಿತ್ತಾತ ಚಿತಾ ಚೀತಾ: ನಮ್ಮಲ್ಲಿ ಅವು ಉಳಿದು ಬೆಳೆದೀತಾ ?

ಸುಪ್ತ ಸಾಗರ

rkbhadti@gmail.com

ಸಿಕ್ಕಾಪಟ್ಟೆ ಕುತೂಹಲವಿದೆ. ಅಷ್ಟೇ ಕಾತರವಿದೆ, ನಿರೀಕ್ಷೆಗಳಿವೆ, ದೇವರೇ ಮತ್ತೆ ಹಿಂದಿ ನಂತೆಯೇ ಸಮೃದ್ಧವಾಗಲಿ ಎಂಬ ಪ್ರಾರ್ಥನೆಗಳಿವೆ. ಇದಕ್ಕಾಗಿ ನಾವು ಮಾಡುತ್ತಿರುವ ಖರ್ಚು 75 ಕೋಟಿ ರು.ಗಳ ಮೊತ್ತ ಕಡಿಮೆ ಏನಲ್ಲ. ಆದರೆ ಅಂದು ಕೊಂಡಂತೆ ಆಗಿಬಿಟ್ಟರೆ ಅದಕ್ಕೆ ಬೆಲೆ ಕಟ್ಟಲೇ ಆಗದು. ಏಕೆಂದರೆ ಈ ಪ್ರಯೋಗವೊಂದೊಮ್ಮೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಏನೆಲ್ಲ ಆಗುವುದಿದೆ.

ನಮ್ಮ ನಡುವಿಂದ ಕಳೆದುಹೋಗಿದೆ ಎನ್ನಲಾಗುವ ಅದೆಷ್ಟೋ ಜೀವ ಸಂತತಿಗಳನ್ನು ಮತ್ತೆ ತಂದು ಪುನರುಜ್ಜೀವನಗೊಳಿಸುವ ಎಲ್ಲ ಪ್ರಯೋಗ ಸಾಧ್ಯತೆಗಳಿಗೆ ಇದೇ ನಾಂದಿ ಯಾಗಲಿದೆ. ಹಾಗಾಗಲಿ. ಹೌದು, ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ನೆಪದಲ್ಲಿ ಆಫ್ರಿಕಾದ ನಮೀಬಿಯಾದಿಂದ ೮ ಚೀತಾಗಳನ್ನು ‘ಖಂಡಾಂತರ ಸ್ಥಳಾಂತರ ಯೋಜನೆ’ಯ ಭಾಗವಾಗಿ ತಂದು ನಮ್ಮ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆ ಕುನೋ-ಪಾಲ್ಪುರ್ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿದೆ.

ಆ ಮೂಲಕ ಚೀತಾಗಳು ಭಾರತದ ನೆಲದಲ್ಲಿ ಮತ್ತೆ ಸಮೃದ್ಧವಾಗಿ ನಡೆದಾಡು ವಂತಾಗಬೇಕೆಂಬ ಕನಸು ಕಾಣಲಾಗುತ್ತಿದೆ. ಮಹತ್ವಾಕಾಂಕ್ಷೆಯ ‘ಪ್ರಾಜೆಕ್ಟ್ ಚೀತಾ’ದ ಮೊದಲ ಹೆಜ್ಜೆಯೇನೋ ಯಶಸ್ವಿಯಾಗಿದೆ. ಇದರೊಂದಿಗೆ ಮುಂದಿನದಕ್ಕೆ ಕಾತರದ ಕಾಯುವಿಕೆ ಆರಂಭವಾಗಿದೆ. ಒಂದಷ್ಟು ವರ್ಷಗಳ ಹಿಂದೆ ಪೂರ್ವ ಆಫ್ರಿಕಾದ ಕಾಡುಗಳಿಗೆ ಪಕ್ಕಾ ಹೀಗೆಯೇ ಕಳುಹಿಸಿದ್ದ ಚೀತಾಗಳ ಪೈಕಿ ಶೇ.80 ಚೀತಾಗಳು ಅಲ್ಲಿಯೇ ಹೊಸ ಬದುಕು ಕಟ್ಟಿಕೊಂಡಿವೆ ಎನ್ನುವುದು ನಮ್ಮ ಪ್ರಯೋಗಕ್ಕೆ ಪೂರಕ, ಆಶಾದಾಯಕ ಸಂಗತಿ.

ಅಷ್ಟಕ್ಕೂ ಇಂಥದ್ದೊಂದು ‘ಹುಚ್ಚಾಟ’ ಎನಿಸುವಂಥ ಯೋಜನೆಗೆ ಇಂಥ ಪರಿ ಹೈಪ್ ಆದರೂ ಏಕೆ? ಈ ಪ್ರಶ್ನೆಗೆ ನೇರವಾದ ಉತ್ತರ-ಈ ನೆಲ ಅವುಗಳದ್ದೂ ಆಗಿದ್ದ ಸನ್ನಿವೇಶದಲ್ಲಿ ನಾವು ಇನ್ನಿಲ್ಲದಂತೆ ನಾಮಾವಶೇಷ ಮಾಡಿ ಕಳುಹಿಸಿ ಏಳು ದಶಕಗಳೇ ಕಳೆದು ಹೋಗಿವೆ ಎಂಬುದು. ಹಾಗೆ ನೋಡಿದರೆ ಇಡೀ ಏಷ್ಯಾಖಂಡದಲ್ಲೇ ಇರಾನ್ ಬಿಟ್ಟರೆ ಇನ್ನೆಲ್ಲೂ ಚೀತಾಗಳೇ ಇಲ್ಲ. ಇರಾನ್‌ನಲ್ಲೂ ಇರುವುದು ಹೆಚ್ಚೆಂದರೆ ಹತ್ತಿಪ್ಪತ್ತು.

ಉಳಿದಂತೆ ಆಫ್ರಿಕಾದಲ್ಲಿ ಮಾತ್ರ ಚೀತಾಗಳು ಉಳಿದಿರುವುದು. ಅವುಗಳ ಸಂತತಿಯಲ್ಲೂ ಶೇ.20ರಷ್ಟು ಕಣ್ಮರೆಯಾಗಿವೆ. ಒಟ್ಟು ಈ ಭೂಮಿಯ ಮೇಲೆ ಇರುವುದೇ 7 ಸಾವಿರ ಚಿಲ್ಲರೆ ಚೀತಾಗಳು ಎನ್ನುತ್ತವೆ ಅಂಕಿ-ಸಂಖ್ಯೆಗಳು. ಈ ಪೈಕಿ ಬಹುಪಾಲು
ಉಳಿದಿರುವುದು ಆಫ್ರಿಕಾದ ಕಾಡುಗಳಲ್ಲಿ. ಅವಕ್ಕೂ ನಮ್ಮಲ್ಲಿದ್ದುದಕ್ಕೂ ತೀರಾ ವ್ಯತ್ಯಾಸವೇನಿಲ್ಲ. ಆನುವಂಶಿಕವಾಗಿಯೂ
ಇವು ಒಂದೇ ರೀತಿ ವರ್ತಿಸುತ್ತವೆ. ಈ ಕಾರಣಕ್ಕೇ ಭಾರತ ವನ್ಯಜೀವಿಯೊಂದರ ವಿಚಾರದಲ್ಲಿ ಇಂಥದ್ದೊಂದು ಬೃಹತ್
ಪ್ರಯೋಗಕ್ಕೆ ಮುಂದಾಗಿರುವುದು.

ಇದು ಭಾರತದ ಮಟ್ಟಿಗೆ ಮಾತ್ರವಲ್ಲ, ಜಾಗತಿಕವಾಗಿಯೂ ಅತಿದೊಡ್ಡ ಮತ್ತು ಬಹುನಿರೀಕ್ಷಿತ ಪ್ರಯೋಗ ಎನಿಸಿಕೊಂಡಿರು ವುದು. ಜೀವವೈವಿಧ್ಯ ರಕ್ಷಣೆ, ಪಾರಿಸಾರಿಕ ಸಮತೋಲನ ರಕ್ಷಣೆಯ ದೃಷ್ಟಿಯಿಂದ ಮಾತ್ರವೇ ಅಲ್ಲ, ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿ ಹಾಗೂ ಸ್ಥಳೀಯ ಆರ್ಥಿಕತೆಯ ಮಟ್ಟ ಹೆಚ್ಚಳದ ನಿಟ್ಟಿನಲ್ಲೂ ಈ ಯೋಜನೆಗೆ ಮಹತ್ವ ಇದೆ ಎನ್ನುತ್ತಾರೆ ಭಾರತೀಯ ವನ್ಯಜೀವಿ ಸಂಸ್ಥೆಯ ಡೀನ್ ಯಾದವೇಂದ್ರದೇವ್ ಝಾಲಾ.

