Thursday, 28th November 2024

’ಮಧುವನ’ ಕರೆದರೆ: ಶರಣಾಗು ನೀ ಗಜ್ಜರಿಗೆ…

ಸುಪ್ತ ಸಾಗರ

rkbhadti@gmail.com

ಮಧುವನ್ ಗಜ್ಜರಿ ರುಚಿಯಿಂದ ಮಾತ್ರವೇ ಹೆಗ್ಗಳಿಕೆ ಪಡೆದಿಲ್ಲ, ಅದರಲ್ಲಿನ ಆರೋಗ್ಯಕಾರಿ ಅಂಶಗಳೂ ಅದನ್ನು ತರಕಾರಿಗಳಲ್ಲಿ ಉನ್ನತ ಸ್ಥಾನಕ್ಕೆ ತಮದು ನಿಲ್ಲಿಸಿದೆ. ಹೆಚ್ಚಿನ ಬೀಟಾ ಕ್ಯಾರೋಟಿನ್, ವಿಟಮಿನ್ ಸಿ, ಕ್ರೋಮಿಯಂ ಮತ್ತು ಕಬ್ಬಿಣದ ಅಂಶವನ್ನು ಹೊಂದಿರುವ ಜೈವಿಕ ದೃಢೀಕೃತ ಕ್ಯಾರೆಟ್ ಇದೆಂದು ವೈದ್ಯಲೋಕವೂ ಒಪ್ಪಿಕೊಂಡಿದೆ.

ಅವರದನ್ನು ಬಿತ್ತಿ ಬೆಳೆದದ್ದು ಆಕಸ್ಮಿಕವೇ. ಆದರಿಂದು ಅದು ಅತ್ಯಂತ ಜನಪ್ರಿಯ ತಳಿಯಾಗಿ ನೂರಾರು ಮಂದಿಗೆ ಜೀವನಾ ಶ್ರಯವಾಗಿದೆ. ಅವರ ಹೆಸರು ವಲ್ಲಭಭಾಯ; ವಲ್ಲಭಭಾಯ್ ವಸ್ರಾಂಭಾಯಿ ಮರ್ವಾನಿಯಾ; ನೂರರ ಹೊಸ್ತಿಲಲ್ಲಿದ್ದಾರೆ. ಅವರು ಅಭಿವೃದ್ಧಿಪಡಿಸಿದ ತಳಿಯ ಹೆಸರು ‘ಮಧುವನ್’.

ಅದೊಂದು ವಿಶಿಷ್ಟ ಬಣ್ಣ ರುಚಿಯ ಕ್ಯಾರೆಟ್. ಈ ಕ್ಯಾರೇಟ್ ತಳಿ ಹಾಗೂ ಅದರ ಜನಕ ನಿಗೆ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪದಕವೂ ದಕ್ಕಿದೆ ಎಂದರೆ ಸಾಧನೆಯ ಆಳವನ್ನು ಊಹಿಸಬಹುದು. ಆರಂಭಿಕ ವರ್ಷಗಳಲ್ಲಿ ಲಾಭದ ಗೋಜಿಗೆ ಹೋಗದೇ ತಳಿಯ ಸಂರಕ್ಷಣೆ, ಬೀಜ ಉತ್ಪಾದನೆಗೆ ಆದ್ಯತೆ ನೀಡಿದ ವಲ್ಲಭಬಾಯ್ ಅತ್ಯುತ್ತಮ ಸಸ್ಯಗಳನ್ನು ಆಯ್ಕೆ ಮಾಡಿ ಸಣ್ಣ ಪ್ರದೇಶ ದಲ್ಲಿ ಅವುಗಳನ್ನು ಬೆಳೆಸಿ, ಸ್ಥಳೀಯ ಮಾರುಕಟ್ಟೆಗೆ ಪರಿಚಯಿಸಿದರು. ನಿಧಾನಕ್ಕೆ ಬೇಡಿಕೆ ಕುದುರಲಾರಂಭಿಸಿತು.

