ಕಾಲುವೆಗಳು, ಐತಿಹಾಸಿಕ ಕಟ್ಟಡಗಳು, ದುಂಡುಕಲ್ಲು ಅಳವಡಿಸಿದ ಪುರಾತನ ಬೀದಿ ಗಳು ಈ ಪ್ರವಾಸಿ ಕೇಂದ್ರದ ಆಕರ್ಷಣೆ.
ಜಿ.ನಾಗೇಂದ್ರ ಕಾವೂರು
ಹಾಲೆಂಡ್‌ನ ಉತ್ತರ ಭಾಗದಲ್ಲಿರುವ ಹ್ರೋನಿನನ್(Dutch: Groningen) ಪ್ರಮುಖ ಶೈಕ್ಷಣಿಕ ಕೇಂದ್ರ. ಸುಂದರವಾದ ಐತಿಹಾಸಿಕ ಸ್ಮಾರಕಗಳು, ಕೆಲವು ಶತಮಾನಗಳಷ್ಟು ಹಳೆಯದಾದ ಕೆಂಪು ಇಟ್ಟಿಗೆಗಳಿಂದ ನಿರ್ಮಿಸಲಾದ ವಿಶಿಷ್ಟ ಶೈಲಿಯ ಮನೆಗಳು, ಮಧ್ಯಕಾಲೀನ ಕಾಬಲ್ ಸ್ಟೋನ್ ರಸ್ತೆಗಳು, ಮ್ಯೂಸಿಯಂಗಳು, ಬೋಟಿಂಗ್ ಮಾಡಲು ಸುಂದರವಾದ ಕೆನಾಲ್‌ಗಳು, ಹಲವಾರು ರೆಸ್ಟೋರೆಂಟ್‌ಗಳು, ಹೀಗೆ ಹಲವು ಆಕರ್ಷಣೆಗಳಿಂದ ಕೂಡಿದ ನೆದರ್ಲೆಂಡ್ಸ್‌ನ ಉತ್ತಮ ನಗರಗಳಲ್ಲಿ ಒಂದಾದ ಹ್ರೋನಿನನ್ ಪ್ರವಾಸಿಗರ ನೆಚ್ಚಿನ ನಗರ.
ಮಾರ್ಟಿನಿ ಟವರ್
ದೂರದಿಂದಲೇ ಎದ್ದು ಕಾಣುವ ಮಾರ್ಟಿನಿ ಟವರ್ ಮತ್ತು ಸಿಟಿ ಹಾಲ್ ಹ್ರೋನಿನನ್ ನಲ್ಲಿರುವ ಪ್ರಮುಖ ಕಟ್ಟಡಗಳು. ಈ ಎರಡೂ ಕಟ್ಟಡಗಳು ನಗರ ಕೇಂದ್ರಭಾಗವಾದ ಗ್ರೋಟ್ ಮಾರ್ಕೆಟ್ ಪ್ರದೇಶದಲ್ಲಿವೆ. ಸುಮಾರು 500 ವರ್ಷಗಳಷ್ಟು ಹಳೆಯ ದಾದ ಮಾರ್ಟಿನಿ ಟವರ್‌ನ್ನು ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದ್ದು, ಒಳಗಿನ ಮೆಟ್ಟಿಲುಗಳ ಮೂಲಕ 100 ಮೀಟರ್ ಎತ್ತರದ ಗೋಪುರನ್ನೇರಿದರೆ, ಹ್ರೋನಿನನ್ ನಗರದ ಸುಂದರ ನೋಟವನ್ನು ಕಣ್ತುಂಬಿಕೊಳ್ಳಬಹುದು.