ಅನುಮಾನವೇ ಇಲ್ಲ, ಮಾನವ ಸಂಘರ್ಷ ಮತ್ತು ಬೇಟೆಯ ಕಾರಣಗಳಿಂದಾಗಿ ಚೀತಾಗಳ ಸಂತತಿ ಭಾರತದಲ್ಲಿ ಅಳಿದಿದೆ. ನಮ್ಮಿಂದಲೇ ನಾಶವಾದ ಏಕೈಕ ದೊಡ್ಡ ಜಾತಿಯ ಮಾಂಸಾಹಾರಿ ಪ್ರಾಣಿ ಸಂತತಿ. ಒಂದು ಕಾಲದಲ್ಲಿ ನಮ್ಮ ಕಾಡುಗಳಲ್ಲಿ ಸಮೃದ್ಧವಾಗಿ ಹತ್ತಾರು ಸಾವಿರಗಟ್ಟಲೆ ಲೆಕ್ಕದಲ್ಲಿ ಓಡಾಡಿಕೊಂಡಿದ್ದ ಇಂಥ ಚೀತಾಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿ ಹೋದುದೇನಲ್ಲ.

16-17ನೇ ಶತಮಾನದ ಇತಿಹಾಸ ತೆಗೆದರೆ ಏನಿಲ್ಲವೆಂದರೂ ೧೦ ಸಾವಿರ ಚೀತಾಗಳು ಭಾರತದಲ್ಲಿ ಇದ್ದುವು ಎಂಬುದು ಗಣನೆಗೆ ಬರುತ್ತದೆ. 1556 ರಿಂದ 1605 ರವರೆಗೆ ಭಾರತದಲ್ಲಿ ಆಳ್ವಿಕೆ ನಡೆಸಿದ ಮೊಘಲರ ದೊರೆ ಅಕ್ಬರ, ತಾನು ಒಂದು ಸಾವಿರ ಚೀತಾಗಳ ಸರದಾರ ಎಂದು ಹೆಮ್ಮೆಯಿಂದ ದಾಖಲಿಸಿಕೊಂಡಿದ್ದಾನೆ. ಆತ ಕೃಷ್ಣಮೃಗಗಳು ಮತ್ತು ಸಾರಂಗಗಳನ್ನು ಬೇಟೆಯಾಡಲು ಅವುಗಳನ್ನು ಬಳಸುತ್ತಿದ್ದನಂತೆ. ಹಾಗೆಂದು ‘ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ (ಬಿಎನ್‌ಎಚ್ ಎಸ್)’ ಮಾಜಿ ಉಪಾಧ್ಯಕ್ಷ ದಿವ್ಯಭಾನು ಸಿನ್ಹ ಅವರು ‘ದಿ ಎಂಡ್ ಆಫ್ ಎ ಟ್ರಯಲ್ – ದಿ ಚೀತಾ ಇನ್ ಇಂಡಿಯಾದ’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಅಕ್ಬರನ ಮಗ ಜಹಾಂಗೀರನು ಚೀತಾಗಳನ್ನು ಬಳಸಿ ಪಾಲದ ಪರಗಣದಲ್ಲಿ 400ಕ್ಕೂ ಹೆಚ್ಚು ಜಿಂಕೆಗಳನ್ನು ಹಿಡಿದಿದ್ದ ಎಂದು ಅದೇ ಪುಸ್ತಕದಲ್ಲಿದೆ. ಸ್ವಾತಂತ್ರ್ಯ ಸಿಗುವ ಹೊತ್ತಿಗೆ ಇವೆಲ್ಲವೂ ನಮ್ಮನ್ನಾಳಿದ ‘ಮಹಾರಾಜ’ರುಗಳ ಬೇಟೆಯ ಖಯಾಲಿಗೆ ಸಿಕ್ಕು ಬಹುತೇಕ ನಾಶವಾಗಿದ್ದವು. ಅನೇಕ ಹಿಂದಿನ ಚಿತ್ರಗಳಲ್ಲಿ ಇರುವಂತೆ, ಚೀತಾಗಳನ್ನು ಅಂದಿನ ರಾಜರು ಬೇಟೆಗಾಗಿಯೇ ಸಾಕಿ ಪಳಗಿಸಿರುತ್ತಿದ್ದರು. ಮಧ್ಯಪ್ರದೇಶದ ಕೊರಿಯಾದ ಮಹಾರಾಜ ರಾಮಾನುಜ್ ಪ್ರತಾಪ್ ಸಿಂಗ್ ದೇವ್ 1947ರಲ್ಲಿ ಕೊನೆಯ ಮೂರು ಚೀತಾಗಳನ್ನು ಕೊಂದು ಅಪರೂಪದ ಜೀವ ಸಂತತಿಯೊಂದರ ನಾಶದ ಶವಪೆಟ್ಟಿಗೆಗೆ ಕೊನೆ ಮೊಳೆ ಹೊಡೆದಿದ್ದ
ಎನ್ನುತ್ತದೆ ಇತಿಹಾಸ.

