Monday, 25th November 2024

ಓಂ ಪರ್ವತ: ದೇವನಗರಿಯ ಹೆಬ್ಬಾಗಿಲು

ಅಲೆಮಾರಿಯ ಡೈರಿ

mehandale100@gmail.com

ಪ್ರತಿ ಸತ್ಕಾರ್ಯ ಅಥವಾ ಪೂಜಾ ಪ್ರಕ್ರಿಯೆಗಳ ಆರಂಭಕ್ಕೂ ಮೊದಲು ಓಂಕಾರದ ಬಳಕೆ ಗೊತ್ತಿದ್ದದ್ದೇ. ‘ಓಂ’ ಎಂದರೆ ಸಾವಿರದೆಂಟು ಅರ್ಥವಿದ್ದು ಅದರಲ್ಲಿ ‘ದೇವರಿಗೇ ಸ್ವಾಗತ’ ಎಂದು ಕರೆಯುವುದೂ ಇದೆಯಂತೆ. ಹಾಗಾಗಿ ಓಂಕಾರಕ್ಕೆ ಎಲ್ಲಿಲ್ಲದ
ಪ್ರಾಧಾನ್ಯ ಮತ್ತು ಓಂ ಕಾರವಿಲ್ಲದೆ ಆರಂಭವೇ ಇಲ್ಲ.

ಪ್ರಕೃತಿಯಲ್ಲೂ ಅದು ಹಾಗೆಯೇ ಪಡಿಮೂಡಿದ್ದರೆ ಅಚ್ಚರಿಯಲ್ಲದೆ ಬೇರೇನಲ್ಲ. ಕಾರಣ ನಮ್ಮ ಓಂಕಾರದ ಹಾಗೆ ದೇವಸನ್ನಿಧಿ ಕೈಲಾಸಯಾತ್ರೆಗೆ ಹೊರಡುವ ಯಾತ್ರಿಕರಿಗೆ ಸ್ವಾಗತ ಕೋರುವ ಮತ್ತು ಸ್ವರ್ಗದ ಮೊದಲ ಚರಣದಲ್ಲಿ ಆಹ್ವಾನ ನೀಡುವ ದ್ವಾರವೂ ಓಂಕಾರವಾಗಿದ್ದು, ಆಸ್ತಿಕರಿಗೆ ಈ ಪರ್ವತ ಅತಿದೊಡ್ಡ ವಿಸ್ಮಯ ಮತ್ತು ಅಧ್ಯಾತ್ಮ ಜಗತ್ತಿನಲ್ಲಿ ಇದೊಂದು ದೇವರ ಕೌತುಕದ ಸೃಷ್ಟಿ ಬಿಟ್ಟು ಬೇರೇನಲ್ಲ.

ಕಾರಣ ಕೋಟ್ಯಂತರ ಹಿಂದೂಗಳ ಪರಮ ಪುಣ್ಯ ದೈವಸ್ಥಾನ ಎಂದರೆ ಕೈಲಾಸ ಪರ್ವತ ಅಥವಾ ಸ್ವತಃ ಶಿವನ ವಾಸಸ್ಥಾನವಾದ ಕೈಲಾಸಗಿರಿ. ಅದಕ್ಕಾಗಿ ಪ್ರತಿವರ್ಷ ದರ್ಶನಕ್ಕೆ ನೂಕುನುಗ್ಗಲು ಮತ್ತು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಪ್ರವಾಸಿಗರ, ಆಸಕ್ತರ ಸಂಖ್ಯೆ ಗಣನೀಯ. ಅಂಥದ್ದೊಂದು ಕೈಲಾಸ ಪರ್ವತ ಯಾತ್ರೆಯ ದಾರಿಯ ಮೇಲೆ ಈ ಎಲ್ಲ ಆಸ್ತಿಕ ಮತ್ತು ಆಧ್ಯಾತ್ಮಿಕ ಮನಸ್ಸಿಗೆ ಪುಷ್ಟಿ ನೀಡುವಂತೆ ದಕ್ಕುವುದೇ ಈ ಓಂ ಪರ್ವತ.

