ಸುಪ್ತ ಸಾಗರ
rkbhadti@gmail.com
ಸ್ವಾವಲಂಬಿ ಜೀವನದ ಸೂಕ್ತ ಆಯ್ಕೆ ಸಾವಯವವೇ ಆಗಿರಬೇಕು. ಕೇವಲ ಕೃಷಿ, ತೋಟಗಾರಿಕೆಯಲ್ಲಿನ ಸಾವಯವದ ಮಾತನ್ನು ಆಡುತ್ತಿಲ್ಲ ನಾನು. ಬದುಕೇ ಸಾವಯವ ಆಗಬೇಕು.ಅಂದರೆ, ಹೊರಗಿನಿಂದ ಏನನ್ನೂ ತರದೇ ನಮ್ಮ ಸುತ್ತಮುತ್ತಲಿನದನ್ನೇ ಬಳಸಿ ಬದುಕುವುದೇ ಸಾವಯವ ಸಿದ್ಧಾಂತ. ಅಂಥ ಬದುಕು ನೈಸರ್ಗಿಕ ಸಮುದಾಯದಿಂದ ಮಾತ್ರವೇ ಸಿಗುತ್ತದೆ.
ಮತ್ತೊಮ್ಮೆ ಜಾಗತಿಕ ಆರ್ಥಿಕತೆ ಕುಸಿಯುತ್ತಿದೆಯಂತೆ. ಅಮೆರಿಕ ಸೇರಿದಂತೆ ಎಲ್ಲ ದೇಶ ಗಳವರೂ ಇನ್ನಿಲ್ಲದಂತೆ ಇದನ್ನು ತಡೆಯುವುದು ಹೇಗೆಂಬ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿ ದ್ದಾರೆ. ಆರ್ಥಿಕ ತಜ್ಞರು, ಮಾರುಕಟ್ಟೆ ವೀರರು, ವಿಶ್ಲೇಷಕರು, ದೊಡ್ಡ ದೊಡ್ಡ
ವಿಶ್ವ ವಿದ್ಯಾಲಯದ ಪ್ರೊಫೆಸರುಗಳು ಹೀಗೆ ಎಲ್ಲರದ್ದೂ ಒಂದೇ ಗುರಿ; ಏನಾದರೂ ಮಾಡಿ ಕುಸಿಯುತ್ತಿರುವ ಹಣಕಾಸು ಸ್ಥಿತಿ-ಗತಿಗೆ ಗೂಟ ಕೊಟ್ಟಾದರೂ ನಿಲ್ಲಿಸಬೇಕು.
ಕರೋನಾಘಾತ, ರಷ್ಯಾ-ಉಕ್ರೇನ್ ಯುದ್ಧ, ಚೀನಾದ ದೊಂಬರಾಟ ಇವೆಲ್ಲದರ ಪರಿಣಾಮ ಇಂದಿನ ಆರ್ಥಿಕ ದುಃಸ್ಥಿತಿಯಂತೆ. ಏನಾದರೂ ಮಾಡುತ್ತಾರೆ ಬಿಡಿ. ಏನಿಲ್ಲ ವೆಂದರೂ ಶತಾಯಗತಾಯ, ಬಿಳಿ ಹಾಳೆಯ ಮೇಲೆ ಎಳೆದ ಗ್ರಾಫ್ನ ಗೆರೆಯನ್ನು ಇನ್ನಷ್ಟು ಊರಿ ಬರೆದರೂ ಮೇಲಕ್ಕೆತ್ತುತ್ತಾರೆ. ವಿಷಯ ಅದಲ್ಲ. ನಾವೆಷ್ಟೇ ವೈeನಿಕವಾಗಿ ಅಭಿವೃದ್ಧಿ ಸಾಧಿಸಿರಬಹುದು. ಮಹತ್ವಪೂರ್ಣ ಸಂಶೋಧನೆಗಳನ್ನು ಮಾಡಿರಬಹುದು. ಹೊಸ ಹೊಸ ಅನ್ವೇಷಣೆಗಳನ್ನು ಬೆಳೆಕು ಕಾಣಿಸಿರಬಹುದು.
ತಂತ್ರಜ್ಞಾನದ ಮೂಲಕ ಜಗತ್ತನ್ನೇ ಬೆಸೆದಿರಬಹುದು. ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿರಬಹುದು. ಇಷ್ಟೆಲ್ಲದರ ನಡುವೆಯೂ ಇರುವ ಸತ್ಯವೊಂದು ಏನು ಗೊತ್ತಾ? ನಮ್ಮ ವಿಜ್ಞಾನಕ್ಕಾಗಲೀ, ನಮ್ಮ ದುಡ್ಡಿ ಗಾಗಲೀ ಇವತ್ತಿನವರೆಗೆ ನಮ್ಮ ಆಹಾರವನ್ನು ಸೃಷ್ಟಿಸಲು ಆಗಿಯೇ ಇಲ್ಲ. ನೀರನ್ನು ತಯಾರಿಸಲು ಆಗಲಿಲ್ಲ. ಗಾಳಿಯನ್ನು ತಯಾರಿಸಲು ಸಾಧ್ಯವಿಲ್ಲ. ಈ ನೆಲದ ಮಣ್ಣನ್ನು ತಯಾರಿಸುವ ಕಾರ್ಖಾನೆಯನ್ನು ಕಟ್ಟಲು ಆಗಲಿಲ್ಲ. ವಿಜ್ಞಾನದ ಮಿತಿ, ನಿಸರ್ಗದ ಹರವು ಇರುವುದೇ ಇದರಲ್ಲಿ. ಅಭಿವೃದ್ಧಿ, ಆರ್ಥಿಕತೆ, ಆಧುನಿಕ ಆಂದೋಲನಗಳನ್ನು ಅಮೆರಿಕದ ಕಾದಂಬರಿಕಾರ, ರೈತ, ಪರಿಸರ ಪ್ರೇಮಿ ವೆಂಡೆಲ್ ಬೆರ್ರಿ ಬಹು ಸುಂದರವಾಗಿ ವ್ಯಂಗ್ಯಕ್ಕೊಳಪಡಿಸುತ್ತಾ, ಮರು ವ್ಯಾಖ್ಯಾನಕ್ಕೊಳಪಡಿಸುತ್ತಾರೆ.
ಬೆರ್ರಿಯಾದರೂ ಪಾಶ್ಚಾತ್ಯ ಚಿಂತನೆಯವನು ಎನ್ನಬಹುದು. ಥಾಯ್ಲೆಂಡಿನ ‘ಮಣ್ಣಿನ ಮಗ’ ಜಾನ್ ಜಾನ್ದಾಯನನ್ನು ಕೇಳಿ ನೋಡಿ, ಆರ್ಥಿಕತೆಗೂ ಕೃಷಿಗೂ ಸಂಬಂಧವೇ ಇಲ್ಲ. ಜಗತ್ತಿನಲ್ಲಿ ಏನಾದರೂ ಕೃಷಿ ಸುಸ್ಥಿರವಾಗಿದ್ದರೆ ಬದುಕು ಅಲ್ಲಾಡುವುದೇ ಇಲ್ಲ. ಅಷ್ಟಕ್ಕೂ ರೈತನ ಜೇಬಲ್ಲಿ ಯಾವತ್ತೂ ಹಣವಿರಬಾರದು ಎನ್ನುತ್ತಾನೆ!
ಥಾಯ್ಲೆಂಡ್‌ನಲ್ಲಿ ತನ್ನದೇ ‘ಪನ್ ಪನ್ ಸೆಂಟರ್’ ಎಂಬುದನ್ನು ರೂಪಿಸಿಕೊಂಡು ಒತ್ತಡ ರಹಿತ, ಸುಸ್ಥಿರ, ಸ್ವಾವಲಂಬಿ ಕೃಷಿ ಬದುಕಿನ ಪ್ರತಿಪಾದಕನಾಗಿರುವ ಜಾನ್ ಜಾನ್ದಾಯ ‘ಜೀವನ ಬಲು ಸುಲಭ ; ಮತ್ಯಾಕೆ ಅದನ್ನು ಸುಮ್ಮನೇ ಕಠಿಣ ಮಾಡಿ ಕೊಳ್ಳುತ್ತೀರಿ ಹುಚ್ಚಪ್ಪಗಳಿರಾ !’ ಎನ್ನುತ್ತಾನೆ. ಇಂದಿನ ಸನ್ನಿವೇಶದಲ್ಲಿ ಇವರಿಬ್ಬರೂ ಏಕೋ ಬಹುವಾಗಿ ಕಾಡಿದರು. ಅವರು ಹೇಳಿದ್ದನ್ನು ಅವರದೇ ಮಾತುಗಳಲ್ಲಿ ಹಿಡಿದಿಡಲು ಯತ್ನಿಸಿದ್ದೇನೆ; ಒಪ್ಪಿಸಿಕೊಳ್ಳಿ.
ಮೊದಲಿಗೆ ಬೆರ್ರಿ: ನೀರಿನ ಸೂತ್ರವನ್ನು ಕಂಡು ಹಿಡಿದಿದ್ದೇವೆ. ಮಣ್ಣಿನ ವಾಸನೆಯ ಮೂಲವನ್ನು ಕೆದಕಿದ್ದೇವೆ. ಗಾಳಿಯಲ್ಲಿನ ಧಾತುವನ್ನು ಗುರುತಿಸಿದ್ದೇವೆ. ಆಹಾರದಲ್ಲಿನ ಪೌಷ್ಟಿಕಾಂಶ, ಖನಿಜ, ಕ್ಯಾಲರಿ, ಫೈಬರ್, ಫ್ಯಾಟ್ ಎಲ್ಲವನ್ನೂ ಲೆಕ್ಕ ಹಾಕಿದ್ದೇವೆ. ಹಾಗೊಂದು ಸಂಯುಕ್ತ ವಸ್ತುವನ್ನು ನಮ್ಮ ಪ್ರಯೋಗಾಲಯದಲ್ಲಿ ಮರು ನಿರ್ಮಿಸಲು ಸಾಧ್ಯವೇ ಇಲ್ಲ. ನಮ್ಮ ಜೀವನ ದೊಂದಿಗೆ ನಾವು ಬೆಸೆದುಕೊಂಡು ಬರುತ್ತಿರುವ ತಂತ್ರಜ್ಞಾನಕ್ಕೆ ನಮ್ಮ ಅನ್ನವನ್ನು ದಕ್ಕಿಸಿಕೊಡುವ ಶಕ್ತಿಯೇ ಇಲ್ಲ. ಪ್ರಕೃತಿಯ ಹೆಗ್ಗಳಿಕೆ ಇರುವುದೇ ಅಲ್ಲಿ.