1950 ರ ದಶಕದ ಹೊತ್ತಿಗೆ ಊಹೆಗೂ ಮೀರಿದ ಪ್ರಮಾಣದಲ್ಲಿ ಕ್ಯಾರೇಟ್ ಬೇಸಾಯ ಕ್ಷೇತ್ರ ವಿಸ್ತರಿಸಿತ್ತು. 1970 ರ ದಶಕದಲ್ಲಿ ಅವರು ತಮ್ಮ ಗ್ರಾಮದ ಇತರ ರೈತರಿಗೆ ಮತ್ತು ಪಕ್ಕದ ಪ್ರದೇಶಗಳಿಗೆ ಬೀಜಗಳನ್ನು ವಿತರಿಸಲು ಪ್ರಾರಂಭಿಸಿದರು. 1985 ರಲ್ಲಿ ಕೃಷಿ ವಿಜ್ಞಾನ ಜಗತ್ತು ಇದನ್ನು ಗುರುತಿಸಿ ಮಧುವನ್ ಗಜ್ಜರಿ ಬೀಜಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟಕ್ಕೆ ಇಳಿಯಿತು. ಹೀಗೆ ಆರಂಭವಾದ ಯಶೋಗಾಥೆ ಇಂದು ಸರಾಸರಿ ಇಳುವರಿ ಹೆಕ್ಟೇರಿಗೆ 40 ರಿಂದ 50 ಟನ್ ಮುಟ್ಟಿದೆ. ಗುಜರಾತ, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳ ಜಮೀನುಗಳನ್ನು ಆಳುತ್ತಿದೆ ಮಧುವನ್ ಗಜ್ಜರಿ.

ಮೂಲತಃ ವಲಭಬಾಯ್ ಗುಜರಾತಿನ ಜುನಾಗಡ್ ಜಿಯ ಖಾಮ್ ಧ್ರೋಲ್ ಗ್ರಾಮದವರು. 1943ರಲ್ಲಿ, ಅವರು ಕೃಷಿ ಕೆಲಸಕ್ಕೆ ಇಳಿದಾಗ ಅವರಿಗೆ 13 ವರ್ಷ ವಯಸ್ಸು! ಆಗಷ್ಟೇ ೫ನೇ ತರಗತಿ ಮುಗಿಸಿದ್ದ ವಲ್ಲಭಭಾಯಿ, ತಮ್ಮ ತಂದೆಯವರಿಗೆ ಹೊಲದ ಕೆಲಸದಲ್ಲಿ ನೆರವಾಗುವ ಸಲುವಾಗಿ ವಿದ್ಯಾಭ್ಯಾಸ ತೊರೆದರು. ಅನಕ್ಷರಸ್ಥರಾಗಿದ್ದರೂ ಪದ್ಮಶ್ರೀ ಪಡೆಯುವಲ್ಲಿಯ ತನಕದ ಅವರ ಪಯಣ ಸುದೀರ್ಘವಾದುದು.

ಬಹಳ ಹಿಂದೆ, ಅವರ ೫ ಎಕರೆ ಹೊಲದಲ್ಲಿ ಹಲವು ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ದ್ವಿದಳಧಾನ್ಯಗಳು, ಆಹಾರಧಾನ್ಯಗಳು ಮತ್ತು ನೆಲಗಡಲೆ- ಇವನ್ನು ಫಸಲಿನ ಮಾರಾಟಕ್ಕಾಗಿ ಮತ್ತು ಜೋಳ, ಸಣ್ಣಜೋಳ, ರಾಜೊಕೋ ೩ (ಇದೊಂದು ಮೇವಿನ ಹುಲ್ಲು) ಹಾಗೂ ಕ್ಯಾರೆಟ್- ಇವನ್ನು ಜಾನುವಾರುಗಳಿಗೆ ಆಹಾರವಾಗಿ ಬೆಳೆಯುತ್ತಿದ್ದರು. ಆಗ, ಜಾನುವಾರುಗಳಿಗಾಗಿ ಬೆಳೆಯು ತ್ತಿದ್ದ ಕ್ಯಾರೆಟನ್ನು ಮನುಷ್ಯರೂ ತಿನ್ನಬಹುದೆಂಬ ಸಂಗತಿ ಗುಜರಾತಿನಲ್ಲಿ ಯಾರಿಗೂ ಗೊತ್ತಿರಲಿಲ್ಲ!