ಆತ ಅಂಥ ‘ಪೌರುಷ ಮೆರೆದ’ದ್ದಕ್ಕೆ ಸಾಕ್ಷಿಯಾಗಿ ಇಂದಿಗೂ ಫೋಟೋಗಳು ಇವೆ. ಕೊನೆಗಂತೂ ನೆಹರೂ ಅವಧಿಯಲ್ಲಿ
1952 ರಲ್ಲಿ ಭಾರತ ಸರಕಾರವು ದೇಶದಲ್ಲಿ ಚೀತಾ ಅಳಿವಿನಂಚಿನಲ್ಲಿದೆ ಎಂದು ಅಧಿಕೃತವಾಗಿ ಘೋಷಿಸಿತ್ತು. ಏನೇ ಇರಲಿ, ಇಷ್ಟೆಲ್ಲ ಸಮೃದ್ಧವಾಗಿದ್ದ ಚೀತಾಗಳು ಕೇವಲ ಎರಡು ಶತಮಾನದ ನಡುವೆ ಭಾರತದಲ್ಲಿ ನಾಮಾವಶೇಷ ಆಗಿದದ್ದಕ್ಕೆ ಕಾರಣವಾದರೂ ಏನು ಎಂಬುದಕ್ಕೆ ದೊರೆಯುವ ಏಕೈಕ ಉತ್ತರ ‘ನಮ್ಮ ತೆವಲು’.

ಮೊದೊಮೊದಲು  ರಾಜಮಹಾರಾಜರುಗಳು ಕಾಡು ಸಮೃದ್ಧವಾಗಿದ್ದ ಅವಧಿಯಲ್ಲಿ ಪ್ರಜಾ ಸಂರಕ್ಷಣೆಗಾಗಿ ಬೇಟೆಯಾಡು
ತ್ತಿದ್ದರಂತೆ. ಆನಂತರ ಅದು ಅವರ ಮೋಜು, ಹವ್ಯಾಸ, ಪ್ರತಿಷ್ಠೆಯ ದ್ಯೋತಕವಾಯಿತು. ಆದರೆ ಯಾವಾಗ ನಮ್ಮ ದೇಶಕ್ಕೆ ಬ್ರಿಟಿಷರ ಪ್ರವೇಶ ಆಯಿತೋ, ಅವರೊಂದಿಗೆ ಬಂದೂಕುಗಳು ಬಂದವು. ಅಷ್ಟೆ, ಬೇಟೆಯ ಚಿತ್ರಣ ಬದಲಾಯಿತು. ಬ್ರಿಟಿಷ್ ಅಧಿಕಾರಿಗಳ ಬೂಟು ನೆಕ್ಕುವ ತಹತಹಿಕೆಯನ್ನು ರೂಢಿಸಿಕೊಂಡ ನಮ್ಮ ಕೆಲ ರಾಜರು ತಮ್ಮ ರಾಜತ್ವ ಗದ್ದುಗೆ  ಉಳಿಸಿಕೊಳ್ಳ ಲೋಸುಗ ಅವರಿಗಾಗಿ ನಮ್ಮ ಕಾಡುಗಳನ್ನು ಬೇಟೆಯಂಗಳವಾಗಿಸಿದರು. ಅತಿವೇಗವಾಗಿ ಓಡಬಲ್ಲ ಪ್ರಾಣಿ ಎಂಬುದೇ ಚೀತಾಗಳಿಗೆ ಮುಳುವಾಯಿತು.

