ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗಾಂಧಿ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ ಅವರು ಗಾಂಧಿ ಜಯಂತಿಯಂದು ಹೇಳಿರುವುದು ಸ್ವಾಗತಾರ್ಹ.
ಆದರೆ ಗಾಂಧಿಜೀ ಅವರ ಕನಸಾದ ಖಾದಿ ಉದ್ಯಮ ಹಾಗೂ ಗ್ರಾಮೀಣ ಕೈಗಾರಿಕೆಗಳ ಬೆಳವಣಿಗೆಗೂ ಮುತುವರ್ಜಿ ವಹಿಸ ಬೇಕಾದದ್ದು ಇಂದಿನ ಅಗತ್ಯವಾಗಿದೆ. ಸ್ವಾತಂತ್ರ್ಯ ದೊರೆತ ಬಳಿಕ ಹೆಚ್ಚಾಗಬೇಕಿದ್ದ ಗ್ರಾಮೋ ದ್ಯೋಗಗಳು ಕಡಿಮೆ ಯಾಗಿವೆ. ಕುಂಟುತ್ತಾ ತೆವಳುತ್ತಾ ನಡೆಯುತ್ತಿದ್ದ ಖಾದಿ ಚಟುವಟಿಕೆಯೂ ಕಳೆದ ಆರು ತಿಂಗಳಿನಿಂದ ಇತ್ತೀಚೆಗೆ ಹತ್ತಿಯ ಸರಬರಾಜು ಇಲ್ಲದೆ ನಿಂತುಹೋಗಿದೆ.
ನಡೆಯುತ್ತಿರುವ ಒಂದೆರಡು ಮಗ್ಗಗಳೂ ಕೂಡ ಲಾಭವಿಲ್ಲದೇ ನಡೆಯುತ್ತಿವೆ. ಸ್ವಾತಂತ್ರ್ಯ ಬಂದ ಕೆಲವೇ ವರ್ಷಗಳಲ್ಲಿ ಖಾದಿ ಚಟುವಟಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸರಕಾರ ಯಾವಾಗ ಖಾದಿ ಆಯೋಗವನ್ನು ಸ್ಥಾಪಿಸಿತೋ ಆಗಲೇ ಖಾದಿಯ ಸಾವಿನ ದಿನಗಣನೆ ಪ್ರಾರಂಭವಾಯಿತು. ಈಗಂತೂ ಖಾದಿ ಎಂಬ ಹೆಸರಿನಲ್ಲಿ ದೇಶದಲ್ಲಿ ಶೇ.೮೦ಕ್ಕಿಂತ ಹೆಚ್ಚು ನಕಲಿ ಖಾದಿ
ಮಾರಾಟ ವಾಗುತ್ತಿದೆ.
ಖಾದಿ ನೂಲುಗಾರಿಕೆ ಮತ್ತು ನೇಯ್ಗೆಯನ್ನೇ ನೆಚ್ಚಿಕೊಂಡು ದೇಶದ ಉದ್ದಗಲಕ್ಕೂ ಬದುಕಿದ್ದ ಸಾವಿರಾರು ಕುಶಲಕರ್ಮಿಗಳು ಮತ್ತು ಶ್ರಮಜೀವಿಗಳ ಬದುಕು ಮೂರಾಬಟ್ಟೆಯಾಗಿದೆ. ಗ್ರಾಮೀಣ ಭಾರತ ನಿಸ್ತೇಜವಾಗಿದೆ. ಗಾಂಧಿ ಕನಸಿನ ಭಾರತ ಎಲ್ಲಾ
ಹಿಂದೆಯೇ ನಿಂತುಹೋಗಿದೆ. ಈ ತಲೆಮಾರಿನ ಬಹುತೇಕರಿಗೆ ಖಾದಿಯ ಮಹತ್ವವೇನೆಂದು ತಿಳಿದಂತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಗ್ರಾಮೀಣ ಕೈಗಾರಿಕೆಗಳ ಬೆಳವಣಿಗೆಗೆ ಸರಕಾರ ಆಸಕ್ತಿ ವಹಿಸಬೇಕಿದೆ.
ಗ್ರಾಮೀಣ ಕೈಗಾರಿಕೆಗಳು ಬೆಳವಣಿಗೆಯಾದರೆ ಸ್ಥಳೀಯ ಮಟ್ಟದ ಉದ್ಯೋಗ ಸೃಷ್ಟಿ ಆಗಲಿದ್ದು, ಯುವಕರು ಉದ್ಯೋಗ ಅರಸಿ
ನಗರಗಳಿಗೆ ವಲಸೆ ಹೋಗುವುದೂ ತಪ್ಪಲಿದೆ. ಅಲ್ಲದೆ, ಈಗಿನ ಯುವಕರಿಗೆ ಗಾಂಧಿ ಅವರ ವಿಚಾರಗಳ ಬಗ್ಗೆ ಹೆಚ್ಚಿಗೆ ತಿಳಿದಿರ ಲಿಕ್ಕಿಲ್ಲ. ಆದ್ದರಿಂದ ಮಹಾತ್ಮ ಗಾಂಧಿ ಅವರ ತತ್ವ ಸಿದ್ದಾಂತಗಳ ಕುರಿತು ಪ್ರತಿಯೊಂದು ಶಾಲೆಗಳಲ್ಲೂ ವಿಚಾರ ಸಂಕಿರಣ ಗಳನ್ನು ಹಮ್ಮಿಕೊಳ್ಳಬೇಕಿದೆ. ಆ ಮೂಲಕ ಗಾಂಧಿ ಅವರನ್ನು ಚಿರಸ್ಥಾಯಿಯಾಗಿಸಬೇಕಿದೆ.