ಯುರೋಪ್‌ನ ಅತ್ಯುತ್ತಮ ಎಂದು ಹೇಳಲಾಗುವ ‘ಕಾರ್ಲಿಯನ್’ ಸಹ ಇಲ್ಲಿದೆ. ಅತಿ ಹೆಚ್ಚು ಪ್ರವಾಸಿಗರು ಬರುವ ಗ್ರೋಟ್ ಮಾರ್ಕೆಟ್ ಪ್ರದೇಶದಲ್ಲಿ ಪ್ರವಾಸಿಗರ ಜಿಹ್ವಾ ಚಾಪಲ್ಯವನ್ನು ನೀಗಿಸಲು ಮೀನು, ಮಾಂಸದ ಖಾಧ್ಯಗಳನ್ನು ತಯಾರಿಸುವ ರೆಸ್ಟೋರೆಂಟ್‌ಗಳು ಹಾಗೂ ಹಣ್ಣು, ತರಕಾರಿ, ವಿವಿಧ ಬಗೆಯ ಚೀಸ್‌ಗಳನ್ನು ಮಾರಾಟ ಮಾಡುವ ಮಳಿಗೆಗಳಿವೆ.
ಪುರಾತನ ವಿಶ್ವವಿದ್ಯಾಲಯ: 1614 ರಲ್ಲಿ ಸ್ಥಾಪಿಸಲಾದ ಹ್ರೋನಿನನ್ ವಿಶ್ವವಿದ್ಯಾಲಯವನ್ನು ಕಾನೂನು, ಔಷಧ ಮತ್ತು ಥಿಯೋಲಜಿ ಕೋರ್ಸ್ ಗಳೊಂದಿಗೆ ಆರಂಭಿಸಲಾಯಿತು. ಇದೇ ಸಮಯದಲ್ಲಿ ನಗರದ ಸುತ್ತಲೂ ಗೋಡೆಯನ್ನೂ ಕಟ್ಟಲಾಯಿತು. 1672 ರಲ್ಲಿ ನಡೆದ ಮೂರನೇ ಆಂಗ್ಲೋ- ಡಚ್ ಯುದ್ಧದಲ್ಲಿ, ಗಟ್ಟಿ ಮುಟ್ಟಾದ ಗೋಡೆಗಳಿಂದಾಗಿ ಮುತ್ತಿಗೆ ವಿಫಲವಾಯಿತು. ಇದರ ನೆನಪಿಗಾಗಿ ಪ್ರತೀ ವರ್ಷ ಆಗಸ್ಟ್ ೨೮ ನ್ನು ಹ್ರೋನಿನ್ ನಮ್ಮದು (Gronings ontzet) ಎಂದು ಸಂಗೀತ ಮತ್ತು ಸುಡು ಮದ್ದು ಪ್ರದರ್ಶನದ ಮೂಲಕ ಆಚರಿಸುತ್ತಾರೆ.
ಹ್ರೋನಿನನ್ ವಿಶ್ವವಿದ್ಯಾಲಯದಿಂದ ಸ್ವಲ್ಪ ದೂರದಲ್ಲಿ ಒಂದು ಐತಿಹಾಸಿಕ ರಸ್ತೆಯಿದೆ. ರಸ್ತೆ ಪುಟ್ಟದಾಗಿದ್ದರೂ ಮಂಗಳವಾರ ದಿಂದ ಶನಿವಾರದವರೆಗೆ ಇಲ್ಲಿ ಮಾರಾಟ ಮಾಡುವ ವಿಂಟೇಜ್ ವಸ್ತುಗಳು, ಕೆಲವು ಆಸಕ್ತಿದಾಯಕ ಹಳೆಯ ಗೃಹೋಪಯೋ
ಗಿ ವಸ್ತುಗಳು, ಹಳೆಯ ಪುಸ್ತಕಗಳನ್ನು ಕೊಳ್ಳಲು ಅನೇಕರು ಇಲ್ಲಿಗೆ ಬರುತ್ತಾರೆ.