1943ರಲ್ಲಿ, ವಲ್ಲಭಾಯ್ ಹಾಲಿನ ಗುಣಮಟ್ಟವನ್ನು ಸುಧಾರಿಸಲು ಸ್ಥಳೀಯ ಕ್ಯಾರೆಟ್ ಮೇವಿನ ಸ್ವರೂಪದಲ್ಲಿ ಜಾನುವಾ ರುಗಳಿಗೆ ಹೇರಳವಾಗಿ ಬಳಸುತ್ತಿದ್ದರು. ಅದೊಂದು ದಿನ, ಜಾನುವಾರುಗಳಿಗೆ ತಿನ್ನಲು ಹಾಕುತ್ತಿದ್ದ ಕ್ಯಾರೆಟ್ನ ತುಂಡೊಂದನ್ನು ವಲ್ಲಭಭಾಯಿ, ಬಾಯಿಗೆ ಹಾಕಿಕೊಂಡರು; ಅದು ಬಹಳ ರುಚಿಯಾಗಿತ್ತು. ಹಾಗಾಗಿ, ತಾವು ಬೆಳೆಯುವ ಕ್ಯಾರೆಟ್ ನ ಒಂದು ಭಾಗವನ್ನು ಮಾರಾಟ ಮಾಡಬೇಕೆಂದು ತಂದೆಯವರಿಗೆ ಹೇಳಿದರು.

ಕ್ಯಾರೆಟ್‌ಗಳನ್ನು ಮಾರುಕಟ್ಟೆಗೆ ಒಯ್ದರು. ತಮ್ಮ ಗ್ರಾಹಕರೊಬ್ಬರಿಗೆ, ಕ್ಯಾರೆಟ್‌ನ ರುಚಿ ನೋಡಲು ವಿನಂತಿಸಿದರು. ಶುರುವಿನಲ್ಲಿ ತಿನ್ನಲು ಹಿಂದೆಮುಂದೆ ನೋಡಿದ ಆ ಗ್ರಾಹಕ ರುಚಿ ನೋಡಿದ ನಂತರ ೫ ಕೆ.ಜಿ. ಕ್ಯಾರೆಟ್ ಅನ್ನು ಖರೀದಿಸಿದರು. ಅದನ್ನು ನೋಡುತ್ತಿದ್ದ ಇನ್ನೊಬ್ಬರು ಗ್ರಾಹಕರು ಒಂದಿಡೀ ಚೀಲ ಕೊಂಡೊಯ್ದರು. ತಮ್ಮ ಮೊದಲ ಬ್ಯಾಚ್‌ನ ಕ್ಯಾರೆಟ್ ಮಾರಾಟದಲ್ಲಿ
ವಲ್ಲಭಭಾಯಿ ಗಳಿಸಿದ್ದು ೮ ರೂ. ‘ಅಂದಿನ ದಿನಗಳಲ್ಲಿ ೫೦ ಪೈಸೆ ಹಣವೇ ನಮಗೆ ದೊಡ್ಡ ಮೊತ್ತ. ಆ ದಿನದ ಗಳಿಕೆಯನ್ನು ತಂದೆಯವರಿಗೆ ಕೊಟ್ಟಾಗ, ಹೆಚ್ಚುವರಿ ೮ ರೂ. ಕಂಡು ಅವರಿಗೆ ಅಚ್ಚರಿ.

