Monday, 25th November 2024

ಗುಂಡು ಹಿಡಿಸುವ ಗಾಂಗೇರಿಯ..

ಅಲೆಮಾರಿಯ ಡೈರಿ

mehandale100@gmail.com

ಇದೇನೂ ಇಂತಲ್ಲಿ ಹೋಗಿ ಹೀಗೆಯೇ ಹೋಗಿ ಎಂದೆಲ್ಲ ಹೇಳಿಕೊಡಬೇಕಾದ ಪ್ರವಾಸಿ ತಾಣವಲ್ಲ. ಹೆಚ್ಚುಕಮ್ಮಿ ಸ್ವಲ್ಪ ಸಾಹಸ ಮಯ ಮತ್ತು ಪ್ರವಾಸಿ ಮೋಜಿನ ಜನರೆಲ್ಲ ಅನಿವಾರ್ಯವಾಗಿಯೋ, ಅಗತ್ಯವಿದೆ ಎಂದೋ ಒಮ್ಮೆಯಲ್ಲ ಒಮ್ಮೆ ಈ ಊರಿನ ಹೆಗಲು ಮೆಟ್ಟಿ, ನೆತ್ತಿಯ ಮೇಲೆ ಕೈಯಾಡಿಸಿ ಹೋಗಿರುತ್ತಾರೆ.

ಮರುದಿನದ ಅನಿವರ್ಚನೀಯ ಅವಕಾಶದ ಕ್ಷಣಕ್ಕಾಗಿ ಕಾದವರು ಇಲ್ಲಿ ಕಾಲಿಟ್ಟ ಗಳಿಗೆ ಯನ್ನು ಮರೆತು ಇದನ್ನು ಹಿಂದಿಕ್ಕಿ ಬುಡ ಒದರಿಕೊಂಡು ಎದ್ದೋಗಿಬಿಟ್ಟಿರುತ್ತಾರೆ. ಎತ್ತ ಕಡೆ ಹೋಗಬೇಕಾದರೂ ನನ್ನ ಹೆಗಲ ಮೇಲೊಮ್ಮೆ ನೀವು ವಿಹರಿಸಲೇಬೇಕು ಎನ್ನುವ ಈ ಊರಿನ ಹೆಬ್ಬಾಗಿಲನ್ನು ತಡವಿದವರೂ, ಅದರ ಕೆಳಗೊಮ್ಮೆ ಪವಡಿಸುವ ಅನಿವಾರ್ಯತೆ ಯಿದ್ದಾಗ್ಯೂ ಎದ್ದಾದ ಮೇಲೆ ‘ಓಹೋ ನಾಳೆ.. ಅದ್ಭುತ ಕಣಿವೆ’ ಎಂದು ಬಿದ್ದು ಕೊಂಡ ಆಪ್ತತೆಯನ್ನು ಬೆಳಗಾಗುವ ಹೊತ್ತಿಗೆ ಮರೆತು ಬಿಳಿಹತ್ತಿಯಂತೆ ಗೋಚರಿಸುವ ಎಲ್ಲ ದಿಕ್ಕುಗಳನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸುತ್ತ ಮೆರವಣಿಗೆ ಹೊರಟುಬಿಟ್ಟಿರುತ್ತಾರೆ.

