Wednesday, 27th November 2024

ದೇಶದ ದಿಕ್ಸೂಚಿ ಬದಲಿಸುವ ಶಕ್ತಿ ಶಿಕ್ಷಕರಿಗಿದೆ: ಶಾಸಕ ಜ್ಯೋತಿಗಣೇಶ್

ಕರುನಾಡ ವಿಜಯಸೇನೆವತಿಯಿಂದ ವಿದ್ಯಾವಾರಿಧಿ ಪ್ರಶಸ್ತಿ ಪ್ರದಾನ
ತುಮಕೂರು: ಉತ್ತಮ ಪ್ರಜೆಗಳನ್ನು ರೂಪಿಸುವ ಮೂಲಕ ದೇಶದ ದಿಕ್ಸೂಚಿ ಬದಲಿಸುವ ಶಕ್ತಿ ಇರುವುದು ಶಿಕ್ಷಕ ವೃಂದಕ್ಕೆ ಮಾತ್ರ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.
ನಗರದ ಬಾಲಭವನದಲ್ಲಿ ಭಾನುವಾರ ಕರುನಾಡ ವಿಜಯಸೇನೆ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜಿಲ್ಲೆಯ ಅತ್ಯುತ್ತಮ ಶಿಕ್ಷಕರಿಗೆ ವಿದ್ಯಾವಾರಿಧಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಭವಿಷ್ಯದ ಪ್ರಜೆಗಳಾದ ಮಕ್ಕಳನ್ನು ತಿದ್ದಿ, ತೀಡುವ, ಅವರ ಸರಿ,ತಪ್ಪುಗಳನ್ನು ಗುರುತಿಸಿ, ಅವರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ವದೆಂದರು.
ಶಿಕ್ಷಕರಾಗಿದ್ದುಕೊಂಡು  ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ,ಡಾ.ಎ.ಪಿ.ಜೆ.ಅಬ್ದುಲ್ ಕಲಾಂ,  ಡಾ.ರಾಧಾಕೃಷ್ಣನ್,ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಬಾಯಿ ಪುಲೆ ಇವರೆಲ್ಲ ರೂ ಶಿಕ್ಷಣ ಕ್ಷೇತ್ರದ ಆದರ್ಶ ವ್ಯಕ್ತಿಗಳು.ಅವರ ಸಾಲಿಗೆ ನೀವೆಲ್ಲರೂ ಸೇರುವಂತಹ ಉತ್ತಮ ಅಂಶಗಳನ್ನು ನಿಮ್ಮ ಭೋಧನಾ ಕ್ರಮದಲ್ಲಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದ ಶಾಸಕ ಜೋತಿಗಣೇಶ್,ವಿದ್ಯೆಯ ಜೊತೆಗೆ ದೇಶಪ್ರೇಮವನ್ನು ಮಕ್ಕಳಿಗೆ ಕಲಿಸುವಂತೆ ಮನವಿ ಮಾಡಿದರು.
ತುಮಕೂರು ವಿವಿ ಕುಲಸಚಿವ ಡಾ.ಕೆ.ಶಿವಚಿತ್ತಪ್ಪ ಮಾತನಾಡಿ,ಒಂದು ಗುರಿಯನ್ನು ತಲುಪಬೇಕಾದರೆ, ಅದು ಗುರುಗಳ ಮಾರ್ಗ ದರ್ಶನದಿಂದ ಮಾತ್ರ ಸಾಧ್ಯ.ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವೇತನ ಕಡಿಮೆ ಇದ್ದರೂ ಶಿಷ್ಯವೃಂದದಿ0ದ ದೊರೆಯುವ ಗೌರವ ಮಾತ್ರ ದೊಡ್ಡದು.ಜ್ಞಾನಕ್ಕಿಂತ ಮೀಗಿಲಾದುದ್ದು ಯಾವುದೂ ಇಲ್ಲ. ಅಂತಹ ಜ್ಞಾನವನ್ನು ನೀಡುವ ಶಿಕ್ಷಕರನ್ನು ಗುರುತಿಸಿ ಅಭಿನಂದಿಸುತ್ತಿರುವುದು ತುಂಬ ಸಂತೋಷ ಪಡುವ ವಿಚಾರ ಎಂದರು.
ನಗರಪಾಲಿಕೆಯ ವಿರೋಧಪಕ್ಷದ ನಾಯಕ ಕೆ.ಕುಮಾರ್ ಮಾತನಾಡಿ,ಕುಟುಂಬಸ್ತರನ್ನು ಬಿಟ್ಟು ಒಬ್ಬ ವ್ಯಕ್ತಿಯ ಒಳ್ಳೆಯ ಗುಣಗಳನ್ನು ಗುಣಗಾನ ಮಾಡುವವರು ಆತನ ಗುರುಗಳು ಮಾತ್ರ. ನನ್ನ ವಿದ್ಯಾರ್ಥಿ ಜೀವನದಲ್ಲಿ ದೊರೆತ ಶಿಕ್ಷಕರು ನನ್ನ ಇಂದಿಗೆ ಬೆಳೆಯಲ್ಲಿ ನನಗೆ ಪಾಠ ಮಾಡಿದ ಶಿಕ್ಷಕರ ಪಾತ್ರವಿದೆ.ಅವರ ಗೌರವಕ್ಕೆ ಚ್ಯುತಿ ಬರದಂತೆ ನಾವೆಲ್ಲರೂ ನಡೆದುಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರುನಾಡ ವಿಜಯಸೇನೆಯ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್ ಮಾತನಾಡಿ, ಸಮಾಜವನ್ನು ತಿದ್ದಿ,ತೀಡಿ ಸರಿದಾರಿಗೆ ತರುವ ಶಿಕ್ಷಕರನ್ನು ಗೌರವಿಸಬೇಕು ಎಂಬ ಉದ್ದೇಶದಿಂದ ವಿದ್ಯಾವಾರಿಧಿ ಪ್ರಶಸ್ತಿ ನೀಡಲು ಮುಂದಾ ಗಿದ್ದು, ಇದುವರೆಗು 750 ಶಿಕ್ಷಕರನ್ನು ಸನ್ಮಾನಿಸಲಾಗಿದೆ ಎಂದರು.
ವೇದಿಕೆಯಲ್ಲಿ ಕರುನಾಡ ವಿಜಯಸೇನೆ ರಾಜ್ಯ ಉಪಾಧ್ಯಕ್ಷ ಸೋಮಶೇಖರ್, ಮುಖ್ಯ ಸಲಹೆಗಾರ ಡಾ.ಸುದೀಪ್‌ಕುಮಾರ್, ರಾಜ್ಯ ಸಮಿತಿ ಸದಸ್ಯ ಸಂದೀಪ್, ಶಿವಮೊಗ್ಗ ಜಿಲ್ಲಾಧ್ಯಕ್ಷ ತ್ಯಾಗರಾಜು, ಮಹಿಳಾ ಘಟಕದ ಅಧ್ಯಕ್ಷ ಯಾಸ್ಮೀನ್ ತಾಜ್,ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್, ಗೌರವಾಧ್ಯಕ್ಷ ಬಿ.ಬಿ.ಮಹದೇವಯ್ಯ,ಪ್ರಧಾನ ಕಾರ್ಯದರ್ಶಿ ಕೆ.ಗಂಗಾಧರ್, ತಾಲೂಕು ಅಧ್ಯಕ್ಷರುಗಳಾದ ವಿನಯ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ 135 ಅತ್ಯುತ್ತಮ ಶಿಕ್ಷಕರನ್ನು ವಿದ್ಯಾವಾರಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.