ಅದು ಕ್ಯಾರೆಟ್ ಮಾರಾಟದಿಂದ ಬಂದ ಹಣ ಎಂದಾಗ ಅವರಿಗೆ ನಂಬಲಿಕ್ಕೇ ಆಗಲಿಲ್ಲ. ಯಾಕೆಂದರೆ, ಕೆಲವೊಮ್ಮೆ ಇಡೀ ತಿಂಗಳು ನಮಗೆ ೮ ರೂ. ಗಳಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ನೆನಪು ಮಾಡಿಕೊಳ್ಳುತ್ತಾರೆ ವಲ್ಲಭಭಾಯಿ. ಸಾಮಾನ್ಯವಾಗಿ ಭಾರತ ದಲ್ಲಿ ಬೇಸಾಯ ಸುಧಾರಣೆ ಎಂದರೆ ಅದು ನೀರಾವರಿ ಜಮೀನು ಅಥವಾ ತರೀ ಜಮೀನನ್ನು ಕೇಂದ್ರೀಕರಿಸಿಯೇ ಇರುತ್ತಿತ್ತು. ಆಧುನಿಕ ಸಾಂಸ್ಥಿಕ ಸಂಶೋಧನೆಗಳೂ ಸಹ ಇದನ್ನೇ ಗುರಿಯಾಗಿಟ್ಟುಕೊಳ್ಳುತ್ತಿತ್ತು.

ಸಹಜವಾಗಿ ಅದರ ಪ್ರಯೋಜನಗಳೂ ಸಹ ತರೀ ಜಮೀನುಳ್ಳ ಅನುಕೂಲಸ್ಥ ರೈತರಿಗೆ ಮಾತ್ರ ಮುಟ್ಟುತ್ತದೆ, ಮುಟ್ಟಿದೆ ಸಹ. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಇವತ್ತಿನ ಆಧುನಿಕ ಕಾಲಘಟ್ಟದಲ್ಲೂ ಭಾರತದಲ್ಲಿ, ನೀರಿನ ಸೌಕರ್ಯ ಇರುವ
ಜಮೀನು ಶೇ.೨೦ರಷ್ಟು ಮಾತ್ರ ಎಂದರೆ ನಂಬಲೇಬೇಕು.

ಉಳಿದ ಶೇ. ೮೦ರಷ್ಟು ಜಮೀನುಗಳಲ್ಲಿನ ಬೆಳೆ ಮಳೆಯನ್ನೇ ಅವಲಂಬಿಸಿ ಆಗುತ್ತಿದೆ. ಹೀಗಾಗಿಯೇ ಮಳೆಯನ್ನುಅವಲಂಬಿಸಿದ
ಬೆಳೆಯನ್ನು ನಂಬಿರುವ ರೈತರ ಬದುಕು, ಮಳೆಯಷ್ಟೇ ಅನಿಶ್ಚಿತವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ನೀರಿಲ್ಲದ ಖುಷ್ಕಿ
ಬೇಸಾಯದ ಅಭಿವೃದ್ಧಿಗೆ ಸಂಶೋ ಧನೆಗಳು ಆರಂಭವಾಗಿವೆ. ಸರಕಾರಗಳೂ ಅದನ್ನು ಪ್ರೋತ್ಸಾಹಿಸುವ ಮಾತನಾಡುತ್ತಿವೆ. ಯೋಜನೆಗಳು ರೂಪಗೊಳ್ಳುತ್ತಿವೆ. ಆದರೆ ಕಳೆದ ಶತಮಾನದ ೪೦-೫೦ರ ದಶಕದಲ್ಲಿಯೇ ವಲ್ಲಭಬಾಯಿ ಖಷ್ಕಿ ಜಮೀನು ಅಭಿವೃದ್ಧಿಯ ಬಗ್ಗೆ ಯೋಚಿಸಿದ್ದರು.