ಇದೇ ಒಬ್ಬ ಅಲೆಮಾರಿಗೂ, ಒಬ್ಬ ಪ್ರವಾಸಿ ಅಥವಾ ಹವ್ಯಾಸಿ ಸ್ಥಳ ಸಂದರ್ಶಕನಿಗೂ ಇರುವ ವ್ಯತ್ಯಾಸ. ಕಾರಣ, ‘ಪ್ರವಾಸದ ನಿಗದಿತ ಗಮ್ಯಸ್ಥಾನಕ್ಕಿಂತ ಅದರ ದಾರಿ ಯಾವಾಗಲೂ ಅದ್ಭುತ’ ಎನ್ನುವುದನ್ನು ಅರಿತಿರುವವನು ಮಾತ್ರ ಅದರ ಅನುಭವಕ್ಕೆ ಪಕ್ಕಾಗುತ್ತಾನೆ. ಹಾಗಾಗೇ ಹೇಮಕುಂಡ ಸಾಹೀಬ್ ಅಥವಾ ಹೂ ಕಣಿವೆ ಎಂದೇ ಹೆಸರಾದ ವ್ಯಾಲಿ ಆಫ್ ಫ್ಲವರ್‌ನ ಪ್ರವಾಸಕ್ಕೂ, ಅನಿವಾರ್ಯವಾಗಿ ಹತ್ತಾರು ಕಿ.ಮೀ. ಹಿಮದಲ್ಲಿ ನಡೆಯುತ್ತಲೇ ಸಾಗಲೇಬೇಕಾದ ದರವೇಸಿಯೊಬ್ಬ, ಅದರ ಮಧ್ಯೆ ನಿಖರವಾಗಿ ಕವಲುದಾರಿಯ ಹೆಗಲ ಮೇಲೆ ಪವಡಿಸಿದಂತಿರುವ ಸಣ್ಣ ಕಣಿವೆಯ ಇರುಕಿನಲ್ಲಿ ಸಿಲುಕಿರುವ ಗಾಂಗೇರಿಯ ಎನ್ನುವ ಬೇಸ್‌ ಕ್ಯಾಂಪನ್ನು ಸುಮ್ಮನೆ ಬಿಸಾಕಿ ಎದ್ದು ಹೋಗುತ್ತಾನಲ್ಲ, ಅಲ್ಲೇ ಆಗೋದು ನೋಡಿ ಲುಕ್ಸಾನು.

ಗಾಂಗೇರಿಯ.. ವಿಶೇಷವಾಗಿ ಹೇಮಕುಂಡ ಸಾಹೀಬ್ ಎನ್ನುವ ಸಿಖ್ಖರ ಪವಿತ್ರ ಯಾತ್ರಾಸ್ಥಳಕ್ಕೆ ತಲುಪಲು ಇಲ್ಲಿ ಕಡ್ಡಾಯ ಒಂದಿನದ ವಿಶ್ರಾಂತಿ ತೆಗೆದುಕೊಂಡು ದೇಹವನ್ನು ಅಕ್ಲಮ್‌ಟೈಸ್ ಮಾಡಿಕೊಂಡು ಹೊರಡುವ ಅನಿವಾರ್ಯತೆ ಇದ್ದರೆ, ವ್ಯಾಲಿ ಆಫ್ ಪವರ್‌ನ ಗ್ಲಾಮರ್‌ಗೆ ಬಿದ್ದವರಿಗೂ ಇದು ಅನಿವಾರ್ಯದ ಬೇಸ್‌ಕ್ಯಾಂಪೇ. ಹಾಗಾಗಿ ಇವೆರಡನ್ನೂ ದರ್ಶಿಸಿದವರಿಗೆ ಗಾಂಗೇರಿಯಾ ಚೆನ್ನಾಗೇ ಗೊತ್ತಿರುತ್ತದೆ. ಆದಾಗ್ಯೂ ಎರಡೂ ಜಾಗಗಳ ಅನಿವಾರ್ಯತೆ ಮತ್ತು ಉತ್ಕಟತೆ ಈ ಬೇಸ್‌ಕ್ಯಾಂಪ್ ನಿರ್ಲಕ್ಷಕ್ಕೆ ಒಳಗಾಗುವುದಲ್ಲದೆ, ಮಾಡಿಕೊಂಡ ಯಾದಿಯಲ್ಲಿ ಅದಕ್ಕೆ ಇರದ ಜಾಗ ನಮ್ಮನ್ನು ಗಾಂಗೇರಿಯಾದ ಬಗ್ಗೆ ಅಪರಿಚಿತ ರನ್ನಾಗಿಸುತ್ತದೆ. ಹೊಸ್ತಿಲು ತುಳಿದೂ ಮನೆಯೊಳಗೆ ಹೋಗದೆ ಬಂದ ಪರಿಸ್ಥಿತಿ ಇದು.