ಮತ್ತು ಮಾನವನ ಇತಿಮಿತಿಗಳು ನಿಲ್ಲುವುದು ಸಹ ಅಲ್ಲಿಯೇ. ಈ ನೆಲದ ಜತೆಗಿನ ನಮ್ಮ ಶ್ರಮದ ದುಡಿಮೆಯಿಂದ ಮಾತ್ರವೇ ನಾವು ಆಹಾರವನ್ನು ಗಳಿಸಿಕೊಳ್ಳಲು ಸಾಧ್ಯ. ನಮಗೆ ಅನ್ನ ಬೇಕಿದ್ದರೆ ನಾವು ಶ್ರಮಿಸಲೇಬೇಕು. ಇದು ಸಾಮಾನ್ಯ ಜ್ಞಾನ. ನಮ್ಮಿಂದ ಮರು ಸೃಷ್ಟಿಸಲಾರದ್ದನ್ನು ನಾಶ ಮಾಡುವ ಹಕ್ಕು ನಮಗಿಲ್ಲ. ನಮಗೆ ಸ್ವಚ್ಛ ನೀರು, ಶುದ್ಧ ಗಾಳಿ, ಆರೋಗ್ಯಕರ ಮಣ್ಣು, ಪೌಷ್ಟಿಕಯುಕ್ತ ಆಹಾರ ನಿರಂತರವಾಗಿ ಬೇಕೇ ಬೇಕು; ಇವೆಲ್ಲವೂ ಸಿಗುವುದು ನಿಸರ್ಗದಿಂದ ಮಾತ್ರವೇ ಎಂದಾದ
ಮೇಲೆ, ಅವು ನಮ್ಮಿಂದ ನಾಶವಾಗುತ್ತದೆ ಎಂದಾದರೆ ಅವನ್ನು ರಕ್ಷಿಸಿಕೊಳ್ಳುವುದು ಆದ್ಯತೆ ಆಗಬೇಡವೇ? ನಿಸರ್ಗದ ವೈವಿಧ್ಯವನ್ನು ಕೊಲ್ಲುವ ನಮ್ಮ ಏಕರೂಪ ಬೆಳೆ ಪದ್ಧತಿ, ರಾಸಾಯನಿಕ, ಕೀಟ ನಾಶಕಗಳು ಬಳಕೆ, ಯಂತ್ರಗಳ ಅವಲಂಬನೆ, ನಿಸರ್ಗವನ್ನು ಹಿಂಸಿಸುವ ನಮ್ಮ ಪ್ರವೃತ್ತಿಯನ್ನು ಪೊರೆಯುವ ಕಾರ್ಪೊರೇಟ್ ವ್ಯವಸ್ಥೆ ಇವೆಲ್ಲವೂ ಜೀವ ವಿರೋಧಿಯೆಂದೇ ಅನ್ನಿಸಿಕೊಳ್ಳುತ್ತವೆ.
ಇವುಗಳಿಂದ ಮುಕ್ತವಾಗದ, ಆರೋಗ್ಯಕರ eನವನ್ನು, ಕೌಶಲವನ್ನು, ಸದುದ್ದೇಶವನ್ನು ಹೊಂದಿರುವ ಮನಸುಗಳು ಇಂದಿನ
ಅಗತ್ಯವೇ ವಿನಾ, ಉದ್ದೇಶ ರಾಹಿತ್ಯವಾದ ವಿಜ್ಞಾನವಾಗಲೀ, ಹುಸಿ ಆರ್ಥಿಕತೆಗಳಾಗಲೀ ಅಲ್ಲ. ದುರಂತವೆಂದರೆ ಇದನ್ನು
ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಮನಃಸ್ಥಿತಿಗೆ ಬಂದು ತಲುಪಿಬಿಟ್ಟಿದ್ದೇವೆ.
ನಮ್ಮೆಲ್ಲ ಸಮಸ್ಯೆಗಳಿಗೆ ವಿಜ್ಞಾನ ಉತ್ತರಿಸಿಬಿಡುತ್ತದೆ ಎಂಬ ಭ್ರಮೆಯಲ್ಲಿ, ಮೇಲಿಂದ ಮೇಲೆ ಪ್ರಯೋಗಳನ್ನು ನಡೆಸುತ್ತಲೇ ಬರುತ್ತಿದ್ದೇವೆ. ನಿಮಗೆ ಗೊತ್ತಾ? ನಿಸರ್ಗವನ್ನು ಮೀರಿದ ಪ್ರಯೋಗಶಾಲೆ ಇನ್ನೊಂದಿಲ್ಲ. ನಮ್ಮ ಸಮಸ್ಯೆಗಳಿಗೆ ಅಲ್ಲಿ ಸೂಕ್ತ ಉತ್ತರಗಳಿವೆ. ಆದರೆ ಆ ಪ್ರಯೋಗಶಾಲೆಯನ್ನು ಹೊಗ್ಗಲೇ ನಾವು ಮನಸ್ಸು ಮಾಡುವುದಿಲ್ಲ. ಅಲ್ಲಿ ಉತ್ತರ ಹುಡುಕುವ ಯತ್ನವನ್ನೇ ಮಾಡುವುದಿಲ್ಲ. ಮಾನವನ ಆಂತರಿಕ ಪ್ರಜ್ಞೆ ವಿಸ್ತಾರಗೊಂಡಾಗ ಮಾತ್ರವೇ ನಮ್ಮ ವಿಕಾಸವೂ ಆಗುವುದು. ಈ ವಿಕಾಸವಾದ ನಮ್ಮ ಸೋ ಕಾಲ್ಡ್ ಆರ್ಥಿಕತೆಯ ಪ್ರಜ್ಞೆಯನ್ನು ಮೀರಿದ್ದು.