ಮಾತ್ರವಲ್ಲ, ಅದರ ಅನುಷ್ಠಾನಕ್ಕಾಗಿ ಕಾರ್ಯೋನ್ಮುಖವಾಗಿದ್ದರು. ಖುಷ್ಕಿ ಅಥವಾ ಒಣ ಪ್ರದೇಶಗಳಲ್ಲಿ ಉತ್ಪಾದನ
ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸ್ವತಃ ಪ್ರಯೋಗಕ್ಕಿಳಿದಿದ್ದರು. ಬಿದ್ದ ಅಲ್ಪ ಪರಿಮಾಣದ ಮಳೆಯ ನೀರನ್ನು
ಪೋಲಾಗದಂತೆ ಮಣ್ಣಿನ ಉಳಿಸಿಕೊಂಡು ವಿಮೋಚನೆಯಿಂದ ಸೂಕ್ತ ಬೆಳೆಗೆ ಬಳಸಿಕೊಳ್ಳುವ ಕ್ರಮಕ್ಕೆ ಆಗಲೇ ಅವರು ಮುಂದಾಗಿದ್ದರು. ಮಳೆ ನೀರನ್ನು ಮಣ್ಣಿನಲ್ಲೇ ಇಂಗುವಂತೆ ಮಾಡಲು ಆಳವಾದ ಉಳುಮೆ ಮಾಡಿ, ಹದವನ್ನು ಕಾಪಾಡಿ ಕೊಳ್ಳವ ಕ್ರಮ ಕೈಗೊಂಡಿದ್ದರು.

ಆದರೆ ಉಳಿಮೆಗೂ ಮುನ್ನ ಜಮೀನಿನಲ್ಲಿ ಎದ್ದಿದ್ದ ಕಳೆಗಳನ್ನು ಲ್ಲಿಯೇ ಮಲ್ಚಿಂಗ್ ಮಾಡಿ, ಸಾರ ಸಂರಕ್ಷಣೆಗೂ ಕ್ರಮ ಕೈಗೊಂಡಿದ್ದರು. ಇನ್ನು ನೀರು ಬಸಿದು ಹೋಗದಂತೆ ಇಳಿಜಾರನ್ನು ಕಡಿಮೆ ಮಾಡಿ ನೆಲವನ್ನು ಆದಷ್ಟು ಮಟ್ಟಸ ಮಾಡ ಲಾಗಿತ್ತು. ಇಳಿಜಾರಿಗೆ ಅಡ್ಡವಾಗಿ ಸಮಪಾತಳಿ ಒಡ್ಡುಗಳ ನಿರ್ಮಾಣ ಸಹ ಮಾಡಿ, ಮಣ್ಣು ಕೊಚ್ಚುವುದನ್ನು ತಪ್ಪಿಸಿದ್ದರು ವಲ್ಲಭಬಭಾಯಿ. ಮಣ್ಣಿನ ತೇವಾಂಶದಲ್ಲೇ ಕೃಷಿ ಕೈಗೊಂಡು ಯಶಸ್ವಿಯಾಗುವಲ್ಲಿ, ಬೆಳೆಗಳ ಆಯ್ಕೆಯೂ ಅತ್ಯಂತ  ಮುಖ್ಯ.

ನೆಲಗಡಲೆಯಂಥವು ಇದಕ್ಕೆ ಸೂಕ್ತ. ಆದರೆ ಗಜ್ಜರಿಯನ್ನೂ ಈ ಪ್ರಯೋಗಕ್ಕೆ ಒಳಪಡಿಸಿದ್ದು ವಲ್ಲಭಭಾಯಿ ಸಾಧನೆ. ಜತೆಗೆ ರಂಜಕದ ಪ್ರಮಾಣವನ್ನು ಹೆಚ್ಚಿಸಿ ಅಭಿವೃದ್ಧಿ ಪಡಿಸಿ ಸುತ್ತಲಿನ ಜಮೀನುಗಳಿಗೆ ಮಾದರಿಯಾ ಕ್ರಮವನ್ನು ಸ್ವತಃ ಹೇಳಿ ಕೊಟ್ಟರು. ರಂಜೆ ಮಣ್ಣಿನಲ್ಲಿ ಜಾಸ್ತಿ ಇದ್ದಾಗ ಸಹಜವಾಗಿ ಸಸ್ಯದ ಬೇರು ಚೆನ್ನಾಗಿ ಬೆಳೆಯುತ್ತದೆ. ಗಜ್ಜರಿ ಭೂಮಿಯೊಳಗೇ ಬೆಳೆಯುವ ಬೆಳೆಯಾದುದರಿಂದ ಇಂಥ ಕ್ರಮ ಅಭೂತಪೂರ್ವ ಫಲವನ್ನು ನೀಡಿತು.