ಹಲವು ಚೆಂದದ ಗಳಿಗೆಗಳಿಗೆ ಪಕ್ಕಾಗದೆ ಉಳಿದು ಹೋಗುವಂತಾಗುತ್ತದೆ ಸರಿಯಾಗಿ ಕಾಲಿಕ್ಕದಿದ್ದರೆ. ಕಾರಣ ಗಾಂಗೇರಿಯಾದ ಆಸುಪಾಸಿನಲ್ಲೆ ಹರಗಾಡಿದರೂ ೨ ದಿನಕ್ಕೂ ಮಿಕ್ಕಿ ಸಮಯಾವಕಾಶ ಬೇಕು. ಸಣ್ಣ ಹೂಗಳು ಅರಳುವ ಬೇಬಿ ಕ್ಯಾಂಪ್‌ಗೆ ಎಷ್ಟು ಜನ ವ್ಯಾಲಿ ಫ್ಲವರ್ ಹೋದವರು ಹೋಗಿದ್ದೀರಿ..? ಸಾಲುಸಾಲು ಕಾರ್ಪೆಟ್‌ನಂತೆ ಹಾಸಿದ ಚಿಗುಲು ಗುಲಾಬಿ ಲೆಕ್ಕ ತಪ್ಪಿ ಬೆಳೆದಿದ್ದರೆ ರೂಂಯ್‌ನೆ ಬೀಸುತ್ತಲೇ ಇರುವ ಕುಳಿರ್ಗಾಳಿಯ ಸಣ್ಣಪರ್ವತದ ತುದಿಯಲ್ಲಿರುವ ನರಸಿಂಹ ದೇವಸ್ಥಾನ ಸಂಜೆಯ ಹೊತ್ತಿಗಿನ ಫೋಟೋಗ್ರಫಿಗೆ ಹೇಳಿಮಾಡಿಸಿದ ತಾಣ.

೧೨೦೦೦ ಅಡಿಗೂ ಮಿಕ್ಕಿ ಮೇಲಿರುವ ವಿಪರೀತ ಚಳಿಯ ಗಾಂಗೇರಿಯಾ ನೇರವಾದ ಕನೆಕ್ಟಿವಿಟಿಯನ್ನೇನೂ ಹೊಂದಿಲ್ಲ. ಕಾರಣ ಉತ್ತರಾಖಂಡ ರಾಜ್ಯದಲ್ಲಿ ರೈಲು ಮತ್ತು ವಿಮಾನ ಸಂಪರ್ಕ ಅಷ್ಟಕ್ಕಷ್ಟೆ. ಹಾಗಾಗಿ ಏನಿದ್ದರೂ ಟ್ಯಾಕ್ಸಿ ಸರ್ವಿಸ್ ಅಲ್ಟಿಮೇಟ್ ಇಲ್ಲಿಗೆ ತಲುಪಲು. ಇದ್ದುದರಲ್ಲಿ ಹತ್ತಿರದ ಸುಸಜ್ಜಿತ ಊರೆಂದರೆ ಸುಮಾರು ೩೫ ಕಿ.ಮೀ. ದೂರದ ಜೋಶಿಮಠ. ಇಲ್ಲಿಂದ ಎಲ್ಲ ಅನುಕೂಲಗಳನ್ನು ಕುದುರಿಸಿಕೊಂಡು ಹೊರಡುವವರೇ ಹೆಚ್ಚು. ವಿಮಾನ ನಿಲ್ದಾಣ ಬೇಕೆಎಂದರೆ ಕನಿಷ್ಠ ೧೦ ತಾಸು ಕಾರಿನಲ್ಲಿ ಪಯಣಿಸಿ ಬರಬೇಕಾಗುತ್ತದೆ. ಜತೆಗೆ ಒಂದು ಗಿರಿಧಾಮದ ವಿಸಿಟ್ಟೂ ಆಗುತ್ತದೆ.

