Friday, 20th September 2024

ಸುದ್ದಿ-ಮಾಧ್ಯಮಗಳು ಆರೋಗ್ಯಕ್ಕೆ ಹಾನಿಕರವೇ ?

ವೈದ್ಯ ವೈವಿಧ್ಯ

drhsmohan@gmail.com

ನಮ್ಮ ಸುಖ, ಅಸ್ತಿತ್ವ ಅಥವಾ ದೈನಂದಿನ ಜೀವನಕ್ಕೆ ಹತ್ತಿರವಾಗಿರುವಂಥ ಘಟನೆಗಳನ್ನು ದೃಶ್ಯಮಾಧ್ಯಮಗಳಲ್ಲಿ ವೀಕ್ಷಿಸುವು ದರಿಂದ ನಮ್ಮ ದೇಹದ ಬೆದರಿಕೆಯ ತಾಂತ್ರಿಕತೆ ಉದ್ದೀಪನಕೊಳ್ಳುತ್ತದೆ. ಇಂಥ ಘಟನೆಗಳ ಬಗ್ಗೆ ಏನೂ ಮಾಡಲು ಶಕ್ತಿ ಯಿಲ್ಲದ ಅಸಹಾಯಕರಾಗಿರುವುರಿಂದ ನಮ್ಮ ಮನಸ್ಸು ಚಿಂತೆಯ ಪರಿಸ್ಥಿತಿಗೆ ತಳ್ಳಲ್ಪಡುತ್ತದೆ.

ನಮ್ಮಲ್ಲಿ ಹೆಚ್ಚಿನವರು ಬೆಳಗ್ಗೆ ಎದ್ದ ಕೂಡಲೆ ಫೋನ್‌ನಲ್ಲಿ ಅಥವಾ ಅದಾ ಗಲೇ ಮನೆಗೆ ದಿನಪತ್ರಿಕೆ ಬಂದಿದ್ದರೆ ಅದರಲ್ಲಿ ವಾರ್ತೆ ನೋಡಲು ಉತ್ಸುಕ ರಾಗುತ್ತೇವೆ. ಇದು ಕಳೆದ ಹಲವಾರು ವರ್ಷಗಳಿಂದ ಜಗತ್ತಿನಾದ್ಯಂತ ನಡೆಯುತ್ತಿರುವ ವಿದ್ಯಮಾನ. ಈ ರೀತಿಯ ಹವ್ಯಾಸ, ನಡವಳಿಕೆ ನಮ್ಮ ಆರೋಗ್ಯಕ್ಕೆ ಹಾನಿಮಾಡುತ್ತಿದೆಯೇ? ಈ ಬಗ್ಗೆ ಜಾಗತಿಕ ತಜ್ಞರು ಹಲವಾರು ಅಧ್ಯಯನ ನಡೆಸಿದ್ದಾರೆ. ಅದನ್ನು ಆಧರಿಸಿ ಈ ಲೇಖನ.

ಪ್ರಪಂಚದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಸವಾಲಿನ ಘಟನೆಗಳು ನಡೆದಿವೆ. ಹಲವು ದೇಶಗಳಲ್ಲಿ ರಾಜಕೀಯ, ಆರ್ಥಿಕ ಅಲ್ಲೋಲ ಕಲ್ಲೋಲ ಗಳು ಜರುಗಿವೆ. ನಮಗೆಲ್ಲ ಗೊತ್ತಿರುವಂತೆ ಕಳೆದ ಎರಡೂವರೆ ವರ್ಷ ಗಳಿಂದ ಕೋವಿಡ್ ಮಹಾಮಾರಿ ಸಾಂಕ್ರಾಮಿಕ, ಜಗತ್ತಿನ ಹಲವೆಡೆ ವಾತಾವರಣದ ತಲ್ಲಣಗಳು, ಯುದ್ಧ, ಅಂತರ್ಯುದ್ಧ ಈ ತರಹದ ಭೀಕರ ಘಟನೆಗಳು ಜರುಗುತ್ತಿವೆ.

