Thursday, 21st November 2024

ಕೋಡಿ ಬಿದ್ದ ಮಾರಿ ಕಣಿವೆ

ಬಯಲು ಸೀಮೆಯ ಜಲಸಿರಿ ಮಾರಿ ಕಣಿವೆ ಅಥವಾ ವಾಣಿ ವಿಲಾಸ ಸಾಗರ ಕೋಡಿ ಬಿದ್ದಾಗ ನೋಡುವ ಅನುಭವ ಅಪೂರ್ವ!

ಸಿ.ಜಿ.ವೆಂಕಟೇಶ್ವರ ‘ಸಿಹಿಜೀವಿ’

ನನ್ನಣ್ಣ ಪದೇ ಪದೇ ಫೋನ್ ಮಾಡಿ ‘ಮಾರಿಕಣಿವೆ ನೋಡಲು ಯಾವಾಗ ಬರ್ತಿರಾ?’ ಎನ್ನುತ್ತಿದ್ದ. ಈ ವರ್ಷದ ಮಳೆಯಿಂದಾಗಿ ಮಾರಿಕಣಿವೆ ಅಥವಾ ವಿವಿ ಸಾಗರ ಕೋಡಿ ಬಿದ್ದಿತ್ತು! ಇದೇ ಸಂದರ್ಭ ಎಂದು ಹೊರಟೆ. ಆದರೇನು ಮಾಡುವುದು! ಎಲ್ಲರೂ ನನ್ನಂತೆಯೇ ಮಾರಿಕಣಿವೆ ನೋಡಲು ಹೊರಟ್ದಿರು! ವಾಹನಗಳ ಸ್ಲೋ ಮೂವಿಂಗ್ ಟ್ರಾಫಿಕ್‌ನಲ್ಲಿ ಕಣಿವೆ ಮಾರಮ್ಮನ ದೇವಾ ಲಯ ಸೇರಿದ್ದು ಹರಸಾಹಸ ಮಾಡಿದಂತಾಗಿತ್ತು.

ಅಣ್ಣ, ಅತ್ತಿಗೆಯ ಜೊತೆಗೂಡಿ ಕಣಿವೆ ಮಾರಮ್ಮನ ದರ್ಶನ ಪಡೆದು ಬೆಟ್ಟದ ಮೇಲೇರಿ ದಾಗ ಹೊಟ್ಟೆ ತಾಳ ಹಾಕುತ್ತಿತ್ತು. ಅಮ್ಮ ಕಟ್ಟಿಕೊಟ್ಟಿದ್ದ ಅನ್ನ ಮೊಸರು ಬುತ್ತಿಯ ಜತೆಯಲ್ಲಿ, ಅಣ್ಣ ಆಗ ತಾನೆ ತಂದ ಬಿಸಿ ಬೋಂಡಾದ ಜೊತೆಯಲ್ಲಿ ೮೯ ವರ್ಷಗಳ ನಂತರ ಸಂಪೂರ್ಣವಾಗಿ ತುಂಬಿದ ವಿ ವಿ ಸಾಗರದ ನೀರು ನೋಡುತ್ತಾ ತಿನ್ನಲು ಶುರು ಮಾಡಿದೆವು.

1933ರ ಬಳಿಕ ಮಾರಿ ಕಣಿವೆ ಡ್ಯಾಂ ಮೊದಲ ಬಾರಿ ಕೋಡಿ ಬಿದ್ದಿದ್ದು, ಹರಿವ ನೀರನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ಆ ದಿನ ಅಂದಾಜು ೧೦ ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಜಲಾಶಯ ನೋಡಲು ಬಂದಿದ್ದರು. ಜಲಾಶಯದ ಸರ್ಕಲ್‌ನಿಂದ, ಮಾರಿಕಣಿವೆ ಗ್ರಾಮ, ಕೋಡಿ ಬೀಳುವ ಜಾಗ ಹಾಗೂ ಹೊಸದುರ್ಗ ರಸ್ತೆ ಸೇರಿದಂತೆ ಸುಮಾರು ೩ ಕಿಲೋ ಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಿಂಗಲ್ ರಸ್ತೆ ಇರುವುದರಿಂದ ಗಂಟೆ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.