ಅದು ಡೆಹರಾಡೂನ್. ಬ್ರಿಟಿಷರ ಬೇಸಿಗೆಯ ರಾಜಧಾನಿ. ಈ ಜಾಲಿಗ್ರಾಂಡ್ ವಿಮಾನ ನಿಲ್ದಾಣ ಕೇವಲ ೨೯೦ ಕಿ.ಮೀ. ಇದ್ದು ಗಂಟೆಗೆ ೨೫-೩೦ ಮೈಲು ಅಂತರ ಕ್ರಮಿಸುವ ದಾರಿಯಲ್ಲಿ ಟ್ಯಾಕ್ಸಿ ಹೊರಟರೆ ಉಳಿದದ್ದನ್ನು ನೀವು ಲೆಕ್ಕಿಸಿಕೊಳ್ಳಿ. ಹರಿದ್ವಾರ, ಋಷಿಕೇಷ್, ಡೆಹರಾಡೂನ್, ಡೆಲ್ಲಿಯಿಂದ ಗೋವಿಂದಘಾಟಗೆ ನೇರ ಬಸ್ ಸೌಲಭ್ಯಗಳಿವೆ ಎಕಾನಮಿ ಕ್ಲಾಸ್‌ನವರಿಗೆ. ಕಾರಣ ದೂರ ಪಯಣವಾದರೂ ಈಗಲೂ ಮೂರು ನಾಲ್ಕು ನೂರರ ವೆಚ್ಚದಲ್ಲಿ ಗೋವಿಂದಘಾಟವರೆಗೆ ತಲುಪಬಹುದು. ಆದರೆ ಇದೇ
ರಸ್ತೆಮಾರ್ಗಕ್ಕೆ ಟ್ಯಾಕ್ಸಿ ಅಥವಾ ಏನೇ ವೆಚ್ಚದಲ್ಲಿ ಪಾಲುದಾರಿಕೆ ಮಾಡಿಕೊಂಡು ಹೊರಟರೂ ಸಾವಿರಾರು ರೂಪಾಯಿಗಳ
ಬಾಬತ್ತು.

ಹಾಗಾಗಿ ಹೆಚ್ಚಿನವರು ರಾತ್ರಿಯ ನಿಗದಿತ ಬಸ್ಸುಗಳಿಂದ ಬೆಳಗಿನ ಜಾವ ಗೋವಿಂದಘಾಟ್ ತಲುಪುವುದು ವಾಡಿಕೆ. ಮೊದಲೆಲ್ಲ ಹತ್ತನ್ನೆರಡು ಕಿ.ಮೀ. ಕಂಪಲ್ಸರಿ ಚಾರಣ ಮಾಡಿಯೇ ಗಾಂಗೇರಿಯ ತಲುಪಬೇಕಿತ್ತು. ಈಗೀಗ ಕೆಲವು ಕಿ.ಮೀ.ವರೆಗೆ ಕಚ್ಚಾ ರಸ್ತೆಯಲ್ಲಿ ನಿಮ್ಮನ್ನು ಗಾಂಗೇರಿಯ ಸಮೀಪದವರೆಗೂ ಒಯ್ದು ಬಿಡುವುದೂ ಇದೆ.

ಇದಲ್ಲದೆ ಗಾಂಗೇರಿಯಾವನ್ನು ಅವರಿಸಿರುವ ಸುತ್ತಲಿನ ಬೆಟ್ಟಗಳ ಪೈಕಿ ಹಿಂಭಾಗದ ಬಲ್ಲಿ ಎಂಬ ಕಣಿವೆ ಪ್ರದೇಶದ ಹಿಂಭಾಗಕ್ಕೆ ಹೋಗಿ ತಲುಪುವ ಒಂದು ಹಳ್ಳಿಯ ದಾರಿ ಇದ್ದು ಇದನ್ನು ಅಭಿವೃದ್ಧಿಪಡಿಸಿದಲ್ಲಿ ಗಾಂಗೇರಿಯ ತಲುಪುವ ದಾರಿ ಸುಗಮ ವಾಗುತ್ತದೆ. ಈಗಿನ ದಾರಿಯಿಂದಾಗಿ ಹೂವು ಕಣಿವೆ ಮತ್ತು ಹೇಮಕುಂಡ ಸಾಹೀಬ್‌ಗಳು ಕೇವಲ ಚಾರಣ ಮಾಡಬಲ್ಲವರಿಗಾಗಿ ಮಾತ್ರವೇ ಇವೆ. ವಯಸ್ಕರು, ಅಶಕ್ತರು ಕಷ್ಟಕ್ಕೆ ಬೀಳುವುದನ್ನು ತಪ್ಪಿಸಲು ಇಂಥ ಹತ್ತಿರದ ದಾರಿಗಳ ಅವಶ್ಯಕತೆ ಇದ್ದು, ಬಲ್ಲಿ ಕಣಿವೆಯ ಹಿಂಭಾಗಕ್ಕೆ ಬಂದರೆ ರಸ್ತೆಯಲ್ಲದ ರಸ್ತೆಯಲ್ಲಿ ಸರಿಸುಮಾರು ಎರಡೂವರೆ ಗಂಟೆ ಚಾರಣದಲ್ಲಿ ಗಾಂಗೇರಿಯಾದ ಕಣಿವೆ ಮೇಲ್ಭಾಗಕ್ಕೆ ಬಂದು ತಲುಪಬಹುದು.