ಚೀತಾಳನ್ನು ಪಳಗಿಸಿ ಕುರಿ, ಮೇಕೆ, ಜಿಂಕೆ, ಕಡವೆ, ಕೃಷ್ಣ ಮೃಗ ಇತ್ಯಾದಿಗಳ ಬೇಟೆಯ ‘ಮನರಂಜನಾ ಪಂದ್ಯ’ವನ್ನು ಬ್ರಿಟಿಷ್ ಅಧಿಕಾರಿಗಳಿಗಾಗಿ ಏರ್ಪಡಿಸಲಾರಂಭಿಸಿದರು. ಚೀತಾಗಳ ಕ್ರೌರ್ಯ, ಆವೇಶಗಳನ್ನು ಕಂಡ ಬ್ರಿಟಿಷ್ ಅಧಿಕಾರಿಗಳು, ಅಂಥ ಪಂದ್ಯದ ಕೊನೆಯಲ್ಲಿ ಅವನ್ನೇ ತಮ್ಮ ಬಂದೂಕಿನ ನಳಿಕೆಗೆ ಗುರಿಯಾಗಿಸಿ ಉಡಾಯಿಸಿ ‘ಪೌರುಷ’ ತೋರುತ್ತಿದ್ದರು. ಇದರಿಂದ ಬ್ರಿಟಿಷ್ ಅಧಿಕಾರಿ ಖುಷಿಪಡುತ್ತಾನೆ ಎಂಬುದು ಗೊತ್ತಾಗುತ್ತಿದ್ದಂತೆಯೇ ನಮ್ಮ ಸೋ ಕಾಲ್ಡ್ ರಾಜರುಗಳು ನಮ್ಮ ಕಾಡುಗಳತ್ತ
ಬ್ರಿಟಿಷರಿಗೆ ರಹದಾರಿ ಏರ್ಪಡಿಸಿಕೊಟ್ಟರು.

ಅಲ್ಲಿದ್ದ ಹುಲಿ- ಸಿಂಹ- ಚೀತಾಗಳು ಬ್ರಿಟಿಷರ ಬಂದೂಕಿಗೆ ಸುಲಭದಲ್ಲಿ ಪಕ್ಕಾದವು. ಮಾತ್ರವಲ್ಲ, ತಮ್ಮ ದಿವಾನಖಾನೆಗೆ, ಬ್ರಿಟಿಷರಿಗೆ ಕಪ್ಪ ಕಾಣಿಕೆಯ ರೂಪದಲ್ಲಿ ಚೀತಾದಂಥ ಮೃಗದ ಚರ್ಮ, ಆನೆಗಳ ದಂತ, ಹುಲಿಗಳ ಉಗುರು ಬಳಕೆಯಾದವು.
ಮೊದಲೇ ವಿಲಾಸ ಪ್ರಿಯರರಾಗಿದ್ದ ಮೊಗಲ್ ಸುಲ್ತಾನರೂ ಇದರಲ್ಲಿ ಹಿಂದೆ ಬಿದ್ದಿರಲಿಲ್ಲ. ಸ್ವಾತಂತ್ರ್ಯಾ ನಂತರದ ಶ್ರೀಮಂತ ಜನರಲ್ಲೂ ಬೇಟೆಯೆಂಬುದು ‘ಗಂಡಸುತನ’ ಪ್ರದರ್ಶನ ಎಂಬ ಮನೋಭಾವ ಮುಂದುವರಿದು ಇಂದು ಚೀತಾದ ಪರಿಸ್ಥಿತಿ ಏನಾಗಿದೆಯೋ ಅದಕ್ಕೆ ಕಾರಣವಾಯಿತು ಎಂಬಲ್ಲಿಗೆ ಒಂದು ಅಧ್ಯಾಯಕ್ಕೆ ಪೂರ್ಣವಿರಾಮ ಬಿದ್ದಿದೆ.

ಎರಡನೇ ಆಧ್ಯಾಯ ತೆರೆದುಕೊಳ್ಳುವುದು ಚೀತಾಗಳ ಪುನರ್ ಅಭಿವೃದ್ಧಿಯ ಯೋಜನೆ. ಇಂಥದ್ದು ರೂಪುಗೊಂಡದ್ದು ಇದೇ ಮೊದಲೇನಲ್ಲ. 20ನೇ ಶತಮಾನದ ಆರಂಭದ ದಿನಗಳಲ್ಲಿ ಚೀತಾಗಳ ಸಂಖ್ಯೆ ನೂರಕ್ಕೆ ಇಳಿಯಲಾರಂಭಿಸಿದಾಗ ಆಗಿನ ರಾಜವಂಶಸ್ಥರು ಆಫ್ರಿಕಾದ ಚೀತಾಗಳನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿದ್ದರಂತೆ.