ಇದಕ್ಕೆ ಬೇಕಿರುವುದು ವಿಶ್ವವಿದ್ಯಾಲಯದ ಪದವಿಗಳಲ್ಲ. ಬದಲಾಗಿ ನಾನು ಮಾಡುತ್ತಿರುವುದು ಏನು, ಅದನ್ನು ಯಾಕಾಗಿ ಮಾಡುತ್ತಿದ್ದೇನೆ ಎಂಬ ಕನಿಷ್ಠ, ಸಾಮಾನ್ಯ eನದ ಅಗತ್ಯವಿದೆ. ನಿಮಗೊಂದು ಉದಾಹರಣೆ ಕೊಡಬಹುದಾದರೆ ‘ಮಣ್ಣಿನ ಸಂರಕ್ಷಣೆ’ಯನ್ನು ಮಾಡುವುದು ಹೇಗೆ ಎಂಬುಕ್ಕೆ ಪ್ರಯೋಗಾಲಯದ ಸಂಶೋಧನೆಗಳು ಬೇಕಿಲ್ಲ. ಅದು ಆಗಬೇಕಿರುವುದು ನೆಲನ ವಿನಾ, ನೆಲದಿಂದ ಮೇಲೆದ್ದು ನಿಂತ ಬೃಹತ್ ಬಹುಮಹಡಿ ಕಟ್ಟಡಗಳಲ್ಲಿ ಅಲ್ಲ. ಇಲ್ಲಿ ಬೇಕಿರುವುದು ಮಣ್ಣಿನ ಬಗೆಗಿನ ಪ್ರಾಥಮಿಕ ಮತ್ತು ಸಮಗ್ರ ತಿಳಿವಳಿಕೆ. ಇದನ್ನು ಅರಿಯದೇ ಆರ್ಥಿಕತೆಯನ್ನು ವಿಶ್ಲೇಷಿಸುತ್ತೇವೆ.
ನಮ್ಮ ಇಡೀ ಆರ್ಥಿಕತೆ ನಿಂತಿರುವುದು ಅನಾರೋಗ್ಯದ ಮೇಲೆ. ಹೆಚ್ಚು ಹೆಚ್ಚು ಜನ ಅನಾರೋಗ್ಯಪೀಡಿತರಾದಂತೆಲ್ಲ ರಾಷ್ಟ್ರದ
ಜಿಡಿಪಿ ಹೆಚ್ಚುತ್ತದೆ. ಹೆಚ್ಚು ಹೆಚ್ಚು ನಿಸರ್ಗ ಮಾಲಿನ್ಯವಾದಂತೆಲ್ಲ ನಮ್ಮ ಆರ್ಥಿಕತೆಯ ಗ್ರಾಫ್ ಮೇಲಕ್ಕೆ ಹೋಗುತ್ತದೆ. ಏಕೆ ಗೊತ್ತಾ? ಕೈಗಾರಿಕೆಗಳು, ರಾಸಾಯನಿಕಗಳ ಉತ್ಪಾದಕರು, ಮೆಡಿಸಿನಲ್ ಕಂಪನಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ನಾವು ನಂಬಿರುವ ಆರ್ಥಿಕತೆ ಅತ್ಯಂತ ಸಂಕೀರ್ಣವಾದದ್ದು. ಇದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.
ಇಲ್ಲಿ ಯಾವತ್ತೂ ಆರೋಗ್ಯವಂತ ಜನತೆ, ಆರೋಗ್ಯಕರ ಸಮಾಜ, ಆರೋಗ್ಯಕರ ನಿಸರ್ಗ ಮಾನದಂಡವಾಗಿಯೇ ಇಲ್ಲ. ನಮ್ಮ
ಭೂಮಿಯ, ನಿಸರ್ಗದ ದುರ್ಬಳಕೆಯೇ ನಮ್ಮ ಎಕಾನಮಿ ಎನ್ನುವುದಾದರೆ ಅದನ್ನು ಯಾವುದೇ ದೃಷ್ಟಿಯಿಂದಲೂ ಅಭಿವೃದ್ಧಿಯ ವ್ಯಾಖ್ಯಾನದಡಿ ತರಲಾಗುವುದೇ ಇಲ್ಲ. ನಿಜವಾಗಿ ಭೂ ಆಧಾರಿತ ಆರ್ಥಿಕತೆಯನ್ನು ನಾವು ಪೋಷಿಸಬೇಕು. ಆದರೆ ಇಂದು ಬಹುತೇಕ ರಾಷ್ಟ್ರಗಳ ಎಕಾನಮಿ ಎಕಾಲಜಿಯನ್ನು ಮರೆತುಬಿಟ್ಟಿದೆ.
ದೇಸಿಯ ನೆಲಮೂಲದ ಇತಿಹಾಸವನ್ನು ಗಣನೆಗೆ ತೆಗೆದುಕೊಳ್ಳದೇ ನಾವು ಈಗಾಗಲೇ ನಮ್ಮ ಮೂಲ ಬೇರುಗಳನ್ನು ದುರ್ಬಲಗೊಳಿಸಿಕೊಂಡಿದ್ದೇವೆ. ಕೈಗಾರಿಕಾ ಧಾರಿತ ಆರ್ಥಿಕತೆಯ ಬೆಲೆಯಲ್ಲಿ ಸಿಲುಕಿ ತೊಳಲಾಡುತ್ತಿದ್ದೇವೆ. ಬಂಡವಾಳಶಾಹಿ ಆಧಾರಿತ ಕೈಗಾರಿಕೆಗಳ ಆರ್ಥಿಕತೆಯಲ್ಲಿ ನಿಗರ್ಗದ ಮೌಲ್ಯಗಳನ್ನು ಅಳೆಯುವುದೇ ಇಲ್ಲ. ಪ್ರಕೃತಿ, ಮಾನವ, ಸಂಸ್ಕೃತಿ, ಸಾಂಪ್ರದಾಯ, ಕೃಷಿ, ಸ್ಥಳೀಯ ಸಂಪನ್ಮೂಲಗಳು ಹೀಗೆ ನಾವು ಅವಲಂಬಿಸಿರುವ ಯಾವುದೂ ಇಲ್ಲ ಗಣನೆಗೆ ಒಳಪಡುವುದಿಲ್ಲ. ಬದಲಾಗಿ ಅವೆಲ್ಲವುಗಳ ಮೇಲಿನ ದಾಳಿ ಪರಿಗಣಿತವಾಗುತ್ತಿದೆ.