ಎದುರಿಗೆ ಲಕಲಕ ಹೊಳೆಯುವ ಹಿಮದಲ್ಲಿ ಹುಟ್ಟಿ, ಅತ್ಯಂತ ಸ್ಪಷ್ಟವಾಗಿ ಓಂ ಆಕಾರ ದಲ್ಲಿರುವ ಕಪ್ಪು ಶಿಲಾಪರ್ವತದ ಇಳಿಜಾರಿನಲ್ಲಿ ಮೂಡಿರುವ ಈ ಓಂ ಮಾದರಿಯ ಚಿತ್ರ ಸದ್ಯಕ್ಕೆ ಪ್ರತಿ ಭಕ್ತಿಪ್ರಧಾನ ಮನಸ್ಸಿಗೆ ಕೌತುಕಮಯವೇ. ತೀರಾ ಎದುರಿಗೆ ಮಾತ್ರವಲ್ಲ ಪೂರ್ತಿ ಒಂದು ಕಣಿವೆಯಾದ್ಯಂತ ಇರುವ ಇದರ ಚಿತ್ರ ದೂರದ ಕಣಿವೆ ಪ್ರವೇಶದಿಂದಲೇ ನೋಡಲು ಲಭ್ಯ ವಾಗುವುದಾದಲ್ಲದೆ, ಕೊನೆಗೆ ಅಲ್ಲಿಂದ ಹೊರಬಿದ್ದು ಮುಂದಿನ ಕ್ಯಾಂಪ್‌ಗೆ ಹೋಗುವವ ರೆಗೂ ಅದು ಎದುರಿಗೇ ಇದ್ದಂತೆ ಭಾವಜೀವಕ್ಕೆ ಮುನ್ನುಡಿಯಾಗುತ್ತದೆ.

ಮೂಲತಃ 2 ಪರ್ವತಗಳ ಮಧ್ಯೆ ಇರುವ ಕಣಿವೆಯ ಅಗಾಧ ಕಂದರದ ಗ್ಯಾಪ್ ಅನ್ನು ಹೊರತುಪಡಿಸಿದರೆ ಓಂಕಾರ ಎದುರಿಗೆ ಇದ್ದಷ್ಟು ಭಾಸವಾಗುತ್ತದೆ. ಆದರೆ 14 ಸಾವಿರ ಅಡಿ ಎತ್ತರದಲ್ಲಿರುವ ನಾಭಿಡಾಂಗ್ ಕ್ಯಾಂಪ್‌ನ ಎದುರಾಎದುರೇ ಪರ್ವತದಲ್ಲಿ ವರ್ಷದುದ್ದಕ್ಕೂ ಕಪ್ಪುಶಿಲೆಯ ಹಿನ್ನೆಲೆಯಲ್ಲಿ ಅಚ್ಚಹಿಮ ತುಂಬಿಕೊಂಡು ಎದ್ದುಕಾಣುವ ಓಂ, ಆಸ್ತಿಕ ಜಗತ್ತಿಗೆ ಮಾತ್ರವಲ್ಲ ಪ್ರವಾಸಿ ಹಾಗೂ ಯಾತ್ರಿಗಳಿಗೂ ಪುಳಕವನ್ನುಂಟುಮಾಡುತ್ತದೆ.

