ಅಪಘಾತ: ಮಾನವೀಯತೆ ಮೆರೆದ ಮಾಜಿ ಸಚಿವ ಶಿವಣ್ದ
ತುಮಕೂರು: ಕಾರಿಗೆ ಲಾರಿ ಗುದ್ದಿದ ಪರಿಣಾಮ ಕಾರು ಪಲ್ಟಿಯಾಗಿ ಯಾವುದೇ ಪ್ರಾಣಾಪಾಯವಿಲ್ಲದೆ ಅದೃಷ್ಟವಶಾತ್ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಪಾರಾಗಿರುವ ಘಟನೆ ನಡೆದಿದೆ.
ನಗರದ ಶಿರಾಗೇಟ್ ರಸ್ತೆ ಶೆಲ್ ಪೆಟ್ರೋಲ್ ಬಂಕ್ ಹತ್ತಿರ ಶನಿವಾರ ರಾತ್ರಿ ಸ್ವತಃ ಸೊಗಡು ಶಿವಣ್ಣ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಕಾರಿಗೆ ಇದ್ದಕ್ಕಿದ್ದಂತೆ ಹಿಂಬದಿಯಿಂದ ಬಂದಂತಹ ಲಾರಿ ರಭಸದಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಒಂದು ಸುರಳಿ ತಿರುಗಿ ರಸ್ತೆಯ ಮಧ್ಯ ಭಾಗದ ಡಿವೈಡರ್ ಗೆ ಅಪ್ಪಳಿಸಿದೆ. ಅದೃಷ್ಟವಶಾತ್ ಶಿವಣ್ಣರಿಗೆ ಸಣ್ಣ ಪುಟ್ಟ ಗಾಯವಾಗಿ, ಪ್ರಾಣಾಯಾಮದಿಂದ ಪಾರಾಗಿದ್ದಾರೆ.
ಅಪಘಾತ ಸಂಭವಿಸಿದ ಕೂಡಲೇ ಸುತ್ತಮುತ್ತಲಿನ ಜನ
ಜಮಾವಣೆಗೊಂಡು ಕಾರಿನಲ್ಲಿದ್ದ ಶಿವಣ್ಣ ಅವರನ್ನು ಕಾರಿನಿಂದ ಕೆಳಗಿಳಿಸಿ, ಆರೈಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾನೂನಿನ ಪ್ರಕಾರ ತೆಗೆದುಕೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಂಡು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಲಾರಿ ಚಾಲಕ ಹಾಗೂ ಲಾರಿಯಲ್ಲಿದ್ದ ಜನರನ್ನು ತಮ್ಮ ಬಳಿಗೆ ಕರೆಸಿಕೊಂಡು ಶಿವಣ್ಣ ಅವರು ಲಾರಿ ಚಾಲಕನನ್ನು ವಿಚಾರಿಸಿ ದ್ದಾರೆ. ಆಗ ಲಾರಿ ಚಾಲಕ ನಾವುಗಳು ಕೃಷಿ ಕಾರ್ಮಿಕರಾಗಿದ್ದು, ದೂರದ ರಾಯಚೂರಿನವರು. ಕೃಷಿ ಕೆಲಸಕ್ಕಾಗಿ ಪ್ರತಿವರ್ಷ ಮಂಡ್ಯ ಜಿಲ್ಲೆಗೆ ಬರುತ್ತೇವೆ. ಈ ಬಾರಿಯೂ ಬಂದು ಹೆಚ್ಚಿನ ಪ್ರಮಾಣದ ಕೆಲಸವಿಲ್ಲದ ಕಾರಣ ಮರಳಿ ರಾಯಚೂರಿಗೆ ತೆರಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಲಾರಿ ಚಾಲಕ ಹಾಗೂ ಲಾರಿಯಲ್ಲಿದ್ದ ಕೃಷಿ ಕಾರ್ಮಿಕರನ್ನು ಕಂಡು ಅವರ ಸ್ಥಿತಿಯನ್ನು ಕಂಡು ಕೂಡಲೇ ಶಿವಣ್ಣ ಅವರು ಆಪ್ತರನ್ನು ಸ್ಥಳಕ್ಕೆ ಬರುವಂತೆ ತಿಳಿಸಿ, ಕೃಷಿ ಕಾರ್ಮಿಕರಿಗೆ ತಾವೇ ಸ್ವಯಂ ರಾತ್ರಿಯ ಊಟದ ವ್ಯವಸ್ಥೆ ಮಾಡಿಸಿ, ಮಾನವೀ ಯತೆ ಮೆರೆದಿದ್ದಾರೆ.
ಹೃದಯವಂತಿಕೆ ತೋರಿದ ಶಿವಣ್ಣ
ಭಾನುವಾರ ಬೆಳಗ್ಗೆ ತಾವೇ ಸ್ವತಃ ಸಂಚಾರಿ ಪೋಲಿಸ್ ಠಾಣೆಗೆ ತೆರಳಿ, ಆ ಬಡ ಕೃಷಿ ಕಾರ್ಮಿಕರಿಗೆ ತೊಂದರೆ ಕೊಡ ಬಾರದೆಂದು, ಲಾರಿ ಚಾಲಕ ಹಾಗೂ ಲಾರಿಗೆ ಯಾವುದೇ ರೀತಿಯ ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸುವಂತೆ ಪೊಲೀಸರಿಗೆ ವಿನಂತಿಸಿ, ಮಾನವೀಯತೆ ಮೆರೆದಿದ್ದಾರೆ.
ನಂತರ ಯಾವುದೇ ರೀತಿಯ ಪ್ರಕರಣ ದಾಖಲಿಸದೆ, ಉಪಕಾರ ಮಾಡಿದ ಸೊಗಡು ಶಿವಣ್ಣರಿಗೆ ಕೃತಜ್ಞತೆ ಸಲ್ಲಿಸಲು ಬಂದ ಕೃಷಿ ಕಾರ್ಮಿಕರಿಗೆ ತಮ್ಮ ಜೇಬಿನಿಂದಲೇ ಹಣ ಕೊಟ್ಟು , ಊಟ ಮಾಡಿಕೊಂಡು ಸುರಕ್ಷಿತವಾಗಿ ಊರಿಗೆ ತೆರಳಿ ಎಂದು ಹೇಳಿ ಕಳುಹಿಸಿ ಹೃದಯವಂತಿಕೆಗೆ ಸಾಕ್ಷಿಯಾಗಿದ್ದಾರೆ.