ನೀರಲ್ಲಿ ಸ್ನಾನ
ಜಲಾಶಯದ ನೀರು ಕೋಡಿ ಹೋಗುವ ಜಾಗದ ನೀರಿನಲ್ಲಿ ಪ್ರವಾಸಿಗರು ನೆನೆದು ಮಿಂದೆದ್ದರು. ಕೆಲವರು ಕೈಕಾಲು ಮುಖ ತೊಳೆದರೆ, ಇನ್ನು ಕೆಲವರು ಸ್ನಾನವನ್ನೇ ಮಾಡಿದರು. ಡ್ಯಾಂ ಮೇಲೆ ಪೋಲಿಸ್ ಕಾವಲಿತ್ತು. ಯಾರನ್ನೂ ಬಿಡುತ್ತಿರಲಿಲ್ಲ.
ಚಿಕ್ಕಮಗಳೂರು ಜಿಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ ವೇದಾ ಎಂಬ ನದಿ ಕಡೂರಿನ ಬಳಿ ಅವತಿ ನದಿಯನ್ನು ಸೇರುತ್ತದೆ. ಅವು ಮುಂದೆ ‘ವೇದಾವತಿ’ ನದಿಯಾಗಿ ಹರಿಯುತ್ತದೆ.

ಚಿತ್ರದುರ್ಗದ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರದ ಬಳಿ ಎರಡು ಗುಡ್ಡಗಳ ಮಧ್ಯೆ ನಿರ್ಮಿಸಿರುವ ಜಲಾಶಯವೇ ಮಾರಿಕಣಿವೆ ಡ್ಯಾಂ. ಈ ಅಣೆಕಟ್ಟನ್ನು 1897ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ ‘ತಾರಾ ಚಾಂದ್ ದಲಾಲ’ ಎಂಬ ಇಂಜಿನಿಯರ್ ನೇತೃತ್ವದ ತಂಡವು ನಿರ್ಮಿಸಿತ್ತು.

ಆಗಿನ ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಮುಂದಾಳತ್ವದಲ್ಲಿ ನಿರ್ಮಿಸಿ 1907ರಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದರು. ನಾವು ಡ್ಯಾಂ ನೋಡಿದ ಬಳಿಕ ಕೋಡಿ ಬಿದ್ದ ಸ್ಥಳಕ್ಕೆ ಹೊರಟೆವು. ಅಲ್ಲಿಯೂ ಜನಜಂಗುಳಿ. ತುಂತುರು
ಮಳೆಯಿಂದ ಆ ಪ್ರದೇಶವು ಮಲೆನಾಡ ದೃಶ್ಯಗಳನ್ನು ನೆನಪಿಸಿದವು.

ಮಳೆಯ ಮಧ್ಯದ ಬೇವಿನಹಳ್ಳಿಯ ಕಡೆ ಹೊರಟೆವು. ಬೇವಿನಹಳ್ಳಿಗೆ ಸಂಪರ್ಕ ರಸ್ತೆ ನೀರಿನಿಂದ ಮುಳುಗಡೆಯಾದ್ದರಿಂದ ಕಾಡಿನ
ದಾರಿಯಲ್ಲಿ ಕಾರ್ ಚಲಾಯಿಸುವ ಸಾಹಸ ಮಾಡುತ್ತಾ ಹೊರಟೆ. ಕಾರ್‌ನ ಕೆಳ ಭಾಗಕ್ಕೆ ಕಡ್ಡಿಗಳು ಪಟ ಪಟ ಬಡಿಯುವಾಗ ಆತಂಕವಾಗುತ್ತಿತ್ತು. ಏಳು ಕಿಲೋಮೀಟರ್ ಕ್ರಮಿಸಲು ಅರ್ಧ ಗಂಟೆಯಾಗಿತ್ತು. ಅಂತೂ ಬೇವಿನಳ್ಳಮ್ಮನ ಗುಡ್ಡ ಏರಿ ತಾಯಿಯ
ದರ್ಶನ ಪಡೆದಾಗ ರಾತ್ರಿ ಏಳು ಗಂಟೆ!

೮೯ ವರ್ಷಗಳ ಬಳಿಕ ಬಹುತೇಕ ಭರ್ತಿಯಾದ ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಬಿದ್ದಿರುವುದು ಚಿತ್ರದುರ್ಗ, ಹಿರಿ ಯೂರು ಸುತ್ತಲಿನ ಜನತೆಯಲ್ಲಿ ಅತೀವ ಸಂತಸ ಉಂಟುಮಾಡಿದೆ.