ಹೀಗೆ ಏನೆಲ್ಲ ಘಟನೆಗಳು ಜರುಗುತ್ತಿವೆ ಎಂದು ತಿಳಿದು ಕೊಳ್ಳಲು ಹೆಚ್ಚಿನವರು ಉತ್ಸುಕರಾಗಿರುವುದು ಸಹಜ. ಈಗಿರುವ 247 ವ್ಯವಸ್ಥೆಯ ಟಿವಿ, ಸ್ಮಾರ್ಟ್ ಫೋನ್, ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ಗಳ ಸೌಲಭ್ಯದಿಂದಾಗಿ ಇವನ್ನೆಲ್ಲ ನಾವಿದ್ದ ಸ್ಥಳ ದಿಂದಲೇ ತಿಳಿಯುವುದು, ವೀಕ್ಷಿಸುವುದು ಸುಲಭವಾಗಿದೆ.

ಹೀಗಾಗಿ ಆಗಾಗ ಟಿವಿ, ಸ್ಮಾರ್ಟ್ ಫೋನ್‌ಗಳಲ್ಲಿ ಬರುವ ಹೆಡ್‌ಲೈನ್ ಗಳನ್ನು ಗಮನಿಸುವುದನ್ನು ತಪ್ಪಿಸುವುದು ಕಷ್ಟ.
ಬಹಳಷ್ಟು ಜನರಿಗೆ ಇದು ತೊಂದರೆಯಾಗಿ ತೋರುದಿಲ್ಲ. ಏಕೆಂದರೆ, ಅವರು ಎಷ್ಟು ಅಗತ್ಯವೋ ಅಷ್ಟು ಬಾರಿ ನೋಡುತ್ತಾರೆ, ಓದುತ್ತಾರೆ. ನಂತರ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿರುವ ಇನ್ನೊಂದು ವರ್ಗದ ಜನರೂ ಇದ್ದಾರೆ. ಅವರಿಗೆ ಇದೊಂದು ಗೀಳಾಗಿ ಪರಿಣಮಿಸಿ ಅವರ ದೈಹಿಕ-ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ಅಮೆರಿಕದಲ್ಲಿ ಇತ್ತೀಚಿಗೆ ಕೈಗೊಂಡ ಅಧ್ಯಯನವು ತಿಳಿಸುತ್ತದೆ.

ಮಾನಸಿಕ ತುಮುಲಗಳ ನಿಯಂತ್ರಣಕ್ಕಾಗಿ ಸುದ್ದಿಯನ್ನು ಬಳಸುತ್ತೇವೆಯೇ, ಜೀವನದ ಕಷ್ಟಗಳಿಂದ ಮುಕ್ತವಾಗಿಸಿಕೊಳ್ಳಲು ಒಂದು ಮಾರ್ಗವಾಗಿ ಉಪಯೋಗಿಸುತ್ತೇವೆಯೇ? ನಾವು ಎಷ್ಟು, ಯಾವ ರೀತಿಯಲ್ಲಿ ಯಾವ ಉದ್ದೇಶಕ್ಕೆ ಸುದ್ದಿ ಉಪಯೋ ಗಿಸುತ್ತೇವೆ, ನಮ್ಮ ಜೀವನದಲ್ಲಿ ಅದು ಎಷ್ಟು ತೂರಿಕೊಳ್ಳುತ್ತದೆ ಹಾಗೂ ಅದನ್ನು ನಾವು ಎಷ್ಟು ನಿಯಂತ್ರಿಸ ಬಹುದು- ಈ ಎಲ್ಲವನ್ನೂ ಗಮನಿಸಿದರೆ ಅದು ಒಂದು ರೀತಿಯ ವ್ಯಸನ ಅಥವಾ ಗೀಳು (Addiction) ಎನಿಸುತ್ತದೆ ಎಂಬುದು ಹಿರಿಯ ತಜ್ಞರ ಅಭಿಪ್ರಾಯ.