ಕೈಲಾಸ ಮಾನಸ ಸರೋವರ ಯಾತ್ರಾರ್ಥಿಗಳಿಗಂತೂ ಇದೊಂದು ಕಂಪಲ್ಸರಿ ಕ್ಯಾಂಪು. ಕಾರಣ ಭಾರತ ಮತ್ತು ಚೈನಾ ಗೇಟ್ ಪ್ರತ್ಯೇಕಿಸುವ ಲಿಪುಲೇಕ್ ಪಾಸ್‌ಗಿಂತ ಮೊದಲು ಇರುವ ಏಕೈಕ ಮತ್ತು ಭಾರತದ ಕಡೆಯಿಂದ ಇದು ಕೊನೆಯ ಕ್ಯಾಂಪು. ಇದರ ನಂತರ ಆದಿ ಕೈಲಾಸ, ಕಿನ್ನರ ಕೈಲಾಸದಂಥ ಇತರೆ ಬಾಕಿ ಇರುವ ಆರೆಂಟು ಕೈಲಾಸ ಕ್ಷೇತ್ರದರ್ಶನ ಮಾಡಲು ಹೊರಡುವು ದಾದರೆ ಇದಕ್ಕೆ ಮಾತ್ರ ಅಡ್ಡದಾರಿ ಹಿಡಿದೇ ಬರಬೇಕು. ಹಾಗಾಗಿ ಓಂ ಪರ್ವತ ದರ್ಶನ ಅಥವಾ ಓಂ ಪರ್ವತ ಯಾತ್ರೆ ಎನ್ನುವುದು ಕೈಲಾಸ ಮಾನಸ ಸರೋವರದಲ್ಲಿ ಕಡ್ಡಾಯವಾಗಿ ದಕ್ಕಿದರೆ, ಬಾಕಿಯವರಿಗೆ ಇದಕ್ಕಾಗಿಯೇ ಚಾರಣ ಮಾಡಲೇಬೇಕು.

ಸಹಜಯಾತ್ರೆ ಸಾಧ್ಯವೇ ಇಲ್ಲ. ವಾಹನ ಸೌಲಭ್ಯವೆಲ್ಲ 1 ವಾರ ಕಾಲ ಮೊದಲೇ ಮುಕ್ತಾಯವಾಗಿರುತ್ತದಲ್ಲ. ಓಂ ಪರ್ವತ ಯಾತ್ರೆ ಅಥವಾ ಅಪರೂಪದ ಈ ದರ್ಶನಕ್ಕೆ ಜೂನ್‌ನಿಂದ ಆಗಸ್ಟ್ ಮಾತ್ರ ಉತ್ತಮ ಕಾಲಾವಧಿ. ಯಾವಾಗ ಬೇಕಿದ್ದರೂ ಮಳೆಯ ಪರಿಸ್ಥಿತಿ ಮತ್ತು ಹಿಮದ ಹೊಡೆತಕ್ಕೆ ದಕ್ಕುವ ಎಲ್ಲಾ ಸಂಭವನೀಯತೆಗಳು ಇದ್ದೇ ಇರುತ್ತವೆ. ಹಾಗಾಗಿ ಪ್ರತಿಯೊಂದಕ್ಕೂ ತಯಾರಾಗಿ ಹೊರಡುವುದು ಕಡ್ಡಾಯ. ಮೂಲತಃ ಕೊತ್ತಗುಡಂನಿಂದ ದಾರ್ಚುಲಾ ಕಡೆಯಲ್ಲಿ ಬರಬೇಕಾದ ಇದು ಉತ್ತರಾ ಖಂಡದ ಫಿತೋರ್‌ಗಡ ಜಿಲ್ಲೆಯ ವ್ಯಾಪ್ತಿಯಲ್ಲಿದ್ದು ಕುಮಾಂವ್ ಮಂಡಲ ಇದರ ದೇಖರೇಖಿ ನೋಡಿಕೊಳ್ಳುತ್ತದೆ.