ಅಲ್ಲದೇ ವಿವಿಧ ಮುಖ ಕ್ರಮಗಳನ್ನು ಒಟ್ಟುಗೂಡಿಸಿ ಕಾರ್ಯಕ್ರಮವನ್ನು ಅಳವಡಿಸಿ ಖುಷ್ಕಿ ಬೇಸಾಯದಲ್ಲಿನ ಮಳೆ ಅನಿಶ್ಚಿತತೆಯನ್ನು ಬಹುವಾಗಿ ನಿವಾರಿಸಿಕೊಂಡರು. ತದನಂತರ ಹನಿ ನೀರಾವರಿ ಅಳವಡಿಸಿ, ಸಸಿಗಳಿಗೆ ಮುಚ್ಚಿಗೆ ಹಾಕಲು ಶುರುಮಾಡಿದ ವಲ್ಲಭಭಾಯಿ, ತನ್ನ ಕೃಷಿ ಜಮೀನನ್ನು ೪ ಎಕರೆಗಳಿಂದ ೪೦ ಎಕರೆಗಳಿಗೆ ವಿಸ್ತರಿಸಿಕೊಂಡರು. ಈ ಸುಧಾರಿತ ಕೃಷಿಕ್ರಮಗಳಿಂದಾಗಿ ಕ್ಯಾರೆಟ್‌ನ ಗುಣಮಟ್ಟವೂ ಸುಧಾರಿಸಿತು.

ಅಲ್ಲಿಯ ಮಾರುಕಟ್ಟೆಯಲ್ಲಿ ಈ ಕ್ಯಾರೆಟ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇತ್ತು. ಹಾಗಾಗಿ ಇದರ ಬೀಜ ಉತ್ಪಾದಿಸಿ, ಅವನ್ನು ಇತರ
ರೈತರಿಗೆ ಹಂಚಲು ನಿರ್ಧರಿಸಿದರು. ಬೀಜೋತ್ಪಾದನೆಗಾಗಿ ಅತ್ಯುತ್ತಮ ಸಸಿಗಳನ್ನೇ ಆಯ್ಕೆ ಮಾಡಿದರು. 1985ರಲ್ಲಿ ದೊಡ್ಡ ಪ್ರಮಾಣದಲ್ಲಿ ಬೀಜೋತ್ಪಾದನೆ ಶುರು ಮಾಡಿ ಈ ತಳಿಯನ್ನು ‘ಮಧುವನ್ ಕ್ಯಾರೆಟ್’ ಎಂದು ಕರೆದರು. ಈಗ ಗುಜರಾತ್, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳ ೨೦೦ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗುವ ಮಧುವನ್ ಕ್ಯಾರೆಟ್‌ನ ಸರಾಸರಿ ಇಳುವರಿ ಹೆಕ್ಟೇರಿಗೆ ೪೦- ೫೦ ಟನ. ಮುಂಗಾರು 2016-17ರಲ್ಲಿ ಜೈಪುರದ ರಾಜಸ್ಥಾನ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ರಾಷ್ಟ್ರೀಯ ಅನುಶೋಧನಾ ಪ್ರತಿಷ್ಠಾನ ಈ ತಳಿಯ ದೃಢೀಕರಣ ಪ್ರಯೋಗ ನಡೆಸಿತು.

