ಬೆಂಗಳೂರು,
ಹಣಕಾಸಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ತನ್ನ ಇಬ್ಬರು ಸಹೋದರರ ಜೋಡಿ ಹತ್ಯೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಜೇಶ್ (24) ಬಂಧಿತ ಆರೋಪಿ. ಅನ್ನಪೂರ್ಣೇಶ್ವರಿ ಠಾಣೆ ವ್ಯಾಪ್ತಿಯಲ್ಲಿ ಕಲ್ಯಾಣ ನಗರದ ನಿವಾಸಿಗಳಾಗಿದ್ದ ಸಹದೇವ (27) ರಘುಸ್ವಾಮಿ (29) ಅವರನ್ನು ಒಡಹುಟ್ಟಿದ ತಮ್ಮನೇ ರಾಜೇಶ್ ಕೊಲೆ ಮಾಡಿದ್ದಾನೆ ಎಂದು ಡಿಸಿಪಿ ರಮೇಶ್ ತಿಳಿಸಿದ್ದಾರೆ.
ದುಡ್ಡಿನ ವಿಚಾರವಾಗಿ ಅಣ್ಣಂದಿರನ್ನು ತಮ್ಮನೇ ಕೊಲೆ ಮಾಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಕಟ್ಟಡ ಕಾರ್ಮಿಕರಾಗಿದ್ದ ಇಬ್ಬರು ಸಹೋದರರು, ನಿರ್ಮಾಣ ಹಂತದ ಕಟ್ಟಡದಲ್ಲೇ ಉಳಿದುಕೊಳ್ಳುತ್ತಿದ್ದರು. ಒಟ್ಟಿಗೆ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದರು. ದುಡ್ಡಿನ ವಿಚಾರದಲ್ಲಿ ಮೂವರ ಮಧ್ಯೆ ಜಗಳ ಆರಂಭವಾಗಿದ್ದು, ತಾರಕ್ಕೇರಿದ ಪರಿಣಾಮ ಆರೋಪಿ ರಾಜೇಶ್ ಸಹೋದರರಿಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರನ್ನು ಕೊಲೆ ಮಾಡಿದ ಬಳಿಕ ಆರೋಪಿ ಮತ್ತೊಬ್ಬ ಅಣ್ಣನಿಗೆ ಕರೆ ಮಾಡಿ ಸಹದೇವ ಮತ್ತು ರಘು ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಸ್ಥಳಕ್ಕೆ ಹೋಗಿ ನೋಡು ಎಂದು ಹೇಳಿದ್ದನು. ನಂತರ ಕೊಲೆಯಾಗಿರುವ ವಿಷಯ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಜಾಡು ಹಿಡಿದಿದ್ದ ಅನ್ನಪೂರ್ಣೇಶ್ವರಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.