1918 ಮತ್ತು 1945ರ ನಡುವೆ ಸುಮಾರು 200 ಚೀತಾಗಳನ್ನು ಆಮದು ಮಾಡಿಕೊಳ್ಳಲಾಗಿತ್ತು ಎನ್ನುತ್ತದೆ ದಾಖಲೆ. ಅವುಗಳು ಏನಾದವೋ, ಅಥವಾ ಸ್ವಾತಂತ್ರ್ಯದ ಹೊಸ್ತಿಲಲ್ಲಿ ಉಳಿದಿದ್ದವು ಅವೇ ಆಗಿದ್ದವೋ ಗೊತ್ತಿಲ್ಲ. ಅಲ್ಲಿದ ಮುಂದೆ ಚೀತಾಗಳನ್ನು ಮತ್ತೆ ಅಭಿವೃದ್ಧಿಪಡಿಸುವ ಮಾತುಗಳು ಕೇಳಿಬಂದವು. ಮಧ್ಯ ಭಾರತದಲ್ಲಿ ಚೀತಾಗಳ ರಕ್ಷಣೆಗೆ ವಿಶೇಷ ಆದ್ಯತೆ ನೀಡುವಂತೆ ೧೯೫೨ರಲ್ಲಿ ಭಾರತ ದಲ್ಲಿ ನಡೆದ ಮೊದಲ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಸರಕಾರ ಕರೆ ನೀಡಿತ್ತು. ನಂತರ ನನೆಗುದಿಗೆ ಬಿದ್ದಿತ್ತು.

ತೀರಾ ಇತ್ತೀಚೆಗೆ 2009ರಲ್ಲಿ ಮತ್ತೊಮ್ಮೆ ಇಂಥ ಪ್ರಯತ್ನ ಆರಂಭವಾಯಿತು. 2010 ಮತ್ತು 2012ರ ನಡುವೆ ಹತ್ತು
ಸ್ಥಳಗಳನ್ನು ಸಮೀಕ್ಷೆ ಮಾಡಲಾಗಿತ್ತು. ಕೊನೆಗಂತೂ ಇದೀಗ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು ಚೀತಾಗಳು ಬಂದಿಳಿದಿವೆ. ಇದು ಯಶಸ್ವಿಯಾದಲ್ಲಿ ಏಷ್ಯಾದ ಸಿಂಹಗಳ ಪುನರುಜ್ಜೀವನ ಯತ್ನಕ್ಕೂ ಚಾಲನೆ ದೊರೆಯಬಹುದು. ಹಾಗೆಯೇ ಘೇಂಡಾಮೃಗಗಳ ಸಂತತಿ ವೃದ್ಧಿಗೂ ಇನ್ನಷ್ಟು ವೇಗ ದೊರೆಯಬಹುದು.

1984ರಲ್ಲೇ ಅಸ್ಸಾಂನ ಪೊಬಿಟೋರಾದಿಂದ ಉತ್ತರ ಪ್ರದೇಶದ ದುಧ್ವಾಕ್ಕೆ ಘೇಂಡಾಮೃಗಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸ ಲಾಗಿದೆ. ಇವೆರಡೂ ವನ್ಯ ಜೀವಿಗಳ ಸಂಖ್ಯೆಯೂ ದೇಶದಲ್ಲಿ ಗಣನೀಯವಾಗೇನೂ ಉಳಿದಿಲ್ಲ. ಹಾಗಾಗಿ ‘ಪ್ರಾಜೆಕ್ಟ್ ಚೀತಾ’ಕ್ಕೆ ಇನ್ನಿಲ್ಲದ ಮಹತ್ವ. ಈಗಿರುವ ಪ್ರಶ್ನೆ, ಇಷ್ಟೆಲ್ಲ ನಿರೀಕ್ಷೆಗಳನ್ನು ಹೊತ್ತಿರುವ ಈ ಯೋಜನೆ ಯಶಸ್ವಿಯಾದೀತೇ? ಹೇಳಿ ಕೇಳಿ ಚೀತಾಗಳು ‘ಮನೆಗುಬ್ಬಿ’ -ಅಂದರೆ ಅವು ತಮ್ಮ ಮೂಲ ಆವಾಸಸ್ಥಾನಗಳಲ್ಲಿಯಷ್ಟೇ ಬದುಕಿ ಬಲ್ಲವು.

ಹುಲಿಯೋ, ಈಗ ನಮ್ಮಲ್ಲಿರುವ ಚಿರತೆಯೋ ಇರುವಂತೆ ಇರುವಂಥದ್ದಲ್ಲ. ತನ್ನೂರಲ್ಲಿ (ತನ್ನ ಜಾಗದಲ್ಲಿ) ತನ್ನದೇ ಆದ ನಿರ್ದಿಷ್ಟ ನೆಲೆಯನ್ನು ಸೃಷ್ಟಿಸಿ ಅಲ್ಲಿನ ಸಾಧು ಪ್ರಾಣಿಗಳನ್ನು ಬೇಟೆಯಾಡಿಕೊಂಡು ಬದುಕುವಂಥವು. ಹಾಗೆ ನೋಡಿದರೆ
ಸಿಕ್ಕಾಪಟ್ಟೆ ವೇಗದಲ್ಲಿ ಓಡುತ್ತವೆ ಎಂಬುದನ್ನು ಹೊರತು ಪಡಿಸಿ ಹುಲಿ, ಚಿರತೆಗಳಿಗೆ ಹೋಲಿಸಿದರೆ ತೀರಾ ಬಲಿಷ್ಠ, ಸದೃಢ ದೇಹ ಪ್ರಕೃತಿಯನ್ನು ಹೊಂದಿರುವ ಪ್ರಾಣಿಯೂ ಅಲ್ಲ.