ಇದನ್ನು ಹೇಳಿದರೆ ಅಭಿವೃದ್ಧಿ ವಿರೋಧಿ ಸಿದ್ಧಾಂತವೆಂಬ ತಪ್ಪು ವ್ಯಾಖ್ಯಾನಕ್ಕೊಳಪಡುತ್ತೇವೆ. ಇವೆಲ್ಲವುಗಳನ್ನು ಹೊರತುಪಡಿಸಿ ನಾವು ಅಭಿವೃದ್ಧಿ ಸಾಧಿಸಬವೆಂದು ನನಗನ್ನಿಸುವುದೇ ಇಲ್ಲ. ಇನ್ನು ಜಾನ್ದಾಯ್ ಹೇಳುತ್ತಾನೆ ಕೇಳಿ- ಹಣವನ್ನು ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳುವ ಒಂದು ಸಾಧನವಾಗಿ (ಟೂಲ) ಬಳಸಿ ತಪ್ಪಿಲ್ಲ. ಆದರೆ ಹಣವೊಂದೇ ನಿಮಗೆ ಆರೋಗ್ಯ, ನೆಮ್ಮದಿ, ರಕ್ಷಣೆ ತಂದು ಕೊಡಲಾರದು.
ನೆನಪಿಟ್ಟುಕೊಳ್ಳಿ ಮರ ಗಿಡ ಪ್ರಕೃತಿಯಿಂದ ಮಾತ್ರ ರಕ್ಷಣೆ, ನೆಮ್ಮದಿ ನಿರೀಕ್ಷೆ ಮಾಡಬಹುದು. ಪ್ರಾಕೃತಿಕ ಸಂಪನ್ಮೂಲಗಳು ಯಾವತ್ತಿಗೂ ನಿಮಗೆ ಹೆಚ್ಚು ರಕ್ಷಣೆ ನೀಡಬಲ್ಲವು. ಹೀಗಾಗಿ ನೀವು ಸಂಪಾದಿಸುವ ಹಣವನ್ನು ಹೆಚ್ಚಾಗಿ ಜ್ಞಾನಾರ್ಜನೆಗೆ ಬಳಸಿ. ಸದಾ ಹಣದ ಹಿಂದೆ ಓಡಬೇಡಿ. ಸರಳವಾಗಿ ಬದುಕಿ ಉದಾತ್ತವಾಗಿ ಚಿಂತಿಸಿ. ಒಂದೊಮ್ಮೆ ಹೆಚ್ಚು ಹಣವಿದ್ದರೆ ಬ್ಯಾಂಕ್‌ನಲ್ಲಿ ಠೇವಣಿ ಇಡುವ ಬದಲು, ಅಥವಾ ಸಾಲ ಮಾಡಿ ಮನೆ ಕಟ್ಟದೇ ಒಂದೆರಡು ಎಕರೆ ಜಮೀನು ಖರೀದಿಸಿ. ವಿಷಮುಕ್ತ ಆಹಾರ
ಬೆಳೆಯಿರಿ. ಮರಗಿಡಗಳನ್ನು ನೆಡಿ, ಪ್ರಕೃತಿಯೊಂದಿಗೆ ಸರಳವಾಗಿ ಬದುಕಿ.
ನೀವು ನೆಟ್ಟ ಸಸಿಗಳೇ ಮುಂದೆ ಹೆಮ್ಮರವಾಗಿ ಬೆಳೆದು ಬ್ಯಾಂಕ್ ಬಡ್ಡಿದರಕ್ಕಿಂತಲ್ಲೂ ಹೆಚ್ಚಿನ ಆದಾಯ ತಂದುಕೊಡುತ್ತವೆ. ಪರಿಸರಕ್ಕೂ ಕೊಡುಗೆ ನೀಡಿದಂತಾಗುತ್ತದೆ. ಖಂಡಿತಾ ಬದುಕು ನೀವಂದುಕೊಂಡಷ್ಟು ಕ್ಲಿಷ್ಟಕರವಾಗಿಲ್ಲ. ಸುಖಾಸುಮ್ಮನೆ ನೀವದನ್ನು ಗೊಂದಲಮ ಯವಾಗಿಸಿಕೊಳ್ಳುತ್ತಿದ್ದೀರಿ.
ಜೀವನ ಸುಲಭವಲ್ಲ, ಆದರೆ ಸರಳ (oಜಿಞmಛಿ, ಟಠಿ ಛಿZoqs). ಇಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು, ಸಲ್ಲದ ಸಂಕಷ್ಟವನ್ನು ನಾವೇ ಬರಮಾಡಿಕೊಳ್ಳುತಿದ್ದೇವೆ. ದಿನಕ್ಕೆ ಬೇಕಿರುವ ಒಂದು ಹಿಡಿ ಅನ್ನ, ನೆಮ್ಮದಿಯ ಒಂದು ಸೂರನ್ನು ಪ್ರತಿ ಜೀವಿಗೂ ನಿಸರ್ಗ ಸೃಷ್ಟಿ ಮಾಡಿದೆ.