ಹೆಚ್ಚಿನ ಪ್ರಮಾಣದ ಸುದ್ದಿಯನ್ನು ಓದಿಯೂ ತಮ್ಮ ದೈನಂದಿನ ಜೀವನಕ್ಕೆ ಏನೂ ತೊಂದರೆಯಾಗದ ರೀತಿಯಲ್ಲಿ ತೆಗೆದು ಕೊಳ್ಳುವ ಒಂದು ವರ್ಗ ಹಾಗೂ ಹೆಚ್ಚಿನ ಸುದ್ದಿ ಓದಿ ಅಥವಾ ಬೇರೆ ರೀತಿಯಿಂದ ತಿಳಿದುಕೊಳ್ಳುವುದು ಸಮಸ್ಯೆಯಾಗಿರುವ ಗುಂಪು ಎಂಬ ಎರಡು ವಿಧದ ಜನರನ್ನು ಈ ಅಧ್ಯಯನದಲ್ಲಿ ಕಂಡುಕೊಳ್ಳಲಾಯಿತು. ಸಮಸ್ಯೆ ಇರುವ ಈ ಎರಡನೇ ಗುಂಪು ಯಾವಾಗಲೂ ಸುದ್ದಿಯಲ್ಲಿನ ಅಪಘಾತ, ಕೊಲೆ, ಸುಲಿಗೆ, ವಾತಾವರಣದ ಅವಘಡಗಳು- ಈ ರೀತಿಯ ಋಣಾತ್ಮಕ ವಿಚಾರ ಗಳಲ್ಲಿಯೇ ಮುಳುಗಿರುತ್ತಾರೆ.

ಹಾಗೆಯೇ ಪದೇ ಪದೆ ಅದೇ ವಿಷಯವನ್ನು ಯೋಚಿಸುತ್ತಿರುತ್ತಾರೆ. ಹೀಗೆ ಅವರು ಇಂಥ ಸುದ್ದಿಯ ಅಂತರಾಳಕ್ಕೆ ತೀವ್ರವಾಗಿ ಇಳಿಯುವುದರಿಂದ ಅವರಿಗೆ ಅರಿವಿಲ್ಲದೆಯೇ ಅವರ ದೈನಂದಿನ ಜೀವನ ತುಂಬ ಏರುಪೇರಾಗುತ್ತದೆ. ಋಣಾತ್ಮಕ ಮತ್ತು ಅಪಾಯಕಾರಿ ಸುದ್ದಿಗಳನ್ನೊಳಗೊಂಡ ವಿಷಯಗಳನ್ನು ಸಮಸ್ಯೆಯ ರೀತಿಯಲ್ಲಿ ತೆಗೆದುಕೊಳ್ಳುವುದರಿಂದ ಅದು ದೈಹಿಕ-ಮಾನಸಿಕ ಆರೋಗ್ಯಕ್ಕೆ ನಿಜವಾಗಿಯೂ ಹಾನಿಯುಂಟುಮಾಡುತ್ತದೆ ಎಂಬುದು ಬ್ರಿಟಿಷ್ ಮಾನಸಿಕ ಸೊಸೈಟಿಯ ಹಿರಿಯ ತಜ್ಞ ಡಾ. ಹೀಥರ್ ಸೆಕ್ವೀರಾರ ಅಭಿಪ್ರಾಯ.

ಮೊದಲು ತಿಳಿಸಿದ ಅಧ್ಯಯನದಲ್ಲಿ 1100 ವಯಸ್ಕರಲ್ಲಿ ಈ ಸಮೀಕ್ಷೆ ನಡೆಸಲಾಯಿತು. ಆ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಸುದ್ದಿಯನ್ನು ಸಮಸ್ಯಾತ್ಮಕ ರೀತಿಯಲ್ಲಿ ತೆಗೆದುಕೊಳ್ಳುವವರು ಎಂಬ ಅಂಶ ಹೊರಬಿದ್ದಿರುವುದು ಗಮನಾರ್ಹ. ಅದರಲ್ಲಿಯೂ ಶೇ. 16.5ರಷ್ಟು ಜನರು ಸುದ್ದಿಯ ಆಳಕ್ಕೆ ಇಳಿಯವುದರಿಂದ ಅದು ಅವರ ದೈನಂದಿನ ಜೀವನದಲ್ಲಿ ವಿಶೇಷ ಪರಿಣಾಮ ಬೀರಿರುವುದು ಕಂಡುಬಂದಿದೆ.