ಹಾಗಾಗಿ ಎಂದಿನಂತೆ ಭಾರತ ಸರಕಾರ ನಡೆಸುವ ಕೈಲಾಸ ಯಾತ್ರಾ ದರ್ಶನ ಜತೆಗೆ ಈ ಆದಿಕೈಲಾಸ ದರ್ಶನ ಟ್ರಿಪ್ಪನ್ನು
ನಿರ್ವಹಿಸುವ ಕುಮಾಂವ್ ಮಂಡಲ ಯೋಜನೆ ವಿಶೇಷವಾಗಿ ಓಂ ಪರ್ವತವನ್ನು ಸೇರಿಸುವ ಮುಖಾಂತರ ಅವಕಾಶ ಕಲ್ಪಿಸುತ್ತದೆ. ದಾರ್ಚುಲಾ ಗೆಸ್ಟ್‌ಹೌಸಿನಲ್ಲಿ ತಂಗುವ, ಅಲ್ಲಿ ಅಕ್ಲಮಟೈಸ್ ಆಗುವ ಅವಕಾಶ ಕಲ್ಪಿಸುವ ಮಂಡಳಿ ಅಲ್ಲಿಂದ ದಿನಕ್ಕೆ
ಆವರೇಜು 15 ಕಿ.ಮೀ. ಮೇಲ್ಮುಖ ನಡಿಗೆಯ ಚಾರಣ ನಿಗದಿಗೊಳಿಸಿರುತ್ತದೆ. ಕುಠಿ ಎಂಬ ಎತ್ತರದ ಹಳ್ಳಿಯ ಕ್ಯಾಂಪು ಇದರಲ್ಲಿ ಆಕರ್ಷಕವಾದರೆ ಗಾಲ ಮತ್ತು ಬುಧಿ ಎಂಬ ಕ್ಯಾಂಪುಗಳ ಮಧ್ಯೆ ಬರುವ ಸಾವಿರಾರು ಮೆಟ್ಟಿಲುಗಳ ಇಳಿಜಾರಿನ ರಸ್ತೆ ನಮ್ಮ ಮೊಳಕಾಲಿನ ಕ್ಷಮತೆಯನ್ನು ಕಡ್ಡಾಯ ಪರೀಕ್ಷೆಗೊಳಪಡಿಸುತ್ತದೆ.

ನನ್ನ ಮೊಳಕಾಲ ಮೊದಲ ಡ್ಯಾಮೇಜು ಆಗಿದ್ದೂ ಇಲ್ಲೇ. ದೇಹ ತೀವ್ರ ಇಳಿಜಾರಿಗೆ ಅಭ್ಯಾಸವಾಗುತ್ತ ಕ್ರಮೇಣ ಇಳಿಕೆಯ ಹಾದಿಯಲ್ಲಿ ಸರಸರನೇ ನೆಲಕ್ಕೆ ಜಗ್ಗುತ್ತದೆ. ಪೂರ್ತಿದಿನ ಇಳಿಯುತ್ತಲೇ ಇರುವಾಗ ಒಮ್ಮೆ ಬದಲಾಗುವ ದೇಹದ ಸಣ್ಣ ಕಳವಳಿಕೆ
ಕೂಡ ಸರಕ್ಕನೆ ಮುಗ್ಗರಿಸುವಂತೆ ಮಾಡುತ್ತದೆ. ಇಳಿಜಾರ ಹಾದಿಯಲ್ಲಾಗುವ ಈ ಸಣ್ಣಜರ್ಕು ಮೊಳಕಾಲ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಸ್ವಲ್ಪವೇ ಯಾಮಾರಿದರೂ ಒಂದು ಕಾರ್ಟಿಲೇಜು, ಮಗದೊಂದು ಲಿಗ್‌ಮೆಂಟು ಬಾಯ್ಬಿಟ್ಟು ಕೊಳ್ಳುವುದು ಪಕ್ಕಾ. ಇದು ಆ ಕ್ಷಣಕ್ಕೆ ಸಣ್ಣ ನೋವಿನಂತೆ ಅನಿಸಿದರೂ ಅದರ ಮೇಲೆ ನಡೆಯಲೇಬೇಕಾದ ಅನಿವಾರ್ಯತೆ ಮುಂದೊಮ್ಮೆ ದೊಡ್ಡ ಸಮಸ್ಯೆಗೆ ಈಡು ಮಾಡುತ್ತದೆ. ನನಗೆ ಆಗಿದ್ದೂ ಅದೆ. ಈಗಲೂ ಶಾಶ್ವತವಾಗಿ ಡ್ಯಾಮೇಜಿಗೆ ಒಳಗಾ ಗಿದ್ದೇನೆ.