ದಟ್ಟ ಕಾಡಲ್ಲೂ ಇರಲಾಗದ, ಮರಗಳನ್ನು ಹತ್ತಲಾಗದ, ಕೇವಲ ಹುಲ್ಲುಗಾವಲುಗಳಲ್ಲಿ ಓಡಾಡಿಕೊಂಡಿರುವ, ಹೆಚ್ಚೇನೂ ಸಂಘರ್ಷ- ಗಲಾಟೆಗಳಿಗೆ ಹೋಗದ, ತನ್ನ ಕುಟುಂಬವೊಂದಿಗನಾಗಿ ಬದುಕುವ ಪಾಣಿ. ಹೀಗಾಗಿ ಅಪರಿಚಿತ ವಾತಾವರಣ, ತಾಣಗಳಲ್ಲಿ ಅವಕ್ಕೆ ಬೇಗನೆ ಹೊಂದಿಕೊಳ್ಳಲಾಗದು. ಮಧ್ಯಪ್ರದೇಶ ಕುನೂ ಉದ್ಯಾನವನ ತುಸು ವಿಶಾಲವಾಗಿದ್ದು, ಅವಕ್ಕೆ ಪೂರಕವಾಗಿವೆ ಎಂಬುದನ್ನು ಬಿಟ್ಟರೆ ಚೀತಾಗಳು ಇಲ್ಲಿನ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಬದುಕಬಲ್ಲವೇ ಎಂಬುದಿನ್ನೂ ಈ ಹಂತದಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ.

ಇಂಥ ಅನುಮಾನಗಳಿಗೆ ಕಾರಣ ಇಲ್ಲದಿಲ್ಲ. ಮೊದಲೇ ಬೇಟೆಯ, ಮಾನವ ಸಂಘರ್ಷದ ಪರಿಣಾಮ ಅಳಿದ ಜೀವಿಗಳಿವು. ಹಾಗೆ ನೋಡಿದರೆ, ಬೇಟೆ ಅಧಿಕೃತವಾಗಿ ನಿಷೇಧವಿದ್ದರೂ ನಮ್ಮಲ್ಲಿ ಕಳ್ಳಾಟದಲ್ಲಿ ಬೇಟೆ ನಡೆದೇ ಇರುವುದು ರಹಸ್ಯ ಸಂಗತಿಯೇನಲ್ಲ. ಇನ್ನು ನಗರೀಕರಣದ ಈ ಯುಗದಲ್ಲಿ ಮಾನವ ಸಂಘರ್ಷ ಹಿಂದೆಂದಿಗಿಂತಲೂ ಹೆಚ್ಚೇ ಇದೆ. ಇಂದಿಗೂ ಆಗೀಗ ಹುಲಿಯಂಥ ಹುಲಿ, ಆನೆಗಳು ಮಾನವ ಸಂಘರ್ಷಕ್ಕೆ ಪ್ರತ್ಯಕ್ಷ-ಪರೋಕ್ಷವಾಗಿ ಬಲಿಯಾಗುತ್ತಿರುವ ವರದಿಗಳು ಆಗುತ್ತಲೇ ಇವೆ.

ಹಾಗಿರುವಾಗ ಕೇವಲ ವಿಶಾಲ ಹುಲ್ಲುಗಾವಲಿನ ಜಾಗವಿದೆ, ಪೂರಕ ವಾತಾವರಣವಿದೆ ಎಂದ ಮಾತ್ರಕ್ಕೆ ಚೀತಾಗಳು ಉಳಿದೇ
ಬಿಡುತ್ತವೆ ಎನ್ನಲಾಗದು. ಯಾರ ತಂಟೆ, ತಕರಾರಿಗೂ ಹೋಗದ, ತೀರಾ ಬಲಿಷ್ಠವೂ ಅಲ್ಲದ ಚೀತಾಗಳಿಗೆ ಮಾನವನ ನಂತರದ
ಮೊದಲ ಶತ್ರುವೇ ನಮ್ಮ ಚಿರತೆಗಳು. ಮಾತ್ರವಲ್ಲ, ಕರಡಿ, ಕಾಡುನಾಯಿಗಳ ಕಾದಾಟದಲ್ಲೂ ಸೋಲು ಚೀತಾಗಳದ್ದೇ ಎಂಬುದು ಜೀವಪಯಣದ ದಾಖಲೆಗಳಲ್ಲಿ ಇದೆ.

