Wednesday, 27th November 2024

ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಕನ್ನಡ ಕಲಿಸಬೇಕಿದೆ

ಗೋಡೆ ಬರಹದಲ್ಲಿ ತಪ್ಪು ಸಂದೇಶ ಬರವಣಿಗೆ

ತುಮಕೂರು: ಸಾರ್ವಜನಿಕರು,ವಿದ್ಯಾರ್ಥಿಗಳು ಓಡಾಡುವ ರಸ್ತೆಯ ಗೋಡೆ ಗಳ ಮೇಲೆ ತಪ್ಪು, ತಪ್ಪಾಗಿ ಕನ್ನಡ ಪದಗಳನ್ನು ಬರೆದು, ಕನ್ನಡ ಭಾಷೆಗೆ ಅಪಮಾನ ಮಾಡಿರುವ ತುಮಕೂರು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ನಾಚಿಕೆ ಯಾಗಬೇಕಿದೆ.

ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಸರಕಾರಿ ಎಸ್ಸಿ,ಎಸ್ಟಿ ಮೇಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲ್, ಬಿ.ಸಿ.ಎಂ.ಹಾಸ್ಟಲ್ ಕಾಂಪೌ0ಡ್ ಗೋಡೆಗಳ ಮೇಲೆ ವಿವಿಧ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮದ್ಯಪಾನ, ಧೂಮ ಪಾನ, ಪರಿಸರ ಮಾಲಿನ್ಯ, ಮಹಿಳಾ ಶಿಕ್ಷಣ ಕುರಿತಂತೆ ಹಲವು ಘೋಷವಾಕ್ಯಗಳನ್ನು ಬರೆಸಿದ್ದು, ಅವುಗಳಲ್ಲಿ ಹಲವಾರು ತಪ್ಪುಗಳು ಕಂಡುಬ0ದಿವೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ಕನ್ನಡ ಉಳಿಸಿ, ಬೆಳೆಸುವ ಬದಲಾಗಿ, ಕನ್ನಡವನ್ನು ಕೊಲ್ಲುವ ಕೆಲಸ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಇಲ್ಲಿ ಕನ್ನಡಭಾಷೆಗೆ ಯಾರೇ ಅಪಮಾನ ಮಾಡಿದರು ಸಹಿಸುವುದಿಲ್ಲ. ಜಾಗೃತಿ ಸಂದೇಶಗಳನ್ನು ಬರೆಯಲು ಕನ್ನಡ ಭಾಷೆ ಗೊತ್ತಿಲ್ಲದ ಹೊರರಾಜ್ಯದ ಕೆಲಸಗಾರರಿಗೆ ಗುತ್ತಿಗೆ ನೀಡಿರುವುದೇ ಇದಕ್ಕೆ ಕಾರಣ.

ಕನಿಷ್ಠ ಪಕ್ಷ ಸ್ಮಾರ್ಟ್ ಸಿಟಿ ಅಥವಾ ನಗರಪಾಲಿಕೆಯ ಅಧಿಕಾರಿಗಳಾದರೂ ಇದನ್ನು ಪರಿಶೀಲಿಸಿ, ತಪ್ಪನ್ನು ಸರಿಪಡಿಸುವ ಕೆಲಸ ಮಾಡಬಹುದಿತ್ತು. ಆದರೆ ಇದುವರೆಗೂ ಈ ಕೆಲಸ ಆಗಿಲ್ಲ. ಈ ಭಾಗದಲ್ಲಿ ಒಂದನೇ ತರಗತಿಯಿಂದ ಪದವಿಯವರೆಗೆ ಶಾಲಾ, ಕಾಲೇಜುಗಳಿವೆ. ಅಕ್ಷರ ಕಲಿಯುತ್ತಿರುವ ಮಕ್ಕಳು ಇಂತಹ ತಪ್ಪು ಬರಹ ನೋಡಿ ಕಲಿತರೆ, ಅವರ ಮುಂದಿನ ಭವಿಷ್ಯವೇನು ಎಂದು ಕಾಂಗ್ರೆಸ್ ಮುಖಂಡ ಆತೀಕ್ ಅಹಮದ್ ಕಿಡಿಕಾರಿದ್ದಾರೆ.