ಇದು ನಿಜವಾದ ಗಾಂಗೇರಿಯ ನೋಡುವ ಸ್ಥಳ. ಈ ಸ್ಥಳದಿಂದ ದಕ್ಕುವ ಅಪರೂಪದ ಪಕ್ಷಿನೋಟದ ದೃಶ್ಯ ಅದ್ಭುತ. ಆದರೆ ಕೆಲವೇ ಕೆಲವು ಸ್ಥಳೀಯರು ಈ ಇಕ್ಕಟ್ಟಾದ ದಾರಿಗೆ, ಚಾರಣದ ಆಸಕ್ತರನ್ನು ಮಾತ್ರ ಕರೆದೊಯ್ಯುವ, ಆ ಮೂಲಕ ಆವತ್ತಿನ
ಮಟ್ಟಿಗೆ ಸ್ಥಳೀಯ ಮನೆಗಳಲ್ಲಿ ನಿಮ್ಮನ್ನು ಪೇಯಿಂಗ್ ಗೆಸ್ಟ್ ಮಾಡಿಸುವ ಮಾತುಕತೆ ಕೆಳಗಿನ ಬೇಸ್ ಕ್ಯಾಂಪ್‌ನಲ್ಲೆ ನಡೆದು ಎರಡೂ ಪಾರ್ಟಿ ಖುಷ್.

ವರ್ಷದಲ್ಲಿ ಕೇವಲ ಐದೂ ಚಿಲ್ರೆ ತಿಂಗಳು ಮಾತ್ರ ಉಸಿರಾಡುವ ಈ ಪ್ರದೇಶ ಬಾಕಿ ಹೊತ್ತಿನಲ್ಲಿ ಹಿಮದ ಹೊಡೆತಕ್ಕೆ
ಮುಚ್ಚಿ ಹೋಗಿರುತ್ತದೆ. ಅಂದಹಾಗೆ ಈ ೫ ತಿಂಗಳೂ ಶುಭ್ರವೆಂದಲ್ಲ. ಆಗಲೂ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ೩-೪ ಅಡಿ
ಎತ್ತರದ ಹಿಮ ಕೊರೆದು ನಿರ್ಮಿಸಿದ ದಾರಿ, ಎರಡೂ ಕಡೆ ಹಿಮಗೋಡೆ, ಎಲ್ಲೆಲ್ಲೂ ಹಿಮದ ಹಾಸು ಮತ್ತು ಕೊರೆವ ಚಳಿ ಮಾಮೂಲು ಇದ್ದರೂ ಅಟ್‌ಲೀಸ್ಟ್ ನೀವು ತಲುಪಬಲ್ಲಿರಿ. ಬುಂಧರ್‌ಗಂಗಾ ಮತ್ತು ಪುಷ್ಪಾವತಿ ನದಿಗಳ ಸಂಗಮದಿಂದಾಗಿ ಜನಿಸುವ, ಲಕ್ಷ್ಮಣಗಂಗಾ ನದಿಯನ್ನು ರೂಪಿಸುವ ಸೊಂಟದ ಮೇಲೆ ಅನಾಮತ್ತಾಗಿ ಪವಡಿಸಿರುವ ಗಾಂಗೇರಿಯಾ, ಗೋವಿಂದಘಾಟ್‌ನಿಂದ ನಡೆದೇ ತಲುಪಬೇಕಾದ ದಾರಿ. ಈ ಲಕ್ಷಣಗಂಗಾ ನದಿಯೇ ಮುಂದೆ ಗೋವಿಂದ್‌ಘಾಟ್‌ನಲ್ಲಿ ಸೇರಿ ಅಲಕನಂದಾ ಆಗಿ ಮರುಹೆಸರು ಪಡೆಯುತ್ತದೆ.