ಇದರ ಫಸಲು (ಹೆಕ್ಟೇರಿಗೆ ೭೪.೨ ಟನ್) ಮತ್ತು ಪ್ರತಿ ಸಸಿಯ ಒಟ್ಟು ಬೆಳೆ ಅಂದರೆ ಎಲೆ ಮತ್ತು ಬೇರಿನ ತೂಕ (೨೭೫ ಗ್ರಾಂ) ಇತರ ತಳಿಗಳಿಗಿಂತ ಹೆಚ್ಚಾಗಿರುವುದು ದೃಢಪಟ್ಟಿತು. ಅನಂತರ, ಅದೇ ವರ್ಷ ರಾಷ್ಟ್ರೀಯ ಅನುಶೋಧನಾ ಪ್ರತಿಷ್ಠಾನ ಗುಜರಾತ್,
ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಈ ತಳಿ ಬೆಳೆಸಿ ಪ್ರಯೋಗ ನಡೆಸಿದಾಗಲೂ ಇದರ ಇಳುವರಿ ಅತ್ಯುತ್ತಮವೆಂಬುದು ಖಚಿತವಾಯಿತು.

ಚಿಪ್ಸ್, ಜ್ಯೂಸ್ ಮತ್ತು ಉಪ್ಪಿನಕಾಯಿ- ಇಂತಹ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಗೂ, ಈ ತಳಿ ಸೂಕ್ತ. ಈ ಗಜ್ಜರಿಯನ್ನು ಇಂದು ಗುಜರಾತ್ ನ ೧೦೦೦ ಹೆಕ್ಟೇರ್ ಭೂಮಿಯಲ್ಲಿ ಮತ್ತು ಕಳೆದ ೩ ವರ್ಷಗಳಲ್ಲಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ಸಹ ಕೃಷಿ ಮಾಡಲಾಗುತ್ತಿದೆ. ಕೆಲಸಗಾರರಿಂದ ಯಾವುದೇ ಕೃಷಿ ಕೆಲಸವನ್ನು ಮಾಡಿಸುತ್ತಿಲ್ಲ ವಲ್ಲಭಭಾಯಿ ಕುಟುಂಬ.

ಕ್ಯಾರೆಟ್ ಬಿತ್ತನೆಯಿಂದ ತೊಡಗಿ ಬೀಜಗಳನ್ನು ಪ್ಯಾಕ್ ಮಾಡುವವರೆಗಿನ ಎಲ್ಲ ಕೆಲಸಗಳನ್ನೂ ಕುಟುಂಬದ ಸದಸ್ಯರೇ ನಿರ್ವಹಿಸುತ್ತಿzರೆ. ಪ್ರತಿ ಎಕರೆ ಕ್ಯಾರೆಟ್ ತಮ್ಮ ಕುಟುಂಬ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದೆ ಎಂದು ತಿಳಿಸುತ್ತಾರೆ ವಲ್ಲಭಭಾಯಿಯವರ ಮಗ ಅರವಿಂದ ಭಾಯಿ. ೯೭ ವರ್ಷಗಳ ತುಂಬು ಬದುಕಿನಲ್ಲಿ ಒಂದು ತಪಸ್ಸಿನಂತೆ ಕ್ಯಾರೆಟ್ ಕೃಷಿ ಹಾಗೂ ಬೀಜೋತ್ಪಾದನೆ ಮುಂದುವರಿಸಿದವರು ವಲ್ಲಭಭಾಯಿ.

ಈ ಜೀವಮಾನದ ಸಾಧನೆಗೆ ಪದ್ಮಶ್ರೀ ಪುರಸ್ಕೃತರಾಗಿ ಏಕಧ್ಯಾನದ ಕೃಷಿಯಿಂದ ಯಾವ ಸಾಧನೆಯ ಶಿಖರ ಏರಬಹುದೆಂದು ತೋರಿಸಿಕೊಟ್ಟಿzರೆ, ಅವರು. ಅಲ್ಲಿಯವರೆಗೆ ಮನುಷ್ಯರು ತಿನ್ನದೇ ಇದ್ದ ಕ್ಯಾರೆಟ್‌ನ ರುಚಿ ಜನರಿಂದ ಜನರಿಗೆ ಹರಡು ತ್ತಿದ್ದಂತೆಯೇ ಬೇಡಿಕೆ ಹೆಚ್ಚಿತು. ಕೆಲವೇ ದಿನಗಳಲ್ಲಿ ಜುನಾಗಡ್‌ನ ನವಾಬ ಮೂರನೆಯ ಮಹಮ್ಮದ್ ಮಹಬತ್ ಖಾನ್ ಅವರಿಗೆ ಈ ವಿಶೇಷ ತರಕಾರಿಯ ಸುದ್ದಿ ಸಿಕ್ಕಿತು.