ನಮ್ಮ ಪಾಲನ್ನಷ್ಟೇ ನಾವು ತೆಗೆದುಕೊಂಡರೆ, ಈ ಭೂಮಿಯ ಮೇಲೆ ಯಾರೊಬ್ಬರೂ ಒಂದು ಹೊತ್ತೂ ಉಪವಾಸ ಮಲಗ ಬೇಕಿಲ್ಲ. ಯಾರೊಬ್ಬರೂ ಅನಾಥರಂತೆ ಬೀದಿಯಲ್ಲಿ ಬದುಕಬೇಕಿಲ್ಲ. ಇಂದಿನ ಅನ್ನವನ್ನೂ ಇಂದೇ ಗಳಿಸಿ, ಉಂಡು ಮಲಗುವ ತೃಪ್ತಿಯನ್ನು ರೂಢಿಸಿಕೊಳ್ಳದವ ವೃಥಾ ತಾನೂ ಸಮಸ್ಯೆಗೆ ಸಿಲುಕಿಕೊಳ್ಳುವುದರೊಂದಿಗೆ ಇನ್ನೊಬ್ಬರನ್ನೂ ಸಂಕಷ್ಟಕ್ಕೇ ದೂಡುತ್ತಿದ್ದಾನೆ.
ಸಂಪನ್ಮೂಲಗಳ ಬಳಕೆಯ ಮಿತಿಯನ್ನು ಅರಿಯದ್ದರಿಂದಲೇ ಕೃಷಿಯೂ ನಮಗೆ ಭಾರ ಎನಿಸುತ್ತಿರುವುದು. ಸರಳತೆಯೇ ಸಂತೋಷದ ಕೀಲಿ ಎಂದು ನಾನು ಭಾವಿಸುತ್ತೇನೆ. ನಾನು ಅನೇಕ ವರ್ಷಗಳಿಂದ ಆ ಕನಸನ್ನು ಬೆನ್ನಟ್ಟುತ್ತಿದ್ದೇನೆ. ನನ್ನ ಕನಸಿನ ಲೋಕಕ್ಕೆ ಹೋಗಲು ನಾನೂ ಸಹ ಆರಂಭದಲ್ಲಿ ತಪ್ಪು ಮಾರ್ಗವನ್ನೇ ತುಳಿದು ನಗರದ ಮಡಿಲಿಗೆ, ಭೋಗ ಜೀವನಕ್ಕೆ ಬಿದ್ದಿದ್ದೆ.
ಅದೊಂದು ಮುಂಜಾನೆ ನನಗೆ ಅರ್ಥವಾಗಿದ್ದು- ಬ್ಯಾಂಕಾಕ್‌ನಲ್ಲಿ ಬೀಸುತ್ತಿರುವ ಗಾಳ ಸಹಜವಾಗಿಲ್ಲ, ನಾನು ಕುಡಿಯುವ
ನೀರು ತನ್ನ ರುಚಿ ಕಳೆದುಕೊಂಡಿದೆ. ಅಲ್ಲಿನ ಅನ್ನದಲ್ಲಿ ರೈತನ ಬೆವರಿನ ಸುವಾಸನೆಯ ಬದಲಿಗೆ ಲೋಭದ ರಾಸಾಯನಿಕದ ಕಮಟೇ ಹೆಚ್ಚಿದೆ ಎಂದು. ಅವತ್ತು ಸನ್ಮಾರ್ಗಕ್ಕೆ ಯೋಚಿಸಿದೆ. ನಿಸರ್ಗದ ಮಡಿಲಿಗೆ ಧಾವಿಸಿದಂದಿನ ಅದೇ ರಾತ್ರಿ ಮಣ್ಣಿನ ಸಾಂಗತ್ಯದ ಬದುಕಿನ ವ್ರತವನ್ನು ಕೈಗೊಂಡೆ.
ಇಲ್ಲಿ ನಾನು ಯಾವಾಗಲೂ ಇರಬೇಕೆಂದು ನಾನು ಬಯಸುತ್ತೇನೆ. ನನ್ನ ಸರಳತೆಯನ್ನು ನಾನು ಆನಂದಿಸುತ್ತೇನೆ. ಜೀವನ ಮತ್ತು ಜೀವನವು ಎಷ್ಟು ಸರಳವಾಗಿದೆ ಎಂಬುದನ್ನು ಕಂಡುಕೊಂಡು ದಿನದಿಂದ ನಾನು ಜನರಿಗೆ ಅದನ್ನೇ ತೋರಿಸುತ್ತಿದ್ದೇನೆ. ಜೀವನ ಸುಲಭ, ವೃಥಾ ನಾವು ಯಾಕೆ ಕಷ್ಟಪಡುತ್ತೇವೆ? ಬಹುಶಃ ನನ್ನ ಈ ಪ್ರಶ್ನೆ, ಬದುಕಿನ ಇಂಥ ದೃಷ್ಟಿಕೋನ ತಕ್ಷಣಕ್ಕೆ ನಿಮಗೆ ಅರ್ಥವಾಗಲಿಕ್ಕಿಲ್ಲ. ಮತ್ತದೇ ಬೊಗಳೆ, ಒಣ ಸಿದ್ಧಾಂತ ಎನಿಸಬಹುದು. ಆದರೆ ಒಮ್ಮೆ ನೀವು ಮಣ್ಣಿನ ಮಡಿಲಿಗೆ ಬಿದ್ದು ನೋಡಿ, ಆಗ ನಿಮ್ಮ ಕಿಸೆಯಲ್ಲಿ ಒಂದು ನಯಾಪೈಸೆ ಇಲ್ಲದಿದ್ದರೂ ನೀವು ಸಂತೋಷವಾಗಿರಬಹುದು.