ಹ್ರೋನಿಂಗರ್ ಮ್ಯೂಸಿಯಂ
ಹ್ರೋನಿನನ್ ರೈಲು ನಿಲ್ದಾಣದಿಂದ ನೇರವಾಗಿ ಸಾಗಿದಲ್ಲಿ ಹ್ರೋನಿಂಗರ್ ಮ್ಯೂಸಿಯಂ ತಲುಪಬಹುದು. ಇಟಾಲಿಯನ್ ವಾಸ್ತುಶಿಲ್ಪಿ ‘ಮೆಂಡಿನಿ’ ಈ ಕಟ್ಟಡವನ್ನು ವಿನ್ಯಾಸಗೊಳಿಸಿದ. ಕಟ್ಟಡದ ವಿನ್ಯಾಸ, ಉಪಯೋಗಿಸಲಾದ ಬಣ್ಣಗಳು ಹಾಗೂ ವಸ್ತುಗಳು ಪ್ರವಾಸಿಗರ ಗಮನ ಸೆಳೆಯುತ್ತವೆ. ವೈವಿಧ್ಯಮಯ ಕಲೆಗಳ ಸಂಗ್ರಹವನ್ನು ಹೊಂದಿರುವ ಈ ಮ್ಯೂಸಿಯಂ ನಲ್ಲಿ ವರ್ಣ ಚಿತ್ರಗಳು, ಫ್ಯಾಷನ್, ವಿನ್ಯಾಸ ಸೇರಿದಂತೆ ಸ್ಥಳಿಯ ಕಲಾವಿದರ ಕಲಾಕೃತಿಗಳು, ಜಪಾನೀ, ಚೀನೀ ಪಿಂಗಾಣಿ ವಸ್ತುಗಳು ಇವೆ.
ಸೇಂಟ್ ಆಂತೋನಿ ಗೆಸ್ಟ್ ಹೌಸ್
ಬಡವರು ಹಾಗೂ ರೋಗಿಗಳಿಗೆಂದೇ 1517 ರಲ್ಲಿ ನಿರ್ಮಿಸಲಾದ ಉಚಿತ ಗೆಸ್ಟ್ ಹೌಸ್ ಇದಾಗಿದ್ದು, ಕಾಲಕ್ರಮೇಣ ಇಲ್ಲಿಗೆ ಬರು ವವರ ಸಂಖ್ಯೆ ಕಡಿಮೆಯಾದ ಕಾರಣ ೨೦ ನೇ ಶತಮಾನದ ಪ್ರಾರಂಭದಲ್ಲಿ ಇಲ್ಲಿರುವ ೪೦ ಮನೆಗಳನ್ನು ಬಾಡಿಗೆಗೆ ಕೊಡಲಾಯಿ ತು.
ಕೆಲವು ಪ್ರಮುಖ ಸ್ಥಳಗಳು
? ನಗರದ ವಾತಾವರಣದಿಂದ ದೂರವಿರುವ ಪ್ರವಾಸಿ ಕೇಂದ್ರವೆಂದೇ ಪ್ರಸಿದ್ಧಿಯಾಗಿರುವ ಹಳ್ಳಿ ಹೀಥೋರ್ನ್ ಹಾಗೂ ಫ್ರಿಸಿಯನ್ ಪಟ್ಟಣಗಳ ಸೌಂದರ್ಯ ಸದಾ ಕಾಲ ನೆನಪಿನಲ್ಲಿ ಉಳಿಯುತ್ತದೆ. ಅತಿ ಹೆಚ್ಚು ಸೇತುವೆಗಳನ್ನು ಹೊಂದಿರುವ ಹೀಥೋರ್ನ್‌ನ ಕೆನಾಲ್‌ಗಳಲ್ಲಿ ದೋಣಿವಿಹಾರ ಮಾಡುತ್ತಾ ಸೇತುವೆಗಳಲ್ಲಿ ತೂಗು ಹಾಕಲಾಗಿರುವ ಬಣ್ಣ ಬಣ್ಣದ ಹೂಗಳಿಂದ ನಳನಳಿಸುವ ಹೂಕುಂಡಗಳು, ಹುಲ್ಲು ಮೇಲ್ಛಾವಣಿಗಳ ಮನೆಗಳು ಹಾಗೂ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಬರುತ್ತಾರೆ.