ಇದರ ಬದಲಿಗೆ ಮೊದಲ ಬುಧಿ ಕ್ಯಾಂಪಿನಿಂದ ಶಿರ್ಕಾ ಅಥವಾ ಗುಂಜಿಗೆ ನೇರದಾರಿಯ ಸೌಕರ್ಯ ಇದ್ದು ಮಧ್ಯದ ಒಂದು ಕ್ಯಾಂಪ್ ಅನವಶ್ಯಕ ಎಂದು ನನ್ನ ಅನಿಸಿಕೆ. ಇದರಿಂದ ಸಾವಿರಾರು ಮೆಟ್ಟಿಲು ಏರಿಳಿಯುವುದು ತಪ್ಪುತ್ತದೆ. ಆದರೆ ಆಯೋಜಕರ ಐಡಿಯಾಲಜಿ ಏನಿದೆಯೋ ಆ ಕೈಲಾಸದ ಒಡೆಯನಿಗೂ ಅರ್ಥವಾಗಿಲ್ಲ. ಹಾಗಾಗಿ ಅನಿವಾರ್ಯವಾಗಿ 2 ದಿನ ಹೆಚ್ಚುವರಿ ಬಳಲಿಕೆ ಮತ್ತು ಏರಿಳಿಯುವ ಕಸರತ್ತು ಅನಿವಾರ್ಯ.

ಗಾಲ, ಬುಧಿ, ಶಿರ್ಕಾ, ಗುಂಜಿ, ಕುಠಿ ಮತ್ತು ಕಾಲಾಪಾನಿ ಸೇರಿದಂತೆ ಆರು ಮೊದಲಿನ ಕ್ಯಾಂಪ್ ನಂತರ ಓಂ ಪರ್ವತದ ಎದುರಿನಲಿ ಹಾಕಲಾದ ಸಾಲುಸಾಲು ಟೆಂಟ್‌ಗಳಿಂದ ಹೊರಗೆ ಬಿದ್ದ ತಕ್ಷಣ ಎದುರಿಗೆ ಓಂ ದರ್ಶನವಾಗುವಂತೆ ಅಲೌಕಿಕ ಅನುಭವಕ್ಕೆ ಈಡುಮಾಡುವ ಈ ಸೋಜಿಗಕ್ಕೆ ಕಾರಣ, ಎದುರಿನ ಅಗಾಧವಾದ ಪರ್ವತ ಕಪ್ಪು ಶಿಲಾವೃತವಾಗಿದ್ದು ಅದರಲ್ಲಿ ಸರಿಯಾಗಿ ಇಳಿಜಾರಿನ ಅರೆ ಲಂಬಕೋನದ ಪಾತಳಿಯ ಮೇಲೆ ಸ್ಪಷ್ಟ ವಾಗಿ ಕೊರಕಲಾಗಿದ್ದು, ಅದರ ಸಂದುಗಳಲ್ಲಿ ನಿರಂತವಾಗಿ ಬೀಳುವ ಹಿಮ ಅಚ್ಚನೆಯ ಶ್ವೇತವರ್ಣದಲ್ಲಿ ಓಂ ಆಕೃತಿಯಾಗಿ ಗೋಚರಿಸುತ್ತದೆ.