ಅದೇ ಮಣ್ಣಲ್ಲಿ ಕುಳಿತು ತಿನ್ನಿ, ಅದೇ ಕೆಸರಲ್ಲಿ ಪ್ರತಿದಿನ ಮೀಯಿರಿ. ಅದೇ ಮಣ್ಣಿನ ನೆಲದ ಬೆಚ್ಚನೆಯ ಹಿತದಲ್ಲಿ ನಿದ್ರಿಸಿ. ಇದ್ಯಾವುದಕ್ಕೂ ನೀವು ಹಣ ಖರ್ಚು ಮಾಡಬೇಕಿಲ್ಲ. ಅಂಥ ಸಂತೋಷದ ವ್ಯಾಖ್ಯಾನವನ್ನೇ ನಾನಿವತ್ತು ಹಂಚಿಕೊಳ್ಳುತ್ತಿರು ವುದು.ಪ್ರತಿಯೊಬ್ಬರ ಜೀವನ ಸಮತೋಲನವಾಗಿರಬೇಕು ಎಂದರೆ ಹಣ ಸಂಗ್ರಹದಿಂದ ದೂರವಿರಬೇಕು.
ನಮ್ಮ ಯೋಗಕ್ಷೇಮದ ಮಹತ್ವ ನಮಗೆ ಅರ್ಥವಾಗಬೇಕಿದ್ದರೆ ನಾವೆಷ್ಟು ದುರಾಸೆಗಳಿಂದ ದೂರವಿದ್ದೇವೆ ಎಂಬುದು
ಮನವರಿಕೆಯಾಗಬೇಕು. ಹೀಗಾಯೇ ನಗರ ಕೇಂದ್ರಿತ, ಆಧುನಿಕ ಜೀವನಶೈಲಿಯನ್ನು ನಾನು ಪ್ರಶ್ನಿಸುವುದು. ಅಲ್ಲಿ ಬಹುತೇಕರು ನಿರಂತರವಾಗಿ ಗಳಿಸಲು ಮತ್ತು ಹೆಚ್ಚು ಹೆಚ್ಚು ಗಳಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಹಣ ಗಳಿಸಲಿ, ತಪ್ಪಿಲ್ಲ. ಆದರೆ ಆಯುಷ್ಯವಿಡೀ ಗಳಿಕೆಯ ಕಳೆದರೆ, ಗಳಸಿದ್ದನ್ನು ಅನುಭವಿಸಲು ಸಮಯವೆಲ್ಲಿ ಉಳಿದೀತು? ಅಷ್ಟಕ್ಕೂ ಮಣ್ಣಿನ ಮಡಿಲಲ್ಲಿ ಬದುಕಲು ಅಷ್ಟು ಹಣವಾದರೂ ಏಕೆ ಬೇಕು? ವಾಸ್ತವವಾಗಿ, ನಿರಂತರ ಗಳಿಕೆಯ ಇಂಥ ಸಂಕೋಲೆಗಳಲ್ಲಿ ಸಿಲುಕಿಯೇ ನಾವು ಸಂತೋಷವಾಗಿರುವ ಸ್ವಾತಂತ್ರ್ಯವನ್ನು ಕಳೆದುಕೊಂಡುಬಿಟ್ಟಿದ್ದೇವೆ.
ವೈಯಕ್ತಿಕ ಅರ್ಥಶಾಸದ ನೈಜ ಮೌಲ್ಯವನ್ನು ಪ್ರತಿಯೊಬ್ಬರೂ ಅರಿಯಬೇಕು. ಕೃಷಿ ಮಾತ್ರವೇ ಇಂಥ ವೈಯಕ್ತಿಕ ಆರ್ಥಿಕ ಸ್ವಾತಂತ್ರ್ಯವನ್ನು ಕೊಡಬಲ್ಲುದು. ಏಕೆಂದರೆ ಕೃಷಿ ಕೇವಲ ವೃತ್ತಿಯಲ್ಲ. ಅದೊಂದು ಜೀವನ ಶೈಲಿ. ಅದು ಸಂಸ್ಕೃತಿ. ಸ್ವಾವ ಲಂಬನೆ ಎಂಬುದು ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರತೆಯ ಅಡಗಿದೆ. ಆಧುನಿಕ ಪ್ರಪಂಚದ ಸಾಮಾನ್ಯ ಗ್ರಹಿಕೆಗಿಂತ ಬಹಳ ಭಿನ್ನವಾದ ಒಳನೋಟವನ್ನು ಮಣ್ಣಿನ ಸಹವಾಸ ಒದಗಿಸುತ್ತದೆ.
ನಿಮಗೆ ಗೊತ್ತಿರಲಿ, ನಿಮಗೆ ಯಾವೊಬ್ಬನೂ ನಿಮ್ಮ ಸಂಕಷ್ಟದಲ್ಲಿ ಸಹಾಯ ಮಾಡಲಾರನು. ಏಕೆಂದರೆ ಅವನು ನಿಮ್ಮನ್ನು ಅಳೆಯುವುದು ವಿತ್ತೀಯ ಮೌಲ್ಯಗಳಿಂದಲೇ. ನಿಮಗೆ ಸಾಲ ಕೊಡುತ್ತಾನೆಂದರೆ ನಿಮ್ಮಿಂದ ಅದಕ್ಕೆ ಪ್ರತಿಯಾಗಿ ಹೆಚ್ಚಿನದನ್ನು ನಿರೀಕ್ಷಿಸುತ್ತಲೇ ಇರುತ್ತಾನೆ. ಆದರೆ ನಿಸರ್ಗ ನಿಮ್ಮಿಂದ ಯಾವುದನ್ನೂ ನಿರೀಕ್ಷಿಸದೇ ಸಹಾಯ ಮಾಡುತ್ತಿರುತ್ತದೆ. ನಮ್ಮನ್ನು ನಾವು ಇಂಥ ಹಣದ ಮಾನದಂಡದಿಂದ ಬೇರ್ಪಡಿಸಿಕೊಳ್ಳವವರೆಗೆ ನಾವು ಸುಖವಾಗಿ ಇರಲಾಗದು.