ಮಾನಸಿಕ ಮತ್ತು ದೈಹಿಕ ಪರಿಣಾಮಗಳು ಸುದ್ದಿಯನ್ನು ಹಾಗೆಯೇ ಓದಿ ತಮ್ಮ ದೈನಂದಿನ ಕೆಲಸದಲ್ಲಿ ತೊಡಗುವವರಿಗಿಂತ
ಸುದ್ದಿಯ ಬಗ್ಗೆಯೇ ಚಿಂತೆ ಮಾಡಿ ಅದರ ಬಗ್ಗೆಯೇ ಯೋಚಿಸುವರು ಹಾಗೂ ಹತ್ತಿರದವರಲ್ಲೂ ಆ ಬಗ್ಗೆ ಮಾತನಾಡುವವರು ಹೆಚ್ಚಿನ ದೈಹಿಕ-ಮಾನಸಿಕ ತೊಂದರೆಗಳಿಗೆ ಒಳಗಾಗುತ್ತಾರೆ. ಅವರಲ್ಲಿ ವಿಪರೀತ ಮಾನಸಿಕ ಒತ್ತಡ, ತೀವ್ರ ಆತಂಕದ
ಪರಿಸ್ಥಿತಿ, ಸರಿಯಾಗಿ ನಿದ್ರೆ ಬರದಿರುವುದು, ಬಹಳ ಬೇಗ ಸುಸ್ತಾಗುವುದು, ಮೈ ಕೈ ನೋವು, ಯಾವುದೇ ಕೆಲಸವನ್ನು ಗಮನ ವಿಟ್ಟು ಮಾಡಲು ಸಾಧ್ಯವಾಗದಿರುವುದು, ಹೊಟ್ಟೆ ಮತ್ತು ಕರುಳಿನ ಭಾಗಗಳಲ್ಲಿ ಕೆಲವು ತೊಂದರೆಗಳು- ಈ ರೀತಿಯ ಲಕ್ಷಣ ಗಳು ಕಾಣಿಸಿಕೊಳ್ಳುತ್ತವೆ.

ಸುದ್ದಿಯನ್ನು ಗಂಭೀರವಾಗಿ ಸ್ವೀಕರಿಸಿ ಅದನ್ನೇ ಧ್ಯಾನಿಸುವವರಿಗೆ ತೀವ್ರವಾದ ದೀರ್ಘಕಾಲದ ಮನಸಿಕ ಒತ್ತಡ (Chronic
Stress) ಉಂಟಾಗಿ ಹಲವು ದೈಹಿಕ-ಮಾನಸಿಕ ಏರುಪೇರುಗಳಿಗೆ ಕಾರಣವಾಗುತ್ತವೆ ಎಂಬುದು ಈ ಅಧ್ಯಯನದ ಮುಖ್ಯಸ್ಥ ಟೆಕ್ಸಾಸ್ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ಮೆಕ್ ಲಾಗ್ನಿನ್‌ರ ಅಭಿಪ್ರಾಯ. ಹಾಗೆಯೇ ಸುದ್ದಿಯನ್ನು ಮತ್ತಷ್ಟು ಕೆದಕಿ ಅದರ ಹಿಂದೆ ಹೋಗುವವರಲ್ಲಿ ಮಾನಸಿಕ ಒತ್ತಡವು ಪರಿಣಾಮಕ್ಕೆ ಎಡೆಮಾಡಿ ದೇಹದಲ್ಲಿ ಉರಿಯೂತ (Inflammation) ಉಂಟಾಗಲು ಕಾರಣವಾಗುತ್ತದೆ.