ವಿಸ್ಮಯ ಎನಿಸಲು ಕಾರಣ ಈ ಅಗಾಧ ಪರ್ವತದ ಈ ವಿನ್ಯಾಸವನ್ನು ಯಾವನೂ ಕೃತಕವಾಗಿ ಮಾಡಿರಿಸಲು ಆಗದ
ಮತ್ತು ಅದು ನೈಜವಾಗೇ ಉಂಟಾದ ಶಿಲಾ ಕೊರಕಲಿನ ಪಾತಳಿಯ ಕಾರಣ ಓಂ ವಿನ್ಯಾಸ ರೂಪಗೊಳ್ಳುತ್ತದೆ. ಆಸ್ತಿಕರಿಗೆ ಮತ್ತು ಕೈಲಾಸ ದರ್ಶನ ಯಾತ್ರಾರ್ಥಿಗಳಿಗೆ ಒಂದು ಅಪರೂಪದ ಅನುಭವಕ್ಕೀಡುಮಾಡುತ್ತದೆ. ಸರಿಸುಮಾರು 100 ಕಿ.ಮೀ. ಅಂತರದ ಚಾರಣ ಬೇಡುವ ನಾಭಿಡಾಂಗ್ ೧೪ ಸಾವಿರ ಅಡಿ ಎತ್ತರವನ್ನು ದಾಟುವುದರಿಂದ ವಿಪರೀತ ಆಮ್ಲಜನಕದ ಕೊರತೆಯ ಸುಸ್ತಿಗೂ, ಖಿನ್ನತೆಗೂ ಈಡುಮಾಡುತ್ತಿರುತ್ತದೆ. ಕಾಲಾಪಾನಿಯಿಂದ ೯ ಕಿ.ಮೀ ದೂರದ ಕ್ಯಾಂಪು ಕ್ರಮಿಸಲು ಏನಿಲ್ಲವೆಂದರೆ 6-7 ತಾಸಿನ
ಸಮಯ ಬೇಡುವ ಈ ಏರುಮುಖದ ಪರ್ವತದ ಕಣಿವೆಯ ಕೊರಕಲಿನ, ಪ್ರಾಣವಾಯುವಿನ ಕೊರತೆಯ ದಾರಿ ಗಂಟೆಗೆ
2 ಕಿ.ಮೀ. ಅನ್ನೂ ಕ್ರಮಿಸಲು ಕೊಡುವುದಿಲ್ಲ.

ಹಾಗಾಗಿ ಸತತ ಪಯಣದ ಈಗಾಗಲೇ ಕ್ರಮಿಸಿದ್ದ ಗುಂಜಿಯಿಂದ ಗಾಲ ಮಾರ್ಗವಾಗಿ ಕುಠಿಯ ಮೂಲಕ ಜೊಲಿಂಗ್‌ಕಾಂಗ್ ಹಳ್ಳಿಯ ರಸ್ತೆ ಮುಕ್ಕಾಲುಭಾಗ ಹಣ್ಣು ಮಾಡಿರುತ್ತದೆ. ಓಂ ಎದುರಿಗೆ ಅಲೌಕಿಕ ಭಾವಕ್ಕೆ ಒಯ್ಯುತ್ತಿದ್ದರೂ ದೇಹ ನಿಧಾನಗತಿ ಪಕ್ಕಾಗುತ್ತಿರುತ್ತದೆ ಹೊರತಾಗಿ ಯಾವ ರೀತಿಯಲ್ಲೂ ದಿಮಿದಿಮಿ ಎನ್ನುವಂತೆ ಚಟುವಟಿಕೆಗೆ ನಾವು ಪಕ್ಕಾಗುವುದೇ ಇಲ್ಲ. ಮಳೆ ಮತ್ತು ಯಾವಾಗ ಬೇಕಿದ್ದರೂ ಕೆಡಬಹುದಾದ ವಾತಾವರಣ ಒಂದು ರೀತಿಯ ಡಲ್ ಎನ್ನಿಸುವಂತಿದ್ದರೆ, ಪ್ರತಿಬಾರಿ ಹಿಮಪಾತ ವಾದಾಗಲೂ ಮತ್ತಿಷ್ಟು ವರಚ್ಚಾಗಿ ಎದ್ದುಕಾಣುವ ಓಂ ಪರ್ವತ ಇಳಿಜಾರ ವಿನ್ಯಾಸ ಇವತ್ತಿಗೂ ಮಾನವಶಕ್ತಿ, ಕರ್ತೃತ್ವಕ್ಕೆ ಮಿಗಿಲಾದ ಸವಾಲೇ ಸರಿ.

ಸರಿಯಾಗಿ ತಯಾರಿ ಮತ್ತು ಮೊದಲೇ ಕನಿಷ್ಠ 1-2 ತಿಂಗಳು ಕಾಲ ದಿನಕ್ಕೆ 6-8 ಕಿ.ಮೀ. ವಾಕಿಂಗು, ಪ್ರಾಣಾಯಾಮದ ಬೆಂಬಲ ಪಡೆದು ಸಿದ್ಧವಾದರೆ ಈ ದಾರಿಯ ಯಾತ್ರೆಗಳು ಸಲೀಸೇನೋ ಹೌದು. ಆದರೆ ‘ಓಂ ನಮಃ ಶಿವಾಯ’ ಎಂದು ಕತ್ತಿಗೆ ಕೇಸರಿಶಾಲು ಸುತ್ತಿಕೊಂಡು ಮಾತಿಗೂ ಮೊದಲೇ ‘ಶಿವ ಶಿವ’ ಎನ್ನುವ ಧಾರ್ಮಿಕ ನಂಬುಗೆಯ ಅಪರ ವಯಸ್ಸಿನ ಭಕ್ತರು ಇದಾವುದೇ ತಯಾರಿ
ಇಲ್ಲದೆ ಬೀಡುಬೀಸಾಗಿ ಏರಿ ಕೂತುಬಿಡುತ್ತಾರಲ್ಲ ಆಗ ‘ಇದ್ಯಾವ ನಮೂನಿ ಮಾರಾಯ್ರೆ’ ಎನ್ನಿಸದೆ ಇರುವುದಿಲ್ಲ.

ಕಾರಣ ಅವರ ಧಾರ್ಮಿಕ ಮತ್ತು ಭಕ್ತಿಯ ಪರಾಕಾಷ್ಠೆ ಸುಲಭಕ್ಕೆ ಆ ಆತ್ಮವಿಶ್ವಾಸವನ್ನು ಜಾಗೃತಗೊಳಿಸಿ ಎಳೆತಂದು ನಿಲ್ಲಿಸಿರು ತ್ತದೆ. ಒಮ್ಮೆ ಆ ಎತ್ತರ ಏರಿದ ನಂತರ ಬೇರೇನೂ ಇರುವುದೇ ಇಲ್ಲ. ಅಷ್ಟೇ ಸುಲಭಕ್ಕೆ ಕೆಳಗೂ ಇಳಿದುಬಿಡುತ್ತಾರೆ. ಇದೊಂದು ಚಾರಣವೇ ಅಲ್ಲ ಎನ್ನುವ ಹಾಗೆ ಮಾಡಿಬಿಡುತ್ತಾರೆ. ಒಟ್ಟಾರೆ ಓಂ ಎನ್ನುವ ದೇವರನ್ನು ಸ್ವಾಗತಿಸುವ ಈ ನೈಜವ್ಯವಸ್ಥೆ ಒಬ್ಬೊಬ್ಬರಿಗೆ ಒಂದೊಂದು ಅನಿರ್ವಚನೀಯ ಅನುಭವ ನೀಡುವುದು ಮಾತ್ರ ಶತಸ್ಸಿದ್ಧ. ಹೇಗೋ ಒಮ್ಮೆ ಕೇದಾರನಾಥ್ ನೋಡೊಣ ಎಂದುಕೊಂಡಿರುತ್ತೀರಲ್ಲ, ಹಾಗೆ ಓಂ ಪರ್ವತ ಕೂಡ ನಿಮ್ಮ ಬಕೆಟ್ ಲಿಸ್ಟ್‌ನಲ್ಲಿರಲಿ.