ನಿಮ್ಮ ಸಂತೃಪ್ತಿ ಮತ್ತು ಜೀವನದ ಸಂತೋಷವನ್ನು ಕಂಡು ಇನ್ನೊಬ್ಬರು ಅಸೂಯೆಪಡಲು ಕಾರಣವೇ ನಿಮ್ಮಲ್ಲಿರಬಹುದಾದ ಹಣ. ಪ್ರತಿಯೊಬ್ಬರಿಗೂ ಆಯ್ಕೆ ಇದೆ ಎಂದು ಎಲ್ಲರೂ ನಂಬುತ್ತಾರೆ. ಇಂಥ ನಿಮ್ಮ ಆಯ್ಕೆಯು ಹಣವಾಗಿದ್ದರೆ ಜೀವನವನ್ನು
ಸುಲಭಗೊಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಸ್ವಾವಲಂಬಿ ಜೀವನದ ಸೂಕ್ತ ಆಯ್ಕೆ ಸಾವಯವೇ ಆಗಿರಬೇಕು. ಕೇವಲ ಕೃಷಿ,
ತೋಟಗಾರಿಕೆಯಲ್ಲಿನ ಸಾವ ಯವದ ಮಾತನ್ನು ಆಡುತ್ತಿಲ್ಲ ನಾನು.
ಬದುಕೇ ಸಾವಯವ ಆಗಬೇಕು. ಅಂದರೆ, ಹೊರಗಿನಿಂದ ಏನನ್ನೂ ತರದೇ ನಮ್ಮ ಸುತ್ತಮುತ್ತಲಿನದನ್ನೇ ಬಳಸಿ ಬದುಕುವುದೇ ಸಾವಯವ ಸಿದ್ಧಾಂತ. ಅಂಥ ಬದುಕು ನೈಸರ್ಗಿಕ ಸಮುದಾಯದಿಂದ ಮಾತ್ರವೇ ಸಿಗುತ್ತದೆ. ಅಂಥ ಸಮುದಾಯದಲ್ಲಿ ಬರೀ
ಮನುಷ್ಯರು ಮಾತ್ರವೇ ಇರುವುದಿಲ್ಲ. ಕೀಟಗಳು. ಪ್ರಾಣಿ, ಪಕ್ಷಿಗಳು, ಸಸ್ಯಗಳು ಹೀಗೆ ಎಲ್ಲ ಜೀವರಾಶಿಗಳೂ ಇದರ ಭಾಗ.
ನೈಸರ್ಗಿಕ ಕಟ್ಟಡ ಮತ್ತು ನೈಸರ್ಗಿಕ ಆರೋಗ್ಯದ ಬಗ್ಗೆ ಜೀವಕೋಟಿಯಿಂದ ಕಲಿಯುವುದು ಬೇಕಷ್ಟಿದೆ. ಯಾವ ಜೀವಿಗಳೂ ಶಾಶ್ವತವಾದ ಕಟ್ಟಡ ಕಟ್ಟಿಕೊಳ್ಳುವುದಿಲ್ಲ. ನಾಳೆಗಾಗಿ ಕೂಡಿಡುವುದಿಲ್ಲ ಅಲ್ಲವೇ? ಇವೆಲ್ಲವೂ ಅಂತಿಮವಾಗಿ ಮಾನವಕುಲವು ಭೂಮಿಯ ಮೇಲೆ ಸುಸ್ಥಿರ ಮತ್ತು ಸಂತೋಷದ ಜೀವನವನ್ನು ಮುಂದುವರಿಸಲು ಅನುವು ಮಾಡಿಕೊಡುತ್ತವೆ.
ಈಗ ಹೇಳಿ ಮಣ್ಣಿನಲ್ಲಿ ದುಡಿದು ಮೂರು ಹೊತ್ತೂ ಉಂಡು ಬದುಕುವ ರೈತನಿಗೇಕೆ ಬೇಕು ಹಣ? ವಾಸ್ತವಕ್ಕೆ ದೂರವಾದ ಆದರ್ಶದ ಕಲ್ಪನೆಗಳನ್ನು ಬೆರ್ರಿ, ಜಾನ್ದಾಯ್ ಹೆಸರಲ್ಲಿ ನಾನು ಇಲ್ಲಿ ಹೇಳಲು ಹೊರಟಿಲ್ಲ. ನೀರು, ಗಾಳಿ, ಮಣ್ಣುಗಳ ಬಗ್ಗೆ ಮಾತನಾಡುತ್ತಾ, ಮಹಿಳಾ ಸಬಲತೆಯ ಘೋಷಣೆಗಳನ್ನು ಮಾಡುತ್ತಾ, ದುರ್ಬಲರ ಸ್ವಾವಲಂಬನೆಯ ಗಿಳಿಪಾಠ ಒಪ್ಪಿಸತ್ತಾ ಅಽಕಾರ ಕೇಂದ್ರಿತ ರಾಜಕಾರಣದಲ್ಲಿ ತೊಡಗುವುದರಿಂದ ನಮ್ಮ ಆರ್ಥಿಕತೆ ಸುಧಾರಣೆ ಸಾಧ್ಯವೇ? ನೆನಪಿರಲಿ, ಅದು ಕೇವಲ
ಚಿತ್ರದಲ್ಲಿನ ಹಕ್ಕಿ ಮೊಟ್ಟೆಯಿಡುವ ಕನಸು ಕಂಡಂತೆಯೇ ಸರಿ.