ಇಂಥವೆಲ್ಲ ಆಕ್ರಮಣಗಳನ್ನು ಆಫ್ರಿಕಾದಿಂದ ಬಂದ ಈ ಎಂಟು ಜೀವಿಗಳು ಎದುರಿಸಿ ಈ ನೆಲದಲ್ಲಿ ಉಳಿಯಬಹುದೇ? ಒಂದೊಮ್ಮೆ ಇವು ಉಳಿದರೂ, ಸಂತಾನ ವೃದ್ಧಿಯಾಗಿ ನಮ್ಮ ಉದ್ದೇಶ ಈಡೇರೀತೇ? ಏಕೆಂದರೆ ಚೀತಾಗಳಿಗೆ ಬೇಟೆ ಪ್ರಾಣಿಗಳು
ಸಾಕಷ್ಟಿರುವುದು, ತಿರುಗಾಡಲು ಮೈಲುಗಟ್ಟಲೆ ಹುಲ್ಲುಗಾವಲು ಇರುವುದು ಎಷ್ಟು ಮುಖ್ಯವೋ, ತಂಟೆ-ತಕರಾರಿಲ್ಲದ ನೆಮ್ಮದಿಯ ವಾತಾವರಣವೂ ಅಷ್ಟೇ ಮುಖ್ಯ. ಅಂಥ ಸ್ಥಳಗಳಲ್ಲಿ ಮಾತ್ರವೇ ಅವು ಪ್ರಜನನ ಪ್ರಕ್ರಿಯೆಗೆ ಮುಂದಾಗುವುದು. ನಿರ್ಬಂಧಿತ ಪ್ರದೇಶಗಳಲ್ಲಿ ಸಂತಾನೋತ್ಪಾದನೆಗೆ ಮುಂದಾಗುತ್ತವೆ ಎಂದು ಹೇಳಲಾಗದು.

ಹಿಂದೆ ರಾಜರುಗಳ ಬಂಧನದಲ್ಲಿದ್ದ ಕಾರಣಕ್ಕೇ ಸಂತಾನಾತ್ಪತ್ತಿಗೆ ಮುಂದಾಗದೇ ಸಂತತಿ ಕ್ಷೀಣಿಸಲೂ ಕಾರಣವಾಗಿದ್ದು. ಈಗಲೂ ಆ ಸಮಸ್ಯೆ ಇದ್ದೇ ಇದೆ. ಎಲ್ಲದರ ನಡುವೆ ಅಪರೂಪದ ಯೋಜನೆಯಂತೂ ಆರಂಭವಾಗಿದೆ. ಅತ್ಯಂತ ಮೌಲಿಕ ಪಾರಿಸಾರಿಕ ಕಾರ್ಯವೊಂದಕ್ಕೆ ಸರಕಾರವೇ ಮುಂದಾಗಿರುವುದು ಮಹತ್ವ ಪೂರ್ಣ. ಏನಾದರಾಗಲಿ, ಕೇವಲ ಅಭಿವೃದ್ಧಿ ಹೆಸರಲ್ಲಿ
ಕೋಟ್ಯಂತರ ರು. ಮೊತ್ತದ ಅಣೆಕಟ್ಟುಗಳ ನಿರ್ಮಾಣ, ರಸ್ತೆ, ಕಾಲುವೆಗಳಂಥ ಮೂಲಸೌಕರ್ಯದ ಹೆಸರಿನಲ್ಲಿ ಕಾಡುನಾಶ, ಶುಷ್ಕ ಆರ್ಥಿಕತೆಯ ಲೆಕ್ಕಾಚಾರ, ಸ್ಯಾಟಲೈಟ್ ಗಳ ಬಾಹ್ಯಾಕಾಶ ಯೋಜನೆ ಇತ್ಯಾದಿಗಳ ನಡುವೆಯೂ ಕೊನೆ ಪಕ್ಷ ಇಂಥ ದ್ದೊಂದು ‘ಅಭಿವೃದ್ಧಿಯೇತರ’ ಪರಿಸರದ ಯೋಜನೆಗೆ ಮನ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಸಾರ್ಥಕ್ಯ.