ತೀವ್ರ ಹೆದರಿಕೆಗೆ ನಮ್ಮ ದೇಹವು ಪ್ರತಿಕ್ರಿಯಿಸುವ ಸಹಜವಾದ ಪ್ರವೃತ್ತಿ ಉದ್ದೀಪನಗೊಂಡು ಈ ರೀತಿ ಆಗುತ್ತದೆ ಎಂಬುದು ಮತ್ತೊಬ್ಬ ಹಿರಿಯ ತಜ್ಞರ ಅಭಿಮತ. ನಮ್ಮ ದೇಹವು ಯಾವುದೇ ಘಟನೆಯಿಂದ ಹೆದರಿದಾಗ, ಒತ್ತಡದ ಸಮಯದಲ್ಲಿ ದೇಹದಲ್ಲಿ ಸ್ರವಿಸಲ್ಪ ಡುವ ಅಡ್ರಿನಾಲಿನ್, ಕಾರ್ಟಿಸೋಲ್ ಹಾರ್ಮೋನ್‌ಗಳು ತೀವ್ರ ಅಧಿಕ ಪ್ರಮಾಣದಲ್ಲಿ ಸ್ರವಿಸಲ್ಪಡುತ್ತವೆ. ಸಾವಿರಾರು ವರ್ಷಗಳಿಂದ ಮನುಕುಲ ಈ ಮಟ್ಟದಲ್ಲಿ ಉಳಿದುಕೊಂಡಿರುವುದಕ್ಕೆ ಕಾರಣವೇ ಈ ರೀತಿಯ ಹಾರ್ಮೋನುಗಳು. ಗಂಭೀರ ಹಾಗೂ ಭಯ ಹುಟ್ಟಿಸುವ ಸುದ್ದಿಯನ್ನು ನೋಡಿದಾಗ ಕೇಳಿದಾಗ ಇದೇ ದೈಹಿಕ ಪ್ರಕ್ರಿಯೆ ಉತ್ತೇಜನಗೊಳ್ಳುತ್ತದೆ.

ಇದಕ್ಕೆ ಮಾಧ್ಯಮಗಳು ಹೊಣೆಯೇ? ಟಿವಿ ಮಾಧ್ಯಮಗಳು ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಅತಿರಂಜಿತ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದು ಬಹುತೇಕರಿಗೆ ಗೊತ್ತಿದೆ. ಈ ಬಗೆಗೆ ಹಲವು ಅಧ್ಯಯನಗಳೂ ನಡೆದಿವೆ. ಋಣಾತ್ಮಕ, ಭಯಾನಕ, ಭೀಭತ್ಸ ವಿಷಯಗಳ ಕುರಿತಾಗಿ ಅನಗತ್ಯವಾಗಿ ವಿಸ್ತೃತವಾಗಿ ಪ್ರಸಾರ ಮಾಡುವ ಟಿವಿ, ಮುದ್ರಣ ಹಾಗೂ ಅಂತರ್ಜಾಲ
ಮಾಧ್ಯಮಗಳು ಖಂಡಿತವಾಗಿಯೂ ಇದಕ್ಕೆ ಬಹುಮಟ್ಟಿಗೆ ಹೊಣೆಗಾರರಾಗಿವೆ ಎಂದು ಈ ಅಧ್ಯಯನಗಳು ತಿಳಿಸುತ್ತವೆ. ಸುದ್ದಿಯನ್ನು ಸೆನ್ಸೇಷನ್ ಮಾಡಿದಷ್ಟೂ ಹೆಚ್ಚು ಜನರನ್ನು ಆಕರ್ಷಿಸಬಹುದು ಎಂದು ಇವುಗಳಿಗೆ ಗೊತ್ತಿದೆ.

ಮತ್ತೆ ಮತ್ತೆ ಕಾಣಿಸಿಕೊಳ್ಳುವ ಟಿವಿಯಲ್ಲಿನ ಚಿತ್ರಗಳು, ಅತಿರಂಜಿತವಾಗಿ ತೋರಿಸುವ ವಾರ್ತೆಗಳು ವೀಕ್ಷಕರನ್ನು ಆಕರ್ಷಿಸು ವುದು ಮಾತ್ರವಲ್ಲದೆ ಅವರು ಅದಕ್ಕೆ ಅಂಟಿಕೊಂಡು ವ್ಯಸನಿಗಳಾಗುವಂತೆ ಮಾಡುತ್ತವೆ. ಅಂಥ ಸಮಯದಲ್ಲಿ ತಮ್ಮ ಮಾನಸಿಕ ಅಥವಾ ದೈಹಿಕ ಆರೋಗ್ಯಕ್ಕೆ ಪೂರಕವಾದ ಕೆಲಸ ಮಾಡುವುದು ಬಿಟ್ಟು ಟಿವಿ ವೀಕ್ಷಣೆ ಮಾಡಲು ಅವರನ್ನು ಪ್ರೇರೇಪಿಸುವುದು ಮಾಧ್ಯಮದವರಿಗೆ ಲಾಭಕಾರಿ ಎಂದು ಈ ಬಗ್ಗೆ ಅಧ್ಯಯನ ಕೈಗೊಂಡ ಡಾ. ಹೀತರ್ ಸಿಕ್ವೆರಾ
ನುಡಿಯುತ್ತಾರೆ.