ಇವತ್ತಿಗೂ ಏನೇ ಮಾಡಿದರೂ ಬಿಗಿಯಾದ ಮೊಬೈಲ್ ಸಂಪರ್ಕ ಜಾಲವನ್ನು ಬಿತ್ತರಿಸಲಾಗದ ದುರ್ಗಮ ಕಣಿವೆ ಪ್ರದೇಶ ಇದು. ಎಲ್ಲ ಸೇರಿ ೧೦-೨೦ ಹೋಟೆಲ್ ಮತ್ತು ಒಂದು ಗುರುದ್ವಾರ ವಸತಿಯಾಗಿ ಲಭ್ಯವಿದ್ದರೂ, ಮೇಲಕ್ಕೇರಿದರೆ ಗಾಂಗೇರಿಯಾ ಹೋಮ್‌ಸ್ಟೇಗಳೂ ಇವೆ. ಇಲ್ಲಿ ಉಳಿದು ಅಕ್ಕಪಕ್ಕದ ೨ ದಿನದ ಕಣಿವೆ ಜಾಲಾಡುವ ಹುಕಿ ನಿಮ್ಮ ದಾಗಿದ್ದರೆ ಸ್ಥಳೀಯರ ಸಹಾಯವೂ ಕೈಗೆಟುಕುವ ದರದಲ್ಲಿ ಸಿಕ್ಕುತ್ತದೆ. ಪುಷ್ಪಾವತಿ ನದಿ ದಂಡೆಗುಂಟ ಮೇಲೆರುವ ನದಿಯ ಪಾರ್ಶ್ವದಲ್ಲಿ ಮುಗಿಲೆತ್ತರ ಚಾಚಿರುವ ಹೂಕಣಿ ವೆಗೂ ಮುನ್ನಿನ ಸಣ್ಣಸಣ್ಣ ಪರ್ವತ ಶ್ರೇಣಿಗಳಿವೆಯಲ್ಲ, ನಿಜವಾದ ಸೌಂದರ್ಯ ಇರುವುದೇ ಅದರ ಇರುಕುಗಳಲ್ಲಿ, ಸರಕ್ಕನೆ ಬಿಸಿಲಿಗೆ ಮೈಚಾಚಿ ಮಲಗಿರುವ ಹಿಮಕರಡಿಗಳ ದರ್ಶನ ಸಹಿತ ಲಭ್ಯವಾಗುವ ಅಪರೂಪದ ಸಂಗತಿಗಳಲ್ಲಿ, ಎತ್ತರೆತ್ತರ ಪೈನ್ ವೃಕ್ಷದ ಕಾಡುಗಳ ಬಿಳಿಲಕೋಲಿನ ಬಿಸಿಲ ಸಾಲಿನಲ್ಲಿ, ಸಣ್ಣಸಣ್ಣ ಪರ್ವತ ಏರಿದಾಗ ಸಿಕ್ಕುವ ಅಗಾಧ ಉದ್ದದ ಪಟ್ಟಿಗಳಂತೆ ಪಸರಿಸಿಕೊಂಡಿರುವ ಹುಲ್ಲುಹಾಸಿನ ಹಸಿರಿನಲ್ಲಿ, ಗಾಂಗೇರಿಯಾ ತೆರೆದುಕೊಳ್ಳುವುದೇ ಈ
ಜಾಗದಲ್ಲಿ ಹೊರತಾಗಿ ಎರಡೂ ಯಾತ್ರೆಗಳ ರಸ್ತೆಯ ಇಕ್ಕೆಲದಲ್ಲಿ ಅಲ್ಲವೇ ಅಲ್ಲ.

ಆ ಮಟ್ಟಿಗೆ ಕಣಿವೆಯ ಬೇಸ್‌ಕ್ಯಾಂಪನ್ನು ಸ್ಥಳೀಯವಾಗಿ ಮತ್ತೊಮ್ಮೆ ತಿರುಗಿ ನೋಡಿ, ಹೊಸ ಗಾಂಗೇರಿಯಾ ನಿಮ್ಮ ಬಕೆಟ್ ಲಿಸ್ಟ್ ಸೇರದಿದ್ದರೆ ಕೇಳಿ.