Wednesday, 27th November 2024

ಗಣೇಶೋತ್ಸವದಲ್ಲಿ ಭಗವ ಧ್ವಜ ಕಟ್ಟಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ

ಹಿಂದೂಮುಸ್ಲಿಂ ಸಮುದಾಯದಿಂದ ದೂರು|ಅಹಿತಕರ ಘಟನೆ ನಡೆಯದಂತೆ ಕ್ರಮ

ತುಮಕೂರು:ಗಣೇಶೋತ್ಸವದಲ್ಲಿ ಕೇಸರಿ ಬಾವುಟ, ಭಗವಧ್ವಜ ಕಟ್ಟುವ ವಿಚಾರಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿರುವ ಘಟನೆ ನಗರ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ನಗರದ ದಿಟ್ಟೂರು ಕಾಲೋನಿಯಲ್ಲಿ ಮಂಗಳವಾರ ರಾತ್ರಿ ಗಣೇಶೋತ್ಸವ ಪ್ರಯುಕ್ತ ಹಿಂದೂ ಯುವಕರು ಕೇಸರಿ ಬಾವುಟ, ಭಗವಧ್ವಜ ಕಟ್ಟಲಾಗಿತ್ತು. ಇದನ್ನು ತೆರವುಗೊಳಿಸುವಂತೆ ಮುಸ್ಲಿಂ ಯುವಕರು ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಯಿಸದೆ ಹಿಂದೂ ಯುವಕರು ಮೌನವಾಗಿದ್ದರು. ಇದರಿಂದ ಕುಪಿತಗೊಂಡ ಮುಸ್ಲಿಂ ಯುವಕರು ಹಿಂದೂ ಯುವಕ ಏಳುಮಲೈ, ಆತನ ತಾಯಿ ಚೆಲುವಮ್ಮ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ.

ದಿಬ್ಬೂರಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುವ ಸ್ಥಿತಿಯನ್ನು ಅರಿತು ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಹಲ್ಲೆಯಾದ ಯುವಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಬಜರಂಗದಳ, ವಿವಿಧ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲ್ಲೆಯಾದವರಿಗೆ ಸಾಂತ್ವನ ಹೇಳಿ, ಹಲ್ಲೆಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಎರಡು ಸಮುದಾಯದಿಂದ ದೂರು: ದಿಬ್ಬೂರು ಘಟನೆಗೆ ಸಂಬಂಧಿಸಿದಂತೆ ಹಿಂದೂ ಮತ್ತು ಮುಸ್ಲಿಂ ಎರಡು ಸಮುದಾಯದಿಂದ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಎಫ್ಐಆರ್ ದಾಖಲಾ ಗಿದೆ. ವಿಚಾರಣೆ ನಡೆಯುತ್ತಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.