ಕಠಿಣ ಸುದ್ದಿ ಮತ್ತು ಮೃದು ಸುದ್ದಿ ಸುದ್ದಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಆ ಸುದ್ದಿಯ ಬಗೆಯನ್ನು ಅವಲಂಬಿ
ಸಿದೆ. 2020ರಲ್ಲಿ ಕೈಗೊಂಡ ಒಂದು ಅಧ್ಯಯನದಲ್ಲಿ ಸುದ್ದಿಗಳನ್ನು ಕಠಿಣ ಮತ್ತು ಮೃದು ಸುದ್ದಿ ಎಂದು 2 ವಿಧವಾಗಿ ವಿಭಾಗಿಸ ಲಾಯಿತು. ರಾಜಕೀಯ, ಆರ್ಥಿಕ, ಅಂತಾರಾಷ್ಟ್ರೀಯ ವೈಮನಸ್ಸುಗಳು, ಆಕ್ರಮಣಗಳು ಹಾಗೂ ಆಯಾ ಹೊತ್ತಿನ ಮತ್ತು ತೀರಾ ತುರ್ತು ಇರುವ ಸಾಮಾಜಿಕ ವಿಷಯಗಳನ್ನು ಒಳಗೊಂಡಂಥವನ್ನು ಕಠಿಣ ಸುದ್ದಿ ಎನ್ನಲಾಯಿತು. ಮನರಂಜನೆ, ಸಾಂಸ್ಕೃತಿಕ ಚಟುವಟಿಕೆ, ಜೀವನ ವಿಧಾನ, ಸೆಲೆಬ್ರಿಟಿಗಳ ಬಗೆಗಿನ ಸುದ್ದಿಗಳನ್ನು ಮೃದು ಸುದ್ದಿ ಎನ್ನಲಾಯಿತು. ಕಠಿಣ ಸುದ್ದಿ ನಮ್ಮಲ್ಲಿ ಭಾವನಾತ್ಮಕ ಸಂವೇದನೆಗಳನ್ನು ಹುಟ್ಟಿಸುತ್ತದೆ.

ಒಂದು ಅಧ್ಯಯನದ ಪ್ರಕಾರ ಇದು ವೀಕ್ಷಕರಲ್ಲಿ ಶಾಕ್ ಉಂಟುಮಾಡಬಹುದು, ಹೆದರಿಸಬಹುದು, ಅವರನ್ನು ಮಾನಸಿಕ ವಾಗಿ ವಿಚಲಿತರನ್ನಾಗಿಸಬಹುದು. ಹಾಗೆಯೇ ಅವರ ಮನಸ್ಸನ್ನು ತೀವ್ರವಾಗಿ ಕೆಡಿಸಬಹುದು. ವ್ಯಕ್ತಿಯ ಶಕ್ತಿಯನ್ನು ದಿಸಬಹುದು, ನಿರುತ್ಸಾಹ, ನಿರಾಸಕ್ತಿ ಹುಟ್ಟಿಸಬಹುದು. ಹಾಗೆಯೇ ಜಗತ್ತಿನ ಬಗ್ಗೆ ತಿಳಿದುಕೊಳ್ಳುವ ಇಚ್ಛೆಯನ್ನೇ ಕೆಡಿಸಿ ವ್ಯಕ್ತಿಯ ಧನಾತ್ಮಕ ಸಂವೇದನೆಯನ್ನು ನಾಶಮಾಡಬಹುದು.