? ನಕ್ಷತ್ರಾಕಾರದಲ್ಲಿರುವ ಬೋರ್ಟಂಗ್ ಕೋಟೆಯನ್ನು 1593 ರಲ್ಲಿ ನಿರ್ಮಿಸಲಾಗಿದೆ. ಜರ್ಮನಿ ಮತ್ತು ಹ್ರೋನಿನನ್ ನಡುವಿನ ಸಂಪರ್ಕ ರಸ್ತೆಯ ಮೇಲೆ ನಿಯಂತ್ರಣ ಸಾಽಸುವ ಸಲುವಾಗಿ ಈ ಆಕರ್ಷಕ ಕೋಟೆಯನ್ನು ನಿರ್ಮಿಸಲಾಗಿದೆ. ಕೋಟೆಯ ಸುತ್ತಲೂ ನಿರ್ಮಿಸಲಾಗಿರುವ ಕಂದಕಗಳು ಅಚ್ಚರಿ ಮೂಡಿಸುತ್ತವೆ. ಮಧ್ಯಕಾಲೀನ ಕಟ್ಟಡಗಳು, ನಾಲ್ಕು ವಸ್ತು ಸಂಗ್ರಹಾಲಯ ಗಳು, ಐತಿಹಾಸಿಕ ಅಂಗಡಿಗಳು, ಕೆನಾಲ್‌ಗಳು ಇಲ್ಲಿನ ವಿಶೇಷಗಳು.
? ರೈಟ್‌ಡೀಪ್ ಹೇವನ್ (Dutch : Reitdiep Haven) ಹ್ರೋನಿನನ್ ರಿಂಗ್ ರೋಡ್‌ನಲ್ಲಿರುವ ರೈಟ್‌ಡೀಪ್‌ನಲ್ಲಿರುವ ಬಂದರು ಪ್ರದೇಶವಾಗಿದ್ದು ಕಾರು, ಬೈಸಿಕಲ್ ಮತ್ತು ಸಾರ್ವಜನಿಕ ಸಾರಿಗೆ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಸ್ಕ್ಯಾಂಡಿನೇವಿ ಯನ್ ಶೈಲಿಯ ಕಟ್ಟಡಗಳು ನೀರಿಗೆ ತಾಗಿದಂತೆ ನಿರ್ಮಿಸಲಾಗಿರುವುದು ಇಲ್ಲಿನ ವಿಶೇಷತೆ.
ಒಂದನ್ನೊಂದು ತಾಗಿಕೊಂಡಂತೆ ನಿರ್ಮಿಸಲಾದ ಆಕರ್ಷಕ ಗಾಢ ಬಣ್ಣದ ಮನೆಗಳ ಮೇಲ್ಛಾವಣಿಗಳೆಲ್ಲವೂ ಒಂದೇ ಬಣ್ಣ ವನ್ನು ಹೊಂದಿದ್ದು, ಪ್ರತಿಯೊಂದು ಮನೆಯ ಬಣ್ಣವೂ ವಿಭಿನ್ನವಾಗಿದೆ. ಇಡೀ ಮನೆಯ ಕಟ್ಟಡಕ್ಕೆ ಒಂದೇ ಬಣ್ಣ ಬಳಿ ಹಾಗೂ ಕಿಟಕಿಗಳಿಗೆ ಬಿಳಿಯ ಬಣ್ಣವನ್ನು ಬಳಿಯಲಾಗಿದೆ. ಇಲ್ಲಿರುವ ಸೂಪರ್ ಮಾರ್ಕೆಟ್‌ಗಳು, ಮ್ಯೂಸಿಯಂಗಳು, ಹಾಗೂ ಥಿಯೇಟರ್ ಗಳು ಪ್ರವಾಸಿಗರನ್ನು ಸೆಳೆಯುತ್ತವೆ.
ಆಮ್ಸ್ಟರ್‌ಡ್ಯಾಮ್ ನಿಂದ ಹ್ರೋನಿನನ್ ೧೮೦ ಕಿ.ಮೀ. ದೂರದಲ್ಲಿದೆ. ನೆದರ್ಲೆಂಡ್ಸ್‌ನ ಇತರೆ ನಗರಗಳಿಗೆ ಹೋಲಿಸಿದಲ್ಲಿ
ಹ್ರೋನಿನನ್‌ನಲ್ಲಿ ಉಳಿದುಕೊಳ್ಳಲು ಅಗ್ಗದ ಯೂತ್ ಹಾಸ್ಟೆಲ್ ಹಾಗೂ ಕಡಿಮೆ ಬಜೆಟ್‌ನ ಹೋಟೆಲ್‌ಗಳೂ ಇವೆ.