Thursday, 12th December 2024

ಯಾತ್ರೆ ಬಿಟ್ಟು ಸಂತ್ರಸ್ತರ ನೆರವಿಗೆ ಧಾವಿಸಿ

ರಾಜ್ಯಾದ್ಯಂತ ಮತ್ತೆ ಮಳೆ ಆರ್ಭಟ ಶುರುವಾಗಿದ್ದು, ಅಪಾರ ಪ್ರಮಾಣದ ಬೆಳೆ, ಆಸ್ತಿ ನಷ್ಟವಾಗಿದೆ. ಹಲವೆಡೆ ಸಾವುಗಳೂ
ಸಂಭವಿಸಿವೆ. ಆದರೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ‘ಯಾತ್ರೆ’ಗಳಲ್ಲಿ ಮುಳುಗಿಹೋಗಿವೆ.

ಹೀಗಾಗಿ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರ ಗೋಳು ಕೇಳುವವರು ಇಲ್ಲದಂತಾಗಿದೆ. ಚುನಾವಣಾ ರಾಜಕೀಯಕ್ಕೆ ಸ್ವಲ್ಪ ಕಾಲ ವಿರಾಮ ಹೇಳಿ ಪರಿಹಾರ ಕಾರ್ಯಗಳಿಗೆ ಚುರುಕು ಮುಟ್ಟಿಸಬೇಕಾದ ಅನಿವಾರ್ಯತೆ ಇದೆ. ಆ ಮೂಲಕ ಸಂತ್ರಸ್ತರಿಗೆ ಆಸರೆಯಾಗಿ ನಿಲ್ಲಬೇಕಿದೆ. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಸಾಕಷ್ಟು ಹಣವಿದೆ. ಪರಿಹಾರ ಕಾರ್ಯಕ್ಕೆ ತೊಂದರೆ ಇಲ್ಲ ಎಂದು ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಹೇಳುತ್ತಿದ್ದಾರೆ.

ಆದರೆ ಜನರ ತೊಂದರೆ ಪರಿಹರಿಸಲು ಹಣವೊಂದೇ ಸಾಲದು. ಜನರ ನೋವಿಗೆ ಮಿಡಿಯುವ ಮನಃಸ್ಥಿತಿ, ತಕ್ಷಣಕ್ಕೆ ಬೇಕಾದ
ಆಶ್ರಯ, ಆಹಾರ, ಹೊದಿಕೆ ಮತ್ತು ಮಕ್ಕಳ ಓದಿಗೆ ಅಗತ್ಯವಾದ ನೆರವನ್ನು ಸಕಾಲದಲ್ಲಿ ಒದಗಿಸುವ ಬದ್ಧತೆ ಕೂಡ ಅಗತ್ಯ. ಮಳೆ ಹಾನಿ ಪ್ರದೇಶಗಳಿಗೆ ದಕ್ಷ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಸಂಕಷ್ಟದಲ್ಲಿದ್ದವರಿಗೆ ತಕ್ಷಣವೇ ಪರಿಹಾರ ತಲುಪು ವಂತೆ ನೋಡಿಕೊಳ್ಳಬೇಕಿದೆ. ಮಳೆ-ಪ್ರವಾಹ ಇಳಿಯುವವರೆಗೆ ಜಿಲ್ಲೆಯ ಮೊಕ್ಕಾಂ ಮಾಡಿ, ಪರಿಹಾರ ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡುವಂತೆ ಉಸ್ತುವಾರಿ ಸಚಿವರಿಗೆ ಮುಖ್ಯಮಂತ್ರಿಗಳು ತಾಕೀತು ಮಾಡಬೇಕಿದೆ.

ಮಳೆಯಿಂದ ಪದೇ ಪದೆ ಸಾಕಷ್ಟು ನಷ್ಟ ಅನು ಭವಿಸುತ್ತಿರುವ ರಾಜ್ಯಕ್ಕೆ ಕೇಂದ್ರ ಸರಕಾರವೂ ಸಹಾಯ ಹಸ್ತ ಚಾಚಬೇಕಿದೆ.
ಸರಕಾರದ ಅಂದಾಜಿನಂತೆ, ೨೦೧೯ರಿಂದ ೨೦೨೧ರವರೆಗೆ ಮೂರು ವರ್ಷಗಳಲ್ಲಿ ಮಳೆಯಿಂದ ಆಗಿರುವ ಒಟ್ಟಾರೆ ನಷ್ಟ ? ೨ ಲಕ್ಷ ಕೋಟಿ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿ ಪ್ರಕಾರ ಸುಮಾರು ? ೫೫ ಸಾವಿರ ಕೋಟಿ ಯಷ್ಟು ನಷ್ಟವು ಬೆಳೆ ಹಾಗೂ ಮನೆಗಳ ಹಾನಿಯಿಂದ ಆಗಿದೆ. ಕೇಂದ್ರ ಸರಕಾರವು ಸುಮಾರು ? ೪,೨೦೦ ಕೋಟಿಯಷ್ಟು ಪರಿಹಾರವನ್ನು ರಾಜ್ಯಕ್ಕೆ ನೀಡಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಕಷ್ಟಕ್ಕೆ ಹೆಗಲುಕೊಟ್ಟು, ಆಸರೆಯಾಗಬೇಕಾದ ಕೇಂದ್ರ ಸರಕಾರವು ಇದರಿಂದ ನುಣುಚಿಕೊಳ್ಳುವುದು ಸರಿಯಲ್ಲ.