ಬೇರೆಯವರ ನೋವಿಗೆ ನಾವು ಸ್ಪಂದಿಸದೆ ಇರಬಹುದು. ಜಗತ್ತಿನಲ್ಲಿ ಆಗುತ್ತಿರುವ ವಿದ್ಯಮಾನಗಳಿಂದ ನಾವು ಖಿನ್ನರಾಗಬ ಹುದು, ಹಾಗೆಯೇ ಈ ಸುದ್ದಿಗಳು ನಮಗೆ ಸಂಬಂಧವಿಲ್ಲ ಎಂಬ ಅಭಿಪ್ರಾಯ ತಾಳಬಹುದು. ಇದಕ್ಕೆ ಒಂದು ಉಪಾಯವೆಂದರೆ ಸುದ್ದಿಗಳಿಂದಲೇ ದೂರವಿರುವುದು. ಆದರೆ ಈಗಿರುವ ಮೊಬೈಲ್, ಟಿವಿ, ಪತ್ರಿಕೆಗಳ ಮಹಾಪೂರದಲ್ಲಿ ಇದು ವ್ಯಾವಹಾರಿಕ ವಲ್ಲ, ಸಾಧ್ಯವೂ ಇಲ್ಲ.

ಹೀಗೆ ಮಾಡುವುದು ಸರಿಯಲ್ಲ ಎಂದು ತಜ್ಞರೂ ಅಭಿಪ್ರಾಯಪಡುತ್ತಾರೆ. ಕೋವಿಡ್-19ರ ಆರಂಭಿಕ ವರ್ಷದಲ್ಲಿ ಬಹಳಷ್ಟು ಜನರು ಇಂತಹ ಋಣಾತ್ಮಕ ಸುದ್ದಿಗಳಿಂದ ವಿಮುಖವಾಗಿದ್ದರು ಎಂದು ಅಮೆರಿಕದಲ್ಲಿನ ಒಂದು ಅಧ್ಯಯನ ತಿಳಿಸುತ್ತದೆ. ಆದರೆ ಹಾಗೆ ಮಾಡುವುದರಿಂದ ಒಂದು ಸಾಂಕ್ರಾಮಿಕ, ಯುದ್ಧ ಅಥವಾ ಘಟಿಸುತ್ತಿರುವ ದುರ್ಘಟನೆಯ ಬಗೆಗಿನ ಹೊಸ ವಿಚಾರಗಳು ತಿಳಿಯುವುದೇ ಇಲ್ಲ. ಹಾಗಾಗಿ ಸುದ್ದಿಗಳನ್ನು ಅವಲೋಕನ ಮಾಡಬಾರದೆಂದು ತಜ್ಞರು ಅಭಿಪ್ರಾಯ ಪಡುವುದಿಲ್ಲ. ಆದರೆ ಸುದ್ದಿಗಳ ಬಗ್ಗೆ ಆರೋಗ್ಯಕರ ಸಂಬಂಧ ಬೆಳೆಸಿಕೊಳ್ಳಬೇಕು ಎಂಬುದು ಅವರ ಅಭಿಮತ. ತಮ್ಮ ದೈನಂದಿನ ಜೀವನಕ್ಕೆ ವ್ಯತ್ಯಯವಾಗ ದಂತೆ ಎಚ್ವರ ವಹಿಸಿ ಸುದ್ದಿಗಳನ್ನು ವೀಕ್ಷಿಸಬೇಕು.

