Monday, 25th November 2024

ರೌಡಿಶೀಟರ್ ಪಾಗಲ್ ಸೀನ ಕೊಲೆ ಹಂತಕರ ಬಂಧನ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಹಳೇ ವೈಷಮ್ಯದ ಹಿನ್ನೆೆಲೆಯಲ್ಲಿ ರೌಡಿಶೀಟರ್  ಶ್ರೀನಿವಾಸ್‌ನನ್ನು ಕೊಲೆ ಮಾಡಿದ್ದ 9 ಜನರನ್ನು ವೈಟ್ ಫಿಲ್ಡ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಸಂತೋಷ್, ವಿಜಯ್, ಸುರೇಶ್, ಪೀಟರ್ ಕುಮಾರ್, ಲೋಕೇಶ್  ಹಾಗೂ ಬಾಲಸುಬ್ರಹ್ಮಣ್ಯಂ, ನವಾಜ್, ದಿಲೀಪ್, ನ್ಯಾಾಮತ್ ಬಂಧಿತ ಆರೋಪಿಗಳು. ಜೂ.7 ರಂದು ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್‌ಬಿ ಶಾಸ್ತ್ರಿ ನಗರದ ಅತ್ತರ್ ಕಾಂಪೌಂಡ್ ಬಳಿಯ ಜಮೀಲ್ ಅಹಮಸ್ ಎಂಬುವವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನ್‌ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

ಪ್ರಕರಣದ ಜಾಡು ಹಿಡಿಯಲು ಪೊಲೀಸರು ಪ್ರತ್ಯೇಕ ತಂಡ ರಚಿಸಿದ್ದರು. ಕೊಲೆಯಾದ ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನ ಜೆಪಿ ನಗರ ರೌಡಿಶೀಟರ್ ಆಗಿದ್ದ. ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ ಕಳೆದ 2 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡಿದ್ದ. ಕೊಲೆಯಾದ ಸೀನ ಹಾಗೂ ಆರೋಪಿ ಸಂತೋಷ  ಕಳೆದ ಏಳು ವರ್ಷಗಳಿಂದ ಸ್ನೇಹಿತರಾಗಿದ್ದರು. ಆದರೆ, ಸೀನ ಸಂತೋಷನ ಸಹಚರರನ್ನು ಸೇರಿಸಿಕೊಂಡು ಮನೆ ಕಳವು ಸೇರಿ ಇತರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಇದೇ ವಿಷಯಕ್ಕೆೆ ಸಂತೋಷ್ ಹಾಗೂ ಸೀನನ ನಡುವೆ ದ್ವೇಷ ಬೆಳೆದಿತ್ತು.

ಬಳ್ಳಾರಿ ಶಿವ ಇತರರೊಂದಿಗೆ ಸೇರಿ ಈ ಹಿಂದೆ ಸಂತೋಷ್ ಗೆಳೆಯನಾದ ಶ್ರೀನಿವಾಸ್ ಅಲಿಯಾಸ್ ಸ್ವ್ಯಾಾಂಡ್ ಕುಟ್ಟಿಯನ್ನು ಕೊಲೆ ಮಾಡಿದ್ದ. ಹೀಗಾಗಿ ಬಳ್ಳಾರಿ ಶಿವ ಹಾಗೂ ಆತನ ಸಹಚರರನ್ನು ಕೊಲೆ ಮಾಡಲು ಸಂತೋಷ್ ಸಂಚು ರೂಪಿಸಿದ್ದ. ಈ ವಿಷಯ ತಿಳಿದ ಶಿವನ ಸಹೋದರ ಪುನೀತ್ ಎಂಬಾತ ಸಂತೋಷ್‌ನನ್ನು ಹುಡುಕಿಕೊಡುವಂತೆ ಸೀನನಿಗೆ ದುಂಬಾಲು ಬಿದ್ದಿದ್ದ.
ಅದಕ್ಕಾಗಿ ಸೀನ, ತನಗೆ 10 ಲಕ್ಷ ರು. ನೀಡಿದರೇ, ಸಂತೋಷನನ್ನು ಹುಡುಕಿಕೊಡುವುದಾಗಿ ವಿಜಯ್ ಎದುರು ಫೋನ್‌ನಲ್ಲಿ ಮಾತುಕತೆ ನಡೆದಿತ್ತು. ನಂತರ ವಿಜಯ್, ಸಂತೋಷನಿಗೆ ನಡೆದ ಮಾಹಿತಿಯನ್ನು ತಿಳಿಸಿದ್ದನು. ಈ ವಿಷಯ ಕೂಡ ಸಂತೋಷ್ ಹಾಗೂ ಸೀನ್‌ನ ನಡುವೆ ವೈರತ್ವ ಬೆಳೆಯಲು ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು, ವಿಜಯ್‌ಗೆ ಸೀನ, ಗಾಂಜಾ ತಂದು ಕೊಡುವಂತೆ ಪೀಡಿಸಿದ್ದಲ್ಲದೇ, ಒಂದು ಬಾರಿ ಹಲ್ಲೆ ಸಹ ಮಾಡಿದ್ದ. ಸಂತೋಷ್ ಸಹಚರರಿಗೂ ಸೀನ, ಗಾಂಜಾ ಹಾಗೂ ಹಣಕ್ಕಾಗಿ ಪೀಡಿಸಿದ್ದನು. ಹೀಗಾಗಿ ಎಲ್ಲರೂ ಒಗ್ಗೂಡಿ ರೌಡಿಶೀಟರ್ ಸೀನನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.