Wednesday, 27th November 2024

ನಾಯಿಯಿಂದ ಬರುವ ರೇಬಿಸ್ ರೋಗ ನಿಯಂತ್ರಿಸಲು ಅರಿವು ಅಗತ್ಯ: ಜಿಪಂ ಯೋಜನಾಧಿಕಾರಿ

ತುಮಕೂರು: ಮನುಷ್ಯ ಜೀವನದ ಆತ್ಮೀಯ ಸಂಗಾತಿ ನಾಯಿಯಿಂದ ಬರುವ ರೇಬಿಸ್ ರೋಗವನ್ನು ನಿಯಂತ್ರಿಸಲು ಅರಿವು ಹೊಂದಬೇಕಿದೆ ಎಂದು ಜಿ.ಪಂ.ಯೋಜನಾಧಿಕಾರಿ ಆನಂದಕುಮಾರ್ ತಿಳಿಸಿದರು.

ಕರ್ನಾಟಕ ಪಶು ವೈದ್ಯಕೀಯ ಸಂಘ ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ವಿಶ್ವ ರೇಬೀಸ್ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ತಾಂತ್ರಿಕ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ರೇಬಿಸ್ ನಿಂದ ಇಂದಿಗೂ ಜನರು ಸಾಯುವ ವರದಿಗಳಿವೆ ಆದರೆ 2030ರೊಳಗೆ ರೇಬಿಸ್ ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಪಶು ವೈದ್ಯರಿಗೆ ಅರಿವು ಅಗತ್ಯವಾಗಿದೆ, ರೇಬಿಸ್ ನಿಯಂತ್ರಿಸಲು ಬೀದಿ ನಾಯಿಗಳಿಗೆ ಲಸಿಕೆ ಹಾಕಿಸುವ ಅಭಿಯಾನ ನಡೆಯಿತ್ತಿದೆ ಆದರೆ ಸಿಬ್ಬಂದಿ ಕೊರತೆಯಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಆಗುತ್ತಿಲ್ಲ ಎಂದರು.

ಪಶುವೈದ್ಯಕೀಯ ಇಲಾಖೆ ಅಪರ ನಿರ್ದೇಶಕ ಡಾ.ಹೆಚ್.ಎಸ್.ಜಯಣ್ಣ ಮಾತನಾಡಿ, ರೇಬಿಸ್ ದಿನಾಚರಣೆ ಅಂಗವಾಗಿ ಉಚಿತ ಲಸಿಕೆ, ಅರಿವು ಮೂಡಿಸುವ ಕಾರ್ಯವನ್ನು ಮಾಡುವ ಮೂಲಕ ವಿಶ್ವಸಂಸ್ಥೆಯ ಧ್ಯೇಯದಂತೆ ರೋಗ ನಿರ್ಮೂಲನೆಗೆ ಶ್ರಮಿಸು ತ್ತಿದ್ದೇವೆ ಎಂದರು.

ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಜಿ.ವಿ.ಜಯಣ್ಣ ಮಾತನಾಡಿ, ಚರ್ಮಗಂಟು ರೋಗ ದೇಶದಲ್ಲಿ ವ್ಯಾಪಿಸುತ್ತಿದೆ, ರಾಜ್ಯದಲ್ಲಿ ಹೆಚ್ಚುತ್ತಿರುವ ಚರ್ಮಗಂಟು ರೋಗವನ್ನು ದೇಸಿ ಚಿಕಿತ್ಸೆ ಮೂಲಕ ನಿಯಂತ್ರಿಸುವ ನಿಟ್ಟಿನಲ್ಲಿ ಪಶು ವೈದ್ಯರಿಗೆ ಅಗತ್ಯ ಮಾಹಿತಿ ಹೊಂದುವುದು ಅವಶ್ಯಕವಾಗಿದೆ ಎಂದರು.

ಜಿಲ್ಲೆಯಲ್ಲಿ ಶೇ.50ಕ್ಕಿಂತ ಹೆಚ್ಚಿನ ಹುದ್ದೆಗಳು ಖಾಲಿ ಇವೆ, ಜಿಲ್ಲೆಯ ಪಶು ವೈದ್ಯರ ಮೇಲೆ ಹೆಚ್ಚಿನ ಕಾರ್ಯದ ಒತ್ತಡ ಇದ್ದರು, ಸರ್ಕಾರದ ಯೋಜನೆಯಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸಿದ್ದೇವೆ, ಕುಟುಂಬವನ್ನು ಮರೆತು ಕೆಲಸ ಮಾಡುತ್ತಿದ್ದು, ಮೇಲಾಧಿಕಾರಿ ಗಳು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ವಿ.ಸಿ.ರುದ್ರಪ್ರಸಾದ್ ಮಾತನಾಡಿ, ಪಶು ಮತ್ತು ಸಾಕು ಪ್ರಾಣಿಗಳೊಂದಿಗೆ ನಿತ್ಯ ಕಾರ್ಯನಿರ್ವಹಿಸುವ ಪಶುವೈದ್ಯರು ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರಿಯುವ ನಿಟ್ಟಿನಲ್ಲಿ ತಾಂತ್ರಿಕ ಸಂಕಿರಣಗಳು ಸಹಕರಿಯಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯ ಪಶು ಆಹಾರ ಶಾಸ್ತ್ರಜ್ಞ ಡಾ.ಸಿದ್ದರಾಮಣ್ಣ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಕೆ.ಎಂ.ಸುನಿಲ್ ಕುಮಾರ್ ಅವರು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಆರ್.ಎಂ.ನಾಗಭೂಷಣ್, ಡಾ.ಎ.ಸಿ.ದಿವಾಕರ್, ಡಾ.ಮಹದೇವಯ್ಯ, ಡಾ.ಬಿ.ಆರ್.ನಂಜೇಗೌಡ, ಡಾ.ಹೆಚ್.ಶಶಿಕಲಾ ಸೇರಿದಂತೆ ಜಿಲ್ಲೆಯ ಪಶು ವೈದ್ಯರು ಇದ್ದರು.