ನವದೆಹಲಿ; ನವದೆಹಲಿಯಲ್ಲಿನ ವಾಹನ ಮಾಲೀಕರು ಅಕ್ಟೋಬರ್ 25 ರಿಂದ ಇಂಧನ ತುಂಬಿಸಿಕೊಳ್ಳುವ ಕೇಂದ್ರಗಳಲ್ಲಿ ಇಂಧನ ಪಡೆಯಲು ಮಾನ್ಯವಾದ ಮಾಲಿನ್ಯ ಪ್ರಮಾಣಪತ್ರದ ಪ್ರಸ್ತುತಪಡಿಸಬೇಕಾಗುತ್ತದೆ ಎಂದು ವರದಿಯಾಗಿದೆ.
ದೆಹಲಿಯಲ್ಲಿನ ಮಾಲಿನ್ಯ ಮಟ್ಟ ಪರಿಶೀಲಿಸುವ ಪ್ರಯತ್ನದಲ್ಲಿ ಅ.25 ರಿಂದ ಮಾನ್ಯವಾದ ಮಾಲಿನ್ಯ ಪ್ರಮಾಣಪತ್ರವಿಲ್ಲದೆ ಪಂಪ್ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ನೀಡಲಾಗುವುದಿಲ್ಲ ಎಂದು ಎಎಪಿ ಸರ್ಕಾರ ನಿರ್ದೇಶಿಸಿದೆ.
ಪೆಟ್ರೋಲ್ ಪಂಪ್ ಮಾಲೀಕರು ಮತ್ತು ಅವರ ಸಿಬ್ಬಂದಿ ಗ್ರಾಹಕರೊಂದಿಗೆ ವ್ಯವಹರಿ ಸಲು ತೊಂದರೆಯನ್ನು ಎದುರಿಸ ಬೇಕಾಗು ತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ಯಾಂಕ್ಗಳನ್ನು ತುಂಬಿಸುವಂತೆ ಒತ್ತಾಯಿಸುವ ಜನರೊಂದಿಗೆ ವ್ಯವಹರಿಸಲು ನಾಗರಿಕ ರಕ್ಷಣಾ ಸ್ವಯಂಸೇವಕರು ಮತ್ತು ಪೊಲೀಸರನ್ನು ನಿಯೋಜಿಸುವಂತೆ ಕೇಳಿ ಕೊಂಡಿದ್ದಾರೆ ಎಂದು ವರದಿ ಹೇಳಿದೆ.
ಈ ಸಂಬಂಧ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಮತ್ತು ಒಂದು ವಾರ ದಲ್ಲಿ ಯೋಜನೆಯ ವಿಧಾನಗಳು ಸ್ಪಷ್ಟವಾಗುತ್ತವೆ ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.
ಸಾರಿಗೆ ಇಲಾಖೆಯ ಪ್ರಕಾರ, ಜುಲೈ 2022 ರವರೆಗೆ 13 ಲಕ್ಷ ದ್ವಿಚಕ್ರ ವಾಹನಗಳು ಮತ್ತು ಮೂರು ಲಕ್ಷ ಕಾರುಗಳು ಸೇರಿದಂತೆ 17 ಲಕ್ಷಕ್ಕೂ ಹೆಚ್ಚು ವಾಹನಗಳು ಮಾನ್ಯ ಪಿಯುಸಿ ಪ್ರಮಾಣಪತ್ರಗಳಿಲ್ಲದೆ ಸಂಚರಿಸುತ್ತಿವೆ.
ಮಾನ್ಯವಾದ ಪಿಯುಸಿ ಪ್ರಮಾಣಪತ್ರವಿಲ್ಲದೇ ಸಿಕ್ಕಿಬಿದ್ದರೆ, ಕಾಯ್ದೆಯ ಪ್ರಕಾರ ವಾಹನ ಮಾಲೀಕರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು.