ಬೆಂಗಳೂರು
“ಅಪ್ಪ ತನಗಾಗಿ ಹೆಣ್ಣು ಹುಡುಕಲು ಹೋದಾಗ ಮಗನಿಗೆ ಮದುವೆ ಆಯಿತು” ಎನ್ನುವ ಗಾದೆ ತಮಗೂ ಅನ್ವಯವಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಮಾರ್ಮಿಕವಾಗಿ ಹೇಳಿದ್ದಾರೆ.
ರಾಜ್ಯಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ತಮಗೆ ಅವಕಾಶ ಸಿಗಲಿಲ್ಲ. ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ಲಭಿಸಿತು. ರಾಜ್ಯಸಭೆಗೆ ಟಿಕೆಟ್ ಕೇಳಲು ಹೋದ ತಮಗೆ ವಿಧಾನಪರಿಷತ್ ಪ್ರವೇಶಿಸಲು ಅವಕಾಶ ದೊರೆತಿದೆ ಎನ್ನುವುದಕ್ಕೆ ಈ ಗಾದೆಯನ್ನು ಉಲ್ಲೇಖಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಬಗ್ಗೆ ನಿರೀಕ್ಷೆಯಿರಲಿಲ್ಲ. ಆದರೂ ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದೆ. ಖರ್ಗೆಯವರಿಗಾಗಿ ನಾನು ರಾಜ್ಯಸಭೆ ಸ್ಥಾನ ತ್ಯಾಗ ಮಾಡಿಲ್ಲ. ಹೈಕಮಾಂಡ್ ತೆಗೆದುಕೊಂಡ ತೀರ್ಮಾನಕ್ಕೆ ಬದ್ಧನಾಗಿದ್ದೇ ಎಂದರು.
ಸಾಮಾನ್ಯ ಕಾರ್ಯಕರ್ತನಾಗಿ, ವಿದ್ಯಾರ್ಥಿ ದೆಸೆಯಿಂದಲೂ ಕಲಸ ಮಾಡಿದ್ದೇನೆ. 17 ರಾಜ್ಯಗಳಲ್ಲಿ ಪಕ್ಷಕ್ಕಾಗಿ ದುಡಿದಿದ್ದೇನೆ. ಮೇಲ್ಮನೆಯಲ್ಲಿ ರಾಜ್ಯ, ರಾಷ್ಟ್ರದ ಹಿತದೃಷ್ಟಿಯಿಂದ ಕೆಲಸ ಮಾಡುತ್ತೇನೆ. ಬಿಜೆಪಿ ಸರ್ಕಾರದ ಆಡಳಿತ ಪಕ್ಷದ ವೈಫಲ್ಯತೆಯನ್ನು ಎತ್ತಿ ಹಿಡಿಯುತ್ತೇನೆ. ಇಷ್ಟು ದಿನ ರಾಷ್ಟ್ರದ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುತ್ತಿದೆ. ಈಗ ರಾಜ್ಯದ ಜನರಪರ ಧ್ವನಿಎತ್ತಲು ಅವಕಾಶ ಸಿಕ್ಕಿದೆ ಎಂದರು.
ಸ್ವಾಭಿಮಾನ ಇಲ್ಲದ ರಾಜಕಾರಣಿಗಳು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಗುಜರಾತ್ ಮಾದರಿ ರಾಜ್ಯ ಎಂದು ಬಿಂಬಿಸುತ್ತಿದ್ದಾರೆ. ಆದರೆ ಇದು ಸರಿಯಲ್ಲ. ಕರ್ನಾಟಕ ಎಲ್ಲಾ ವಿಚಾರಗಳಲ್ಲಿಯೂ ಮುಂದಿದೆ. ವಿಧಾನಪರಿಷತ್ ನಲ್ಲಿ ಈ ಅಂಶಗಳ ಬಗ್ಗೆ ಗಮನ ಸೆಳೆಯುತ್ತೇನೆ ಎಂದರು.