ತದನಂತರ ನವಾಬರ ಅರಮನೆಯ ಭೋಜನಾಲಯಗಳಿಗೆ ವಲ್ಲಭಭಾಯಿ ಅವರಿಂದ ಕ್ಯಾರೆಟಿನ ನಿರಂತರ ಪೂರೈಕೆ. ಆದರೆ, ಭಾರತ ಸ್ವಾತಂತ್ರ್ಯ ಗಳಿಸಿದಾಗ, ಜುನಾಗಡದ ನವಾಬರು ಕರಾಚಿಗೆ ಹೋಗಿ ನೆಲೆಸಿದರು. ಅದೇನಿದ್ದರೂ. ನವಾಬರ ಅರಮನೆಗೆ
ಕ್ಯಾರೆಟ್ ಪೂರೈಕೆ ಮಾಡಿದ ಆ ನಾಲ್ಕು ವರುಷಗಳಲ್ಲಿ ಉತ್ತಮ ಆದಾಯ ಗಳಿಸಿದರು ವಲ್ಲಭಭಾಯಿ. ಮಧುವನ್ ಗಜ್ಜರಿ ರುಚಿ ಯಿಂದ ಮಾತ್ರವೇ ಹೆಗ್ಗಳಿಕೆ ಪಡೆದಿಲ್ಲ, ಅದರಲ್ಲಿನ ಆರೋಗ್ಯಕಾರಿ ಅಂಶಗಳೂ ಅದನ್ನು ತರಕಾರಿಗಳಲ್ಲಿ ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸಿದೆ.

ಹೆಚ್ಚಿನ ಬೀಟಾ ಕ್ಯಾರೋಟಿನ್ (೨೭೭.೭೫ ಮಿಗ್ರಾಂ / ಕೆಜಿ), ವಿಟಮಿನ್ ಸಿ, ಕ್ರೋಮಿಯಂ ಮತ್ತು ಕಬ್ಬಿಣದ ಅಂಶ((೨೭೬.೭ ಮಿಗ್ರಾಂ / ಕೆಜಿ) ವನ್ನು ಹೊಂದಿರುವ ಜೈವಿಕ ದೃಢೀಕೃತ ಕ್ಯಾರೆಟ್ ಇದೆಂದು ವೈದ್ಯಲೋಕವೂ ಒಪಿಕೊಂಡಿದೆ. ಇದೀಗ ಅವರ ಮಗ ಅರವಿಂದ್ ಭಾಯ್ ಬೀಜಗಳ ಉತ್ಪಾದನೆ ಮತ್ತು ಮಾರಾಟವನ್ನು ನೋಡಿಕೊಳ್ಳುತ್ತಾರೆ. ಈ ಗಜ್ಜರಿಯ ಸರಾಸರಿ ಮಾರಾಟವು ವಾರ್ಷಿಕವಾಗಿ ಸುಮಾರು ೧೦೦ ಕ್ವಿಂಟಾಲ್ ವರೆಗೆ ತಲುಪಿದೆ.

ದೇಶಾದ್ಯಂತ ಸುಮಾರು ೩೦ ಸ್ಥಳೀಯ ಬೀಜ ಪೂರೈಕೆದಾರರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಬೀಜಗಳ ಉತ್ಪಾದನೆಯನ್ನು ವಲ್ಲಭಾಯ್ ಅವರೇ ಕೆಲವು ಸ್ಥಳೀಯ ರೈತರ ಗುಂಪಿನೊಂದಿಗೆ ಪಾಲ್ಗೊಂಡಿದ್ದಾರೆ.