ನಮ್ಮ ಸುಖ, ಅಸ್ತಿತ್ವ ಅಥವಾ ದೈನಂದಿನ ಜೀವನಕ್ಕೆ ಹತ್ತಿರವಾಗಿರುವಂಥ ಘಟನೆಗಳನ್ನು, ಉದಾಹರಣೆಗೆ ಇತ್ತೀಚಿನ ಉಕ್ರೇನಿನ ಯುದ್ಧ, ರೈಲ್ವೆ ಅಥವಾ ಬಸ್ಸುಗಳ ಮುಷ್ಕರ, ಆರ್ಥಿಕ ಸ್ಥಿತಿಯ ಕುಂದುವಿಕೆ- ಈ ತರಹದ ಘಟನೆಗಳನ್ನು ದೃಶ್ಯ ಮಾಧ್ಯಮಗಳಲ್ಲಿ ವೀಕ್ಷಿಸುವುದರಿಂದ ನಮ್ಮ ದೇಹದ ಬೆದರಿಕೆಯ ತಾಂತ್ರಿಕತೆ ಉದ್ದೀಪನಕೊಳ್ಳುತ್ತದೆ. ಇಂಥ ಘಟನೆಗಳ ಬಗ್ಗೆ ಏನೂ ಮಾಡಲು ಶಕ್ತಿಯಿಲ್ಲದ ಅಸಹಾಯಕರಾಗಿರುವುರಿಂದ ನಮ್ಮ ಮನಸ್ಸು ಚಿಂತೆಯ ಪರಿಸ್ಥಿತಿಗೆ ತಳ್ಳಲ್ಪಡುತ್ತದೆ.

ಇದು ನಮ್ಮ ಮಾನಸಿಕ ಒತ್ತಡ ಮತ್ತು ಆತಂಕವನ್ನು ಹೆಚ್ಚಿಸಿ ದೀರ್ಘಕಾಲದ ಒತ್ತಡದ ಸ್ಥಿತಿಗೆ (ಇeಟ್ಞಜ್ಚಿ ಖಠ್ಟಿಛಿoo) ನಮ್ಮನ್ನು
ತಳ್ಳುತ್ತದೆ. ಈ ಒತ್ತಡ ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ತರುವುದಲ್ಲದೆ ದೈಹಿಕ ಆರೋಗ್ಯವನ್ನೂ ಏರುಪೇರು
ಮಾಡುತ್ತದೆ. ಪರಿಹಾರವೆಂದರೆ ಎಲ್ಲ ಸುದ್ದಿಮೂಲಗಳಿಂದ 4-5 ದಿನ ದೂರವಿರುವುದು. ಅದರ ಬದಲು ವಾಕಿಂಗ್ ಮಾಡುವುದು, ಸ್ನೇಹಿತರೊಡನೆ ಹರಟೆ ಕೊಚ್ಚುವುದು ಅಥವಾ ಇಷ್ಟವಾದ ಪುಸ್ತಕವನ್ನು ಓದುವುದು- ಹೀಗೆ ನಮ್ಮ ಚಟುವಟಿಕೆಯನ್ನು ಬದಲಿಸಿದಾಗ ನಮ್ಮ ಯೋಚನಾ ಲಹರಿ ಮತ್ತು ಮೂಡ್ ಹೇಗೆ ಬದಲಾಯಿತು ಎಂಬುದನ್ನು
ನಾವೇ ಕಂಡುಕೊಂಡು ಭವಿಷ್ಯದ ದಿನಚರಿ ರೂಪಿಸಿಕೊಳ್ಳಬೇಕು.

ಹಾಗೆಂದು ಒಳ್ಳೆಯ ಸುದ್ದಿಯ ಬಗ್ಗೆಯೂ ಗಮನಿಸುತ್ತಿರಬೇಕು. ಜಗತ್ತಿನಾದ್ಯಂತ ವಿವಿಧ ರಂಗಗಳಲ್ಲಿ ಏನು ಜರುಗುತ್ತಿವೆ ಎಂಬುದನ್ನು ತಿಳಿದುಕೊಳ್ಳುವುದೂ ಅಷ್ಟೇ ಮುಖ್ಯ. ಹಾಗಾಗಿ ಒಳ್ಳೆಯದು-ಕೆಟ್ಟದ್ದು ಇವುಗಳ ಬಗ್ಗೆ ತುಲನಾತ್ಮಕವಾಗಿ ವಿಶ್ಲೇಷಿಸಿ, ಸಮಯ ಹೊಂದಿಸಿ ನಮ್ಮ ದಿನಚರಿ ರೂಪಿಸಿಕೊಳ್ಳುವುದು ಸರಿಯಾದ ಕ್ರಮ ಎಂಬುದು ತಜ್ಞರ ಅನಿಸಿಕೆ.